Janardhan Kodavoor/ Team KaravaliXpress
26.6 C
Udupi
Thursday, August 11, 2022
Sathyanatha Stores Brahmavara

ಕುಂಜೂರು: ಕೆ.ಎಲ್. ಕುಂಡಂತಾಯರಿಗೆ ಪತ್ರಿಕಾ ದಿನದ ಗೌರವ ಪ್ರದಾನ

ಕಾಪು: ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಕಟದ ವತಿಯಿಂದ ಕುಂಜೂರಿನಲ್ಲಿ ನಡೆದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ, ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ ಅವರಿಗೆ ಪತ್ರಿಕಾ ದಿನದ ಗೌರವ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಪ್ರಶಸ್ತಿ ಪ್ರದಾನಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಸಾಹಿತ್ಯ ನಿಂತ ನೀರಾಗಿರಬಾರದು. ಅದು ಎಲ್ಲೆಡೆಗೆ ವ್ಯಾಪಿಸಬೇಕು ಮತ್ತು ಪಸರಿಸಬೇಕು. ಸಾಹಿತ್ಯವನ್ನು ಎಲ್ಲಾ ಕಡೆಗೂ ವಿಸ್ತರಿಸುವಲ್ಲಿ ಕನ್ನಡ ಸಾಹಿತ್ಯಾಭಿಮಾನಿಗಳ ಕೊಡುಗೆ ಅಪಾರವಾಗಿದೆ. ಶೇಖರ ಅಜೆಕಾರು ಅವರು ಅದಕ್ಕೆ ಪೂರಕವಾಗಿ ನಾಡಿನ ಉದ್ದಗಲದಲ್ಲಿ ಸಂಚರಿಸಿ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಡಾ| ಉದಯ ರವಿ ಮಾತನಾಡಿ, ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಪರಿಸ್ಪರ ಹತ್ತಿರದ ಸಂಬಂಧವಿದೆ. ಪತ್ರಿಕೆಯ ಮೂಲಕಗಿ ಪತ್ರಕರ್ತನಿಗೆ ಎಲ್ಲರೊಂದಿಗೆ ಸೇರುವ ಅವಕಾಶ ಲಭಿಸುತ್ತದೆ. ಸೇವೆಗೆ ಸೀಮಿತವಾಗಿದ್ದ ಪತ್ರಿಕೆಗಳು ಪತ್ರಿಕೋದ್ಯಮವಾಗಿ ಬೆಳೆದು ನಿಂತಿದೆ.
ಮೌಲ್ಯಾಧಾರಿತವಾದ ಪತ್ರಿಕೋದ್ಯಮ ಬೆಳೆಯ ಬೇಕಾದರೆ ಪತ್ರಕರ್ತರು ಮತ್ತು ಪತ್ರಿಕೆ ನಡೆಸುವವರ ನಡುವಿನ ಭಾಂದವ್ಯ ಹೆಚ್ಚಾಗಬೇಕಿದೆ. ಅದಕ್ಕಾಗಿ ಶ್ರಮಿಸುವುದರ ಜೊತೆಗೆ ಪತ್ರಿಕೆ ಮತ್ತು ಪತ್ರಕರ್ತರು ಸೇವಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವಂತಾಗಬೇಕು ಎಂದರು.
ಪತ್ರಿಕಾ ದಿನದ ಗೌರವ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ಕೆ. ಎಲ್. ಕುಂಡಂತಾಯ ಮಾತನಾಡಿ, ಪತ್ರಕರ್ತ ಕೇವಲ ವರದಿಗಾರಿಕೆಗೆ ಮಾತ್ರ ಸೀಮಿತವಾಗದೇ ಪತ್ರಿಕೆಗೆ ಅವಶ್ಯಕವಾಗಿರುವ ಮತ್ತು ತನ್ನ ಆಸಕ್ತಿಯ ಕ್ಷೇತ್ರದ ಬಗ್ಗೆ ಕ್ಷೇತ್ರ ಕಾರ್ಯ ನಡೆಸುವತ್ತಲೂ ತನ್ನ ಗಮನ ಹರಿಸಬೇಕು.
ಪತ್ರಕರ್ತನಾಗಿ ಉದಯವಾಣಿಯೊಂದಿಗೆ ಎರಡು ದಶಕಗಳ ಸಂಬಂಧವನ್ನು ವಿವರಿಸಿದ ಅವರು ತನ್ನನ್ನು ಉದಯವಾಣಿ ಬೆಳೆಸಿದೆ. ಹಾಗಾಗಿ 101 ದೇವಸ್ಥಾನಗಳ ಕ್ಷೇತ್ರ ಕಾರ್ಯ ನಡೆಸಲು ಅವಕಾಶ ಸಿಕ್ಕಿದೆ. ಪತ್ರಿಕೆ ತನಗೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಲೇಖಕನಾಗಿ, ಸಂಶೋಧಕನಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.
ಸಾಹಿತ್ಯಾಭಿಮಾನಿಗಳಾದ ವಿಶ್ವನಾಥ ಶೆಣೈ ಉಡುಪಿ, ಸುರೇಶ್ ಪೈ, ಕರುಣಾ ಸುರೇಶ್ ಪೈ, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ, ಕಸಾಪ ಉಡಪಿ ತಾಲೂಕು ಕಾರ್ಯದರ್ಶಿ ಜನಾರ್ದನ ಕೊಡವೂರು, ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ಸಚಿನ್ ಕುಮಾರ್, ಯಶೋಧರ್ ಕುಮಾರ್, ಯಶೋಧಾ, ಮುಂಡ್ಕೂರು ವಿದ್ಯಾವರ್ಧಕ ಪ. ಪೂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸುದರ್ಶನ್ ವೈ.ಎಸ್., ಗುರುರಾಜ ಮಂಜಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರು ಪತ್ರಕರ್ತರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸುರೇಂದ್ರ ಪಣಿಯೂರು ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!