ಬಿಜೆಪಿ ಅಂಬಲಪಾಡಿ ಕಾರ್ಯಕರ್ತರ ಸಮಾವೇಶ, ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರದ ಉದ್ಘಾಟನೆ

ರಾಷ್ಟ್ರ ಹಿತಕ್ಕಾಗಿ ಮಂತ್ರಿ ಪದವಿಯನ್ನು ತೊರೆದು ಭಾರತೀಯ ಜನಸಂಘವನ್ನು ಸ್ಥಾಪಿಸಿದ ಡಾ! ಶ್ಯಾಮಪ್ರಸಾದ್ ಮುಖರ್ಜಿ, ಅಂತ್ಯೋದಯ ಪರಿಕಲ್ಪನೆಯನ್ನು ನೀಡಿದ ಪಂಡಿತ್ ದೀನದಯಾಳ್ ಉಪಾಧ್ಯಾಯರಂತಹ ಮಹಾನ್ ಚೇತನಗಳು ಪಕ್ಷದ‌ ಕಾರ್ಯಕರ್ತರಿಗೆ ಪ್ರೇರಣಾ ಶಕ್ತಿಯಾಗಿದೆ. ರಾಷ್ಟ್ರೀಯತೆ ಸಹಿತ ಪಂಚ ನಿಷ್ಠೆಗಳ ಭದ್ರ ಬುನಾದಿಯಲ್ಲಿ ಸದೃಢವಾಗಿ ಬೆಳೆದು ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೆನಿಸಿರುವ ಬಿಜೆಪಿಯ ಕಾರ್ಯಕರ್ತನಾಗುವುದು ಭಾಗ್ಯವೆನಿಸಿದರೆ, ಪಕ್ಷದ ಪದಾಧಿಕಾರಿಯಾಗುವುದು ಸೌಭಾಗ್ಯ ಎಂದು ಬಿಜೆಪಿ ಮಂಗಳೂರು ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಹೇಳಿದರು.

ಅವರು ಬಿಜೆಪಿ ಉಡುಪಿ ನಗರ, ಬಿಜೆಪಿ ಮಹಾ ಶಕ್ತಿಕೇಂದ್ರ ಅಂಬಲಪಾಡಿ-ಕಡೆಕಾರು ಮತ್ತು ಬಿಜೆಪಿ ಅಂಬಲಪಾಡಿ ಇದರ ಆಶ್ರಯದಲ್ಲಿ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಹಾಗೂ ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 8 ವರ್ಷಗಳ ಆಡಳಿತದ ಸಂಭ್ರಮಾಚರಣೆ’ಯ ಅಂಗವಾಗಿ‌ ಜು‌.10ರಂದು ಅಂಬಲಪಾಡಿ ವಸಂತ ಮಂಟಪದಲ್ಲಿ ನಡೆದ ಉಡುಪಿ ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ ಮತ್ತು ಜಿಲ್ಲಾ ಎನ್.ಸಿ.ಡಿ. ಘಟಕ ಇದರ ಸಹಯೋಗದ ‘ಉಚಿತ ಆರೋಗ್ಯ ತಪಾಸಣಾ ಶಿಬಿರ’, ‘ಉಚಿತ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ವಿತರಣೆ’ ಹಾಗೂ ‘ಉಚಿತ ಆಯುಷ್ಮಾನ್ ಕಾರ್ಡ್ ಮತ್ತು ಈ-ಶ್ರಮ್ ಕಾರ್ಡ್ ನೊಂದಾವಣೆ’ ಹಾಗೂ ಪ್ರಸಾದ್‌ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ‌ ಚಾರಿಟೇಬಲ್ ಟ್ರಸ್ಟ್(ರಿ.) ಹಾಗೂ ಉಡುಪಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ‌ ಇದರ ಸಹಯೋಗದ ‘ಉಚಿತ ನೇತ್ರ ತಪಾಸಣಾ ಶಿಬಿರ’ ಮತ್ತು ‘ಉಚಿತ ಕನ್ನಡಕ ವಿತರಣೆ’ ಹಾಗೂ ‘ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಮಾವೇಶ’ ಮತ್ತು ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಇಂದು ಭಾರತದ ನಿಲುವಿಗೆ ವಿಶ್ವಮಾನ್ಯತೆ ದೊರೆಯುತ್ತಿದೆ. ಜಗತ್ತಿನ ರಾಷ್ಟ್ರಗಳು ದೇಶವನ್ನು ತಾತ್ಸಾರಭಾವದಿಂದ ಕಾಣುತ್ತಿದ್ದ ಈ ಹಿಂದಿನ ದೃಷ್ಟಿಕೋನಗಳು ಬದಲಾಗಿವೆ. ಇದಕ್ಕೆ ಕಾರಣ ವಿಶ್ವ‌ವಂದ್ಯರೆನಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ನಡೆ, ನುಡಿ ಹಾಗೂ ಆಡಳಿತ ವೈಖರಿ. ಇಂದು ಸಂಖ್ಯಾತ್ಮಕವಾಗಿ ಪಕ್ಷ ಸಾಕಷ್ಟು ಬೆಳೆದಿದೆ. ಆಡಳಿತ ಪಕ್ಷವಾಗಿ ಬಿಜೆಪಿ ತನ್ನದೇ ಆದ ವರ್ಚಸ್ಸು ಹಾಗೂ ಜವಾಬ್ದಾರಿ ಹೊಂದಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಚ್ಚಾರಿತ್ರ್ಯ, ಸಕಾರಾತ್ಮಕ ಚಿಂತನೆಗಳನ್ನು‌ ಮೈಗೂಡಿಸಿಕೊಂಡು ಪಕ್ಷದ ಗುಣಾತ್ಮಕ ಬೆಳವಣಿಗೆಗೆ ಒತ್ತು ‌ನೀಡುವ ಜೊತೆಗೆ ಸರಕಾರದ ಜನಪರ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ತನಕ ತಲುಪಿಸುವ ಮೂಲಕ ನಿರಂತರ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ‌‌ ನೀಡಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ‘ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ’ದ ಉತ್ತಮ ಕೆಲಸ ಕಾರ್ಯಗಳು, ಕೋವಿಡ್ ಸಂದರ್ಭದ ಸಾಧನೆ, ದೇಶದ ಭದ್ರತೆ ಹಾಗೂ ದೇಶವಾಸಿಗಳ ಕಲ್ಯಾಣಕ್ಕೆ ಕೈಗೊಂಡ ಉಪಕ್ರಮಗಳು ಪ್ರಶಂಸನೀಯ. ಕೇಂದ್ರ ಸರಕಾರದ ಎಂಟು ವರ್ಷಗಳ ಸಾರ್ಥಕ ಆಡಳಿತಕ್ಕೆ ಅಭಿನಂದನೆಗಳು. ಪಕ್ಷದ ಕಾರ್ಯಕರ್ತರು ಮೋದಿಯವರ ಆದರ್ಶಗಳು ಮತ್ತು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರಚುರಪಡಿಸುವುದು ಇಂದಿನ ಅಗತ್ಯತೆ ಎಂದರು.

ಪ್ರಸಾದ್ ನೇತ್ರಾಲಯ ಉಡುಪಿ ಇದರ ವೈದ್ಯಕೀಯ ನಿರ್ದೇಶಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಜೃತ ನಾಡೋಜ ಡಾ! ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ಮೂಲಭೂತ ಅವಶ್ಯಕತೆಯಾಗಿರುವ‌ ಆರೋಗ್ಯ ಸೇವೆಯನ್ನು ಜನತೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ರಧಾನಿ ಮೋದಿ ಆಶಯದಂತೆ ತಪಾಸಣಾ‌ ಶಿಬಿರದ ಜೊತೆಗೆ ಗುಣಮಟ್ಟದ ಸೇವೆಯನ್ನು ನೀಡುವುದು ನಮ್ಮ ಆದ್ಯತೆಯಾಗಬೇಕು. ಮುಂದಿನ ದಿನಗಳಲ್ಲಿಯೂ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆಯಂತಹ ಉದಾತ್ತ ಸೇವಾ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಪ್ರಧಾನಿ ನರೇಂದ್ತ ಮೋದಿ ನೇತ್ರತ್ವದಲ್ಲಿ ನಡೆದ ಉತ್ತಮ ಕೆಲಸ ಕಾರ್ಯಗಳ ಪ್ರಚಾರ ಅಗತ್ಯ.‌ ಬಿಜೆಪಿ ಉಡುಪಿ ನಗರ ವ್ಯಾಪ್ತಿಯ ಇತರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಕಾರ್ಯಕರ್ತರ ಸಮಾವೇಶ ಹಾಗೂ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಬೂತ್ ಸಶಸ್ತೀಕರಣ ಸಹಿತ ಪಕ್ಷದ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಬದ್ಧತೆಯಿಂದ ಕಾರ್ಯಗತಗೊಳಿಸಲಾಗುತ್ತಿದೆ. ಅತ್ಯಂತ ಅರ್ಥಪೂರ್ಣ ರೀತಿಯಲ್ಲಿ ಕಾರ್ಯಕರ್ತರ ಸಮಾವೇಶ ಹಾಗೂ ಜನೋಪಯೋಗಿ ಸೇವಾ ಕಾರ್ಯಗಳನ್ನು ಆಯೋಜಿಸಲು ಕೈಜೋಡಿಸಿದ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಮಹಾ ಶಕ್ತಿಕೇಂದ್ರ, ಶಕ್ತಿಕೇಂದ್ರ ಮತ್ತು ಬೂತ್ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಸದೃಢ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್. ಕಲ್ಮಾಡಿ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ,‌ ತಾಲೂಕು ಆರೋಗ್ಯ ಇಲಾಖೆಯ ಡಾ! ಅಂಜಲಿ ವಾಗ್ಲೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ! ಸಾತ್ವಿಕ್, ಸಮುದಾಯ ವೈದ್ಯಕೀಯ ವಿಭಾಗದ ಡಾ! ಯಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಗರಸಭಾ ಸದಸ್ಯ ಹರೀಶ್ ಶೆಟ್ಟಿ,‌ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ,‌ ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೋಮನಾಥ್ ಬಿ.ಕೆ., ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು, ನಗರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್, ಕಾರ್ಯದರ್ಶಿ ದಯಾಶಿನಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಯೋಗೀಶ್ ಶೆಟ್ಟಿ, ರಾಮರಾಜ್ ಕಿದಿಯೂರು, ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ನಾಗರಾಜ್ ಕರ್ಕೇರ, ವಿಜಯ ಶೆಟ್ಟಿ ಹಾಗೂ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಬೂತ್ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಪಕ್ಷದ ಮೋರ್ಚಾ ಮತ್ತು ಪ್ರಕೋಷ್ಠಗಳ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಬಿಜೆಪಿ ಮಹಾ ಶಕ್ತಿಕೇಂದ್ರ ಕಡೆಕಾರು-ಅಂಬಲಪಾಡಿ ಸಂಚಾಲಕ ರಾಜೇಂದ್ರ ಪಂದುಬೆಟ್ಟು ಸ್ವಾಗತಿಸಿದರು. ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು ವಂದಿಸಿದರು.

 
 
 
 
 
 
 
 
 
 
 

Leave a Reply