ಮುತಾಲಿಕ್ ಕಾರ್ಕಳದಲ್ಲಿ ಸ್ಪರ್ಧಿಸಿದರೆ ಸೋಲುಕಟ್ಟಿಟ್ಟಬುತ್ತಿ – ಅಧ್ಯಕ್ಷ ಮೋಹನ್ ಭಟ್ 

ಉಡುಪಿ: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಿಂದ ಸ್ಪರ್ಧಿಸಿದರೆ ಸೋಲು ಖಚಿತ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮತ್ತೆ ದುರಂತ ನಾಯಕರಾಗುತ್ತಾರೆ ಎಂದು ಶ್ರೀರಾಮ ಸೇನೆ ವಿಭಾಗದ ಅಧ್ಯಕ್ಷ ಮೋಹನ್ ಭಟ್ ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ರಾಜಕೀಯಕ್ಕೆ ಹೋಗುವುದು ಸರಿಯಲ್ಲ. ಅವರು ಸಂಘಟನೆಯ ಜವಾಬ್ದಾರಿ ಹೊತ್ತವರು. ಅವರು ಹಿಂದೂ ಸಂಘಟನೆಯನ್ನು ಬೆಳೆಸಿಕೊಂಡು ಹೋಗುವ ನಾಯಕರಾಗಬೇಕು. ಬಾಳ್ ಠಾಕ್ರೆ, ಕಲ್ಲಡ್ಕ ಪ್ರಭಾಕರ ಭಟ್ ಅವರಂತೆ ಹಿಂದುತ್ವಕ್ಕಾಗಿ ಇರುವವರಾಗಬೇಕು ಎಂದರು.

 ಪ್ರಮೋದ್ ಮುತಾಲಿಕ್ ಅವರು ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದೇ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಇವರು ಉಡುಪಿ ಜಿಲ್ಲೆಯ ಪ್ರಮುಖರಲ್ಲಿ ಆಗಲೀ ನಮ್ಮ ಸಂಘಟನೆಯ ಕಾರ್ಯಕರ್ತರಲ್ಲಿ ಆಗಲಿ ಚರ್ಚೆ ಮಾಡದೇ ಏಕಪಕ್ಷೀಯ ವಾಗಿ ತೆಗೆದುಕೊಂಡ ನಿರ್ಧಾರಗಳನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇವರ ನಿರ್ಧಾರದಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಯ ಕೆಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಪ್ರಾರಂಭದ ದಿನಗಳಲ್ಲಿ ಪ್ರಮೋದ್ ಮುತಾಲಿಕ್ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದವರಲ್ಲಿ ನಾನೂ ಕೂಡ ಒಬ್ಬ, ಆದರೆ ಅವರಿಗೆ ಈ ಸ್ಥಾನಮಾನವನ್ನು ಬಹಳ ಗೌರವಪೂರ್ವಕವಾಗಿ ಸಿಗಬೇಕೆಂದು ಹಾಗೂ ಎಲ್ಲಾ ಹಿಂದೂ ಸಂಘಟನೆಯ ನಾಯಕರನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು. 

ನಾವು ಈ ಮೊದಲಿನಿಂದಲೂ ಹೇಳುತ್ತಾ ಬಂದಿರುತ್ತೇವೆ. ಆದರೆ, ಸುಮಾರು 3 ತಿಂಗಳಿನ ಹಿಂದೆ ಕಾರ್ಕಳದ ಒಬ್ಬ ಉದ್ಯಮಿ ಹಾಗೂ ಚಿರಪರಿಚಿತ ವ್ಯಕ್ತಿಯೊಬ್ಬ ಸಂಘಟನೆಯ ಬಗ್ಗೆ ಮತ್ತು ಶ್ರೀ ಪ್ರಮೋದ್ ಮುತಾಲಿಕ ಅವರ ಬಗ್ಗೆ ಬಹಳ ಅನುಕಂಪವನ್ನು ತೋರಿಸುವ ನಾಟಕವನ್ನು ಮಾಡಿ ಸಹಾಯ ಮಾಡುವ ನೆಪದಲ್ಲಿ ಮಣಿಪಾಲದ ನನ್ನ ಮನೆಗೆ ಬಂದು ಪ್ರಮೋದ್ ಮುತಾಲಿಕ್ ಅವರ ಬಳಿ ಸುಮಾರು 1 ಗಂಟೆ ಮಾತಾಡಿರುತ್ತಾರೆ. ಅದರ ನಂತರದ ಬೆಳವಣಿಗೆ ನಮ್ಮೆಲ್ಲರನ್ನು ದಂಗು ಬಡಿಸಿದಂತಾಗಿದೆ. 

ಪ್ರತಿ ಬಾರಿ ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ಪ್ರಮೋದ್ ಮುತಾಲಿಕ್ ಅವರು ಮುಂಚಿತವಾಗಿ ನಮಗೆ ತಿಳಿಸಿ ಬರುತ್ತಿದ್ದರು. ಆದರೆ ಕಾರ್ಕಳದ ಉದ್ಯಮಿಯನ್ನು ಭೇಟಿಯಾದ 10 ದಿನಗಳ ಬಳಿಕ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಪ್ರವಾಸವನ್ನು ಕೈಗೊಂಡಿದ್ದರು, ಆದರೆ ಈ ಜಿಲ್ಲೆಗಳ ವಿಭಾಗದ ಅಧ್ಯಕ್ಷನಾದ ನನಗಾಗಲೀ ಅಥವಾ ಈ ಎರಡೂ ಜಿಲ್ಲೆಗಳ ಅಧ್ಯಕ್ಷರಿಗಾಗಲೀ ತಿಳಿಸದೆ ನೇರವಾಗಿ ಕಾರ್ಕಳದ ಉದ್ಯಮಿಯ ಉಸ್ತುವಾರಿ ಯಲ್ಲಿ ತಮ್ಮ 3 ದಿನದ ಪ್ರವಾಸವನ್ನು ಕೈಗೊಂಡಿರುತ್ತಾರೆ.

 

ನಂತರ ಈ ಬೆಳವಣಿಗೆಯಿಂದ ಬೇಸತ್ತ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಪದಾಧಿಕಾರುಗಳು ಮತ್ತು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ಮುಂದಾದಾಗ ಇನ್ನು ಮುಂದೆ ಈ ರೀತಿಯ ಘಟನೆ ನಡೆಯಲು ಆಸ್ಪದ ನೀಡುವುದಿಲ್ಲ ಎಂಬ ಭರವಸೆಯನ್ನು ಅವರು ನೀಡಿದ್ದರು.

ಈ ಘಟನೆಯ ಬಳಿಕ ಪ್ರಮೋದ್ ಮುತಾಲಿಕ್ ಅವರು ಕಾರ್ಕಳ ಕ್ಷೇತ್ರದ ವಿಧಾನ ಸಭೆಗೆ ಸ್ಪರ್ಧಿಸುವುದಾಗಿ ನಿರ್ಧಾರ ಮಾಡಿರುತ್ತಾರೆ ಎಂದು ತಿಳಿಸಿದರು. ಕಾರ್ಕಳದ ಉದ್ಯಮಿಯ ಜೊತೆಗೆ ಒಬ್ಬ ವಕೀಲ ಸೇರಿಕೊಂಡು, ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರ ಮೇಲಿನ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳಲು ಪ್ರಮೋದ್ ಮುತಾಲಿಕ್ ಅವರನ್ನು ಕಾರ್ಕಳ ವಿಧಾನಸಭೆಗೆ ಸ್ಪರ್ಧಿಸುವಂತೆ ಒತ್ತಾಯಪೂರ್ವಕವಾಗಿ ಒಪ್ಪಿಸಿದ್ದರು.

ಮಾತ್ರವಲ್ಲದೆ ಇದೇ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಕಾರ್ಕಳದಲ್ಲಿ ರೋಲ್ ಕಾಲ್ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಅವಮಾನ ಮಾಡಿದ್ದರು. ಈ ಬಗ್ಗೆ ವಿಭಾಗ ಅಧ್ಯಕ್ಷನ ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರಲ್ಲಿ ಚರ್ಚಿಸಿದಾಗ, ಅವರು ಈ ವಿಚಾರವನ್ನು ನಿರ್ಲಕ್ಷಿಸಿದ್ದು ಬಹಳ ಬೇಸರವಾಗಿದೆ.

 

ಅಲ್ಲದೇ ಶ್ರೀರಾಮ ಸೇನೆಯ ಹೆಸರಿನ ಬದಲು “ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ’ ಎಂದು ಕಾರ್ಕಳ ದಲ್ಲಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದು ನಮಗೆ ಯಾವುದೇ ಸಭೆಗೆ ಆಗಲಿ ಅಥವಾ ಅಲ್ಲಿ ನಡೆಯುವ ಯಾವುದೇ ವಿಚಾರದ ಬಗ್ಗೆಯಾಗಲಿ ಮಾಹಿತಿಯನ್ನು ನೀಡಿದೆ ನಮ್ಮ ಸಂಘಟನೆಯ ಕಾರ್ಯಕರ್ತ ರೊಂದಿಗೆ ಚರ್ಚಿಸದೇ ಶ್ರೀ ರಾಮ ಸೇನೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಮತ್ತು ಕಾರ್ಕಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿಲುವಿನಿಂದ ಒಗ್ಗಟ್ಟಿನಿಂದ ಇದ್ದ ನಮ್ಮ ಸಂಘಟನೆಯ ಕಾರ್ಯಕರ್ತರು ಇವರು ನಮ್ಮ ನಮ್ಮೊಳಗೆ ಕಚ್ಚಾಡುವಂತಾಗಿದೆ ಎಂದರು.

ನೀವು ಶಾಸಕರಾಗುವುದು ನಿಮ್ಮ ಕನಸಲ್ಲ, ಅದು ನಮ್ಮಂತಹ ಎಲ್ಲಾ ಹಿಂದೂ ಸಂಘಟನೆಯ ಕಾರ್ಯಕರ್ತರ ಆಶಯ. ತಮ್ಮ ಈ ನಿಲುವಿನಿಂದ ಬಹಳಷ್ಟು ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ತಮ್ಮ ಈ ನಿರ್ಧಾರದಿಂದ ಬಹಳಷ್ಟು ಕಾರ್ಯಕರ್ತರು ಬೀದಿಪಾಲಾಗುತ್ತಾರೆ. ಯುವಕರಿಗೆ ಒಗ್ಗಟ್ಟಿನಲ್ಲಿರುವುದನ್ನು ಕಲಿಸಿದ ತಾವೇ ನಮ್ಮ ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.

 
 
 
 
 
 
 
 
 
 
 

Leave a Reply