ಯಕ್ಷಗಾನ ಕಲೆಯನ್ನು ಶ್ರೀಮಂತಗೊಳಿಸಿ: ಗೋಪಾಲ ಗಾಣಿಗ

ಉಡುಪಿ, ಮಾರ್ಚ್ 5 (ಕವಾ) : ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವವರು ಸತತ ಅಧ್ಯಯನಶೀಲರಾಗಿರಬೇಕು ಮತ್ತು ಕಲೆಯನ್ನು
ತಪಸ್ಸಿನಂತೆ ಆಚರಿಸುತ್ತ ಶ್ರೀಮಂತಗೊಳಿಸಿಕೊಳ್ಳಬೇಕು ಎಂದು ಹಿರಿಯ ರಂಗಗುರು ಹಾಗೂ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗ
ಹೇಳಿದರು.

ಅವರು ಶುಕ್ರವಾರ ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗಮAಟಪದಲ್ಲಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು
ಸಮಸ್ತರು ರಂಗ ಸಂಶೋಧನಾ ಕೆಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 3 ದಿನಗಳ ಯಕ್ಷೋತ್ಸವವನ್ನು ಚಂಡೆ
ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಯಕ್ಷೋತ್ಸವಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ರಂಗನಿರ್ದೇಶಕ ಗೊಪಾಲಕೃಷ್ಣ ನಾಯರಿ ಮಾತನಾಡಿ, ಚತುರ್ವಿದ ಅಭಿನಯದ
ಮಹತ್ವವನ್ನು ವಿವರಿಸುತ್ತಾ ವಾಚಿಕಾಭಿನಯವು ಇತರೆ ಎಲ್ಲಾ ಪ್ರದರ್ಶಕ ಕಲೆಗಳಿಗಿಂತ ಯಕ್ಷಗಾನದಲ್ಲೇ ಅತ್ಯಂತ ಶಕ್ತಿಯುತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿದುಷಿ ಭಾಗೀರಥಿ, ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಹಾಗೂ ಮತ್ತಿತರರು
ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಂಸ ದಿಗ್ವಿಜಯ ಮತ್ತು ಭಾಸ ಕರ್ಣಭಾರ ಯಕ್ಷಗಾನ ಪ್ರಯೋಗಗಳು ನಡೆಯಿತು. ಭಾಗವತ ಕೇಶವ ಆಚಾರ್ಯ ಪ್ರಾರ್ಥಿಸಿದರು. ಬ್ರಹ್ಮಾವರ ತಾಲೂಕು ಕ.ಸಾ.ಪ ಅಧ್ಯಕ್ಷರಾಗಿರುವ ನಿವೃತ್ತ ಶಿಕ್ಷಕ ಹಾಗೂ ಕಲಾವಿದ ರಾಮಚಂದ್ರ ಐತಾಳ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಕವಯಿತ್ರಿ ಸುಮನಾ ಹೇರಳೆ ನಿರೂಪಿಸಿದರು, ಕಲಾವಿದ ಶಿವಾನಂದ ಮಯ್ಯ ವಂದಿಸಿದರು.

 
 
 
 
 
 
 
 
 
 
 

Leave a Reply