ಶಿವಳ್ಳಿ ಕುಟುಂಬದ ಪ್ರಥಮ ಸಮ್ಮಿಲನ ಸಂಭ್ರಮ

ಶಿವಳ್ಳಿ ವಿಪ್ರ ತುಳುಭಾಷೆ, ಆಚಾರ ವಿಚಾರ, ಸಂಪ್ರದಾಯ, ಸಂಸ್ಕೃತಿಗಳಿಗೆ ಗೌರವಾದರ, ಪ್ರಾಶಸ್ತ್ಯವನ್ನು ಕೊಟ್ಟು ಅವುಗಳ ಸೌರಭವನ್ನು ಉತ್ತರ ಅಮೇರಿಕಾದಲ್ಲಿನ ಮುಂದಿನ ಪೀಳಿಗೆಗೆ ವಿಸ್ತರಿಸುವ ಘನಸಂಕಲ್ಪವನ್ನು ಹೊತ್ತುಕೊಂಡ ಸಮುದಾಯವೇ ಶಿವಳ್ಳಿ ಕುಟುಂಬ. ಎರಡು ವರ್ಷಗಳ ಹಿಂದೆ ಜನ್ಮತಾಳಿದ ಈ ಸಂಘಟನೆಯು ಅಮೇರಿಕಾದ 18 ನಗರಗಳಲ್ಲಿ ತನ್ನ ಶಾಖೆಗಳನ್ನು ಸ್ಥಾಪಿಸಿರುವುದು ಪ್ರಶಂಸನೀಯ.

ಅದರ ಎಲ್ಲ ಶಾಖೆಯ ಸದಸ್ಯರನ್ನೊಳಗೊಂಡ ಪ್ರಥಮ ಸಮ್ಮಿಲನ ಸಮಾವೇಶವು ಎಪ್ರಿಲ್ 7, 2023 ರಿಂದ ಮೂರು ದಿನಗಳ ಕಾಲ ಟೆಕ್ಸಾಸ್ ರಾಜ್ಯದ ಹ್ಯೂಸ್ಟನ್‍ನಲ್ಲಿ ಅದ್ದೂರಿಯಾಗಿ ನಡೆಯಿತು. ಸುಮಾರು 500ಕ್ಕೂ ಮಿಕ್ಕಿ ವಿಪ್ರ ಸದಸ್ಯರು ವೈವಿಧ್ಯಮಯ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಮೊದಲ ದಿನದ ಸಂಜೆಯ ಕಾರ್ಯಕ್ರಮಗಳು ಉಡುಪಿ ಪುತ್ತಿಗೆ ಮಠದ ಹ್ಯೂಸ್ಟನ್ ಶಾಖೆಯಾದ ‘ಶ್ರೀ ಕೃಷ್ಣ ವೃಂದಾವನ’ದಲ್ಲಿ ನಡೆಯಿತು. ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ದೀಪ ಬೆಳಗಿಸಿ ಸಮ್ಮಿಲನ ಕಾರ್ಯಕ್ರಮ ಗಳಿಗೆ ನಾಂದಿ ಹಾಡಿದರು. ನಂತರ ಸ್ವಾಮೀಜಿಯವರು ಪ್ರಥಮ ದ್ವಿವಾರ್ಷಿಕ ಸಂಚಿಕೆ ‘ಇನಿದನಿ’ಯನ್ನು ಅನಾವರಣ ಗೊಳಿಸಿದರು.

ಪ್ರಧಾನ ಸಂಪಾದಕ ಶ್ರೀ ಅರುಣ್ ರಾವ್ ಆರೂರುರವರು ವಿಪ್ರವಾಣಿ ತ್ರೈಮಾಸಿಕ ಸಂಚಿಕೆಗಳು ಮತ್ತು ಪ್ರಸ್ತುತ ವಾರ್ಷಿಕ ಸಂಚಿಕೆಯು ನಡೆದು ಬಂದ ದಾರಿಯನ್ನು ವಿಶ್ಲೇಷಿಸಿದರು. ಆ ಬಳಿಕ ಸಮ್ಮಿಲನವನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ ಎಲ್ಲ ಸ್ವಯಂಸೇವಕರನ್ನು ಗೌರವಿಸಲಾಯಿತು. ಶಿವಳ್ಳಿ ಕುಟುಂಬದ ಕಲಾವಿದರು ನಡೆಸಿದ ‘ದುರ್ಗಾ – ಲಕ್ಷ್ಮೀ ಸರಸ್ವತಿ’ ಎಂಬ ಭರತನಾಟ್ಯ ಕಾರ್ಯಕ್ರಮವು ಸಭಿಕರನ್ನು ರಂಜಿಸಿತು.

ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಶುಭಾರಂಭ ಸೂಚಕವಾದ ದುರ್ಗಾ ಪೂಜೆಯು ಸಾಂಗವಾಗಿ ಸಾಗುತ್ತಿತ್ತು. ಅದರ ಮಧ್ಯದಲ್ಲಿ ಪವಿತ್ರತೆಯನ್ನು ವೃದ್ಧಿಸಲು ಶ್ರೀಮತಿ ರಾಜರಾಜೇಶ್ವರಿ ಭಟ್, ಅರುಣ್ ರಾವ್ ಆರೂರು ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮವು ಮೂಡಿ ಬಂತು. ಆ ದೇವತಾ ಕಾರ್ಯದ ಫಲಶ್ರುತಿಯ ಬಳಿಕ ಸ್ವಾಮೀಜಿಯವರಿಂದ ಶಿವಳ್ಳಿ ಕುಟುಂಬದ ಶ್ರೇಯಸ್ಸಿಗಾಗಿ ಆಶೀರ್ವಚನ ನಡೆಯಿತು.

ಮಾನವೀಯ ಸಂಬಂಧಗಳು ಮತ್ತು ಕೌಟುಂಬಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿದ ಅವರು ಈ ಸಂಘಟನೆಯು ಸುದೀರ್ಘ ಯಶಸ್ಸನ್ನು ಗಳಿಸುತ್ತ ಭಾರತದ ಗಡಿಯಾಚೆಗಿನ ಬೃಹತ್ ಕುಟುಂಬವಾಗಿ ಗಗನದೆತ್ತರಕ್ಕೆ ಬೆಳೆಯುವುವಂತೆ ಹರಸಿದರು. ಉಡುಪಿಯ ಮಠಗಳಲ್ಲಿನ ಅಡುಗೆ ಮಾದರಿಯ ರುಚಿಕಟ್ಟಾದ ಸಾಂಪ್ರದಾಯಿಕ ಭೋಜನದೊಂದಿಗೆ ಅಂದಿನ ಕಾರ್ಯಕ್ರಮಗಳು ಸಮಾಪ್ತಿಗೊಂಡವು.

ಮಾರನೇ ದಿನದ ಕಾರ್ಯಕ್ರಮಗಳು ಹ್ಯೂಸ್ಟನ್‍ನ ದುರ್ಗಾಬಾರಿ ಸಭಾಂಗಣದಲ್ಲಿ ನಡೆದವು. ವಿಪ್ರ ಸದಸ್ಯರೆಲ್ಲ ಸಂಪ್ರದಾಯಬದ್ಧ ಪೋಷಾಕುಗಳನ್ನು ಧರಿಸಿಕೊಂಡು ಆಗಮಿಸಿದರು. ಉಪಾಹಾರವು ಮುಗಿದ ತಕ್ಷಣವೆ ಭವ್ಯವಾದ ಮೆರವಣಿಗೆಯು ಸಭಾಂಗಣದ ಹೊರಗಡೆ ಉದ್ದಗಲಕ್ಕೆ ಸಾಗಿತು. ಅಮೇರಿಕಾದ ವಿವಿಧೆಡೆಯಿಂದ ಆಗಮಿಸಿದ್ದವರು ತಮ್ಮ ಶಾಖೆಯ ಫಲಕವನ್ನು ಎತ್ತಿ ಹಿಡಿದು ಹರ್ಷೋದ್ಗಾರದೊಂದಿಗೆ ಹೆಜ್ಜೆ ಹಾಕಿದರು. ಮಿರುಗುವ ರೇಶ್ಮೆ ಸೀರೆಯುಟ್ಟು ಶೃಂಗಾರಭರಿತರಾಗಿದ್ದ ಮಹಿಳೆಯರು ಪ್ರಫುಲ್ಲಿತ ಪುಷ್ಪಗಳಂತೆ ವಿಜೃಂಭಿಸಿದರೆ, ಪುರುಷರು ಶುಭ್ರ ಉಡುಪುಗಳನ್ನು ಧರಿಸಿ ಶಾಲನ್ನು ಹೆಗಲೇರಿಸಿಕೊಂಡು ವಿವಾಹಕ್ಕೆ ಅಣಿಯಾದ ವರನಂತೆ ಮಿಂಚಿದರು.

 ಶ್ರೀಮತಿ ಶುಭಾ ರಾವ್ ಹಾಡಿದ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಪ್ರಾರಂಭಗೊಂಡಿತು. ಸಭಾಧ್ಯಕ್ಷರಾಗಿದ್ದ ಪುತ್ತಿಗೆ ಯತಿವರ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟನೆಯನ್ನು ಮಾಡಿದರು. ಖ್ಯಾತ ಪಿಟೀಲು ವಿದ್ವಾಂಸ ಶ್ರೀ ವಿಠಲ ರಾಮಮೂರ್ತಿ ಮತ್ತು ಶ್ರೀಮತಿ ಲೀಲಾ ಉಪಾಧ್ಯಾಯರು ಅಂದಿನ ಗೌರವ ಅತಿಥಿಯಾಗಿದ್ದರು. ಮುಖ್ಯ ಅತಿಥಿ ಶ್ರೀಮತಿ ರಾಜರಾಜೇಶ್ವರಿ ಭಟ್, ಕುಟುಂಬದ ನಿರ್ದೇಶಕ ಶ್ರೀ ಶ್ರೀಶ ಜಯಸೀತಾರಾಮ ಮತ್ತು ಅಧ್ಯಕ್ಷ ಶ್ರೀ ಪ್ರಶಾಂತ್ ಮಟ್ಟುರವರು ವೇದಿಕೆಯ ಮೇಲೆ ಆಸೀನರಾಗಿದ್ದರು.

ನಂತರ ವೇದಿಕೆಯ ಮೇಲೆ ಶ್ರೀ ವಿಠಲ ರಾಮಮೂರ್ತಿಯವರ ಉಪಸ್ಥಿತಿಯಲ್ಲಿ ಮೂಡಿ ಬಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಹಾಗೂ ಪಿಟೀಲು ವಾದನವು ಕರ್ಣಾನಂದಕರ ಎನಿಸಿತು. ಭರತನಾಟ್ಯ ಮತ್ತು ಕರಾವಳಿಯ ಪ್ರಸಿದ್ಧ ಕಲೆಯಾದ ಯಕ್ಷಗಾನ ವನ್ನೊಳಗೊಂಡ ‘ಶ್ರೀ ಕೃಷ್ಣ ವೃಂದಾವನ’ ನೃತ್ಯ ನಾಟಕವು ಪ್ರೇಕ್ಷಕರಿಗೆ ಆಹ್ಲಾದಕರ ಅನುಭವವನ್ನು ನೀಡಿತು. ಅಂದು ಬಾಳೆಯೆಲೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಸ್ವಾದಭರಿತವಾಗಿದ್ದ ವಿಪ್ರಶೈಲಿಯ ವೈವಿಧ್ಯಮಯ ಅಡುಗೆಗಳು ಶಿವಳ್ಳಿ ಸದಸ್ಯರ ಭಾರೀ ಮೆಚ್ಚುಗೆಗೆ ಪಾತ್ರವಾದವು.

ಸಮ್ಮಿಲನ ಸಮಾರಂಭದ ಪ್ರೇರಕ ಪ್ರವರ್ತಕರನ್ನು ಪರಿಚಯಿಸಿದ ನಂತರ ನಡೆದ ‘ಬೆಡಗು ಬಿನ್ನಾಣ’ ಎಂಬ ವಧು-ವರರ ನಯನಾಕರ್ಷಕ ಪೋಷಾಕು ಪ್ರದರ್ಶನವು ಸಭಿಕರ ಭರ್ಜರಿ ಕರತಾಡನವನ್ನು ಗಿಟ್ಟಿಸಿಕೊಂಡಿತು. ‘ಭಗವದಜ್ಜುಕೀಯ’ ನಾಟಕವು ಪ್ರೇಕ್ಷಕರೆಲ್ಲರ ಶ್ಲಾಘನೆಗೆ ಒಳಗಾಯಿತು.

ಘಮಘಮಿಸುವ ಗೋಳಿಬಜೆಯನ್ನು ಹೊಂದಿದ್ದ ಲಘೂಪಹಾರ ವಿರಾಮದ ನಂತರ ಹಿರಿಯರು-ಕಿರಿಯರು ಸೇರಿ ನುಡಿಸಿದ ಲಯಬದ್ಧ ವಾದ್ಯವೈವಿಧ್ಯ ‘ಮೋಹನ ಸಂಜೆ’ ಕಾರ್ಯಕ್ರಮವು ಆಲಿಸಲು ಹಿತದಾಯಕವೆನಿಸಿತು. ವಿವಿಧ ಮಾದರಿಯ ಭಕ್ತಿ, ಭಾವ, ಜನಪದ ಗೀತೆಗಳ ಸಮ್ಮಿಶ್ರವಿದ್ದ ‘ನಾದ ನಿನಾದ’ ಕಾರ್ಯಕ್ರಮದ ಹಾಡುಗಳು ವೀಕ್ಷಕರ ಮನಮುಟ್ಟಿದವು. ‘ಒಂಜಿ ದೊಡ್ಡನೊ ಏಕಾದಶಿ’ ಎಂಬ ತುಳು ಪ್ರಹಸನದ ಕಲಾವಿದರು ಸಭೆಯಲ್ಲಿ ನಗೆಬುಗ್ಗೆಗಳನ್ನು ಏಳಿಸಿದರು. ಆಕರ್ಷಕವಾದ ಹುಲಿವೇಷವೂ ಸೇರಿದಂತೆ ವಿವಿಧ ಪ್ರಭೇದದ ನೃತ್ಯಗಳನ್ನು ಒಳಗೊಂಡಿದ್ದ ‘ಘಲ್ಲು ಘಲ್ಲೆನುತ’ ಕಾರ್ಯಕ್ರಮವು ಎಲ್ಲರ ಮನ ಸೆಳೆಯಿತು.

ದಿನದ ಕೊನೆಯಲ್ಲಿ ಅಂದಿನ ಪ್ರಧಾನ ಅಂಗವಾಗಿ ಶ್ರೀಮತಿ ಅಖಿಲಾ ಪಜಿಮಣ್ಣು ಮತ್ತು ತಂಡದವರಿಂದ ಅದ್ಭುತ ಸಂಗೀತ ಸಂಜೆ ನಡೆಯಿತು. ಶ್ರವಣಾನಂದಕರ ನಿನಾದದೊಂದಿಗೆ ಮೂಡಿಬಂದ ಭಕ್ತಿ, ಭಾವ ಮತ್ತು ಚಲನಚಿತ್ರ ಗೀತೆಗಳು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದವು. ಅನುಭವಿ ಕಲಾವಿದರು ಸುಮಧುರ ಗಾಯನದೊಂದಿಗೆ ಪಿಟೀಲು ಮತ್ತು ಗಿಟಾರ್‌ಗಳಲ್ಲೂ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿ ರಾರಾಜಿಸಿದರು.

 ಸಮ್ಮಿಲನದ ಕೊನೆಯ ದಿನವಾದ ರವಿವಾರದಂದು ಮುಂಜಾನೆ ಯೋಗ, ಬಾಲಿವುಡ್ ಚಲನಚಿತ್ರ ಗೀತೆಗಳಿಗೆ ವ್ಯಾಯಾಮ, ಟೇಬಲ್ ಟೆನ್ನಿಸ್ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಪ್ರ ಸದಸ್ಯರು ಇವುಗಳಲ್ಲಿ ಪಾಲ್ಗೊಂಡು ಪೂರ್ಣಾನಂದ ಪಡೆದರು.

ರಾಧಿಕಾ ಸಂದೇಶ್, ಕಾಂತಿ ಚಂದ್ರಶೇಖರ್, ಪ್ರಮಿತಾ ರಾವ್, ರೂಪಾ ರಾವ್, ಆಶಾ ಅಡಿಗ ಆಚಾರ್ಯ, ನಿಖಿತಾ ಚಂದ್ರಶೇಖರ್, ಅನಿಶಾ ಕುದ್ರತಾಯ, ವೆಂಕಟೇಶ್ ಪೊಳಲಿ, ರಾಜೇಂದ್ರ ಕೆದ್ಲಾಯ, ಪ್ರಕಾಶ್ ಉಡುಪ, ಅರುಣ್ ರಾವ್ ಆರೂರು, ಬಾಲಕೃಷ್ಣ ರಾವ್ ಮತ್ತು ಆಕಾಶ್ ಮಟ್ಟುರವರು ಮೊದಲೆರಡು ದಿನಗಳ ಕಾರ್ಯಕ್ರಮಗಳನ್ನು ನಿರೂಪಿಸಿ ಸಮಾರಂಭಕ್ಕೆ ಜೀವಕಳೆ ನೀಡಿದರು. ಮೂರೂ ದಿನಗಳ ಕಾಲ ಅಡುಗೆಗಳನ್ನು ತರಿಸುವ ಮತ್ತು ಬಡಿಸುವ ಕಾರ್ಯವನ್ನು ಶ್ರೀ ರಾಮ್ ಶರ್ಮ, ಶ್ರೀ ಶ್ಯಾಮಸುಂದರ್ ಮತ್ತು ಸ್ವಯಂಸೇವಕರು ಸುಗಮವಾಗಿ ನಿರ್ವಹಿಸಿದರು.

ಒಟ್ಟಿನಲ್ಲಿ ಶಿವಳ್ಳಿ ಕುಟುಂಬದ ಪ್ರಥಮ ಸಮ್ಮಿಲನ ಸಮಾವೇಶವು ಎಲ್ಲಾ ವಿಭಾಗಗಳಲ್ಲಿ ಸಂಪೂರ್ಣ ರಸಾನುಭವವನ್ನು ಕೊಟ್ಟಿತು. ಪವಿತ್ರ ಭಗವತ್ಕಾರ್ಯಗಳು, ಯೋಗ್ಯ ವಸತಿ ಏರ್ಪಾಡು, ಸುಲಲಿತ ಪ್ರಯಾಣ ಸೌಕರ್ಯ, ಸ್ವಾದಭರಿತ ಆಹಾರ ವ್ಯವಸ್ಥೆ, ನಯನಮನೋಹರ ಪ್ರದರ್ಶನಗಳು ಇತ್ಯಾದಿಗಳೆಲ್ಲವೂ ಶ್ಲಾಘನೀಯ. ಸಮ್ಮಿಲನವು ನೀಡಿದ ಸಂತೋಷಾನುಭವವು ಹಾಜರಿದ್ದ ವಿಪ್ರಸದಸ್ಯರ ನೆನಪಿನಲ್ಲಿ ಬಹುಕಾಲ ಉಳಿಯಬಹುದಾದ ಒಂದು ಅವಿಸ್ಮರಣೀಯ ಕಾರ್ಯಕ್ರಮ ಎನ್ನುವುದು ಖಂಡಿತ.


ವರದಿ: ಅರುಣ್ ರಾವ್ ಆರೂರು, ಫ್ಲೋರಿಡಾ, ಯು.ಎಸ್.ಎ.

 
 
 
 
 
 
 
 
 
 
 

Leave a Reply