ಗಡ್ಡಧಾರಿ ಮತ್ತು ಚಿಟ್ಟೆಹುಲಿ! ~ ಗುರುರಾಜ್ ಸನಿಲ್

ನಮ್ಮೊಳಗಿನ ನಂಬಿಕೆಗಳು ಮತ್ತು ಕಣ್ಣೆದುರಿನ ವಾಸ್ತವ-ಇವುಗಳಲ್ಲಿ ಸತ್ಯವನ್ನು ಆರಿಸುವುದು ಹೇಗೆ?  

ಸಂಜೆಯ ಹೊತ್ತು. ಆಗಸ್ಟ್ ಆರಂಭದ ಮಳೆ ಹತ್ತು ನಿಮಿಷ ಹದವಾಗಿ ಸುರಿದು ನಿಂತಿತು. ಬಾನು ಶುಭ್ರವಾಯಿತು. ನೇಸರ, ಹೊಳೆವ ಕಿತ್ತಾಳೆ ಬಣ್ಣವನ್ನು ಮಬ್ಬಾವರಿಸುತ್ತಿದ್ದ ಭೂಮಿಯ ಮೇಲೆ ಪಸರಿಸ ತೊಡಗಿದ. ಅಲ್ಲೊಂದು ವಿಶಾಲ ಬಂಡೆಯಲ್ಲಿ ಕುಳಿತಿದ್ದ ನಾನು ಎದ್ದು ವಾಹನ ಹತ್ತಿದೆ. ಹೊಸ ಡಾಂಬಾರು ರಸ್ತೆ, ಗುಡಿಸಿ ತೊಳೆದಷ್ಟು ಶುಭ್ರವಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಕುರುಚಲು ಕಾಡು ಉದ್ದಕ್ಕುದ್ದ ಹಾಸಿದೆ. ನಿರ್ಜನ ಪ್ರದೇಶ. ಅಲ್ಲೊಂದು ಇಲ್ಲೊಂದು ಹಕ್ಕಿಗಳ ಮಧುರ ಕಲರವ, ಗಂಡು ನವಿಲಿನ ಗಂಭೀರ ಕೇಕಾರವ ಕಾಡಿನ ಗಾಢ ಮೌನವನ್ನು ಇನ್ನಷ್ಟು ಆಳಕ್ಕಿಳಿಸುತ್ತಿದೆ. ಆ ಮಾರ್ದವತೆ ಯನ್ನು ಆಸ್ವಾಧಿಸುತ್ತ ಆಮೆಗತಿಯಲ್ಲಿ ಸಾಗುತ್ತಿದ್ದೆ. 

 
ಸುಮಾರು ದೂರದಲ್ಲೊಬ್ಬ ಹಿರಿಯ ಬರುತ್ತಿದ್ದ. ಬಿಳಿ ವಸ್ತç ಧರಿಸಿದ್ದ ಅವನು ಸನ್ಯಾಸಿಯಂತೆ ನೀಳ ಬಿಳಿ ಕೂದಲು ಮತ್ತು ಗಡ್ಡ, ಮೀಸೆ ಬಿಟ್ಟಿದ್ದ. ಅದು ಗಮನ ಸೆಳೆಯಿತು. ಅವನನ್ನೇ ದಿಟ್ಟಿಸುತ್ತ ಸಾಗಿದೆ. ನನ್ನನ್ನು ಸಮೀಪಿಸುತ್ತ ಅವನೂ ಪ್ರಶ್ನಾರ್ಥಕ ದಿಟ್ಟಿಸಿದ. ಕಣ್ಣಿಗೆ ಕಣ್ಣು ಸಂಧಿಸಿದಾಕ್ಷಣ ಆತ ರಪ್ಪನೆ ನೋಟ ಕಿತ್ತು ಹಾದು ಹೋದ. ಅವನ ತಿಳಿಗೆಂಪು ಕಣ್ಣುಗಳಲ್ಲಿ ಆಗಷ್ಟೇ ಕುಡಿದ, ಇನ್ನೂ ಗಾಢವಾಗದ ಶರಾಬಿನ ನಶೆಯಿತ್ತು. ನಾನು ಅವನೊಳಗೆ ಶುದ್ಧ ಬೈರಾಗಿಯನ್ನು ಹುಡುಕಿದೆ ಎಂದು ಅವನ ಅಂತಃ ಪ್ರಜ್ಞೆಗನಿಸಿರಬೇಕು. ಆತ ಕಸಿವಿಸಿಗೊಂಡು ದೃಷ್ಟಿ ತಪ್ಪಿಸಿದ ಎಂದೆನಿಸಿತು. ಅಷ್ಟರಲ್ಲಿ ಅಲ್ಲೊಂದು ವಿಸ್ಮಯ ಘಟಿಸಿತು.

ಹಿರಿಯ ಬಂದ ರಸ್ತೆಯ ಪಕ್ಕದ ಹಾಡಿಯೊಳನಿಗಿಂದ ದೊಡ್ಡ ಚಿಟ್ಟೆಹುಲಿಯೊಂದು ರಪ್ಪನೆ ರಸ್ತೆಗೆ ಜಿಗಿಯಿತು! ಅದು ಬಹುಶ: ಆತ ಬರುವುದನ್ನು ಮೊದಲೇ ಗಮನಿಸಿರಬೇಕು. ಆತ ಸರಿದು ಹೋದ ಮರುಕ್ಷಣ ಚಂಗನೆ ರಸ್ತೆಗೆ ನೆಗೆದು ನನ್ನ ಕಾರನ್ನು ದಿಟ್ಟಿಸುತ್ತ ಎದುರಿನ ಕಾಡು ಹೊಕ್ಕಿತು. ನಾನು ಅವಾಕ್ಕಾದೆ! ಆದರೆ ಅಷ್ಟೇ ಬೇಗ ಚೇತರಿಸಿಕೊಂಡು ಕ್ಯಾಮೆರಾ ಹಿಡಿದು, ಅದು ನುಗ್ಗಿದ ಜಾಗದತ್ತ ಧಾವಿಸಿದೆ. ಹಾಡಿಯೊಳಗೆ ಹೋಗಲು ಧೈರ್ಯವಿಲ್ಲ. ಅಷ್ಟರಲ್ಲಿ ಅದು ಅದೃಶ್ಯವಾಗಿತ್ತು! ಆ ಹುಲಿಯ ಚೆಂದವನ್ನು ಮನನ ಮಾಡಿದೆ. 
 
ಮಾಸಲು ಕಂದು ಬಣ್ಣದ ಆ ವನ್ಯಜೀವಿಯು ಮೈತುಂಬ ಕಂಡೂ ಕಾಣದ, ವರ್ತುಲಾಕಾರದ ಕಪ್ಪು ಚುಕ್ಕೆಗಳನ್ನು ಹೊಂದಿತ್ತು. ಬಲಿಷ್ಠವಾದ, ಬಿಗಿದ ಸ್ನಾಯುಗಳ ಅದರ ಯೌವನ ತುಂಬಿದ ನೀಳ ದೇಹದ ಹೊಟ್ಟೆಯು ಬೆನ್ನಿಗಂಟಿದ್ದು, ಅಂದಿನ ಹಸಿವನ್ನು ಸೂಚಿಸುತ್ತಿತ್ತು. ಅದರ ಹೊಳೆವ ದುಂಡಗಿನ ಕಪ್ಪು, ಬಿಳುಪಿನ ಕಣ್ಣುಗಳು ಪೂರ್ತಿ ಅರಳಿ ಏಕಾಗ್ರವಾಗಿ ನನ್ನನ್ನು ದಿಟ್ಟಿಸಿದವು. ಬಳಿಕ ತನ್ನ ಬಾಲವನ್ನೆತ್ತಿ ತುದಿಯನ್ನು ಸುರುಳಿ ಸುತ್ತಿ ಕಂಪಿಸುತ್ತ್ತ ಕಾಡು ಹೊಕ್ಕಿತು. ಅದರ ನಡೆಯಲ್ಲಿದ್ದ ಗಾಂಭೀರ್ಯ, ಮುಗ್ಧತೆಯನ್ನು ನೆನೆದು ರೋಮಾಂಚಿತನಾದೆ.

ಕಾಡುಪ್ರಾಣಿಗಳು ಕ್ರೂರ, ಅಪಾಯ ಎಂಬ ನಮ್ಮ ನಂಬಿಕೆ ತಪ್ಪು. ಹಾಗಿರುತ್ತಿದ್ದರೆ, ಆ ಹಿರಿಯ ಬರುವುದನ್ನು ಮೊದಲೇ ಗ್ರಹಿಸಿದ್ದ ಚಿಟ್ಟೆಹುಲಿ ಅವನು ಹಾದು ಹೋಗುವವರೆಗೆ ಏಕೆ ಕಾಯುತ್ತಿತ್ತು? ಅದು ಹಸಿದಿದ್ದರೆ, ಮನುಷ್ಯರನ್ನೇ ಬೇಟೆಯಾಡುವ ಸ್ವಭಾವದ್ದಾಗಿದ್ದರೆ ಅಥವಾ ಆಕ್ರಮಣಕಾರಿ ಜೀವಿಯೇ ಆಗಿದ್ದಲ್ಲಿ ಅದು ಹಿರಿಯನ ಮೇಲೆ ದಾಳಿ ಮಾಡುತ್ತಿರಲಿಲ್ಲವೇ? ಅದು ಎಂತಹ ವಿವೇಕದ ಜೀವಿಯೆಂದರೆ, ತನ್ನಿರುವನ್ನು ಮನುಷ್ಯನಿಗೆ ತೋರಿಸಿ ಭಯಪಡಿಸಲಿಚ್ಛಿಸದೆ ಮತ್ತು ತಾನೂ ತೊಂದರೆಗೆ ಸಿಲುಕದೆ, ಆತ ಹಾದು ಹೋಗುವವರೆಗೆ ಕಾದು ಕುಳಿತು ನಂತರ ತನ್ನ ಗುರಿಯತ್ತ ಸಾಗಿತು. 
 
ಎಲ್ಲೋ ಯಾರಿಂದಲೋ ಹಾನಿಗೊಳ್ಳುವ ವನ್ಯಜೀವಿಯೊಂದು ತಪ್ಪಿಸಿಕೊಳ್ಳುವ ಧಾವಂತದಲ್ಲಿ ಎದುರಿಗೆ ಸಿಕ್ಕ ಅಮಾಯಕರನ್ನು ಗಾಯಗೊಳಿಸಬಹುದು. ಆದರೆ ಅದರ ಹಿಂದಿನ ವಿಚಾರವನ್ನು ಅರಿಯದ ನಾವು ಅದು ಕ್ರೂರಜೀವಿ ಎಂದು ತಪ್ಪು ಹಣೆಪಟ್ಟಿ ಕಟ್ಟುತ್ತೇವಷ್ಟೇ.

ಈ ಘಟನೆಯ ಬಳಿಕ, ‘ಅಯ್ಯೋ, ಆ ಹುಲಿ ವೃದ್ಧನ ಮೇಲೆ ದಾಳಿ ಮಾಡುತ್ತಿದ್ದರೇ?’ ಎಂಬ ಯೋಚನೆ ನನ್ನಲ್ಲೂ ಮೂಡಿದ್ದು ಅಚ್ಚರಿಯೆನಿಸಿತು! ಅಂಥ ಬುದ್ಧಿಯು ನನ್ನೊಳಗೆ ತಲತಲಾಂತರದಿ0ದ ಸುಪ್ತ ವಾಗಿದ್ದಿರಬಹುದೇ? ಇರಬಹುದು. ಇಂಥವೇ ಯೋಚನೆ, ನಂಬಿಕೆ, ಕ್ರಿಯೆ, ಪ್ರತಿಕ್ರಿಯೆಗಳು ಎಲ್ಲರಲ್ಲೂ ಹುಟ್ಟಬಹುದಲ್ಲವೇ? ಹಾಗಿದ್ದರೆ ಅವೆಲ್ಲ ಎಷ್ಟು ಸಮಂಜಸ? ಎಂದು ಮಥಿಸುತ್ತ ಸಾಗಿದೆ. ಅಷ್ಟರಲ್ಲಿ ಒಂದು ಫೋನ್ ಕರೆ.

‘ಸರ್, ನಮ್ಮಲ್ಲಿ ನಾಗರಹಾವಿನ ಮರಿಯೊಂದು ಸತ್ತುಬಿದ್ದಿದೆ. ಅದನ್ನು ನಾವು ಮನೆಮಂದಿಯೆಲ್ಲ ನೋಡಿದೆವು. ಅದನ್ನೇನು ಮಾಡಬೇಕು?’ ಯುವಕನೊಬ್ಬ ಕೇಳಿದ. ಆತನ ಪ್ರಶ್ನೆಯು ನಮ್ಮಲ್ಲಿ ಹಲವರ ಹುಬ್ಬೇರಿಸಬಹುದು. ಕೆಲವರಿಗೆ ತಮಾಷೆಯೆನಿಸಬಹುದು ಮತ್ತು ಕೆಲವರನ್ನು ಚಿಂತನೆಗೂ ಹಚ್ಚಬಹುದು. ಏಕೆಂದರೆ ನಾಗರಹಾವು, ‘ನಾಗ’ ಎಂಬ ನಂಬಿಕೆಯನ್ನು ಪೋಷಿಸುತ್ತ ಬಂದಿರುವ ಜನಾಂಗವೊ​೦ದರ ಉನ್ನತ ವಿದ್ಯಾವಂತನೇ ಈ ಪ್ರಶ್ನೆ ಕೇಳಿದ್ದಾನೆ. ಅಂದರೆ ಅದು ಅವನ ಅಜ್ಞಾನವೇ ಅಥವಾ ಆತ ತನ್ನೊಳಗಿನ ನಂಬಿಕೆಯ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟಿದ್ದಾನೆಯೇ?

ಸುಮಾರು ವರ್ಷಗಳ ಹಿಂದೆ ಉಡುಪಿಯ ಒಂದು ಪ್ರಾಚೀನ ದೇವಸ್ಥಾನದ ವಠಾರದ ಮನೆಯಲ್ಲೂ ಹಾಗೂ ಕುಲೀನ ವರ್ಗದ ಒಂದು ವೈದ್ಯ ಕುಟುಂಬದಲ್ಲೂ ಇಂಥ ವಿಷಯಗಳು ನಡೆದಿದ್ದುವು. ಅವರ ನಾಯಿಗಳು ತಮ್ಮ ನೈಸರ್ಗಿಕ ಗುಣಕ್ಕನುಸಾರವಾಗಿ ನಾಗರ​ ಹಾವುಗಳನ್ನು ಕಂಡಲ್ಲಿ ಹಿಡಿದು ಸಾಯಿ ಸುತ್ತಿದ್ದುವು. ದೇವಸ್ಥಾನದ ಪಕ್ಕದ ಮನೆಯಿಂದ ಕರೆ ಬಂದಾಗ ಹೋಗಿದ್ದೆ. ಅದು ದೊಡ್ಡ ಗಂಡು ನಾಗರಹಾವು. ಚಿಂದಿಯಾಗಿತ್ತು. ಮನೆಯ ಹಿರಿಯನಿಗೆ, ಹಾವು ಸತ್ತಿದೆ ಎಂದೆ. ‘ಹೌದಾ…ಸರಿ. ಅದನ್ನು ಓ ಇಲ್ಲಿ ತಂದು ಹಾಕಿ’ ಎಂದು ಆತ ನಿರ್ಭಾವದಿಂದ ಹೇಳಿ ಒಳಗೆ ನಡೆದ. 
 
ಒಂದಷ್ಟು ಹಳತು ರಟ್ಟು, ಪೇಪರ್ ಮತ್ತು ​ಪ್ಲೇವುಡ್ ತುಂಡುಗಳನ್ನು ತಂದು ರಾಶಿ ಹಾಕಿದ. ಹಾವಿನ ಕಳೆಬರವನ್ನು ತಾನೇ ಎತ್ತಿ ಅದರ ಮೇಲೆ ಮೇಲೆಸೆದ. ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ. ನನಗೆ ವಿಚಿತ್ರವೆನಿಸಿತು. ಸರ್, ನೀವು ಅದನ್ನು ​ಶಾಸ್ತ್ರೋಕ್ತವಾಗಿ ದಹನ ಮಾಡುವುದಿಲ್ಲವೇ? ಎಂದೆ. ‘​ಶಾಸ್ತ್ರೋಕ್ತವಾ , ಎಂಥದು? ಅದು ಮನುಷ್ಯನೇ! ನಾವೇನೂ ಅದನ್ನು ಕೊಂದಿಲ್ಲವಲ್ಲ? ನಾಯಿ ಹಿಡಿದು ಸತ್ತಿರುವುದು ಅದರ ಪ್ರಾರಬ್ಧ. ನಾವೇನು ಮಾಡೋಕಾಗುತ್ತೆ? ಅದು ಇಲ್ಲಿ ಕೊಳೆತು ನಾರಬಾರದು ಅಂತ ಸುಡುವುದಷ್ಟೇ!’ ಎಂದವನು ಮೀನು ಸುಟ್ಟಂತೆಯೇ ಸುಟ್ಟುಬಿಟ್ಟ.

ಇತ್ತ ವೈದ್ಯ ಕುಟುಂಬದ ನಿಲುವು ಬೇರೆ. ಅವರು ಜೀವಂತ ಪ್ರಾಣಿಪಕ್ಷಿಗಳನ್ನು ಪ್ರೀತಿಸುವವರು. ಕರುಣೆಯಿಂದ ಕಾಪಾಡುವವರು. ಅವರ ನಾಯಿಗಳು ಅವರ ಕಣ್ಣು ತಪ್ಪಿಸಿ ಆಗಾಗ ಹಾವುಗಳನ್ನು ಕೊಲ್ಲುತ್ತಿದ್ದುವು. ಆಗೆಲ್ಲ ನನಗೆ ಕರೆ ಮಾಡುತ್ತಿದ್ದರು. ಕೆಲವು ನಾಗರಗಳನ್ನು ತಂದು ಶುಶ್ರೂಷೆ ಗೊಳಿಸಿದ್ದಿದೆ. ಸತ್ತರೆ ಹಿಂದಿರುಗಿಸಿದ್ದಿದೆ. ಅವರು ಅವುಗಳನ್ನು ಹೂತು ಬಿಡುತ್ತಾರಷ್ಟೆ.

ಸರ್, ನೀವು ಸರ್ಪ ಸಂಸ್ಕಾರ ಮಾಡುವುದಿಲ್ಲವೇ? ಎಂದು ಅವರನ್ನೂ ಕೇಳಿದ್ದೆ.​ ‘ಅದರಲ್ಲೆಲ್ಲ ನಮಗೆ ನಂಬಿಕೆ ಇಲ್ಲ ಸರ್. ನಮಗೆ ಎಲ್ಲಾ ಜೀವಿಗಳಂತೆಯೇ ಹಾವುಗಳೂ ಕೂಡ. ನಮ್ಮ ನಾಯಿಗಳಿಂದ ಅವುಗಳನ್ನು ಸದಾ ರಕ್ಷಿಸಲು ಪ್ರಯತ್ನಿಸುತ್ತೇವೆ. ಆದರೂ ಅನಾಹುತ ನಡೆಯುತ್ತದೆ. ನಮ್ಮ ಹಿರಿಯರಿಗೆ ಮಾತ್ರ ಬಲವಾದ ನಂಬಿಕೆ, ಭಯವಿದೆ. ಆದ್ದರಿಂದ ಅವರಿಗೆ ತಿಳಿಯದಂತೆ ಹೂತು ಬಿಡುತ್ತೇವೆ!’ ಎಂದಿದ್ದರು ನಿರ್ಭೀತಿಯಿಂದ.

ನಿಮ್ಮ ಕುಟುಂಬದಲ್ಲಿ ಸರ್ಪ ಸಂಸ್ಕಾರ ಮಾಡುವ ಪದ್ಧತಿಯಿಲ್ಲವೇ? ಈ ಯುವಕನನ್ನೂ ಪ್ರಶ್ನಿಸಿದೆ.​ ‘ಇದೆ ಸರ್. ಆದರೂ ನನ್ನ ಸ್ಪಷ್ಟತೆಗಾಗಿ ನಿಮ್ಮ ಜೊತೆ ಕೇಳಿ ತಿಳಿಯಬೇಕೆನಿಸಿತು’ಎಂದ.​ ಈತನ ಮನಸ್ಸು ತನ್ನೊಳಗಿನ ಸಂಸ್ಕೃತಿ, ಸಂಪ್ರದಾಯಗಳ ಸತ್ಯವನ್ನು ತಿಳಿಯುವ ಸಾಹಸಕ್ಕಿಳಿದಿದೆ. ಹಾಗಾಗಿ ಗೊಂದಲಗೊ​೦ಡಿರಬಹದು-ಎ​೦ದೆನಿಸಿತು.​ ಹಾಗಾದರೆ ನಿಮಗೆ ಆ ನಂಬಿಕೆ ಇಲ್ಲವೇ? ಮರು ಪ್ರಶ್ನಿಸಿದೆ.
‘ಹ್ಹಹ್ಹಹ್ಹ…ನನಗಿಲ್ಲ ಸರ್!’ ಎಂದ ನಗುತ್ತ.
ನಿಮ್ಮ ಹೆತ್ತವರಿಗೆ?
‘ಹಾಂ, ಅವರಿಗಿದೆ!’
ಅಂದರೆ ಹಿರಿಯರ ನಂಬಿಕೆಯನ್ನು ಬದಲಿಸಲು ಅಥವಾ ತಳ್ಳಿ ಹಾಕಲು ನಿಮ್ಮಿಂದ ಸಾಧ್ಯವೇ? ನೀವೀಗ ಅವರೊಡನೆ, ‘ಅದೆಲ್ಲ ಮೂಢನಂಬಿಕೆ. ಹಾವೊಂದು ಸಾಯುವುದು ಪ್ರಕೃತಿ ಸಹಜ ನಿಯಮ. ಅದನ್ನಲ್ಲೇ ಬಿಟ್ಟುಬಿಡಿ. ಯಾವುದಾದರೂ ಪ್ರಾಣಿಗೆ ಆಹಾರವಾಗುತ್ತದೆ!’ ಎಂದರೆ ಅವರು ಒಪ್ಪುತ್ತಾರೆಯೇ? ವಾಸ್ತವಿಕ ವಿವರಣೆ, ಅಥವಾ ಒತ್ತಾಯದಿಂದ ಒಪ್ಪಿಸಿದಿರಿ ಎಂದಿಟ್ಟುಕೊಳ್ಳಿ.
 
 ತಲತಲಾಂತರದಿ​೦ದ ತಮ್ಮೊಳಗೆ ದಾಖಲಾಗಿ ಬಂದ​೦ಥ ನಂಬಿಕೆಯನ್ನವರು ಆ ಕ್ಷಣಕ್ಕೆ ನಿಮಗಾಗಿ ಬಿಟ್ಟುಕೊಡಬಹುದೇನೋ. ಆದರೆ ಮುಂದೆ ಅದು ಅವರನ್ನು ನೆಮ್ಮದಿಯಿಂದಿರಲು ಬಿಡಬಹುದೇ? ಆಮೇಲೆ ಯಾವ ಸಮಸ್ಯೆ ಎದುರಾದರೂ, ‘ಇದು ಅಂದು ನಾವು ಸರ್ಪಸಂಸ್ಕಾರ ಮಾಡದ ದೋಷವೇ ಇರಬೇಕು!’ ಎಂದುಕೊ​೦ಡರೇ? ಅವರ ಆ ಧೋರಣೆಯ ಪರಿಣಾಮ ಕುಟುಂಬದ ಮೇಲೂ ಆಗ ಬಹುದಲ್ಲವೇ.​ ‘ಅದೂ ಹೌದು. ಆದರೂ ಅದೆಲ್ಲ ಕುರುಡು ನಂಬಿಕೆಯೇ ಅಲ್ಲವೇ ಸರ್?’ ಎಂದ ಯುವಕ ಒಂದುಕ್ಷಣ ಮೌನವಾದವನು, ‘ಈಗ ನಿಮ್ಮ ಪ್ರಕಾರ ನಾನೇನು ಮಾಡಬಹುದು?’ ಎಂದ.

ನಮ್ಮೊಳಗಿನ ನಂಬಿಕೆಗಳನ್ನು ನಾವು ಎಲ್ಲಿಯವರೆಗೆ ಸ್ವಯಂ ಪ್ರಶ್ನಿಸಿಕೊಳ್ಳುವುದಿಲ್ಲವೋ, ಅವುಗಳ ಕುರಿತು ಪ್ರಾಮಾಣಿಕವಾಗಿ ವಿಚಾರ ಮಾಡುವುದಿಲ್ಲವೋ ಅಲ್ಲಿಯವರೆಗೆ ಅವು ಕುರುಡುನಂಬಿಕೆಗಳೇ ಅಲ್ಲವೇ? ಭಗವಾನ್ ಬುದ್ಧ, ರಾಮಕೃಷ್ಣ ಪರಮಹಂಸ, ಶ್ರೀ ರಮಣಮಹರ್ಷಿ​ ಯವರಂಥ ಅನೇಕ ಮಹಾನ್ ಸಾಧುಸಂತರು ತಮ್ಮ ತಮ್ಮ ನಂಬಿಕೆ, ಶ್ರದ್ಧೆಗಳ ಮೂಲಕ ಸಾಧನೆಗೈದು, ‘ಸತ್ಯ’ವನ್ನು ಕಂಡುಕೊ​೦ಡರು.
 
 ಅವರು ಕಂಡ ಸತ್ಯ ಅಥವಾ ಆ ಪರಮತತ್ತ÷್ವದ ವಿವಿಧ ಕಲ್ಪಿತ ರೂಪಗಳನ್ನು ನಾವೂ ನಂಬಿ ಪೂಜಿಸುತ್ತ ಬಂದಿದ್ದೇವೆ. ಅದು ತಪ್ಪಲ್ಲ. ಸತ್ಯಾನ್ವೇಷಣೆಗೆ ಅದು ಸೂಕ್ತ ದಾರಿಯೂ ಹೌದು. ಆದರೆ ಆ ಮಹಾನ್ ಪುರುಷರು ಕಂಡ ಸತ್ಯವನ್ನು ನಾವು ಸ್ವತಃ ಕಂಡಿದ್ದೇವೆಯೇ? ಅವರಿಗಾದ ಸತ್ಯಾನುಭೂತಿ ನಮ್ಮಲ್ಲಿ ವಿವಿಧ ದೇವರುಗಳನ್ನು ನಂಬುವ, ಆರಾಧಿಸುವ ಎಷ್ಟು ಜನರಿಗೆ ಆಗಿರಬಹುದು?
ಬೆರಳೆಣಿಕೆಯಷ್ಟು ಎನ್ನುವೆವಾದರೆ ಅದು ನನ್ನ ಮತ್ತು ನಿಮ್ಮ ಅನುಭವವಾಗಬಲ್ಲದೇ? ಬೆಲ್ಲವನ್ನು ತಿನ್ನದೇ, ‘ಸಿಹಿಯಾಗಿದೆ’ ಎನ್ನುವುದಕ್ಕೆ ಅರ್ಥವಿದೆಯೇ. ನಂಬಬೇಕಾದ ವಿಷಯವನ್ನು ವಿವೇಕದಿಂದ ವಿಚಾರ ಮಾಡಿ ಅರಿತ ಮೇಲೆಯೇ ಅವುಗಳು ಕುರುಡೋ, ಸ್ಪಷ್ಟವೋ ಎಂದು ನಿರ್ಧರಿಸಬಹುದು. 
 
ಪ್ರಕೃತಿ ಅಥವಾ ದೇವರು ನಮ್ಮನ್ನು ಯಾವುದೇ ನಂಬಿಕೆ ಮತ್ತು ಮೂಢನಂಬಿಕೆಗಳಿಗೆ ತಳ್ಳಿಲ್ಲ ಎಂಬುದನ್ನು ನಾವು ನಿತ್ಯ ಒಡನಾಡುವ ಪ್ರಕೃತಿಯನ್ನೂ ನಮ್ಮದೇ ಸಮಾಜವನ್ನೂ ಸ್ವಚ್ಛ ಮನಸ್ಸಿನಿಂದ ಗಮನಿಸಿದರೆ ತಿಳಿಯಬಹುದು. ಹಾಗಾಗಿ ನಿಮ್ಮಲ್ಲೀಗ ಸತ್ತ ಸರ್ಪದ ವಿಚಾರವನ್ನು ಹಿರಿಯರಿಗೇ ಬಿಟ್ಟುಕೊಟ್ಟು ನಿಮ್ಮ ಸತ್ಯಾನ್ವೇಷಣೆಯನ್ನು ಮುಂದುವರೆಸುವುದು ಒಳ್ಳೆಯದು ಎಂದನ್ನಿಸುತ್ತದೆ- ಎಂದೆ.
ಆತ ಯಾವುದೋ ನಿರ್ಧಾರಕ್ಕೆ ಬಂದ​೦ತೆ, ‘ಹೌದು ಸರ್, ಅದೇ ಸರಿ. ಥ್ಯಾಂಕ್ಯೂ!’ ಎಂದು ಫೋನಿಟ್ಟ.

ನಮ್ಮ ಜೀವನವು, ನಾವು ಪ್ರೀತಿಸುವ ಮುಖ್ಯ ವಿಷಯವಾದ ಮೇಲೆಯೇ ನಂಬಿಕೆ, ಮೂಢನಂಬಿಕೆ ಗಳು ಅರ್ಥವಾದಾವು ಎಂದೆನ್ನಿಸಿತು. ಮರುಕ್ಷಣ ಚಿಟ್ಟೆಹುಲಿಯ ರೂಪ ಮರಳಿ ಮುನ್ನೆಲೆಗೆ ಬಂತು. ಅದು ಪ್ರತ್ಯಕ್ಷವಾದ ಕೆಲವು ಕ್ಷಣ ನನ್ನ ಮನಸ್ಸು ವಿಚಾರರಹಿತ, ಅಪೂರ್ವ ಸ್ಥಿತಿಗೆ ತಲುಪಿದ್ದ ಆನಂದವನ್ನು ಮತ್ತೆ ಮೆಲುಕು ಹಾಕುತ್ತ ಸಾಗಿದೆ.
ಗುರುರಾಜ್ ಸನಿಲ್, ಉಡುಪಿ.  ೯೮೪೫೦೮೩೮೬೯
 
 
 
 
 
 
 
 
 
 
 

Leave a Reply