ಫೆ.11ರಂದು ಚಂದನಾ ಭರತನಾಟ್ಯ ರಂಗಪ್ರವೇಶ

ಕಿರುತೆರೆ ನಟಿ, ಗಾಯಕಿ, ನಿರೂಪಕಿ ಮತ್ತು ನರ್ತಕಿ ಚಂದನಾ ಅನಂತಕೃಷ್ಣ ಅವರು ಫೆ. 11ರಂದು ಸಂಜೆ 5.30ಕ್ಕೆ ಜೆ.ಸಿ. ರಸ್ತೆಯ ಎಡಿಎ ರಂಗಮಂದಿರದಲ್ಲಿ ರಂಗಪ್ರವೇಶ ಮಾಡಲಿದ್ದಾರೆ.

ಬೆಂಗಳೂರಿನ ‘ನರ್ತನ ಕೀರ್ತನ ಸೆಂಟರ್ ಫಾರ್ ಪರ್ಫಾಮಿಂಗ್ ಆರ್ಟ್’ ನ ಗುರು ವಿದುಷಿ ಸೌಂದರ್ಯಾ ಶ್ರೀವತ್ಸ ಅವರ ಶಿಷ್ಯೆ ಚಂದನಾ ಅವರ ಭರತನಾಟ್ಯ ರಂಗಾರೋಹಣ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ದೃಷ್ಠಿ ಆರ್ಟ್ ಸೆಂಟರ್‌ನ ವಿದುಷಿ ಅನುರಾಧಾ ವಿಕ್ರಾಂತ್, ಲೇಖಕ, ನಟ, ನಿರ್ದೇಶಕ ಟಿ.ಎನ್. ಸೀತಾರಾಮ್, ನಟ ಮತ್ತು ನಿರ್ದೇಶಕ ವಿಜಯ ರಾಘವೇಂದ್ರ ಆಗಮಿಸಲಿದ್ದಾರೆ.

ನರ್ತನ ಪ್ರಸ್ತುತಿ ಸಂದರ್ಭ ನಟುವಾಂಗದಲ್ಲಿ ಗುರು ಸೌಂದರ್ಯಾ ಶ್ರೀವತ್ಸ, ಗಾಯನದಲ್ಲಿ ಹಿರಿಯ ವಿದ್ವಾನ್ ಶ್ರೀವತ್ಸ, ಮೃದಂಗದಲ್ಲಿ ಹರ್ಷ ಸಾಮಗ, ಕೊಳಲಿನಲ್ಲಿ ರಘುನಂದನ ರಾಮಕೃಷ್ಣ, ವೀಣೆಯಲ್ಲಿ ಪ್ರಶಾಂತ ರುದ್ರಪಟ್ಟಣ ಸಹಕರಿಸಲಿದ್ದಾರೆ.

ತುಮಕೂರು ಮೂಲದ ಗೀತಾ- ಅನಂತಕೃಷ್ಣ ಅವರ ಪುತ್ರಿ ಚಂದನಾ ಅವರು ಬೆಂಗಳೂರಿನ ಜೈನ್ ವಿವಿಯಲ್ಲಿ ಎಂಎ -ಭರತನಾಟ್ಯ ಶಿಕ್ಷಣ ಪಡೆಯುತ್ತಿದ್ದಾರೆ. 6 ವರ್ಷದವರಿದ್ದಾಗಲೇ ತುಮಕೂರಿನ ವಿದ್ವಾನ್ ಕೆ.ಎಂ. ರಮಣ ಮತ್ತು ವಿದ್ವಾನ್ ಡಾ. ಟಿ.ಎಸ್. ಸಾಗರ್ ಅವರಲ್ಲಿ ಭರತನಾಟ್ಯ ಕಲಿಕೆ ಆರಂಭಿಸಿದ ಚಂದನಾ, ನಂತರ ಪ್ರಖ್ಯಾತ ವಿದುಷಿ ಸೌಂದರ್ಯಾ ಅವರಲ್ಲಿ ಶಿಷ್ಯತ್ವ ಪಡೆದು ನರ್ತನಾಭ್ಯಾಸ ಮುಂದುವರಿಸಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ಕೂಚಿಪುಡಿ, ಕಥಕ್, ಯಕ್ಷಗಾನ, ನಿರೂಪಣಾ ಕಲೆಯನ್ನೂ ಕರಗತ ಮಾಡಿಕೊಂಡಿರುವ ಚಂದನಾ ಅವರು ಟಿವಿ ಧಾರಾವಾಹಿ ನಟನೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ರಾಜಾರಾಣಿ, ಹೂಮಳೆ ಮತ್ತು ಲಕ್ಷ್ಮೀ ನಿವಾಸ ಸೀರಿಯಲ್‌ಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿರುವುದು ಹೆಗ್ಗಳಿಕೆ. ನೃತ್ಯ ಮತ್ತು ಅಭಿನಯ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅವರ ಕಲಾ ಬದುಕಿನ ಮಹತ್ತರ ಉದ್ದೇಶವಾಗಿದೆ.

 
 
 
 
 
 
 
 
 
 
 

Leave a Reply