ಬಿಜೆಪಿಯ ಭೀಷ್ಮ ಎಲ್‌.ಕೆ ಅಡ್ವಾಣಿಯವರಿಗೆ ‘ಭಾರತ ರತ್ನ’ ಪ್ರಶಸ್ತಿ

ಮಾಜಿ ಉಪ ಪ್ರಧಾನಿ, ಬಿಜೆಪಿಯ ಭೀಷ್ಮ ಎಲ್‌.ಕೆ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ಗೌರವಯುತ ಪ್ರಶಸ್ತಿ ಭಾರತ ರತ್ನ ಘೋಷಣೆ ಮಾಡಲಾಗಿದೆ. ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಮಾಡಿರುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಎಲ್.ಕೆ ಅಡ್ವಾಣಿ ಅವರು 1980ರಿಂದ ಭಾರತೀಯ ಜನತಾ ಪಕ್ಷದಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಅತೀ ಹೆಚ್ಚು ಅವಧಿ ಬಿಜೆಪಿಯನ್ನು ಮುನ್ನಡೆಸುತ್ತಾ ಬಂದಿದ್ದ ನಾಯಕರು. ಪಕ್ಷಕ್ಕಾಗಿ ಮಾಡಿದ ಅವರ ಪರಿಶ್ರಮ, ಆಡಳಿತದಿಂದ ಬಿಜೆಪಿಯ ಭೀಷ್ಮ ಎಂದೇ ಪ್ರಖ್ಯಾತ ಪಡೆದಿದ್ದಾರೆ.

96 ವರ್ಷದ ಎಲ್.ಕೆ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡುತ್ತಿರುವ ಸಂತಸ ಸುದ್ದಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಎಲ್ ಕೆ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಗೌರವ ನೀಡುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ. ಈ ಕುರಿತು ಅವರೊಂದಿಗೆ ದೂರವಾಣಿ ಮೂಲಕ ನಾನೇ ಖುದ್ದಾಗಿ ತಿಳಿಸಿದ್ದು ಅದನ್ನು ಕೇಳಿ ಅವರು ಬಹಳ ಖುಷಿಪಟ್ಟರು ಎಂದು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ.

ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಅವರ ಜೀವನವು ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ಉಪ ಪ್ರಧಾನಿಯಾಗಿ ರಾಷ್ಟ್ರದ ಸೇವೆಯವರೆಗೆ ಪ್ರಾರಂಭವಾಯಿತು ಎಂದು ಪ್ರಧಾನಿ ಮೋದಿ ಎಲ್.ಕೆ ಅಡ್ವಾಣಿ ಬಗ್ಗೆ ಹೇಳಿದರು.

ಕೆಲವೇ ದಿನಗಳ ಹಿಂದೆಯಷ್ಟೇ ಬಿಹಾರದ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿತ್ತು. ಅದಾದ ಒಂದೇ ವಾರದಲ್ಲಿ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಘೋಷಣೆಯಾಗಿದೆ.

ಬಿಜೆಪಿಯ ಭೀಷ್ಮ ಎಲ್ಕೆ ಅಡ್ವಾಣಿಗೆ ಭಾರತ ರತ್ನ  ಘೋಷಣೆಯಾಗಿರುವ ಬಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಕರ್ಣಾಟಕದ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಉಪಪ್ರಧಾನಿಗಳಾಗಿ ಅಡ್ವಾಣಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು ಎಂದು ಬಿಎಸ್ ಯಡಿಯೂರಪ್ಪ ಸಾಮಾಜಿಕ ಮಾಧ್ಯಮ ಎಕ್ಸ್ ಸಂದೇಶದಲ್ಲಿ ಬಣ್ಣಿಸಿದ್ದಾರೆ.

‘ಹಿರಿಯ ನೇತಾರ, ಧೀಮಂತ ನಾಯಕ ಆದರಣೀಯ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿಯಿಂದ ಗೌರವಿಸಲಾಗುತ್ತಿರುವುದು ಅತ್ಯಂತ ಹೆಮ್ಮೆಯ ಮತ್ತು ಅಭಿನಂದನೀಯ ಸಂಗತಿ. ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಅವರ ಪ್ರಯತ್ನ ಅಸಾಧಾರಣವಾದದ್ದು. ಹಲವಾರು ದಶಕಗಳ ಸಾರ್ವಜನಿಕ ಜೀವನದಲ್ಲಿ ಅವರ ನಾಯಕತ್ವ, ಸಂಸದರಾಗಿ, ಕೇಂದ್ರ ಸಚಿವರಾಗಿ, ಉಪಪ್ರಧಾನಿಗಳಾಗಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲಾಗದು’ ಎಂದು ಯಡಿಯೂರಪ್ಪ ಉಲ್ಲೇಖಿಸಿದ್ದಾರೆ.

ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಭಾರತರತ್ನ’ ಗೌರವಕ್ಕೆ ಪಾತ್ರರಾಗಿರುವ ಹಿರಿಯ ರಾಜಕಾರಣಿ, ಮುತ್ಸದ್ದಿ, ಬಿಜೆಪಿ ಭೀಷ್ಮ ಹಾಗೂ ಮಾಜಿ ಉಪ ಪ್ರಧಾನಿಗಳಾದ ಎಲ್ಕೆ ಅಡ್ವಾಣಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅತ್ಯುನ್ನತ ಗೌರವಕ್ಕೆ ಅರ್ಹ ವ್ಯಕ್ತಿಯನ್ನು ಗುರುತಿಸಿ ಪುರಸ್ಕಾರ ಘೋಷಿಸಿರುವ ಕೇಂದ್ರ ಸರಕಾರ ಹಾಗೂ ಪ್ರಧಾನಿಗಳಾದ ನರೇಂದ್ರ ಮೋದಿ ಅವರಿಗೆ ಅಭಿವಂದನೆಗಳು. ಭಾರತೀಯ ರಾಜಕಾರಣದಲ್ಲಿ ನಿಷ್ಠೆ, ಬದ್ಧತೆ, ಸ್ನೇಹಶೀಲತೆ ಹಾಗೂ ಕಠಿಣ ಪರಿಶ್ರಮಕ್ಕೆ ಅನ್ವರ್ಥವಾದ ಅಡ್ವಾಣಿ ಅವರು ಎಲ್ಲರಿಗೂ ಪ್ರೇರಣೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

 
 
 
 
 
 
 
 
 
 
 

Leave a Reply