ಪ್ರೊ. ಆರ್. ಎಲ್.ಭಟ್ ಮಡಿಲಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ- 2024

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ಮಲಬಾರ್ ವಿಶ್ವರಂಗ ಪುರಸ್ಕಾರ- 2024, ಪುರಸ್ಕೃತರು: ಪ್ರೊ. ಆರ್. ಎಲ್.ಭಟ್

ಕೃಷ್ಣನೂರು ಉಡುಪಿಯ ಬಳಿಯ ಮಣಿಪುರದಲ್ಲಿ ಹುಟ್ಟಿ ನಿಪ್ಪಾಣಿಯಲ್ಲಿ ಬೆಳೆದು ಒಂದಷ್ಟು ಒಪ್ಪಗೊಂಡು ಮತ್ತೆ ಹಿಂತಿರುಗಿ ಬಂದು ತನ್ನ ಹುಟ್ಟೂರಿನ ಕಲಾಲೋಕಕ್ಕೆ ಒಂದಷ್ಟು ಮೆರುಗು ನೀಡಿದ ಹೊಳೆಯುವ ಶಮಂತಕ ಮಣಿ ಹೆಮ್ಮೆಯ ಕಲಾಕುಸುಮ ಶ್ರೀ ರಾಮಚಂದ್ರ ಲಕ್ಷ್ಮೀನಾರಾಯಣ ಭಟ್ ಯಾನೆ ಆರ್ ಎಲ್ ಭಟ್. ಅವರ ಕಿರು ಪರಿಚಯ ..

ಹೊಟ್ಟೆಪಾಡಿಗಾಗಿ ಹೋಟೆಲ್ ಉದ್ಯಮವನ್ನು ಒಪ್ಪಿಕೊಂಡು ಅಪ್ಪಿಕೊಂಡು ಕರ್ನಾಟಕ ಮಹಾರಾಷ್ಟ್ರ ಉಭಯ ರಾಜ್ಯಗಳ ಗಡಿನಾಡು ನಿಪ್ಪಾಣಿಯಲ್ಲಿ ನೆಲೆಯೂರಿದವರು ಇವರ ತಂದೆ ಲಕ್ಷ್ಮೀನಾರಾಯಣರು. ಹಾಗಾಗಿ ಆರ್ ಎಲ್ ಭಟ್ಟರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಅಲ್ಲಿಯ ಮರಾಠಿಯ ಪ್ರಾಭಲ್ಯದ ನಡುವೆಯೂ ಕನ್ನಡ ಮಾಧ್ಯಮದಲ್ಲೇ ನಡೆಯಿತು.

ಆದರೆ ಮುಂದೆ ತಾನಿದ್ದ ಊರಿನ ಮರಾಠಿ ಭಾಷೆಯನ್ನೇ ಬಂಡವಾಳವನ್ನಾಗಿಸಿಕೊಂಡು ತನ್ನೂರಿನ ಕನ್ನಡ ಭಾಷೆಗೆ ಒಂದಷ್ಟು ಆಸ್ತಿ ಮಾಡಿ ಕೂಡಿಟ್ಟ ಭಾಷಾ ಪ್ರೇಮಿ ಆರ್. ಎಲ್. ಭಟ್. ತನ್ನ 40 ರಿಂದ 50ರ ನಡು ಪ್ರಾಯದಲ್ಲಿ ಸುಮಾರು 15 ಶ್ರೇಷ್ಟ ಮರಾಠಿ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಕನ್ನಡಿಗರ ಮನ ಗೆದ್ದರು. ಅದರಲ್ಲಿ ಕೆಲವು ನಾಟಕಗಳು ರಂಗಪ್ರವೇಶ ಮಾಡಿದವು.

ಶ್ರೀಯುತ ಭಟ್ಟರು ತನ್ನ ಬಿ.ಎಸ್ಸಿ ಮತ್ತು ಸ್ನಾತಕೋತ್ತರ ಶಿಕ್ಷಣದ ಪದವಿಯನ್ನು ಪುಣೆಯಲ್ಲಿ ಪಡೆದರು. ಶಾಲಾ ಕಾಲೇಜಿನ ದಿನಗಳಲ್ಲಿ ನಟನೆಯ ಬಗ್ಗೆ ಹೆಚ್ಚಿನ ಆಸಕ್ತಿ ಇರದಿದ್ದರೂ ಸಂಘಟನೆಯ ಬಗ್ಗೆ ಅವರ ಮನ ಹೆಚ್ಚು ವಾಲಿತ್ತು. ಅಲ್ಲಿ ನಡೆಯುತ್ತಿದ್ದ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಇತರ ಕ್ರಿಯಾಶೀಲ ಚಟುವಟಿಕೆಗಳ ಜವಾಬ್ದಾರಿ ಯನ್ನು ತಾನೇ ಹೊತ್ತು ಲವಲವಿಕೆಯಿಂದ ನಿರ್ವಹಿಸುತ್ತ ಎಲ್ಲರಿಂದ ಸೈ ಎನಿಸಿಕೊಂಡಿದ್ದರು.

ಆಗ ಕನ್ನಡ ಮತ್ತು ಮರಾಠಿ ಭಾಷಾ ಸಾಹಿತ್ಯದ ಅಭಿರುಚಿ ಉತ್ತಮ ಕಥೆ ಆಧಾರಿತ ಮರಾಠಿ ನಾಟಕಗಳ ವೀಕ್ಷಣೆ ಮನದೊಳಗಿನ ತುಮುಲವನ್ನು ಜಾಗೃತಗೊಳಿಸಿತ್ತು, ಜೀವಂತವಾಗಿಸಿತ್ತು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡವನೇ ಬಲು ಜಾಣ ಎಂಬ ಮಾತಿದೆಯಲ್ವೇ… ಕಲಿಕೆ ಮುಗಿಸಿ ಸಂಬಂಧಿ ಒಬ್ಬರ ಮದುವೆಗೆಂದು ಊರಿಗೆ ಬಂದಾಗ ಪೂರ್ಣ ಪ್ರಜ್ಞ ಕಾಲೇಜು ಕೂಗಿ ಕರೆಯಿತು. ಬದಲಾಯಿತು ಜೀವನ ನಿಪ್ಪಾಣಿಗೆ ಬಾಯ್ ಉಡುಪಿಗೆ ಜೈ… ತಂದೆಯೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಗಿತ್ತು.

ಹೀಗೆ ಮುನ್ನಡೆದ 32 ಸಂವತ್ಸರಗಳ ವೃತ್ತಿ ಜೀವನದ ನಡುವೆ ಪ್ರವೃತ್ತಿ ಗೆ ತನ್ನೊಳಗಿನ ಕಲಾ ಪ್ರತಿಭೆಗೂ ವಿಪುಲ ಅವಕಾಶಗಳು ಕೂಡಿ ಬಂದು ಜೀವನಕ್ಕೊಂದಷ್ಟು ಬಣ್ಣಗಳು ಅಂಟಿಕೊಂಡವು. ಈ ನಿಟ್ಟಿನಲ್ಲಿ ಸ್ವಾಮೀಜಿಯವರ ಆಶಯಕ್ಕೆ ಮಣಿದು ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಶ್ರೀರಂಗರ ” ಸಿರಿ ಪುರಂದರ ” ನಾಟಕ ಇವರಿಂದ ರೂಪ ತಳೆದು ಲೋಕಾರ್ಪಣ ಗೊಂಡು ಎಲ್ಲರ ಮೆಚ್ಚುಗೆ ಪಡೆಯಿತು. ಅದರ ಮರು ವರ್ಷವೇ ಅಂಬಲಪಾಡಿ ಮಹಾಕಾಳಿ ಮಾತೆಯ ದಿವ್ಯ ಸನ್ನಿಧಿಯಲ್ಲಿ ಕೋರಿಕೆಯ ಮೇರೆಗೆ ತಾಯಿಯ ಭಕ್ತರನ್ನೊಳಗೊಂಡ ಸೃಜನಶೀಲ ಚಿಂತನೆಯ ಇವರ ಪ್ರಸ್ತುತಿ “ಭಕ್ತ ಕನಕದಾಸ” ಪ್ರದರ್ಶನಗೊಂಡು ಎಲ್ಲರ ಗಮನ ಸೆಳೆಯಿತು.

ಆಗಷ್ಟೇ ಪ್ರಾರಂಭವಾಗಿದ್ದ ರಂಗಭೂಮಿಯ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನೂ ಬಳಸಿಕೊಂಡ ಇವರು ಎಂ ವ್ಯಾಸರ ಕಿರು ಕಾದಂಬರಿ “ಸ್ನಾನ” ಹಾಗೂ ಗೀತಾ ನಾಗಭೂಷಣರ ಮಹಾಪುರ ತಾಯಿಯ ಮಕ್ಕಳು ಎಂಬ ನಾಟಕಗಳನ್ನು ಪ್ರದರ್ಶಿಸಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡರು. ಹೀಗೆ ಪ್ರಾರಂಭಗೊಂಡ ನಾಟಕ ರಚನೆ ಹಾಗೂ ನಿರ್ದೇಶನದ ಕಾಯಕ ಪ್ರತಿ ವರ್ಷ ಮುಂದುವರಿಯುತ್ತಾ ಹೋಗಿ ಪ್ರಬುದ್ಧ ಅನುವಾದಕ ಹಾಗೂ ಶ್ರೇಷ್ಟ ನಿರ್ದೇಶಕ ಎಂಬ ಕೀರ್ತಿಯನ್ನು ತಂದುಕೊಟ್ಟಿತು. ತನ್ನ ಭೋದನಾ ಕ್ಷೇತ್ರ ಪೂರ್ಣಪ್ರಜ್ಞ ಕಾಲೇಜು ಇವರ ಅನುಭವ ಮಂಟಪವಾಯಿತು.

ಇನ್ನು ಇವರ ಕೈಯಲ್ಲಿ ಮಹಾಪ್ರಳಯ ಎಂಬ ಇಂಗ್ಲೀಷ್ ನಾಟಕವೂ ಕನ್ನಡಕ್ಕೆ ಅನುವಾದ ಗೊಂಡಿತು. ಹೀಗೆ ತನ್ನೊಳಗಿನ ಕಲಾ ಪ್ರೌಢಿಮೆಯನ್ನು ಹೊರ ಚೆಲ್ಲುತ್ತಾ ತನ್ನ ಸುತ್ತಮುತ್ತಲಿನ ಶಿಲೆಗಳಲ್ಲಿ ಕಲೆಯನ್ನ ಅರಳಿಸಿದರು ಶ್ರೀಮಾನ್ ಭಟ್ಟರು. ಉಡುಪಿಯ ಶ್ರೇಷ್ಠ ರಂಗನಟ ರೆನಿಸಿಕೊಂಡಿರುವ ಡಿ.ಜಿ ಹೆಗಡೆ, ಮಾಧವಿ ಭಂಡಾರಿ, ನಟರಾಜ ದೀಕ್ಷಿತ ಮುಂತಾದವರು ಇವರ ಪಾಳಯದಲ್ಲಿ ಪಳಗಿದವರು.

ತನ್ನ 79ರ ಹರೆಯದಲ್ಲೂ ಕಲಾಕ್ಷೇತ್ರದಲ್ಲಿ ಯವ್ವನೋತ್ಸಾಹವನ್ನು ತುಂಬಿಕೊಂಡಿರುವ ಇವರು ನಟಿಸಿದ ಪಾತ್ರಗಳು ಒಂದೆರಡಾದರೂ ರಚಿಸಿ ನಿರ್ದೇಶಿಸಿದ ನಾಟಕಗಳು ಹತ್ತು ಹಲವು. ಜೊತೆಗೆ ಇವರಿಗೆ ಪ್ರಾರಂಭದಿಂದಲೂ ರಂಗ ಸಜ್ಜಿಕೆ ಮತ್ತು ಬೆಳಕು ಸಂಯೋಜನೆಯಲ್ಲಂತೂ ಅತೀವ ಒಲವು.

ಇನ್ನು ವೃತ್ತಿಯಲ್ಲೂ ಪ್ರವೀಣ ಭೌತಶಾಸ್ತ್ರದ ಪ್ರಾಧ್ಯಾಪಕ ಗಣಿತಶಾಸ್ತ್ರದ ಆರಾಧಕ ಆಸಕ್ತರಿಗೆ ಮಾರ್ಗದರ್ಶಕ. ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಥಮ ಪ್ರಾಂಶುಪಾಲ ಎಂಬ ಹೆಗ್ಗಳಿಕೆ ಇವರದು. ಸಂಸಾರಕ್ಕೆ ಸಂಬಂಧ ಪಟ್ಟಂತೆ ತುತ್ತಿತ್ತು ಸರಿದಾರಿ ತೋರಿದ ತಾಯಿ ವನಜಾಕ್ಷಿ – ಪತ್ನಿ ವಾರಿಜಾಕ್ಷಿ – ಖ್ಯಾತ ಸಂಗೀತ ವಿಶಾರದೆ, ಸ್ವಂತ ಕಾಲಲ್ಲಿ ಸುಖಮಯ ಜೀವನ ನಡೆಸುತ್ತಿರುವ ಈ ದಂಪತಿಗಳಿಗೊದಗಿದ ಮೂರು ಮುತ್ತುಗಳು.. ಇವರೇ ಇವರ ಸುಖ ಸಂಸಾರದ ಸಂಪತ್ತು.

ಹಿರಿಯ ರಂಗಕರ್ಮಿ ಆರ್ ಎಲ್ ಭಟ್ಟರ ನಾಟಕರಂಗದ ಈ ಕಲಾ ಸೇವೆ ಕಿರಿಯರಿಗೆ ಮಾದರಿಯಾಗಲಿ ಎಂದು ಹಾರೈಸುತ್ತಾ ನಾಟಕ ಸಾಹಿತ್ಯದ ಶೀರ್ಷಿಕೆ ಅಡಿಯಲ್ಲಿ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ 2024 ನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಜಂಟಿಯಾಗಿ ಇದೇ ಮಾರ್ಚ್ 26ರಂದು ನೀಡಿ ಗೌರವಿಸಲಿದೆ.

✍ ರಾಜೇಶ್ ಭಟ್ ಪಣಿಯಾಡಿ
ಸಂಚಾಲಕರು, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ

 
 
 
 
 
 
 
 
 
 
 

Leave a Reply