ಅಮೇರಿಕದಲ್ಲಿ ತುಳುನಾಡಿನ ಕಂಪು – ಡಾ ಪೂರ್ಣಿಮಾ ಶೆಟ್ಟಿ.

ಹುಟ್ಟಿದ ಊರನ್ನು ಬಿಟ್ಟು ಪರ ಊರಿಗೆ ಹೋದ ನಂತರ ನಮ್ಮ ಹುಟ್ಟೂರಿನ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಅಲ್ಲಿಯೂ ಪಸರಿಸುವ ಪ್ರಯತ್ನ ಬಹಳ ಕಷ್ಟಕರವಾದ ಕೆಲಸ. ಸುಮಾರು 3 ವರ್ಷದ ಹಿಂದೆ ಉತ್ತರಮೇರಿಕಾದಲ್ಲಿ ಆರಂಭಗೊಂಡ ನಮ್ಮ ಆಟ ಸಂಸ್ಥೆಯು ತುಳು ಭಾಷೆಯನ್ನು ಉಳಿಸಿ ಬೆಳೆಸುವುದು ಅಷ್ಟೇ ಅಲ್ಲದೆ ತುಳು ಭಾಷೆಯನ್ನು ವರ್ಚುಯಲ್ ಚಾನೆಲ್ ಮೂಲಕ ಆಸಕ್ತರಿಗೆ ಕಲಿಸಲು ಉದ್ದೇಶಿಸಿರುವುದು ನಿಜವಾಗಿಯೂ ಸಂತಸದ ವಿಷಯ ಎಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಪೂರ್ಣಿಮಾ ಶೆಟ್ಟಿಯವರು ಆಟದ “ಬಲೇ ನಮ ತುಳು ಪಾತೆರುಗ” ಉದ್ಘಾಟನೆ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಮಾತನಾಡಿದರು.ತಮ್ಮ ಮಾತನ್ನು ಮುಂದುವರೆಸುತ್ತ ಭಾಷೆ ಎಂಬುದು ಒಂದು ಸಮ್ಮೋಹನ ಕ್ರಿಯೆ, ಕುವೆಂಪು ಅವರು ಮನಕಂಡಂತೆ ಮನಸ್ಸಿನ ಭಾವನೆಯನ್ನು ಇತರರಿಗೆ ವ್ಯಕ್ತಪಡಿಸಬೇಕಾದರೆ ಮಾತೃ ಭಾಷೆ ಅತಿ ಸುಲಭ ಸಾಧನ, ಹಾಗಾಗಿ ನಮ್ಮ ಮಾತೃ ಭಾಷೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಕಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸುತ್ತಾ, ಕವಿ ಶ್ರೀಯುತ ಕೇಶವ ಭಟ್ ಅವರು ತುಳುವಿನಲ್ಲಿ ಬರೆದ ಮಂದಾರ ರಾಮಾಯಣದ ಸೀತೆಯ ಮದುಮಗಳ ಅಲಂಕಾರದ ವರ್ಣನೆಯ ಸಾಲನ್ನು ಓದಿ, ಆಟ ಸಂಸ್ಥೆಯ ಮೂಲಕ ತುಳುವಿನ ಕಲಿಕೆ ಕಾರ್ಯಕ್ರಮ ಲೋಕಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.

ಉತ್ತರ ಅಮೇರಿಕಾದಲ್ಲಿ ನೆಲೆಸಿರುವ ಎಲ್ಲಾ ತುಳು ಭಾಂಧವರನ್ನು ಒಂದುಗೂಡಿಸಿ ನಮ್ಮ ತೌಳವ ನಾಡಿನ ಸಂಸ್ಕೃತಿ, ಧಾರ್ಮಿಕ ಪದ್ಧತಿ, ಐತಿಹಾಸಿಕ ವಿಷಯಗಳ ಅರಿವನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ವಿಸ್ತರಿಸುವ ಸದುದ್ದೇಶವನ್ನು ಹೊತ್ತ ಆಲ್ ಅಮೆರಿಕಾ ತುಳುವೆರೆ ಅಂಕಣ “ಆಟ” ಎಂಬ ಸಂಘಟನೆ ತುಳುವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿರುವುದು ಬಹಳ ಹೆಮ್ಮೆಯ ವಿಷಯ, ಅಷ್ಟೇ ಅಲ್ಲದೆ ಇವತ್ತು ಮಿಚಿಗನ್ ನ ಪ್ರಶಾಂತ್ ಕುಮಾರ್ ಮಟ್ಟು ಇವರು ಬರೆದ ನಾನು ಹಾಡಿದ “ವಾ ಪೊರ್ಲುಯಾ ನಮ್ಮ ತುಳುನಾಡು ವಾ ಪೊರ್ಲುಯಾ“ ಎಂಬ ಭಾವಗೀತೆಯನ್ನು “ಆಟ ಚಾನೆಲ್”ನ ಮೂಲಕ ಬಿಡುಗಡೆಗೊಳಿಸಿ ತುಳು ಸಾಹಿತ್ಯವನ್ನು ಬೆಳೆಸಲು ಹೊರಟಿರುವುದು ಅತ್ಯಂತ ಸಂತಸದ ವಿಚಾರ ಎಂದು ಇನ್ನೋರ್ವ ಅತಿಥಿ ಹಲವಾರು ಸಂಗೀತಗಳನ್ನು ನೂತನ ಶೈಲಿಯಲ್ಲಿ ಹಾಡಿರುವ ನಮ್ಮ ಊರಿನ ಏಕೈಕ ಹೆಮ್ಮೆಯ ಸಂಗೀತಗಾರ ಶ್ರೀ ವಿಶ್ವೇಶ್ ಭಟ್ ರವರು ತಮ್ಮ ಮಾತಿನಲ್ಲಿ ವ್ಯಕ್ತಪಡಿಸಿದರು.

 

ಪ್ರಸಕ್ತ ಕಾಲದಲ್ಲಿ ಜೀವನೋಪಾಯಕ್ಕಾಗಿ ಊರನ್ನು ಬಿಟ್ಟು ಅಮೇರಿಕಕ್ಕೆ ಬಂದ ನಮಗೆ ಆಂಗ್ಲಭಾಷೆ ಕಲಿಯುವುದು ಅಗತ್ಯ ವಿದ್ದರೂ, ಮನೆಯಲ್ಲಿ ನಾವು ಮಾತೃಭಾಷೆಯಾದ ತುಳುವಿನಲ್ಲಿ ಮಕ್ಕಳ ಜೊತೆ ಮಾತಾಡಿದಲ್ಲಿ ತುಳುಭಾಷೆಯು ಖಂಡಿತ ಉಳಿದು ಬೆಳೆಯುವುದರಲ್ಲಿ ಸಂಶಯವೇ ಇಲ್ಲ ಎಂದು ಅಮೇರಿಕಾದ ಮಿನ್ನಿಯಾಪೋಲಿಸ್ ನಲ್ಲಿ ನೆಲೆಸಿರುವ ಆಟದ ಅಂಬಾಸಿಡರ್ ಒಬ್ಬರಾದ ಶ್ರೀ ರಿತೇಶ್ ಶೆಟ್ಟಿಯವರು ಹೇಳಿದರು. ನಂತರ “ವಾ ಪೊರ್ಲುಯಾ ನಮ್ಮ ತುಳುನಾಡು ವಾ ಪೊರ್ಲುಯಾ” ಎಂಬ ಭಾವಗೀತೆಯನ್ನು ಡಾ ಪೂರ್ಣಿಮಾ ಶೆಟ್ಟಿಯವರು ಯೂಟ್ಯೂಬ್ ಲಿಂಕ್ ನ್ನು ಒತ್ತುವ ಮೂಲಕ ಬಿಡುಗಡೆಗೊಳಿಸಿ, ಹಾಗೆಯೇ “ಬಲೇ ತುಳು ಪಾತೆರುಗ” ಆನ್ಲೈನ್ ತರಗತಿಯ ಉದ್ಘಾಟನೆಯನ್ನು ಮಾಡಿ, ಈ ತರಗತಿಗೆ ನೊಂದಾಯಿಸಿದವರಿಗೆಲ್ಲ ತುಳುವಮ್ಮ ಆಶೀರ್ವದಿಸಲಿ ಎಂದು ಹಾರೈಸಿದರು.

 

ತುಳುನಾಡು ದೈವದೇವರುಗಳ ನೆಲೆಬೀಡು, ಹಾಗೆಯೇ ಇಲ್ಲಿಯ ಸಂಸ್ಕೃತಿ, ಆಚಾರ-ವಿಚಾರ, ಆರಾಧನೆ, ನಂಬಿಕೆ-ನಡಾವಳಿ ಎಲ್ಲವೂ ವಿಶಿಷ್ಟ ಮತ್ತು ಬೇರೆ ಊರಿನಲ್ಲಿ ಕಾಣಸಿಗುವುದು ಕಷ್ಟ. ಉತ್ತಮವಾದ ಈ ವಿಷಯಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದ ಬಗ್ಗೆ ಚಿಂತಿಸಿದಾಗ ಮೂಡಿಬಂದ ಕವಿತೆ “ವಾ ಪೊರ್ಲುಯಾ ನಮ್ಮ ತುಳುನಾಡು”. ಈ ಭಾವಗೀತೆಯನ್ನು ಹಾಡಿದ ವಿಶ್ವೇಶ್ ಭಟ್ ಹಾಗೂ ಹಾಡನ್ನು ಎಡಿಟಿಂಗ್ ಮಾಡಿದ ಶ್ರೀ ಭಾಸ್ಕರ್ ಶೇರಿಗಾರ್ ಮತ್ತು ಆಟದ ಅಧ್ಯಕ್ಷ್ಯೆಯಾದ ಶ್ರೀವಲ್ಲಿ ರೈ ಅವರಿಗೆ ವಿಶೇಷ ಧನ್ಯವಾದ ಸಮರ್ಪಿಸಿ, ಇದೇ ರೀತಿ ತುಳುವಿನಲ್ಲಿ ಒಳ್ಳೆಯ ಸಾಹಿತ್ಯಗಳನ್ನು ಬರೆಯಲು ದೇವರು ಶಕ್ತಿಯನ್ನು ನೀಡಲಿ, ಹಾಗೆಯೇ ಆಟದ ಮುಂಬರುವ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಆಟದ ನಿರ್ದೇಶಕ ಮಂಡಳಿಯ ಸದಸ್ಯರಾದ ಹಾಗೂ ಈ ಹಾಡನ್ನು ಬರೆದ ಶ್ರೀ ಪ್ರಶಾಂತ ಕುಮಾರ್ ಅವರು ಶುಭ ಹಾರೈಸಿದರು.

 

ಆಟದ ಈಗಿನ ಅಧ್ಯಕ್ಷೆಯಾದ ಶ್ರೀಮತಿ ಶ್ರೀವಲ್ಲಿ ರೈಯವರು ಆಟದ ಉದ್ದೇಶ, ತುಳು ಭಾಷೆಯ ಮಹತ್ವ, ತುಳು ಭಾಷೆಯ ಲಿಪಿಯ ಬಗ್ಗೆ ನಡೆಯುತ್ತಿರುವ ಸಂಶೋಧನೆ, ಆಟದ ಮುಂದಿನ ಕಾರ್ಯಕ್ರಮದ ಬಗ್ಗೆ ಅಧ್ಯಕ್ಷೀಯ ಭಾಷಣದಲ್ಲಿ ವಿವರಿಸದರು. “ಬಲೇ ತುಳು ಪಾತೆರುಗ” ತರಗತಿ ಜೂಮ್ ವರ್ಚುಯಲ್ ಚಾನೆಲ್ ನಲ್ಲಿ ಹೇಗೆ ನಡೆಯುತ್ತದೆ ಮತ್ತು ಯಾವ ವಿಷಯಗಳ ಬಗ್ಗೆ ಪಾಠವನ್ನು ಹೇಳಿಕೊಡಲಾಗುತ್ತದೆ ಇದರ ಬಗ್ಗೆ ನಮ್ಮ ಆಟದ ಸ್ಥಾಪಕ ಅಧ್ಯಕ್ಷರಾದ ಶ್ರೀ ಭಾಸ್ಕರ್ ಶೇರಿಗಾರ್ ಅವರು ಮಾಹಿತಿ ನೀಡಿದರು.

ಶ್ರೀಮತಿ ರೇಷ್ಮಾ ಚೆಟ್ಟಿಯಾರ್ ಹಾಡಿದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಿಚಿಗನ್ ನ ಅಂಬಾಸಿಡಾರ್ ಶ್ರೀ ಪ್ರಜ್ವಲ್ ಶೆಟ್ಟಿಯವರು ಸ್ವಾಗತ ಭಾಷಣ ಮಾಡಿದರು. ನಿರ್ದೇಶಕ ಮಂಡಳಿಯ ಮತ್ತೋರ್ವ ಸದಸ್ಯರಾದ ಬೋಸ್ಟನಿನ ಶ್ರೀ ಪ್ರಸನ್ನ ಲಕ್ಷ್ಮಣ್ ರವರು ಮಾಡರೇಟರ್ ಆಗಿ ಕಾರ್ಯ ನಿರ್ವಹಿಸಿದರು. ಆಟದ ನಿರ್ದೇಶಕ ಮಂಡಳಿಯ ಮತ್ತೋರ್ವ ಸದಸ್ಯರಾದ ಡಾ. ರತ್ನಾಕರ ಶೇರಿಗಾರ್ ಇವರು ಬಹಳ ಸೊಗಸಾಗಿ ಎಲ್ಲ ಅತಿಥಿಗಳನ್ನು ಪರಿಚಯಿಸಿದರು.

 

ಒಂಟಾರಿಯೊ ಕೆನಡಾದ ಯುವ ಪ್ರತಿಭೆ ಧ್ಯಾನ ಚೆಟ್ಟಿಯಾರ್ ಇವರು ತುಳುವಿನಲ್ಲಿ ನಿರೂಪಣೆ ಮಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಐಲೇಸಾ ತಂಡದ ಶಾಂತಾರಾಮ ಶೆಟ್ಟಿ, ಸುರೇಂದ್ರ ಕುಮಾರ್ ಮಾರ್ನಾಡ್, ಕ-ನಾದ ತಂಡದ ಡಾ ಗುರುಪ್ರಸಾದ್, ಸತೀಶ್ ಆಗ್ ಪಾಲ ಮೊದಲಾದ ಪ್ರಮುಖರು ಭಾಗವಹಿಸಿದ್ದರು. ಆಟದ ಜಂಟಿ ಕಾರ್ಯದರ್ಶಿಯಾದ ನಾರ್ತ್ ಕ್ಯಾರೊಲಿನಾದ ಶ್ರೀಮತಿ ರಂಜನಿ ಅಸೈಗೋಳಿಯವರು ಅತಿಥಿಗಳಿಗೆ, ಆಟದ ಎಲ್ಲ ಸಮಿತಿಗಳ ಸದಸ್ಯರಿಗೆ, ಉಪಾಧ್ಯಕ್ಷರಿಗೆ, ನಿರ್ದೇಶಕ ಮಂಡಳಿಯ ಎಲ್ಲ ಸದಸ್ಯರಿಗೆ, ಆಟದ ಅಂಬಾಸಿಡರ್ಗಳಿಗೆ, ಭಾಗವಹಿಸಿದ ಗಣ್ಯರಿಗೆ, ತರಗತಿಗೆ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದವನ್ನು ಸಮರ್ಪಿಸಿದರು.
~ಪ್ರಶಾಂತ್ ಕುಮಾರ್ ಮಿಚಿಗನ್ USA. AATA director

 
 
 
 
 
 
 
 
 
 
 

Leave a Reply