||ಚಂಪಾ ಷಷ್ಠಿ|| |ಆರು ಮೊಗದ ಕುಮಾರ : ಪೂರ್ವಾವಲೋಕನ|~ ಕೆ.ಎಲ್.ಕುಂಡಂತಾಯ

ಸುಬ್ರಹ್ಮಣ್ಯನ ಇನ್ನೊಂದು ಹೆಸರು ‘ಕುಮಾರ’, ಜೀವನದುದ್ದಕ್ಕೂ ಕೌಮಾರ್ಯವನ್ನೇ ಮೆರೆದವನೆಂದು ಇದರ ಅರ್ಥ. ಆದರೆ ಸುಖ ದಾಂತಪತ್ಯಕ್ಕಾಗಿ ಕುಮಾರನನ್ನು ಆರಾಧಿಸುವ ಪರಿಪಾಠವೂ ಇದೆ. ಸುಬ್ರಹ್ಮಣ್ಯನಿಗೆ ವೈದಿಕ ಹಿನ್ನೆಲೆಯ ಆರಾಧನೆ ಪ್ರಚಲಿತದಲ್ಲಿರುವಂತೆ ಜನಪದ ಸಂಸ್ಕೃತಿಯ ಹಿನ್ನೆಲೆಯೂ ಇದೆ. ಉತ್ತರ ಭಾರತದಲ್ಲಿ ಕ್ರಿಸ್ತಶಕಾರಂಭದಲ್ಲಿ ಉಪಾಸನೆಗೆ ಪಾತ್ರನಾಗಿದ್ದ ಸ್ಕಂದ ಈಗ ದಕ್ಷಿಣ ಭಾರತದಲ್ಲಿಯೂ ಪೂಜಿಸಲ್ಪಡುತ್ತಿದ್ದಾನೆ.
ಹಲವು ವೈರುಧ್ಯ- ಸಾಂಗತ್ಯಗಳ ನಡುವೆ ಸುಬ್ರಹ್ಮಣ್ಯ ಜಿಜ್ಞಾಸುಗಳಿಗೆ ಕುತೂಹಲ ಮೂಡಿಸುತ್ತಾನೆ. ಸುಬ್ರಹ್ಮಣ್ಯನ ಕುರಿತ ವಿಚಾರ ಸಾಧ್ಯತೆಗಳನ್ನು ವಿಸ್ತರಿಸುವುದಕ್ಕಾಗಿ ಈ ಲೇಖನ….
ಕೋಟ್ಯಂತರ ದೇವ, ದೇವತೆಯರನ್ನು ಆರಾಧಿಸುವ ಭಾರತೀಯ ನಂಬಿಕೆ, ಆಧ್ಯಾತ್ಮ, ತತ್ತ್ವಜ್ಞಾನ ಮನುಕುಲದ ವಿಕಾಸ ದೊಂದಿಗೆ ಸಕಾಲಿಕ ಬದಲಾವಣೆ ಗಳನ್ನು ಸ್ವೀಕರಿಸುತ್ತಾ ಸಾವಿರಾರು ವರ್ಷಗಳಿಂದ ನಿರಂತರವಾಗಿ ಸಾಗಿಬಂದಿದೆ. ಮೂಲದ ಜನಪದ ಕಲ್ಪನೆ, ಅನಂತರದ ವೈದಿಕ ಅನುಸಂಧಾನಗಳು ವಿಶ್ವಾಸಕ್ಕೆ ಅನುಗುಣವಾಗಿ ರೂಪಾಂತರ, ನಿಷ್ಠಾಂತರಗೊಳ್ಳುತ್ತಾ ಪ್ರಾಚೀನ-ಆರ್ವಾಚೀನಗಳ ನಡುವೆ ನಿಕಟ ಸಂಬಂಧವನ್ನು ಕಾಯ್ದುಕೊಂಡ ನಮ್ಮ ಸಂಸ್ಕೃತಿಯ ಅಧಿಷ್ಠಾನ ’ಧರ್ಮ ಮತ್ತು ಆಧ್ಯಾತ್ಮಿಕ ವಿವೇಚನೆ’. ವಿಶ್ವ ಚೈತನ್ಯದ ನಿರೂಪಣೆ ಹಾಗೂ ಸಗುಣೋಪಾಸನೆಗೆ ಬಳಸಿಕೊಂಡ ವಿಧಾನ ವೈವಿಧ್ಯಮಯ, ವೈಶಿಷ್ಟ್ಯಪೂರ್ಣ.
ದಕ್ಷಿಣ ಭಾರತದ, ವಿಶೇಷವಾಗಿ ತಮಿಳುನಾಡಿನ ದೇವರೆಂದೇ ಗುರುತಿಸಲ್ಪಡುವ ಷಣ್ಮುಖ, ಸ್ಕಂದನೆಂದು ಕ್ರಿಸ್ತಶಕಾರಂಭದ ವೇಳೆ ಉತ್ತರ ಭಾರತದಲ್ಲಿ ಪೂಜೆಗೊಳ್ಳುತ್ತಿದ್ದ ದಾಖಲೆಗಳಿವೆ. ತಮಿಳುನಾಡಿನ ಮುರುಗ, ಉತ್ತರದ ಸ್ಕಂದ ಸಮಾಗಮವೇ ’ಸುಬ್ರಹ್ಮಣ್ಯ’ವೆಂಬುದು ಒಂದು ವಾದವಾಗಿಯೇ ಇದೆ ಯಾದರೂ ಇವೆರಡರ ಮೂಲ ಮತ್ತು ವಿಕಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಾಮ್ಯತೆಯನ್ನು ಗುರುತಿಸಬಹುದಾಗುತ್ತದೆ.
ಕರ್ನಾಟಕದ ಕರಾವಳಿಯಲ್ಲಿ ವಿಶಿಷ್ಟ ನಂಬಿಕೆ – ನಡವಳಿಕೆಯಿಂದ ಪೂಜೆಗೊಳ್ಳುವ ನಾಗ –  ಸುಬ್ರಹ್ಮಣ್ಯ ಸಮೀಕರಣವನ್ನು ಸಾಧಾರವಾಗಿ ವಿವರಿಸಲು ಪುರಾವೆಗಳು ಲಭಿಸುತ್ತವೆ. ಕ್ರಿ.ಪೂ. ಒಂದು ಎರಡನೇ ಶತಮಾನದ ವೇಳೆ ಸ್ಕಂದನ ಆರಾಧನೆ ಉತ್ತರ ಭಾರತದಲ್ಲಿ ವಿಶೇಷವಾಗಿದುದ್ದಕ್ಕೆ ಪತಂಜಲಿಯ ’ಮಹಾಭಾಷ್ಯ’ ಛಾಂದೋಗ್ಯೋಪನಿಷತ್ತಿನಲ್ಲಿ ಉಲ್ಲೇಖವಿದೆ.
ಅಥರ್ವ ವೇದದ ಪರಿಶಿಷ್ಟದಲ್ಲಿ ’ಸ್ಕಂದಯಾಗ’ದ ಪ್ರಸ್ತಾವ ಬರುತ್ತದೆ. ಮಹಾಭಾರತದ ಅರಣ್ಯ ಪರ್ವದಲ್ಲಿ ವಿವರ ದೊರೆ ಯುತ್ತದೆಯಾದರೂ ಅಗ್ನಿಯ ಮಗನೆಂದೂ ಕೃತ್ತಿಕೆಯರ ಪುತ್ರನೆಂದೂ ಶಿವಸುತನೆಂದೂ ಭಿನ್ನವಾದ ತಿಳಿವಳಿಕೆ ರೂಢಿಯಲ್ಲಿದ್ದು ’ನೀನು ಯಾರೋ ಅವನೇ, ನಿನಗೆ ನಮಸ್ಕಾರವನ್ನಂತೂ ಮಾಡುತ್ತೇನೆ’ ಎಂಬ ಮಂತ್ರವಿದೆ.
ತಾರಕಾಸುರ ಸಂಹಾರಕ್ಕಾಗಿ ಶಿವ-ಪಾರ್ವತಿಯರ ಮಗನಾಗಿ ಹುಟ್ಟಿದ ಅಗ್ನಿ ಪುತ್ರ, ಕೃತ್ತಿಕೆಯರ ಸುತನಾಗಿ ಕಾರ್ತಿಕೇಯನೆಂಬ ಪ್ರತೀತಿ. ಹೀಗೆ ಪುರಾಣಗಳಲ್ಲಿ ಪರಾಕ್ರಮಿಯಾಗಿ ನಿರೂಪಿಸಲ್ಪಡುವ ಸ್ಕಂದನು ಇಂದ್ರ ಪುತ್ರಿಯನ್ನು ಮದುವೆಯಾದ ಸಂದರ್ಭ ವಿದೆ . ಇವು ಸ್ಕಂದ ಸಂಬಂಧವಾದ ಪೌರಾಣಿಕ ಹಿನ್ನೆಲೆ (ಕನಿಷ್ಠ ಹತ್ತು ರೋಚಕ ಕಥೆಗಳು ಸ್ಕಂದ-ಕುಮಾರ ಜನನ-ಅಸುರವಧೆ ಸಂಬಂಧಿಯಾಗಿ ದೊರೆಯುತ್ತದೆ).
ಮಯೂರವಾಹನ, ಕುಕ್ಕುಟ ಧ್ವಜನೆಂಬುದೂ ದೇವ ಸೇನಾನಿಯ ಲಾಂಛನಗಳು ಕ್ರಿಸ್ತಶಕಾರಂಭದಲ್ಲಿ ಸ್ಕಂದನ ಉಪಾಸನೆ ಉತ್ತರ ಭಾರತದಲ್ಲಿ ಬಳಕೆಯಲ್ಲಿತ್ತು. ಕುಶಾನರು ಇದಕ್ಕೆ ಪ್ರೋತ್ಸಾಹ ನೀಡಿದ್ದರು. ಅವರು ಸ್ಕಂದ – ಕಾರ್ತಿಕೇಯನ ಭಕ್ತರಾಗಿದ್ದು ತಮ್ಮ ನಾಣ್ಯಗಳಲ್ಲಿ ಪುರುಷಾಕೃತಿಯನ್ನೊ ಲಾಂಛನವನ್ನೋ ಮೂಡಿಸುತ್ತಿದ್ದರು. ಹುವಿಷನ ಕಾಲದ ನಾಣ್ಯಗಳಲ್ಲಿ ಮಹಾಸೇನ ಮತ್ತು ಸ್ಕಂದ ಎಂಬ ಎರಡು ಚಿತ್ರಣವೂ ಇದೆ.
ಕ್ರಿ.ಶ. ಎರಡನೇ ಶತಮಾನದಲ್ಲಿ ಯೌಧೇಯ  ಜನಾಂಗದ ಅರಸರು ಟಂಕಿಸಿದ್ದ ನಾಣ್ಯಗಳಲ್ಲಿ ’ಭಗವತ ಸ್ವಾಮಿನೋಬ್ರಹ್ಮಣ ದೇವಸ್ಯ ಕುಮಾರಸ್ಯ’ ಎಂಬ ಬರಹಗಳಿವೆ. ಇವರು ಇಡೀ ರಾಜ್ಯವನ್ನೆ ಈ ದೇವತೆಗೆ ಸಮರ್ಪಿಸಿ, ಅವನ ಪ್ರತಿನಿಧಿಯಾಗಿ ಆಡಳಿತ ನಡೆಸಿದರಂತೆ. ಉತ್ತರ ಭಾರತದಲ್ಲಿ ಕ್ರಿಸ್ತಾಬ್ದದ ಪ್ರಾರಂಭದ ಒಂದೆರಡು ಶತಮಾನಗಳವರೆಗೆ ಪೌರಾಣಿಕ ಕಲ್ಪನೆ ಯೊಂದಿಗೆ ಸ್ಕಂದನು ಮಹಾಸೇನ, ಸೇನಾನಿ, ದೇವ ಸೇನಾಪತಿಯಾಗಿ ಮೆರೆದು ಒಂದು ಹಂತದಲ್ಲಿ ಮಹಾಜ್ಞಾನಿ, ವಿದ್ವಾಂಸನೆಂಬ ಮನ್ನಣೆಗೂ ಪಾತ್ರನಾಗಿದ್ದ. ಬಳಿಕ ಈ ಜನಪ್ರಿಯತೆ ಕುಗ್ಗುತ್ತಾ ಉತ್ತರ ಭಾರತದಲ್ಲಿ ಸ್ಕಂದಾರಾಧನೆ ವಿರಳವಾಗುವುದನ್ನು ಗುರುತಿಸಬಹುದಾಗುತ್ತದೆ.
|ಮುರುಗ|- ತಮಿಳುನಾಡಿನಲ್ಲಿ ಪ್ರಭಾವಶಾಲಿ ದೇವರಾಗಿ ಪರಿಗ್ರಹಿಸಲ್ಪಟ್ಟ ಮುರುಗನನ್ನು ಶೇಯೋನ್, ಆರ‍್ಮುಗ, ಮಹಾಸೇನ, ಕುಮಾರ, ಬಾಲಸ್ವಾಮಿ, ವೇಲನ್ ಮುಂತಾಗಿ ಹೆಸರಿಸಲಾಗುತ್ತದೆ. ತಮಿಳು ಮಹಾಕವಿ ನಕ್ಕೀರ ದೇವನಾಯಿನಾರ್ ಅವರ ’ತಿರುಮುರುಗರ್ರುಪ್ಪಡೈ’ ಗ್ರಂಥವು ಮುರುಗನ ಆರಾಧನೆಯನ್ನು ಬಣ್ಣಿಸುತ್ತವೆ. ಕ್ರಿ.ಶ. ೧-೨ರ ’ಶಿಲಪ್ಪದಿಕಾರಂ’ನಲ್ಲಿಯೂ ಮುರುಗನ ಪ್ರಸ್ತಾವ, ವೇಲ್‌ನ ಹಿರಿಮೆ ಇದೆ. ಕ್ರಿ.ಶ. ೭ನೇ ಶತಮಾನದ ಕಂದ ಪುರಾಣಂ (ಸ್ಕಂದ ಪುರಾಣ) ಕಂದ-ಕುಮಾರನ ಉತ್ಪತ್ತಿ ಮುಂತಾದ ಕಥೆಗಳಿವೆ. ತಿರುತ್ತಣಿ ಎಂಬ ಪ್ರಸಿದ್ಧ ಸುಬ್ರಹ್ಮಣ್ಯ ಕ್ಷೇತ್ರವನ್ನು ತಾರಕಾಸುರ ವಧಾ ಸಂದರ್ಭದಲ್ಲಿ ವಿಶ್ರಮಿಸಿ ಕೊಂಡ ಸ್ಥಳವೆಂದು ಗುರುತಿಸಲಾಗುತ್ತದೆ.
|ಮುರುಗ – ವಳ್ಳಿ| ಇಂದ್ರ ಪುತ್ರಿಯನ್ನು ಮದುವೆಯಾದಂತೆ ಕಾಡುಜನರ ಹುಡುಗಿ ವಳ್ಳಿಯನ್ನೂ ವಿವಾಹವಾದನೆಂಬ ಪುರಾಣ ಕಲ್ಪನೆಗೆ ಪೂರಕ ಅಂಶಗಳು ತಮಿಳುನಾಡಿನ ಜನಪದ ಸಂಸ್ಕೃತಿಯಲ್ಲಿ ದೊರೆಯುತ್ತವೆ. ವಳ್ಳಿ ವಡ್ಡ ಜನವರ್ಗದ ಶಿವಮುನಿಯ ಮಗಳೆಂಬುದು ಒಂದು ಉಲ್ಲೇಖವಾದರೆ ಮುರುಗ ’ಆಂಡವ’ನು ಕಾಡಿನಲ್ಲಿ ಸಂಚರಿಸುತ್ತಾ ವಳ್ಳಿಯನ್ನು ಕಂಡು ಪ್ರೀತಿಸಿ ಮದುವೆ ಯಾದನೆಂಬ ಒಡಂಬಡಿಕೆಯೊಂದಿದೆ. ’ತಿರುಮುರುಗರ್ರುಪ್ಪಡೈ’ ಗ್ರಂಥ ಕುರವ ಹೆಂಗಳೆಯರು ಮುರುಗನನ್ನು ಪೂಜಿಸುತ್ತಿದ್ದ ವಿವರಣೆ ನೀಡುತ್ತದೆ.
ತರುಣ-ತರುಣಿಯಲ್ಲಿ ಅನುರಾಗ ಏರ್ಪಟ್ಟಾಗ ಅವರು ಮಲೆಯನ್ನೇರಿ ಮುರುಗನ ಅನುಗ್ರಹ ಬೇಡುತ್ತಿದ್ದರು. ತರುಣಿಯರು ಗುಡ್ಡದ ಪಕ್ಕದಲ್ಲಿ ಕುಕ್ಕುಟ ಧ್ವಜ (ಕೊಡಿ) ನೆಟ್ಟು ಅದಕ್ಕೆ ತುಪ್ಪ-ಸಾಸಿವೆ ಬಳಿದು, ಕೆಂಪು ಹೂಮಾಲೆ ಹಾಕಿ, ಹಸಿರು ಎಲೆಗಳನ್ನು ಕಟ್ಟಿ, ಸಿಂಗರಿಸಿ ಅದರ ಮುಂದೆ ಆಡಿನ ರಕ್ತದಿಂದ ಕಲಸಿದ ಅನ್ನವನ್ನು ಎಡೆಯಾಗಿಟ್ಟು ಮುರುಗನ ಹಿರಿಮೆಯನ್ನು ಹಾಡಿಕೊಂಡು ಕುಣಿಯುತ್ತಿದ್ದ ಕುರಿತು ಲಿಖಿತ ದಾಖಲೆ (ತಿರುಮುರುಗರ್ರುಪ್ಪಡೈ) ಪ್ರಣಯಕ್ಕೆ ಮುರುಗ ಅಧಿದೇವತೆ ಎಂಬ ನಂಬಿಕೆ ಚಾಲ್ತಿಯಲ್ಲಿ ದ್ದುದನ್ನು ದೃಢೀಕರಿಸುತ್ತದೆ.
ಸಂತಾನವೂ ಮುರುಗ ಕೃಪೆಯೆಂದೇ ಭಾವಿಸಲಾಗುತ್ತಿತ್ತು. ಮುರುಗ-ವಳ್ಳಿ ವಿವಾಹ, ಕಾಡುಜನರ ಆರಾಧನಾಮೂರ್ತಿ, ಸದಾ ತುಂಬಿ ತುಳುಕುವ ಕೌಮಾರ‍್ಯ, ಪರಾಕ್ರಮದಿಂದಾಗಿ ಸಂತಾನಕ್ಕೆ ಅಧಿದೇವತೆ ಮತ್ತೆ ಮುರುಗನ ಉಪಾಸನೆಗೆ ಕಾಡು, ಗುಡ್ಡ ಪ್ರದೇಶಗಳ ಬಳಕೆ, ತಮಿಳು ನಾಡಿನ ಹೆಚ್ಚಿನ ಮುರುಗ ಕ್ಷೇತ್ರಗಳು ಗುಡ್ಡ-ಬೆಟ್ಟಗಳಲ್ಲೆ ಇರುವುದು. ಕೃತ್ತಿಕಾ ನಕ್ಷತ್ರವಿದ್ದಾಗ ಕಾವಡಿ ಹೊತ್ತು ಮುರುಗನ ಗುಡಿಗೆ ಹೋಗುವ ಹರಕೆ ಮುಂತಾದವುಗಳಿಂದ ಪುರಾಣ ಪರ್ವದ ಸಂಸ್ಕೃತಿಯಲ್ಲಿ ಮುರುಗ ಮುಗಿಯದ ಹದಿಹರೆಯ, ಹುಡುಗ ಸ್ವರೂಪ, ನಿರಂತರ ತಾರುಣ್ಯ, ಕುಕ್ಕುಟ ಧ್ವಜ, ಆರುಮುಖವುಳ್ಳವನಾಗಿಯೇ ರೂಢಗೊಂಡು ಪುರಾಣದ ಸುಬ್ರಹ್ಮಣ್ಯ (ಷಣ್ಮುಖ)ನೊಂದಿಗೆ ಸಂಲಗ್ನಗೊಂಡಿರುವುದು ನಿಚ್ಚಳವಾಗುತ್ತದೆ.
ಬಂಗಾಳದಲ್ಲಿ ಸಂತಾನಾಪೇಕ್ಷಿಗಳಾದ ಹೆಂಗಸರು ಸ್ಕಂದನ ಮಣ್ಣಿನ ಮೂರ್ತಿಯನ್ನು ಮಾಡಿ ಪೂಜಿಸುವ ವಾಡಿಕೆ ಹಾಗೂ ಈ ರೀತಿ ಉತ್ತರ ಭಾರತದಲ್ಲಿ ನೆಲೆಯಾಗಿದ್ದ ಸ್ಕಂದ ಸಂಬಂಧಿ ನಂಬಿಕೆಗಳು ತಮಿಳುನಾಡಿನ (ದಕ್ಷಿಣ ಭಾರತ) ಮುರುಗನ ಕುರಿತಾದ ಜಾನಪದ ನಂಬಿಕೆಗಳಲ್ಲಿ ಮ್ಯತೆಗಳಿರುವುದರಿಂದಲೇ ಈ ಸ್ಕಂದ ಮುರುಗ ಸಮಾಗಮ ಏರ್ಪಟ್ಟಿರಬಹುದು.

ಪುರಾಣಗಳು ಒಂದು ಕಾಲದ ಜಾನಪದ ಕಥೆಗಳೇ ಆಗಿರುವುದರಿಂದ ಉಲ್ಲೇಖಗಳು ಪರಸ್ಪರ ವಿನಿಮಯಗೊಂಡು ಸಮಾನ ವಿಶ್ಲೇಷಣೆಗೆ ಒಳಗಾಗುವುದು ಸಹಜ. ಅಂತೆಯೇ ಸ್ಕಂದ-ಮುರುಗ ಸಮೀಕರಣವೇ ಪ್ರಸ್ತುತದ ಸುಬ್ರಹ್ಮಣ್ಯ ದೇವರ ಪರಿಪೂರ್ಣ ಬಿಂಬ ಕಲ್ಪನೆಗೆ, ಆಗಮೋಕ್ಷ ಪೂಜಾ ವಿಧಾನಕ್ಕೆ ಇಂಬು ನೀಡಿರಬಹುದು. (ಸಂಗ್ರಹ)

~ ಕೆ.ಎಲ್.ಕುಂಡಂತಾಯ

 
 
 
 
 
 
 
 
 
 
 

Leave a Reply