ಜಯರಾಂ ಅಂಬೇಕಲ್ಲು ಹೆಗಲಿಗೆ ಉಡುಪಿ ಜಿಲ್ಲಾ “ರಾಮಸೇನೆ” ಸಾರಥ್ಯ

ರಾಮಸೇನೆ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅಂಬೇಕಲ್ಲು ಹೋರಾಟಗಾರ. ಎಲ್ಲಾ ಸಂಘಟನೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಜಯರಾಂ ಅವರ ಜೊತೆ ಈ ಹಿಂದೆ ಶ್ರೀರಾಮ ಸೇನೆಯಲ್ಲಿದ್ದ ಪದಾಧಿಕಾರಿಗಳು ಈಗ ರಾಮಸೇನೆಗೆ ಸೇರಿದ್ದಾರೆ. ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಸಮಾರಂಭ ಉಡುಪಿಯ ಮಣಿಪಾಲದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಸೇನಾದ ಗೌರವಾಧ್ಯಕ್ಷ ಡಾ. ವಿಜಯೇಂದ್ರ ವಸಂತ ಕಡಿಯಾಳಿ ಕಾರ್ಯಕ್ರಮ ಉದ್ಘಾಟಿಸಿದರು‌. 
ಈ ಸಮಾರಂಭಕ್ಕೆ ಆಗಮಿಸಿದ್ದ ರಾಮಸೇನಾದ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ ಮಾತನಾಡಿ ಉಡುಪಿ ಜಿಲ್ಲೆ ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಕೃಷ್ಣ ಪರಮಾತ್ಮ, ಕೊಲ್ಲೂರು ಮೂಕಾಂಬಿಕೆ ಸೇರಿದಂತೆ ಹಲವು ದೇವಾಲಯಗಳನ್ನು ಹೊಂದಿರುವ ಬೀಡು. ಈ ಜಿಲ್ಲೆಯಲ್ಲಿ ಸೇನಾವನ್ನು ಬಲಿಷ್ಠಗೊಳಿಸಬೇಕಿದೆ. ಹಿಂದುತ್ವ ಉಳಿಸಬೇಕಿದೆ. ಹಿಂದೂಗಳನ್ನು ಸಂಘಟಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಸೇನಾ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಜಯರಾಂ ಅಂಬೇಕಲ್ಲು ರವರನ್ನು ಸುಮಾರು ಹದಿನೆಂಟು ವರ್ಷಗಳಿಂದಲೂ ನೋಡುತ್ತಿದ್ದೇನೆ. ಅವರು ಉಡುಪಿ ಜಿಲ್ಲೆಯಲ್ಲಿ ಶ್ರೀರಾಮಸೇನೆ ಕಟ್ಟಿ ಬೆಳೆಸಿದ ಪರಿ ಅನನ್ಯ. ಹಲವು ಹೋರಾಟ ಗಳು, ಬಡಬಗ್ಗರಿಗೆ ಸಹಾಯ, ಹಿಂದುತ್ವ ಪರ ಧ್ವನಿ ಸೇರಿದಂತೆ ಹಲವು ಅತ್ಯುತ್ತಮ ಕಾರ್ಯಗಳನ್ನು‌ ಮಾಡಿದ್ದಾರೆ. ರಾಮಸೇನಾಗೆ ಅವರು ಬಂದಿರುವುದು ಖುಷಿ ತಂದಿದೆ. ಜೊತೆಗೆ ನಮಗೆ ಆನೆಬಲ ಬಂದಂತಾಗಿದೆ. ಜಯರಾಂ ಅವರ ಬದ್ಧತೆ, ಪ್ರಾಮಾಣಿಕತೆ, ನೇರ ನಡೆ, ನುಡಿ, ಕಾರ್ಯವೈಖರಿ, ಸಂಘಟಿಸುವ ಪರಿ ಅಚ್ಚರಿ ತರುವಂಥದ್ದು ಎಂದು ಬಣ್ಣಿಸಿದರು.

ರಾಮಸೇನಾ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಜಯರಾಂ ಅಂಬೇಕಲ್ಲು, ಉಡುಪಿ ಜಿಲ್ಲೆಯಲ್ಲಿ ಯಾವ ರೀತಿ ಬೆಳೆಸುತ್ತೇವೆ ಎಂಬುದು ಇನ್ನು ಕೆಲ ವರ್ಷ ಗಳಲ್ಲಿಯೇ ಗೊತ್ತಾಗಲಿದೆ. ಹಿಂದುತ್ವಕ್ಕೆ ಧಕ್ಕೆ ಬಂದರೆ ರಾಜಿಯಾಗುವ ಹಾಗೂ ಸಹಿಸುವ ಪ್ರಶ್ನೆಯೇ ಇಲ್ಲ. ಪ್ರಸಾದ್ ಅತ್ತಾವರ ಸೇರಿದಂತೆ ಸೇನಾದ ನಾಯಕರ ಮಾರ್ಗದರ್ಶನದಲ್ಲಿ ಎಲ್ಲರೂ ಮೆಚ್ಚುವಂಥ ಕೆಲಸ ಮಾಡುತ್ತೇನೆ. 

ಉಡುಪಿ ಜಿಲ್ಲೆಯಲ್ಲಿ ಇನ್ಮುಂದೆ ರಾಮಸೇನಾದ್ದೇ ಹವಾ. ಯಾಕೆಂದರೆ ಶ್ರೀರಾಮ ಸೇನೆಯಲ್ಲಿ ಮಾಡಿದ್ದ ಕೆಲಸ ಇಂದಿಗೂ ಜಿಲ್ಲೆಯ ಜನರ ಮನಗೆದ್ದಿದೆ. ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಇದಕ್ಕೆ ನಿದರ್ಶನ ಶ್ರೀರಾಮಸೇನೆಯಿಂದ ನನ್ನ ಜೊತೆ ಬಂದ ಪದಾಧಿಕಾರಿಗಳು. ಅವರು ನನ್ನ ಮೇಲೆ ಇಟ್ಟಿರುವ ಅಭಿಮಾನಕ್ಕೆ ಎಂದಿಗೂ ಚಿರ ಋಣಿಯಾಗಿರುತ್ತೇನೆ. ಜಿಲ್ಲೆಯ ಜನರ ಪ್ರೀತಿ ಇನ್ನು ಮುಂದೆಯೂ ನನ್ನ ಮೇಲೆ ಇರಲಿ ಎಂದು ಹೇಳಿದರು.

“ರಾಜಕೀಯ ಹಾಗೂ ಹಿಂದುತ್ವ ವಿಚಾರ ಬಂದಾಗ ಯಾವಾಗಲೂ ನನ್ನದು ಹಿಂದುತ್ವದ ಪರವಾಗಿಯೇ ನಿರ್ಧಾರ ಇರುತ್ತದೆ. ಶ್ರೀರಾಮ ಸೇನೆ ಬಿಡುತ್ತೇನೆ ಎಂಬ ವಿಚಾರ ಗೊತ್ತಾದಾಗ ನನಗೆ ರಾಜಕೀಯ ಪಕ್ಷಗಳು ಹಾಗೂ ಹಲವು ಸಂಘಟನೆಗಳು ತಮ್ಮ ಜೊತೆ ಬನ್ನಿ ಎಂದು‌ ಆಹ್ವಾನ ನೀಡಿದರು‌. ಆದ್ರೆ ರಾಮಸೇನಾ ಹಿಂದುತ್ವಕ್ಕೆ ಹೋರಾಟ ಮಾಡಲು ಸೂಕ್ತ ಎನಿಸಿ ಸೇರಿದ್ದೇನೆ. ಹಿಂದುತ್ವಕ್ಕೆ ಧಕ್ಕೆ ಬಂದರೆ ಮುಂಬರುವ ದಿನಗಳಲ್ಲಿ ತಾಯಂದಿರು, ಹೆಣ್ಣುಮಕ್ಕಳು ದುರ್ಗೆಯರಾಗುವ ದಿನ ಬರಲಿದೆ” ಎಂದು ಅಭಿಪ್ರಾಯಪಟ್ಟರು.

ಶಾರದಾ ಪೂಜೆ, ಬಡವರಿಗೆ ನೆರವು, ಹಿಂದುತ್ವ ಪರವಾದ ಹೋರಾಟ ಮತ್ತಷ್ಟು ಪ್ರಬಲಗೊಳ್ಳಲಿದೆ. ಬೇರೆ ಸಂಘಟನೆಗಳಿಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತೇವೆ. ಎಲ್ಲರೂ ಒಟ್ಟಾಗಿ ಒಳ್ಳೆಯ ಕೆಲಸ ಮಾಡುತ್ತೇವೆ. ಬಡವರಿಗೆ ನೆರವು ನೀಡುವ ಕಾರ್ಯ, ಹಿಂದೂ ಧರ್ಮ ಕಾಪಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತೇನೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು.

ರಾಜ್ಯ ಪ್ರಮುಖ ಎಂ.‌ಪಿ. ದಿನೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮೂಡುಬೆಳ್ಳಿ, ಶ್ರೀರಾಮ ಸೇನೆ ಉಡುಪಿ ಜಿಲ್ಲಾ ಸ್ಥಾಪಕ ಅಧ್ಯಕ್ಷ ಜಿತೇಶ್, ನಗರಸಭೆ ಸದಸ್ಯೆ ಕಲ್ಪನಾ ಸುದಾಮ, ದಕ್ಷಿಣ ಜಿಲ್ಲಾ ರಾಮ್ ಸೇನಾ ಅಧ್ಯಕ್ಷ ಕಿರಣ್ ಅಮೀನ್, ವಿಭಾಗ ಮುಖ್ಯಸ್ಥ ಮನೀಶ್ ಸಾಲಿಯಾನ್ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 
 
 

Leave a Reply