ಮೇ 5 : ಕುಂಜೂರು “ಆರಡ

ದುರ್ಗಾಪ್ರತಿಮೆ ,ಇತರ ಬಿಂಬಗಳ ಚಿಂತನೆ, ಕುಂಜೂರು’ ಗ್ರಾಮ ; ಒಂದು ಅಧ್ಯಯನ

ಉಡುಪಿ ಜಿಲ್ಲೆಯ ಐತಿಹಾಸಿಕ ಮಹತ್ವದಿಂದ ಅಪೂರ್ವವೆಂದು‌ ಗುರುತಿಸಲ್ಪಡುವ ಕೆಲವೇ ದುರ್ಗಾ ಪ್ರತಿಮೆಗಳಲ್ಲಿ‌ ಕುಂಜೂರಿನ‌ ದುರ್ಗಾ ದೇವಸ್ಥಾನದ ಮೂಲಸ್ಥಾನ ಶ್ರೀದುರ್ಗಾ ಮೂರ್ತಿಯು ಒಂದು.

ಜಗನ್ಮಾತೆಯು ಮಹಿಷನ ವಧಾನಂತರ ಸಾವಕಾಶವಾಗಿ ನಿಂತ ಭಂಗಿಯಲ್ಲಿರುವ ಮೂರ್ತಿಯು ಚತುರ್ಬಾಹುವನ್ನು ಹೊಂದಿದೆ.

 

ಸ್ಕಂದಭಂಗದಲ್ಲಿದೆ. ಮೇಲೆನ ಬಲ ಕೈಯಲ್ಲಿ ಪ್ರಯೋಗ ಚಕ್ರ.ಮೇಲಿನ ಎಡ ಕೈಯಲ್ಲಿ‌ ಶಂಖವನ್ನು ಹಾಗೂ ಕೆಳಗಿನ ಎಡ ಕೈಯಲ್ಲಿ ಯಾವ ಆಯುಧವೂ ಇಲ್ಲ.ಕೆಳಗಿನ ಬಲ ಕೈಯಲ್ಲಿ ತ್ರಿಶೂಲವಿದೆ. ವಿಗ್ರಹವು ಮಹತ್ವ ವುಳ್ಳ ಶಿಲ್ಪಶೈಲಿಯನ್ನು ಹೊಂದಿದ್ದು ಪ್ರತಿಮಾಲಕ್ಷಣ ಪ್ರಕಾರ ಕ್ರಿ.ಶ.ಒಂಬತ್ತನೇ ಶತಮಾನಕ್ಕೆ ಅನ್ವಯಿಸುತ್ತದೆ.

ಈ ಮಹಿಷಮರ್ದಿನಿ ಬಿಂಬವನ್ನು ಕಡು ಕರಿ ಶಿಲೆಯಿಂದ ನಿರ್ಮಿಸಲಾಗಿದೆ.ಮೂರ್ತಿಯ‌ ಮುಖವು ವೃತ್ತಾಕಾರದಲ್ಲಿದ್ದು , ಶಂಕು ವಾಕಾರದ ಕಿರೀಟವನ್ನು‌ ಹೊಂದಿದೆ. ಮಿತಾಲಂಕಾರದಿಂದ ಕೂಡಿದ ದುರ್ಗಾ ಮೂರ್ತಿಯು ಸುಮಾರು ಮೂರುಅಡಿ ಎತ್ತರವಿದೆ ಎಂದು ಖ್ಯಾತ ಇತಿಹಾಸಕಾರ ಡಾ.ಗುರುರಾಜ ಭಟ್ಟ ಅವರು 1969ರ ವೇಳೆ ನಡೆಸಿದ್ದ ಕ್ಷೇತ್ರಕಾರ್ಯದ ಆಧಾರದಲ್ಲಿ ವಿವರ ನೀಡಿದ್ದಾರೆ.

ಉಪಸ್ಥಾನ ಗಣಪತಿ : ಬಲಮುರಿಯಾದ ಈ ಮೂರ್ತಿಯು ಗಟ್ಟಿ ಶಿಲೆಯಿಂದ ರಚಿಸಿದ್ದು ಅಲಂಕಾರ ರಹಿತವಾಗಿದೆ.ಕುಳ್ಳಾದ ಮತ್ತು ಮುದ್ದಾದ ಈ ಗಣಪತಿ ಮೂರ್ತಿಯು ಒಂದಡಿ ಎತ್ತರವಾಗಿದೆ.

ಕ್ರಿ.ಶ. ಒಂಬತ್ತು – ಹತ್ತನೇ ಶತಕದಷ್ಟು‌
ಪ್ರಾಚೀನತೆಯನ್ನು ಭಟ್ಟರು ಹೇಳಿದ್ದಾರೆ.ಬಲಿ ಮೂರ್ತಿ : ಸುಮಾರು ಹತ್ತು ಇಂಚು ಎತ್ತರದ ಲಾವಣ್ಯಯುಕ್ತವಾದ ಪಂಚಲೋಹದ ಚತುರ್ಬಾಹು ಪ್ರತಿಮೆಯು ಸುಮಾರು ಹದಿನಾಲ್ಕು – ಹದಿನೈದನೇ ಶತಮಾನದಷ್ಟು ಪ್ರಾಚೀನ.

ಚತುರಸ್ರ ಆಕಾರದ ದ್ವಿತಲದ ಗರ್ಭ ಗುಡಿಯು ಷಡ್ವರ್ಗ ಕ್ರಮದಲ್ಲಿದೆ.ಮಧ್ಯಮ ಗಾತ್ರದ ರಚನೆಯಾಗಿದೆ. ಜೀರ್ಣೋದ್ಧಾರ ಪೂರ್ವದಲ್ಲಿದ್ದ ಪ್ರಾಚೀನ ಗರ್ಭಗುಡಿಯಲ್ಲಿ ಗುರುತಿಸಲಾದ ಗಚ್ಚುಗಾರೆಯ ಶಿಲ್ಪಶೈಲಿ ಯನ್ನು‌ ಆಧರಿಸಿ ನೂತನ ಗರ್ಭಗುಡಿಯನ್ನು ಶಿಲೆಯಲ್ಲಿ ನಿರ್ಮಿಸಿ ಮರ – ತಾಮ್ರದ ಛಾವಣಿಯನ್ನು ಅಳವಡಿಸಲಾಗಿದೆ. ಜೀರ್ಣೋದ್ಧಾರವು ಪುನಾರಚನೆಯೇ ಆಗಿತ್ತು.

ಪೌರಾಣಿಕ ಹಿನ್ನೆಲೆ- 1919ನೇ ಇಸವಿಯಲ್ಲಿ‌ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಿಂದ ಪ್ರಕಟವಾದ ಸಂಸ್ಕೃತ ಶ್ಲೋಕಗಳು ಮಾತ್ರ ಇರುವ , (ನಾಲ್ಕು ಅಧ್ಯಾಯಗಳಲ್ಲಿ 142 ಶ್ಲೋಕಗಳಲ್ಲಿ‌ ) ಸ್ಕಾಂದಪುರಾಣದ ಸಹ್ಯಾದ್ರಿ ಖಂಡದ “ಎಲ್ಲೂರು ಮಹಾತ್ಮ್ಯೆ” ಯಿಂದ ( ಮುಂದೆ ಈ ಶ್ಲೋಕಗಳನ್ನೇ ಆಧರಿಸಿ ಕನ್ನಡ ತಾತ್ಪರ್ಯ ಸಹಿತ “ಎಲ್ಲೂರು ಮಹಾತ್ಮೆ” ಯು 1952 ರಿಂದ 1976 ರ ಅವಧಿಯಲ್ಲಿ ಮೂರು ಬಾರಿ ಮುದ್ರಿಸಲ್ಪಟ್ಟು ಪ್ರಕಟವಾಗಿದೆ) ಜನಜನಿತ ಹಾಗೂ ಸರ್ವಸಮ್ಮತ .

ಶೌನಕಾದಿ ಋಷಿಗಳಿಗೆ ಸೂತಾಚಾರ್ಯರು ಪುಣ್ಯಕ್ಷೇತ್ರ ಹಾಗೂ ತೀರ್ಥಕ್ಷೇತ್ರಗಳ ಕುರಿತು ಹೇಳುತ್ತಾ … ತಾನು ಎಲ್ಲೂರಿಗೆ ಹೇಗೆ ಹೋದೆನು, ಎಲ್ಲಿ ಯಾವ ಸ್ಥಳದಲ್ಲಿ ಆವಿರ್ಭವಿಸಿದೆ ಎಂಬುದನ್ನು ಮಹಾದೇವನು ಪಾರ್ವತಿಗೆ ಹೇಳುತ್ತಾ “ತತ್ರ ಕುಂಜಪುರ ಕ್ಷೇತ್ರ ಕಲ್ಪನಂ ಪರಮಾದ್ಭುತಂ” ಎಂದು ಹೇಳುತ್ತಾನೆ ಈಶ್ವರ. ಪಿಲಾರಕಾನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಭಾರ್ಗವ ನಾಮಕನಾದ ಮಹರ್ಷಿಯು ಸಂಕಲ್ಪಿಸಿದ ಹತ್ತು ಕ್ಷೇತ್ರಗಳ ಮಧ್ಯೆ ನಾನು ಕುಂದರಾಜನ ತಪಸ್ಸಿಗೆ ಮೆಚ್ಚಿ ಆವಿರ್ಭವಿಸಿದೆನು ಎಂದು ಈಶ್ವರನು ಪಾರ್ವತಿಗೆ ಹೇಳಿದನು.

 

ಈ ಹತ್ತು ಕ್ಷೇತ್ರಗಳು ಯಾವುವು ಎಂದರೆ ಪಿಲಾರಕಾನ,ಶಾಂತಪುರ(ಸಾಂತೂರು), ನಂದಿಕೂರು, ಪಾದೆಬೆಟ್ಟು ,ಕುಂಜೂರು, ಉಳಿಯಾರು,ಪಾಂಗಾಳ, ಕಳತ್ತೂರು, ಪೇರೂರು ಹಾಗೂ ಶಿರ್ವ.ಈ ಯಾದಿ ಪುರಾಣೋಲ್ಲೇಖಿತವಾದುದು.

ಎಲ್ಲೂರಿನಿಂದ ಅಗ್ನೇಯದಿಂದ ಉತ್ತರಕ್ಕೆ ಹರಿಯುತ್ತಾ ಮುಂದೆ ಪಶ್ಚಿಮಾಭಿ ಮುಖವಾಗಿ‌ ಹರಿಯುತ್ತಾ ಪಶ್ಚಿಮ‌ಸಮುದ್ರ ವನ್ನು‌ ಸಂಗಮಿಸಿಸುವ ವಾರಣೀ ಎಂಬ ನದಿಯನ್ನು‌ ಒತ್ತೊತ್ತಾಗಿ ಮರಗಳು ಬೆಳೆದ ಕುಂಜ ಎಂಬ ಪ್ರದೇಶದ ಬಳಿ ಮುಚ್ಚಿ ಭಾರ್ಗವ ಋಷಿಗಳು ನೂತನ ಭೂಪ್ರದೇಶ ವನ್ನು ಸೃಷ್ಟಿಸಿ ಅಲ್ಲಿ ಮಹಾಯಾಗವೊಂದನ್ನು ಗ್ರಾಮಸ್ಥರ ಸಹಾಯದಿಂದ ನೆರವೇರಿಸಿ ಪವಿತ್ರ ಭೂಪ್ರದೇಶದಲ್ಲಿ ದುರ್ಗಾ ಶಕ್ತಿಯನ್ನು ಸಂಕಲ್ಪಿಸಿದರು.ಈ ಪ್ರದೇಶ ಕುಂಜಪುರ > ಕುಂಜೂರು ಎಂದಾಯಿತು.

‌ ಕನಿಷ್ಠ ಸಾವಿರದ ಇನ್ನೂರು ವರ್ಷ ಪುರಾತನದಲ್ಲಿ ದೇವಾಲಯವೊಂದು ಸಂಕಲ್ಪಿಸಿದ ಕುಂಜೂರು ಆಕಾಲದಲ್ಲಿ ಒಂದು ಬ್ರಾಹ್ಮಣರ ನೆಲೆಯಾಗಿತ್ತು (settlement) ಎಂಬುದಕ್ಕೆ ಪುರಾಣಕಾಲದ ಒಂದು ಗ್ರಾಮದ ಅಸ್ತಿತ್ವ ಸ್ಪಷ್ಟವಾಗುತ್ತದೆ. ಈಗಿನ ಮಾಣಿಯೂರಿನಿಂದ ಮೊದಲ್ಗೊಂಡು‌ ದಳಾಂತ್ರೆ ಕೆರೆ, ಮಾಣಿಯೂರು ಮಠ, ಸಾಣಿಂಜೆ,ಕುದುರೆ, ಮಂಜರಬೆಟ್ಟು, ಕರಂಬಳ,ಕುಂಜೂರು ದೇವಳದ ಬಳಿಯ ಉಡುಪರ ಮನೆಯೂ ಪೂರ್ವದ ಮಠವೇ ಆಗಿತ್ತು ಎಂಬ ಮಾಹಿತಿ ಸಿಗುತ್ತದೆ.

ಬಳಿಕ ಮೂಜಗಳ್ ಎಂಬಲ್ಲಿಯವರೆಗೆ ಹಾಗೂ ಈಗಿನ ಮುದರಂಗಡಿಯಿಂದ ಎರ್ಮಾಳು ರಸ್ತೆ ಹಾಗೂ ಮುದರಂಗಡಿ – ಎಲ್ಲೂರು -ಪಣಿಯೂರು – ಉಚ್ಚಿಲ ರಸ್ತೆಯ ನಡುವೆ ಎಲ್ಲೂರು ಗ್ರಾಮದ ವ್ಯಾಪ್ತಿಯಲ್ಲಿ ರುವ ವಿಸ್ತಾರವಾದ ಭೂಪ್ರದೇಶವೇ “ಕುಂಜೂರು”. ಬ್ರಾಹ್ಮಣರ ನೆಲೆಗಳನ್ನು ವಿವರಿಸುವ ಗ್ರಾಮಪದ್ಧತಿಯಲ್ಲಿ ಪೂರ್ವ ಷೋಡಷ ಹಾಗೂ ಪಶ್ಚಿಮ ಷೋಡಷ ಗಳೆಂದು ಎರಡು ವಿಭಾಗ. ಎರಡು ಮೂರು ಪಾಠಾಂತರಗಳು ಲಭಿಸುತ್ತವೆ.ಉರ್ವ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೊರೆತ ತುಳುಲಿಪಿಯಲ್ಲಿದ್ದ ಗ್ರಾಮಪದ್ಧತಿ‌ಯ ಒಂದು ಪಾಠಾಂತರದಲ್ಲಿ ‘ಕುಂಜೂರು’ ಒಂದುಗ್ರಾಮ.

ವಾರುಣೀ ನದಿಯ ಇಕ್ಕೆಲದಲ್ಲಿ ಒಂದು ಜನ ಜೀವನ,ಸಂಸ್ಕೃತಿ ಬೆಳೆದಿದೆ.ಎಂಬುದಕ್ಕೆ ಕುಂಜೂರು ಗ್ರಾಮವು ಉದಾಹರಣೆ ಯಾಗುತ್ತದೆ. ಈ‌ ಕುರಿತು ಕುಂಜೂರಿನ ಪೌರಾಣಿಕ ಕಾಲದ ನಕ್ಷೆಯೊಂದು ಸಿದ್ಧ  ಗೊಳಿಸಲಾಗುತ್ತಿದೆ.ಕ್ರಮೇಣ ಪ್ರಕಟಿಸುವ.

{ ಮೇ 5 ಕುಂಜೂರು ಆರಡ.ಈ ಸಂದರ್ಭಕ್ಕೆ ಇದೊಂದು ವಿಶೇಷ ಬರಹ.‌ “ಕುಂಜೂರು ಶ್ರೀ ದುರ್ಗಾ” ಪುಸ್ತಕದ ಆಧಾರ}

‌ • ಕುಂಡಂತಾಯ

~~~~~~~~~~~~~~~~~~

 
 
 
 
 
 
 
 
 
 
 

Leave a Reply