ಅಗಲಿದ ಧೀಮಂತ ಚೇತನ ಬೈಕಾಡಿ : ಶ್ರೀನಿವಾಸ ರಾಯರು – ಜಿ ವಾಸುದೇವ ಭಟ್ ಪೆರಂಪಳ್ಳಿ

ಯರ್ಲಪಾಡಿ ಶಾನುಭೋಗರೆಂದೇ ಪ್ರಸಿದ್ಧ ರಾಗಿದ್ದ ಬೈಕಾಡಿ ಶ್ರೀನಿವಾಸ ರಾಯರು ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ .ಆಧುನಿಕ ಉಡುಪಿಯ ಪ್ರಗತಿಯ ಹಿಂದೆ ಅತ್ಯಂತ ದೂರದೃಷ್ಟಿಯ ಕ್ರತು ಶಕ್ತಿಯನ್ನು ಹೊಂದಿ ದೊಡ್ಡ ಕೊಡುಗೆಯನ್ನು ತಮ್ಮ ಪ್ರಾಮಾಣಿಕ ಕರ್ತವ್ಯದಿಂದ ಸಲ್ಲಿಸಿದ್ದ ಧೀಮಂತರು ಬೈಕಾಡಿ ಶ್ರೀನಿವಾಸ ರಾಯರು .ಕೀರ್ತಿಶೇಷ ಡಾ ವಿ ಎಸ್ ಆಚಾರ್ಯರು ಯಾವಾಗಲೂ ಮನಃಪೂರ್ವಕವಾಗಿ ಶ್ರೀಯುತ ರಾಯರ ಸೇವೆಯನ್ನು ಸ್ಮರಿಸುತ್ತಲೇ ಇದ್ದರು .

ಇವತ್ತು ಉಡುಪಿ ಮಣಿಪಾಲ – ಪರ್ಕಳ – ಹಿರಿಯಡ್ಕ ರಸ್ತೆ ಬಹುವಿಶಾಲವಾಗಿ ಅಗಲಗೊಂಡು ಅಭಿವೃದ್ಧಿಯಾಗಿದೆ .‌ ಇದರ ಹಿಂದೆ ರಾಯರ ದೂರದೃಷ್ಟಿ ಇದೆ . ಆಗಲೇ ಕಡಿಯಾಳಿಯಿಂದ ಮಣಿಪಾಲದವರೆಗೆ ಬಹಳ ಯೋಚನೆ ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ಸಾಕಷ್ಟು ಸ್ಥಳಗಳನ್ನು ಕಾರಿಡಾರ್ ಆಗಿ ಉಳಿಸಿಕೊಂಡು ಭವಿಷ್ಯಕ್ಕಾಗಿ ಯೋಜನೆ ರೂಪಿಸಿದವರು ರಾಯರು . ಇದರ ಪರಿಣಾಮ ಒಂದೆರಡು ಕಡೆಗಳಲ್ಲಿ ಬಿಟ್ಟರೆ ಬಹುತೇಕ ಭೂಸ್ವಾಧೀನ ಪ್ರಕ್ರಿಯೆ ಕಷ್ಟವಾಗಿಲ್ಲ ಇದರಿಂದ ಸರಕಾರದ ಬೊಕ್ಕಸಕ್ಕೂ ಕೋಟ್ಯಂತರ ಹಣ ಉಳಿಯಿತು .

ಅದೇ ರೀತಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ , ಮತ್ತು ಕಟಪಾಡಿ- ಶಿರ್ವ , ಹೀಗೆ ಅನೇಕ ಕಡೆಗಳಲ್ಲಿ ರಸ್ತೆ ನಿರ್ಮಿಸುವ ಸಂದರ್ಭದಲ್ಲಿಯೂ ರಾಯರು ಭವಿಷ್ಯದ ಬಹುಕಾಲದ ಪ್ರಗತಿಯನ್ನು ದೃಷ್ಟಿಸಿಯೇ ಯೋಜನೆ ರೂಪಿಸಿದ್ದರು . ಉಡುಪಿ ನಗರದ ಸಮೀಪವಿರುವ ಕೆಲವು ಮಠಗಳಿಗೆ ಸಂಬಂಧಿಸಿದ ಭೂಮಿಯಲ್ಲಿ ವಸತಿ ಬಡಾವಣೆ ನಿರ್ಮಿಸುವಾಗಲೂ ( 70-80 ರ ದಶಕ ) ಲಕ್ಷ್ಮೀಂದ್ರನಗರ , ವಿಬುಧಪ್ರಿಯನಗರ‌, ವಿ ಎಮ್ ನಗರ , ಹಯಗ್ರೀವ ನಗರ , ಸುಬ್ರಹ್ಮಣ್ಯ ನಗರ , ಕಲ್ಯಾಣಪುರದ ಗೋಪಾಲಪುರ ( ಶೀರೂರು ಮಠ) ಮಣಿಪಾಲ ವಿದ್ಯಾರತ್ನ ನಗರ ರಾಯರ ಸಲಹೆಯಂತೆ ಬಹು ವಿಸ್ತಾರವಾದ ರಸ್ತೆಗಳನ್ನು ನಿರ್ಮಿಸಲಾಗಿರುವುದನ್ನು ಗಮನಿಸಬೇಕು . ಮಣಿಪಾಲವನ್ನು ನಿರ್ಮಿಸುವಲ್ಲಿಯೂ ಡಾ ಪೈ ಬಂಧುಗಳೊಡನೆ ಸೇರಿ ಸುವಿಶಾಲ ಬಡಾವಣೆಗಳನ್ನು ನಿರ್ಮಿದುವಲ್ಲಿಯೂ ರಾಯರ ಮಾರ್ಗದರ್ಶನ ಇದೆ. ಈಗಿನ ವಸತಿ ಬಡಾವಣೆಗಳಲ್ಲಿ ಅಂಥಹ ರಸ್ತೆಗಳೇ ಅಪರೂಪ .

ಈ ರೀತಿಯಾಗಿ ಯೋಜನಾಬದ್ಧ ಹಾಗೂ ಪ್ರಾಮಾಣಿಕ ಸೇವೆಗಳಿಂದ ಬೈಕಾಡಿ ಶ್ರೀನಿವಾಸ ರಾಯರು ಸಲ್ಲಿಸಿದ ಸೇವೆಗೆ ಉಡುಪಿಯ ಜನ ಕೃತಜ್ಞರು.ಅವರ ಅಗಲುವಿಕೆಯಿಂದ ಒಬ್ಬ ಧೀಮಂತರನ್ನು ಉಡುಪಿ ಕಳಕೊಂಡಿದೆ .

 

 
 
 
 
 
 
 
 
 
 
 

Leave a Reply