ಕೀಲಿಮಣೆ ವಿನ್ಯಾಸಕಾರ ಲಿಪಿತಜ್ಞ ಕಿನ್ನಿಕಂಬಳ ಪದುಮನಾಭ ನಮ್ಮ ಮಣ್ಣಿನ ಹೆಮ್ಮೆಯ ಸಾಧಕ

ಜರ್ಮನ್ ಮೂಲದ ಭೌತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೈನ್ ರನ್ನು ಹೋಲುವ ಮುಖಭಾವ ಹೊಂದಿರುವ ಕನ್ನಡದ ಕಣ್ಮಣಿ ಕೀಲಿಮಣೆ ವಿನ್ಯಾಸಕಾರ ಲಿಪಿತಜ್ಞ ಕಿನ್ನಿಕಂಬಳ ಪದುಮನಾಭ ನಮ್ಮ ಮಣ್ಣಿನ ಹೆಮ್ಮೆಯ ಸಾಧಕ, ಸಂಶೋಧಕ, ವಿಜ್ಞಾನಿ..
ಹಿತ್ತಲ ಗಿಡ ಮದ್ದಲ್ಲ ಎಂಬ ನುಡಿಯಂತೆ ಹತ್ತಿರದಲ್ಲಿರುವ ಮಹಾನ್ ಸಾಧಕನನ್ನು ಅರಿತವರು ಬಹಳ ವಿರಳ.

ಅಲ್ಪರಿಗೇನು ಗೊತ್ತು ಬಿದಿರಿನ ಬೆಲೆ …ಅದರ ರಂಧ್ರಗಳಿಂದ ಹೊರಡುವ ನಾದ ಸೌರಭದ ಸೆಳೆ… ಕುಳಿತು ಕೇಳಬೇಕು ಅನುಭವದ ಅಲೆ… ಅರಿತವರು ಯಾವಾಗಲೂ ಹೀಗೆಯೇ…ಅತಿ ಸಿಂಪಲ್ಲು… ನಗು ಮೊಗದ ತುಂಬ ಹರಡಿದ ನರೆತ ಬಲಿತ ಬಿಳಿ ಪ್ರತಿಯೊಂದು ಕೂದಲುಗಳು ಒಂದೊಂದು ಅನುಭವದ ಕಥೆಯನ್ನು ಸಾರುತ್ತವೆ.

ಈ ವ್ಯಕ್ತಿಯ ಜೀವನ ಗಾಥೆಯೇ ಒಂದು ಕಥೆಯ ಹಂದರ ಸುಜ್ಞಾನ ಮಂದಿರ.. ನಮ್ಮ ನಿಮ್ಮ ತುಟಿಯಿಂದುದುರುವ ಮಾತುಗಳಿಗೆ – ಪ್ರಶ್ನೆಗಳಿಗೆ ಸಿಗುವ ಅವರ ನಗುವಿನುತ್ತರದಲ್ಲಿ ಅದೆಷ್ಟೋ ಭಾವ ಲಹರಿಗಳು ತುಂಬಿಕೊಂಡಿರುತ್ತವೆ. ಹುಬ್ಬುಗಳ ಅಡಿಯಲ್ಲಿ ಅವಿತಿರುವ ಆಳಕ್ಕಿಳಿದೆರಡು ಮಿನುಗು ಕಣ್ಣುಗಳು ಇಳಿ ಪ್ರಾಯದಲ್ಲೂ ಜಗವರಿಯದ ಕುರುಹುಗಳನ್ನು ಹುಡುಕುತ್ತಿರುತ್ತವೆ – ಹೊಸದೇನಿದೆ ಹೊಸದೇನಿದೆ ಈ ಜಗತ್ತಿನಲ್ಲಿ ಈ ಭೂಗಭ೯ದಲ್ಲಿ ಎಂಬಂತೆ.

ಪೂರ್ಣಪ್ರಜ್ಞರು ಇರುವುದು ಹೀಗೆಯೇ ಈ ಜಗವೆಂಬ ಸಂತೆಯಲ್ಲಿ ಬೆಳಕನ್ನು ಹುಡುಕುತ್ತ ಸುತ್ತುವ ಸಂತನಂತೆ. ಹೊಸ ಬಟ್ಟೆಯ ಕದರಿಲ್ಲ. ಅದು ಚಂದ ಇದು ಅಂದ … ಅದು ಬೇಕು ಇದು ಬೇಕು ಅದೇ ಬೇಕೆಂಬ ಆಶಯಗಳಿಲ್ಲ. ಹೀಗೆಯೇ ಇರಬೇಕೆಂದರೂ ಕೇಳುವವರಲ್ಲ. ನನಗಿದೇ ಚಂದ ನೀವು ತೊಂದರೆ ಪಡಬೇಕಿಲ್ಲ …

ಚಲಿಸಲು ಕಾರು ಬೇಕಿಲ್ಲ ಕಾರುಬಾರೂ ಬೇಕಿಲ್ಲ … ದೇವರಿತ್ತ ಕಾಲೆರಡು ಸಾಕು ಜ್ಞಾನದ ಜೇನು ಇರುವಲ್ಲಿ ಸಾಗಲು. ಸಾಧನೆಯ ತಂಕ ಬಿಂಕ ಎಳ್ಳಷ್ಟು ಮನಕ್ಕಿಲ್ಲ. ಮಧಮನದ ಮಂದಿಯಲಿ ಚರ್ಚೆಯದು ಲೇಸು. ಬಿರುದುಬಾವಲಿಗಳ ಗೊಡವೆ ಬೇಕಿಲ್ಲ. ಅದಾಗಿ ಬಂದರೆ ಮನಕೊಂದಿಷ್ಟು ತಂಪು.

ಹಾಂ… ಈ ಕೆ.ಪಿ. ರಾಯರೆಂಬ ಬ್ರಹ್ಮ ಕೈಯಾಡಿಸದ ಕ್ಷೇತ್ರವಿಲ್ಲ. ಪ್ರತಿಯೊಂದನ್ನು ಕೆದಕಿ ಮಥಿಸಿ ನವನೀತ ತೆಗೆಯುವ ಕಲೆ ಕರತಲಾಮಲಕ. ಗಣಕಯಂತ್ರಕ್ಕೆ ತಂತ್ರ ಕಲಿಸಿದ್ದು ಕನ್ನಡ ಕಲಿಸಿದ್ದು ಒಂದು ಇತಿಹಾಸವಾದರೆ ಸಿಂಧು.ಲಿಪಿಯ ಅನಾವರಣ, ಸೆಮಿಕಂಡಕ್ಟರ್ ತಂತ್ರ ಇತ್ಯಾದಿ ಅಣು ಕಿರಣ ಜೊತೆಗಿನ ಪಯಣ, ಸಾಹಿತ್ಯ ಲೋಕ, ಪಾಣಿನಿ, ವೇದಗಳ ಪಠಣ, ಅಧ್ಯಯನ, ಯಕ್ಷಗಾನ ಸಂಗೀತ ಕ್ಷೇತ್ರಗಳ ಜೊತೆ ಚಲನ ಸಂಚಲನ…

ಜೀವನಾನುಭವ ಧಾರೆಯನ್ನು ಭಟ್ಟಿ ಇಳಿಸಿ ಪುಸ್ತಕ ರೂಪದಲ್ಲಿ ಶೇಖರಿಸಿದ ಕಥನ – ಲೇಖನ. ಮಾತಿನ ಪೀಠದಲ್ಲಿ ನಿಂತರೆ ಕೇಳುಗರ ಪಾಲಿಗೆ ಮನ ಮಂಥನ, ಚಿಂತನೆಗೆ ಸಿಲುಕಿಸುವ ಪದ ಕೋವಿದ . ನಮ್ಮ ಕಿನ್ನಿಕಂಬಳ ಪದುಮನಾಭರಾಯರು. ಇವರು ನಮ್ಮೂರಿನವರು ನಮ್ಮ ಜೊತೆಗಿರುವವರು ಎಂದು ಹೇಳಿಕೊಳ್ಳಲು ನಮಗೆ ಬಹಳ ಹೆಮ್ಮೆ ಅನ್ನಿಸುವುದಿಲ್ಲವೇ..

ಹಾಂ..ನಾನು ಕಂಡಂತೆ,
ನಮ್ಮೂರ ಗರಡಿಯಲ್ಲಿ ಇಬ್ಬರು ಮಹಾ ಸಂತರು… ಒಬ್ಬರು ಕೂ. ಗೋ. ಎಂಬ ಅಕ್ಷರ ಸಂತರಾದರೆ ಇನ್ನೋರ್ವರು ಇವರೇ ನಮ್ಮಕೆ.ಪಿ. ರಾಯರೆಂಬ ಕೀಲು ಮಣೆ ಸಂತರು. ಇಬ್ಬರದೂ ನಡೆಯೊಂದೇ ಗುಡಿಯೊಂದೇ… ಗುರಿಯೂ ಒಂದೇ… ಜ್ಞಾನದ ಕಡೆ ಯಾನ. ನಾವಿರುವುದೇ ಹೀಗೆ…ಚೀಲವದು ಹೆಗಲೊಳಗೆ ಕೈ ಎರಡು ಹಿಂದುಗಡೆ … ಬಾಹ್ಯ ಸೌಂದರ್ಯಕ್ಕಿಲ್ಲವೆ ಇಲ್ಲ ಬೆಲೆ. ಜ್ಞಾನದೇಗುಲಗಳಲ್ಲಿ ದೀಪ ಹಚ್ಚುವ ಬಂಗಾರದಂತೆ ಬೆಲೆ ಬಾಳುವ ಅತಿ ಶ್ರೀಮಂತರು.

ನಮ್ಮಈ ಕೆ.ಪಿ.ರಾವ್ ಎಂಬ ಮೇರು ವ್ಯಕ್ತಿಯನ್ನು ಹೀಗೆ ಸಂಭೋಧಿಸಿದರೆ ಹೇಗೆ ?… ಮಲೆನಾಡಿನ ಪಚ್ಚೆ ಸಿರಿಯ ನಡುವೆ ದಿಗಂತದೆತ್ತರಕ್ಕೆ ಬೆಳೆದು ನಿಂತ ಕಲ್ಪವೃಕ್ಷಕ್ಕೆ . ಚಳಿಗಾಳಿ ಬಿಸಿಲು ಮಳೆಯ ಗೊಡವೆ ಇಲ್ಲದ ಮರ. ಎಲ್ಲಿಯೂ ಸಲ್ಲುವ ಎಲ್ಲರಿಗೂ ಸಲ್ಲುವ ತರು .. ಹೂಸಿಪ್ಪೆಯೊಳಗಿನ ಗೆರಟೆಯೊಳಗೆ ಅವಿತಿರುವ ತಿರುಳು… ಅಮೃತ ರಸ ಧಾರೆಗೆ ಬೆಲೆ ಕಟ್ಟಲು ಸಾಧ್ಯವೆ. ಆದರೆ ಬಳಸಿಕೊಂಡು ಬೆಲೆ ಹೆಚ್ಚಿಸಿಕೊಂಡವರೇ ಹೆಚ್ಚು ಎನ್ನುವುದು ಅವರ ಮಾತಿನೊಳಗಿನ ಮರ್ಮ . ಏನೇ ಹೇಳಿ… ಆ ಅಕ್ಷರಬ್ರಹ್ಮನ ಹೂಸಿಪ್ಪೆಯೊಳಗವಿತಿರುವ ಕೇಶಾವೃತದ – ಚಿಪ್ಪಿನೊಳಗಿನ ಚಿಪ್ಪಲ್ಲಿ ಇಡಿಯ ಬ್ರಹ್ಮಾಂಡವೇ ಅಡಗಿದೆ ಅಲ್ಲವೇ ~

~ಲೇಖನಃ ರಾಜೇಶ್ ಭಟ್ ಪಣಿಯಾಡಿ

 
 
 
 
 
 
 
 
 
 
 

Leave a Reply