ಬಹುಮುಖ ಪ್ರತಿಭೆ ಸುಜಯೀಂದ್ರ ಹಂದೆಯವರಿಗೆ ವರುಣತೀರ್ಥ ರಾಜ್ಯೋತ್ಸವ ಪುರಸ್ಕಾರ

ಕೋಟ : “ನಾಡು ನುಡಿಗಳ ಚಿಂತನೆ ಕೇವಲ ಭಾವನಾತ್ಮಕವಾಗಿದ್ದರೆ ಸಾಲದು, ಅದು ಕ್ರಿಯಾತ್ಮಕವಾಗಿದ್ದಾಗ ಮಾತ್ರ ಉಳಿವು ಬೆಳೆವು ಸಾಧ್ಯ. ಜಾತಿ ಮತ ಧರ್ಮವನ್ನು ಮೀರಿ, ಈರ್ಷ್ಯೆ, ದ್ವೇಷ, ಅಸೂಯೆಗಳನ್ನು ದಾಟಿ ನಿಂತ ಸಂಘ ಸಂಸ್ಥೆಗಳೇ ಈ ದೇಶದ ನಿಜವಾದ ಸಂಪತ್ತು. ಪ್ರಶಸ್ತಿ ಮತ್ತು ಪುರಸ್ಕಾರಗಳೆರಡೂ ಒಂದೇ ಅಲ್ಲಾ, ಸಾಧನೆ ಮಾಡಿದವನನ್ನು ಪ್ರಶಸ್ತಿಗಳು ಅರಸಿ ಬಂದರೆ, ಸಾಧನೆಯ ಪಥದಲ್ಲಿರುವವನನ್ನು ಗುರುತಿಸಿ ಬೆನ್ನುತಟ್ಟುವುದೆ ಪುರಸ್ಕಾರ.
ನನ್ನೂರಿನ ಪ್ರೀತಿಯ ಆಶೀರ್ವಾದ ಸ್ವರೂಪದ ಈ ರಾಜ್ಯೋತ್ಸವ ಪುರಸ್ಕಾರವು  ಮುಂದಿನ ದಿನಗಳಲ್ಲಿ ನಾನು ಸಾಧಿಸಬೇಕಾದ ವಿಸ್ತಾರವನ್ನು ಬೊಟ್ಟುಮಾಡಿ ತೋರಿಸಿದೆ.” ಎಂದು ಉಪನ್ಯಾಸಕ, ಕಲಾವಿದ, ಗಮಕಿ ಎಚ್. ಸುಜಯೀಂದ್ರ ಹಂದೆ ಹೇಳಿದರು. ಕೋಟದ ನೂತನ ವರುಣತೀರ್ಥ ವೇದಿಕೆಯು ನವಂಬರ್ ೧ ರಂದು ‘ನಿರಂತರ’ ಎಂಬ ಶೀರ್ಷಿಕೆಯಡಿಯಲ್ಲಿ  ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವರುಣತೀರ್ಥ ರಾಜ್ಯೋತ್ಸವ ಪುರಸ್ಕಾರವನ್ನು ಪಡೆದು ಅವರು ಮಾತನಾಡಿದರು.
ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ. ಕುಂದರ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವರದರಾಜ ಶೆಟ್ಟಿ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್ ಶುಭ ಹಾರೈಸಿದರು. ಇದೆ ಸಂದರ್ಭ ಚಲನಚಿತ್ರ ನಟ ರಾಘವೇಂದ್ರ ಡಿ.ಜಿ. ತೀರ್ಥಹಳ್ಳಿ, ಈಜುಪಟು ಮಾಸ್ಟರ್ ದಿಗಂತ್ ಪೂಜಾರಿ, ಕನ್ನಡಾಭಿಮಾನಿ ಕನ್ನಡ ರಾಮಣ್ಣ, ಧಾರ್ಮಿಕ ಮುಂದಾಳು ಆನಂದ ದೇವಾಡಿಗ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಕೃಷ್ಣಮೂರ್ತಿ ಉರಾಳ, ಜಯರಾಮ ಶೆಟ್ಟಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ವೇದಿಕೆಯ ಗೌರವಾಧ್ಯಕ್ಷ ಡಾ| ಎಚ್. ಅಶೋಕ್, ಅಧ್ಯಕ್ಷರಾದ ಉದಯ ದೇವಾಡಿಗ, ಕಾರ್ಯಾಧ್ಯಕ್ಷ ಉಮೇಸ್ ಪ್ರಭು, ಉದ್ಯಮಿ ವೆಂಕಟೇಶ್ ಪ್ರಭು,  ಸತೀಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಮುಂದಾಳು ಕೋಟ ಚಂದ್ರ ಆಚಾರ್ ಸ್ವಾಗತಿಸಿ, ವೇದಿಕೆಯ ಉಪಾಧ್ಯಕ್ಷ ವಿಶ್ವನಾಥ ಗಾಣಿಗ ವಂದಿಸಿದರು. ಮಂಜುನಾಥ ಆಚಾರ್ ನಿರೂಪಿಸಿದರು.
 
 
 
 
 
 
 
 
 
 
 

Leave a Reply