ಧನಕನಕ ಕರುಣಿಸಿ ದುಃಖದಾರಿದ್ರ್ಯ ನಾಶಮಾಡುವ ಅಪೂರ್ವ ಸ್ತೋತ್ರ ~ಪಿ.ಲಾತವ್ಯ ಆಚಾರ್ಯ.ಉಡುಪಿ

ವಿಜಯನಗರದ ಶ್ರೀಕೃಷ್ಣದೇವರಾಯನ ಏಕೈಕ ಪುತ್ರನು ವಿಷಪ್ರಾಶನದಿಂದ ಮೃತನಾಗಿದ್ದ.ಈ ಸಾವಿನಿಂದ ಶ್ರೀಕೃಷ್ಣದೇವ ರಾಯನು ತೀವ್ರ ಆಘಾತಕ್ಕೆ ಒಳಗಾದ.ಮಾನಸಿಕವಾಗಿ ಕುಗ್ಗಿದ್ದ ಮಹಾರಾಜನು ತನ್ನ ಬಳಗದ ಷಡ್ಯಂತ್ರವನ್ನು ಅರಿಯದೆ ತನ್ನ ಪುತ್ರನ ಮರಣದ ಆರೋಪವನ್ನು ಮಂತ್ರಿ ತಿಮ್ಮರಸನ ಮೇಲೆ ಹೊರಿಸಿ ಆತನ ಕಣ್ಣನ್ನು ಕೀಳಿಸಿ ಕಾರಾಗೃಹಕ್ಕೆ ತಳ್ಳಿದ.ಈ ಘಟನೆಯು ವಿಜಯನಗರ ಸಾಮ್ರಾಜ್ಯವನ್ನು ಆಪತ್ತಿನಲ್ಲಿ ಸಿಲುಕಿಸಿತು.ಇದೇ ಸಂದರ್ಭದಲ್ಲಿ ಶ್ರೀಕೃಷ್ಣದೇವರಾಯನ ಸಾಮ್ರಾಜ್ಯದ ಗುರುಗಳಾಗಿದ್ದ ಶ್ರೀವ್ಯಾಸರಾಜತೀರ್ಥರೂ ಕೂಡಾ ಶ್ರೀವ್ಯಾಸಸಮುದ್ರಕ್ಕೆ ತೆರಳಿದ್ದರು.ಯುವರಾಜನ ಅನಿರೀಕ್ಷಿತ ಸಾವಿನಿಂದ ವಿಜಯನಗರದ ಆಡಳಿತಯಂತ್ರ ಸಂಪೂರ್ಣ ಕೆಟ್ಟು ಹೋಗಿತ್ತು.ಇಂತಹ ಒಂದು ಅವಕಾಶಕ್ಕಾಗಿ ವೈರಿಪಡೆಗಳು ಹೊಂಚು ಹಾಕುತ್ತಿದ್ದವು.

ವಿಜಯನಗರಸಾಮ್ರಾಜ್ಯ ತೀರಾ ದಯನೀಯ ಸ್ಥಿತಿಯತ್ತ ವಾಲುತ್ತಿತ್ತು. ಕೌಟುಂಬಿಕ ಶೀತಲಸಮರವೂ ಸೃಷ್ಟಿಯಾಗಿತ್ತು.ಬೊಕ್ಕಸ ಬರಿದಾಗುತ್ತಾ ಬಂದ್ದಿತ್ತು. ಸಾಮ್ರಾಜ್ಯ ನಡೆಸಲು ಅವಶ್ಯವಿದ್ದ ದ್ರವ್ಯಗಳೆಲ್ಲಾ ಕರಗಿಹೋಗಿದ್ದವು.ಅಲ್ಲಲ್ಲಿ ಪ್ರಜೆಗಳು ದಂಗೆ ಏಳಲು ಆರಂಭಿಸಿದ್ದರು.ಅರಾಜಕತೆಯ ಕರಿಮೋಡ ವಿಜಯನಗರ ಸಾಮ್ರಾಜ್ಯದ ಸುತ್ತ ಹರಿದಾಡಲಾರಂಭಿಸಿತ್ತು. ಸಾಮ್ರಾಜ್ಯಕ್ಕೆ ಎದುರಾದ ತೀವ್ರ ಸಂಕಷ್ಟವನ್ನು ನೆನೆದು ಅರಸ ದುಃಖಿತನಾಗಿದ್ದ.

ಇದೇ ಸಂದರ್ಭದಲ್ಲಿ ಶ್ರೀವಾದಿರಾಜಗುರುಸಾರ್ವಭೌಮರು ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಹಂಪೆಗೆ ಆಗಮಿಸಿದ್ದರು.ವಿಷಯ ತಿಳಿದ ಮಹಾರಾಜನು ಶ್ರೀವಾದಿರಾಜರನ್ನು ವಿಶೇಷ ಗೌರವದಿಂದ ಅರಮನೆಗೆ ಬರಮಾಡಿಸಿ ಪುರಸ್ಕರಿಸಿದನು. ತ್ರಿಕಾಲ ಜ್ಞಾನಿಗಳಾಗಿದ್ದ ಶ್ರೀವಾದಿರಾಜರು ಶ್ರೀಕೃಷ್ಣ ದೇವರಾಯನ ಅಂತರಾಳದ ನೋವನ್ನು ಅರಿತುಕೊಂಡರು. ಅರಸನೂ ಕೂಡಾ ವಿಜಯನಗರ ಸಾಮ್ರಾಜ್ಯಕ್ಕೆ ಒದಗಿರುವ ದುಸ್ಥಿತಿಯನ್ನು ವಿವರಿಸಿ ಸಾಮ್ರಾಜ್ಯವನ್ನು ಸಂಕಷ್ಟದಿಂದ ಪಾರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡ.

ಭಾವೀಸಮೀರ ಶ್ರೀವಾದಿರಾಜರಿಗೆ ವಿಜಯನಗರ ಸಾಮ್ರಾಜ್ಯದ ಮೇಲೆ ಅಪಾರ ಗೌರವ.ಧರ್ಮ ದೇವರು ಸಂಸ್ಕೃತಿಯ ರಕ್ಷಣೆಗೆ ಕಟಿಬದ್ಧವಾಗಿದ್ದ ಈ ಸಂಸ್ಥಾನದ ಜೊತೆಗೆ ಶ್ರೀವಾದಿರಾಜರು ನಿಕಟ ಸಂಬಂಧ ಹೊಂದಿದ್ದರು. ಹೀಗಾಗಿ ಆಕ್ಷಣವೇ ಸಾಮ್ರಾಜ್ಯದ ಉಳಿವಿಗಾಗಿ ಶ್ರೇಯಸ್ಸಿಗಾಗಿ ವಿಶೇಷ ಪೂಜೆ ಪುರಸ್ಕಾರಗಳನ್ನು ಸಲ್ಲಿಸಲು ಆರಂಭಿಸಿದರು. ಅಂತಿಮವಾಗಿ ಶ್ರೀಮನ್ನಾರಾಯಣ ಸಹಿತನಾದ ಶ್ರೀಮಹಾಲಕ್ಷ್ಮಿಯನ್ನು ಶ್ರದ್ದಾಭಕ್ತಿಯಿಂದ ನಿರಂತರ ಪ್ರಾರ್ಥಿಸಿದರು. ಶ್ರೀವಾದಿರಾಜರ ಅಂತರಂಗದ ಕರೆಗೆ ಶ್ರೀಮನ್ನಾರಾಯಣ ಸಹಿತ ಶ್ರೀಮಹಾಲಕ್ಷ್ಮಿಯ ದಿವ್ಯರೂಪಗಳ ದರ್ಶನವು ಶ್ರೀವಾದಿರಾಜರ ಮನದೊಳಗೆ ಆವಿರ್ಭವಿಸಿತು.

ಸದಾ ಸುಗಂಧದಂತೆ ಪರಿಮಳ ಬೀರುತ್ತಿರುವ ಮಹಾಲಕ್ಷ್ಮಿಯ ಅನನ್ಯಮಹಿಮೆಗಳು, ಅನಂತರೂಪಗಳು ಶ್ರೀವಾದಿರಾಜರಿಗೆ ಕಂಡವು. ಚತುರ್ಮುಖಬ್ರಹ್ಮ, ಚತುರ್ವೇದ, ಚತುರ್ರೂಪದ ಶ್ರೀಹರಿಯಿಂದ ಕೊಂಡಾಡಲ್ಪಟ್ಟ ನಾರಾಯಣಿಯು ವಜ್ರ, ವೈಢೂರ್ಯ,ನವರತ್ನದ ಸ್ವರ್ಣಾಭರಣಗಳನ್ನು ಧರಿಸಿ ಕಂಗೊಳಿಸುತ್ತಿದ್ದಳು. ಸರ್ವಾಭೀಷ್ಟಗಳನ್ನು ಅನುಗ್ರಹಿಸುತ್ತಾ ಭಕ್ತರ ದುರಿತ-ದುಮ್ಮಾನ ಕಷ್ಟ-ನಷ್ಟಗಳನ್ನು ಕ್ಷಣಮಾತ್ರದಲ್ಲಿ ದೂರಗೊಳಿಸುವ ಶ್ರೀಮಹಾಲಕ್ಷ್ಮಿಯ ಅದ್ಭುತ ರೂಪವು ಶ್ರೀವಾದಿರಾಜರಿಗೆ ಗೋಚರಿಸಿತು.ಮನದಾಳದಲ್ಲಿ ಉದ್ಭವಿಸಿದ ಶ್ರೀಲಕ್ಷ್ಮಿಯ ಈ ಪವಿತ್ರ ಸ್ಮರಣೆಯು “ಶ್ರೀಶಗುಣದರ್ಪಣ”ಎಂಬ ಸ್ತೋತ್ರರತ್ನವಾಗಿ ಶ್ರೀವಾದಿರಾಜರಿಂದ ಅಕ್ಷರರೂಪದಲ್ಲಿ ಪ್ರಕಟವಾಯಿತು.

ಆ ಕ್ಷಣದಲ್ಲೇ ಶ್ರೀವಾದಿರಾಜರು ಈ ಕೃತಿಯನ್ನು ಶ್ರೀಕೃಷ್ಣದೇವರಾಯನಿಗೆ ನೀಡಿದರು.”ಪ್ರತಿನಿತ್ಯ ಈ ಕೃತಿಯನ್ನು ಮೂರೂ ಹೊತ್ತು ಗರಿಷ್ಠ ಸಂಖ್ಯೆಯಲ್ಲಿ ಪಠಿಸಬೇಕು. ಪ್ರತಿ ಬಾರಿಯೂ ಮೊದಲಿಗೆ ಶ್ರೀಶಗುಣದರ್ಪಣ ಪಠಿಸಿ ನಂತರನಾರಾಯಣವರ್ಮ ಪಠಿಸಿ ಕೊನೆಯಲ್ಲಿ ಮತ್ತೆ ಶ್ರೀಶಗುಣದರ್ಪಣ ಪಠಿಸಬೇಕು..ಹೀಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಠಿಸಿದಲ್ಲಿ ನಿಮ್ಮ ದಾರಿದ್ರ್ಯ ನಾಶವಾಗುವುದು.ನಾವು ತೀರ್ಥಯಾತ್ರೆ ಮುಗಿಸಿ ನಿಮ್ಮನ್ನು ಮತ್ತೆ ಬೇಟಿ ಮಾಡುತ್ತೇವೆ.ಅಲ್ಲಿಯವರೆಗೆ ನಿಮ್ಮಸ್ತೋತ್ರಪಠಣ ಸಾಗುತ್ತಿರಲಿ”ಎಂದು ಅಭಯ ನೀಡಿ ತೆರಳಿದರು.ಶ್ರೀವಾದಿರಾಜರ ಭೇಟಿಯ ನಂತರ ಮಾನಸಿಕವಾಗಿ ಬಹಳಷ್ಟು ಚೇತರಿಸಿ ಕೊಂಡಿದ್ದ ಅರಸನು ಶ್ರೀವಾದಿರಾಜರ ಆದೇಶದಂತೆ ಸ್ತೋತ್ರರತ್ನದ ಪಠಣವನ್ನು ಬಹಳ ಹುರುಪಿನಿಂದ ಆರಂಭಿಸಿದ.ನಿರೀಕ್ಷಿತ ಸಮಯದಲ್ಲೇ ಮಹಾರಾಜನು ಸಹಸ್ರಾರು ಭಾರಿ ಸ್ತೋತ್ರವನ್ನು ಪಠಿಸಿ ಶ್ರೀಮನ್ನಾರಾಯಣ ಸಹಿತ ಶ್ರೀಮಹಾಲಕ್ಷ್ಮಿಯ ಪಾದಕಮಲಗಳಿಗೆ ಭಕ್ತಿಯಿಂದ ಅರ್ಪಿಸಿದ.ಅದೇಸಮಯದಲ್ಲೇ ಶ್ರೀವಾದಿರಾಜರು ತೀರ್ಥಯಾತ್ರೆ ಪೂರೈಸಿ ಹಂಪೆಗೆ ಮತ್ತೆ ಆಗಮಿಸಿದರು.

ಮಹಾರಾಜನನ್ನು ಭೇಟಿ ಮಾಡಿದ ಶ್ರೀವಾದಿರಾಜರು ಆತನನ್ನು ಹಾಗೂ ಅರಸನ ಕೆಲಮಂದಿ ಆಪ್ತರನ್ನು ಸೇರಿಸಿಕೊಂಡು ಹಂಪೆಯ ಸಮೀಪದ ದಟ್ಟಕಾಡಿನಲ್ಲಿ ಸಾಗಿದರು.ಬೃಹತ್ ಬಂಡೆಗಳಿಂದ ತುಂಬಿದ್ದ ಗೌಪ್ಯಸ್ಥಳವೊಂದಕ್ಕೆ ಶ್ರೀವಾದಿರಾಜರು ಮಹಾರಾಜನನ್ನು ಹಾಗೂ ಆತನ ಪರಿವಾರವನ್ನು ಕರೆದೊಯ್ದರು.ಅಲ್ಲೊಂದು ಕರಿದಾದ ಬಂಡೆಗೆ ಶ್ರೀವಾದಿರಾಜರು ತೀರ್ಥ ಪ್ರೋಕ್ಷಿಸಿದರು.ಶ್ರೀವಾದಿರಾಜರ ತೀರ್ಥವು ಬಂಡೆಯ ಮೇಲೆ ಬೀಳುತ್ತಿದ್ದಂತೆ ಬೃಹತ್ ಬಂಡೆಯು ಲೀಲಾಜಾಲವಾಗಿ ಬದಿಗೆ ಸರಿಯಿತು.ಅಲ್ಲೊಂದು ಗುಹೆ ಇತ್ತು.ಆ ಗುಹೆಯಲ್ಲಿ ಅಪಾರ ಮುತ್ತು, ರತ್ನ, ವಜ್ರ,ವೈಢೂರ್ಯ ಸ್ವರ್ಣಾಭರಣಗಳ ಬಹುದೊಡ್ಡ ಖಜಾನೆಯೇ ಇತ್ತು.ಮಹಾರಾಜ ಬೆರಗಾದ.ಆ ಗುಹೆಯಲ್ಲಿ ಎಲ್ಲೆಂದರಲ್ಲಿ ಹರಡಿದ್ದ ಒಡವೆಗಳ ರಾಶಿ ಕಂಡು ಮೂಕವಿಸ್ಮಿತ ನಾದ ಶ್ರೀವಾದಿರಾಜರುಅಂದರು.

“ಇದು ತ್ರೇತಾಯುಗದಲ್ಲಿ ವಾಲಿ ಸುಗ್ರೀವರ ಅರಮನೆಯಾಗಿತ್ತು.ನಿನ್ನ ಮಂತ್ರಬಲದಿಂದ ಇದು ನಿನಗೆ ಪ್ರಾಪ್ತವಾಗಿದೆ. ನಿನಗೆ ಸಾಮ್ರಾಜ್ಯ ನಡೆಸಲು ಅವಶ್ಯಕವಿರುವ ದ್ರವ್ಯಗಳಷ್ಟನ್ನು ಮಾತ್ರ ಸ್ವೀಕರಿಸು”ಎಂದು ಅರಸನಿಗೆ ಸೂಚಿಸಿದರು. ಆದರೆ ಅರಸನು ಶ್ರೀವಾದಿರಾಜರಿಗೆ ಮೊದಲು ಸ್ವೀಕರಿಸುವಂತೆ ಬೇಡಿಕೊಂಡ.ಆದರೆ ವೈರಾಗ್ಯಭರಣಭೂಷಿತರಾದ ಶ್ರೀವಾದಿರಾಜರು ಅಲ್ಲಿನ ಪೆಟ್ಟಿಗೆಯೊಂದರಲ್ಲಿದ್ದ ವಾಲಿಯು ಪೂಜಿಸುತ್ತಿದ್ದ ಶ್ರೀವಿಠಲಪ್ರತಿಮೆಯನ್ನು ಹಾಗೂ ಸುಗ್ರೀವನು ಆರಾಧಿಸುತ್ತಿದ್ದ ಶ್ರೀರಾಮದೇವರ ಪ್ರತಿಮೆಯನ್ನು ತಮ್ಮ ನಿತ್ಯ ಪೂಜೆಗಾಗಿ ಸ್ವೀಕರಿಸಿದರು.

ಅರಸನು ಸಾಮ್ರಾಜ್ಯ ನಡೆಸಲು ಅವಶ್ಯವಿರುವ ಅಸಂಖ್ಯ ದ್ರವ್ಯಗಳನ್ನು ಸ್ವೀಕರಿಸಿದ. ಶ್ರೀವಾದಿರಾಜರು ತಮ್ಮ ದಿವ್ಯಶಕ್ತಿಯಿಂದ ಮತ್ತೆ ಆ ಬೃಹತ್ ಬಂಡೆಯನ್ನು ಸರಿಸಿ ಗುಹೆಯನ್ನು ಮುಚ್ಚಿ ಯಥಾಸ್ಥಿತಿಗೆ ತಂದು ಸಂಪೂರ್ಣ ಅದೃಶ್ಯಗೊಳಿಸಿದರು. ಮಹಾರಾಜ ಅರಮನೆಗೆ ಹಿಂದಿರುಗಿದ. ಶ್ರೀಕೃಷ್ಣದೇವರಾಯನಿಗೆ ಶ್ರೀಶಗುಣದರ್ಪಣ ಕೃತಿಯ ಮಹಿಮೆಯ ಅರಿವಾಯಿತು. ಸಾಮ್ರಾಜ್ಯವನ್ನು ಮತ್ತೆ ವೈಭವದಿಂದ ಮುನ್ನಡೆಸಿದನು.ಶ್ರೀವಾದಿರಾಜರ ಸಹಾಯಕ್ಕೆ ಮನಸೋತ ಮಹಾರಾಜನು ಉಡುಪಿಯಲ್ಲಿ ಕೆಲವರ್ಷಗಳಲ್ಲೇ ನಡೆಯಲಿರುವ ಶ್ರೀವಾದಿರಾಜರ ದ್ವೈ ವಾರ್ಷಿಕ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಕೊಡುಗೆ ನೀಡುವುದಾಗಿ ಶ್ರೀವಾದಿರಾಜರಿಗೆ ತಿಳಿಸಿದ್ದ.ದುರದೃಷ್ಟವಶಾತ್ ಅದಕ್ಕೂ ಮೊದಲೇ ಶ್ರೀಕೃಷ್ಣದೇವರಾಯ ತೀರಿಕೊಂಡ.ಆದರೆ ಮಹಾರಾಜನ ವಂಶಸ್ಥನಾದ ಅಚ್ಯುತರಾಯ ಅರಸನು ಶ್ರೀವಾದಿರಾಜರ ಪರ್ಯಾಯ ಕಾಲದಲ್ಲಿ ಆಗಮಿಸಿ ವಿಶೇಷ ಕೊಡುಗೆಗಳನ್ನು ಸೇವೆಗಳನ್ನು ಸಲ್ಲಿಸಿ ಶ್ರೀಕೃಷ್ಣದೇವರ ಶ್ರೀವಾದಿರಾಜರ ವಿಶೇಷ ಅನುಗ್ರಹಕ್ಕೆ ಪಾತ್ರನಾದ.

ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥರಿಗೆ ಸನ್ಯಾಸಾಶ್ರಮವಾದ ಮರುವರ್ಷದಲ್ಲೇ ಅಂದರೆ ಒಂಬತ್ತರ ಹರೆಯದಲ್ಲಿ ಶ್ರೀಸೋದೆ ವಾದಿರಾಜ ಮಠದ ಕೀರ್ತಿಶೇಷ ಪರಮಪೂಜ್ಯ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರು ಶ್ರೀವಾದಿರಾಜರ ಸನ್ನಿಧಾನದಲ್ಲೇ ಶ್ರೀಶಗುಣದರ್ಪಣ ಸ್ತೋತ್ರವನ್ನು ಉಪದೇಶಿಸಿ ಅನುಗ್ರಹಿಸಿದ್ದರು.ಪ್ರತಿನಿತ್ಯ ಮೂರುಭಾರಿ ಈಮಂತ್ರವನ್ನು ಪಠಿಸುತ್ತಿದ್ದ ಶ್ರೀಶಿರೂರು ಶ್ರೀಪಾದರು ಶುಕ್ರವಾರದ ಶ್ರೀಕರಪೂಜೆಯ ಸಂದರ್ಭದಲ್ಲಿ ಶ್ರೀಸೂಕ್ತಮಂತ್ರದ ಜೊತೆ ಶ್ರೀಶಗುಣ ದರ್ಪಣ,ನಾರಾಯಣವರ್ಮ ಸ್ತೋತ್ರದೊಂದಿಗೆ ಶ್ರೀಕರದೇವರಿಗೆ ವಿಶೇಷ ಅರ್ಚನೆ ನಡೆಸಿ ಪೂಜೆ ಸಲ್ಲಿಸುತ್ತಿದ್ದರು. ಶ್ರೀಪಾದರ ಈ ವೈಭವದ ಪೂಜೆ ವೀಕ್ಷಿಸಲು ಪ್ರತೀ ಶುಕ್ರವಾರ ಸಹಸ್ರಾರು ಭಕ್ತರು ಆಗಮಿಸುತ್ತಿದ್ದರು. ಅಲ್ಲದೇ ಸಂಕಷ್ಟದಲ್ಲಿದ್ದ ಅನೇಕ ಆಸ್ತಿಕರಿಗೆ ಶ್ರೀಶಿರೂರು ಶ್ರೀಪಾದರು ಈ ಸ್ತೋತ್ರರತ್ನದ ಮಹತ್ವ ತಿಳಿಸಿ ಉಪದೇಶಿಸಿದ್ದರು.

ಆತ್ಮೀಯರೇ,
ಶ್ರೀವಾದಿರಾಜ ವಿರಚಿತ ಶ್ರೀಶಗುಣದರ್ಪಣ ಕೃತಿಯ ಪಠಣದ ಮಹಿಮೆಯಿಂದ ವಿಜಯನಗರ ಸಾಮ್ರಾಜ್ಯದ ದಾರಿದ್ರ್ಯ ನಾಶವಾಗಿ ಮತ್ತೆ ಪುನರುತ್ಥಾನಗೊಂಡ ಕಥೆಯು ಇತಿಹಾಸದ ಅನೇಕ ಕೃತಿಗಳಲ್ಲಿ ದಾಖಲಾಗಿವೆ.ಅಷ್ಟೇಅಲ್ಲ ಸಾವಿರಾರು ಭಕ್ತರು ಈ ಕೃತಿರತ್ನವನ್ನು ಭಕ್ತಿಯಿಂದ ಪಠಿಸಿ ಶ್ರೀದೇವರಿಗೆ ಅರ್ಪಿಸಿ ಶ್ರೀವಾದಿರಾಜರಿಂದ ಅನುಗ್ರಹಿತರಾಗಿದ್ದಾರೆ.ಅಂದಮೇಲೆ ತಡವೇಕೆ ಎಲ್ಲರೂ ಶ್ರೀವಾದಿರಾಜರ ಆರಾಧನೆಯ ಈಪರ್ವಕಾಲದಲ್ಲಿ ತ್ರಿಕರಣಪೂರ್ವಕ ಶ್ರದ್ದಾಭಕ್ತಿಯಿಂದ ಶ್ರೀಶಗುಣದರ್ಪಣ ಸ್ತೋತ್ರ ರತ್ನವನ್ನು ನಿತ್ಯ ಪಠಿಸಲು ಆರಂಭಿಸಿ ಶ್ರೀವಾದಿರಾಜರ ಅಂತರ್ಯಾಮಿ ಶ್ರೀಲಕ್ಷ್ಮೀಹಯಗ್ರೀವ ದೇವರ ವಿಶೇಷ ಕೃಪೆಗೆ ಪಾತ್ರರಾಗೋಣ. ಶ್ರೀಭೂತರಾಜರ ಅನುಗ್ರಹ ಪಡೆಯೋಣ.

ವಿ.ಸೂ:ಇತ್ತೀಚಿನವರೆಗೂ ಇತಿಹಾಸದ ಪುಟಗಳಲ್ಲಿ ಶ್ರೀವಾದಿರಾಜರು ಶ್ರೀಶಗುಣದರ್ಪಣ ಮಂತ್ರವನ್ನು ಶ್ರೀಅಚ್ಯುತರಾಯ ಅರಸನಿಗೆ ಉಪದೇಶ ನೀಡಿದ್ದರೆಂದು ಉಲ್ಲೇಖವಿತ್ತು. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಶ್ರೀವಾದಿರಾಜರು ಶ್ರೀಶಗುಣದರ್ಪಣವನ್ನು ಶ್ರೀಕೃಷ್ಣದೇವರಾಯನಿಗೆ ಉಪದೇಶ ನೀಡಿ ಅನುಗ್ರಹಿಸಿದ್ದರು ಎಂಬುದನ್ನು ಶಾಸನಗಳು ಹಾಗೂ ಇತಿಹಾಸಕಾರರು ಧೃಢೀಕರಿಸುತ್ತಾರೆ.

IIಶ್ರೀ ಶ್ರೀಶಗುಣದರ್ಪಣ ಸ್ತೋತ್ರಂII

Iಯಾ ಸುಗಂಧಸ್ಯನಾಸಾದಿ-ನವದ್ವಾರಾಽಖಿಲೇನ ಯಾ |
ದುರಾಧರ್ಷಾ ಸರ್ವಸಸ್ಯೋದಯಾರ್ಥಂ ಯಾ ಕರೀಷಿಣೀ || ೧ ||

ಯಾ ನಿತ್ಯಪುಷ್ಟಾ ಸರ್ವಾಂಗೈಃ ಸೌಂದರ್ಯಾದಿಗುಣೈರಪಿ |
ಈಶ್ವರೀಂ ಸರ್ವಭೂತಾನಾಂ ತಾಮಿಹೋಪಹ್ವಯೇ ಶ್ರಿಯಮ್ || ೨ ||

ಮಾತರ್ಲಕ್ಷ್ಮಿ ನಮಸ್ತುಭ್ಯಂ ಮಾಧವಪ್ರಿಯಮಾನಿನಿ |
ಯುವಾಂ ವಿಶ್ವಸ್ಯ ಪಿತರಾವಿತರೇತರಯೋಗಿನೌ || ೩ ||

ಸಮನಾ ಕಿಲ ಮಾತಸ್ತ್ವಮಮುನಾ ತತಯೋಗಿನೀ |
ಮಮ ನಾಥೇನ ದೇವಶ್ಚ ವಿಮನಾಶ್ಚ ನ ಸ ತ್ವಯಿ || ೪ ||

ತ್ವಂ ವೇದಮಾನಿನೀ ವೇದವೇದ್ಯಃ ಕಿಲ ಸ ತೇ ಪ್ರಿಯಃ |
ತ್ವಂ ಮೂಲಪ್ರಕೃತಿರ್ದೇವೀ ಸ ಚಾದಿಪುರುಷಃ ಕಿಲ || ೫ ||

ಯಸ್ತ್ವಾಮುರಸಿ ಧತ್ತೇಽಂಬ ಕೌಸ್ತುಭದ್ಯುತಿಭಾಸಿತೇ |
ಸತ್ವಾಂ ನೈವಾಚ್ಯುತಃ ಸರ್ವಸ್ಯಾತ್ಯಯೇ ಸತ್ಯಪಿ ತ್ಯಜೇತ್ || ೬ ||

ದೇವಿ ತ್ವಂ ಲಲನಾರತ್ನಂ ದೇವೋಽಸೌ ಪುರುಷೋತ್ತಮಃ |
ಯುವಾಂ ಯುವಾನೌ ಸತತಂ ಯುವಯೋರ್ನ ವಯೋಽಧಿಕಃ || ೭ ||

ತ್ವಂ ಪದ್ಮಿನೀಪದ್ಮವಕ್ತ್ರಾ ಪದ್ಮಾಕ್ಷೀ ಪದ್ಮವಿಷ್ಟರಾ |
ಪದ್ಮದ್ವಯಧರಾ ಪದ್ಮ ಕೋಶೋದ್ಯತ್ಸ್ತನಶೋಭನಾ || ೮ ||

ಪದ್ಮಹಸ್ತಾ ಪದ್ಮಪಾದಾ ಪದ್ಮನಾಭಮನಃಪ್ರಿಯಾ |
ಪದ್ಮೋದ್ಭವಸ್ಯ ಜನನೀ ಪದ್ಮಾ ಚ ವರವರ್ಣಿನೀ || ೯ ||

ಅಂಬಾಂ ಪೀತಾಂಬರಶ್ರೋಣೀಂ ಲಂಬಾಲಕಲಸನ್ಮುಖೀಂ |
ಬಿಂಬಾಧರೋಷ್ಠೀಂ ಕಸ್ತೂರಿ-ಜಂಬಾಲತಿಲಕಾಂ ಭಜೇ || ೧೦ ||

ರತ್ನೋದ್ದೀಪ್ತಸುಮಾಂಗಲ್ಯ-ಸೂತ್ರಾವೃತಶಿರೋಧರಾಮ್ |
ಕುಂಡಲಪ್ರಭಯೋದ್ದಂಡ-ಗಂಡಮಂಡಲಮಂಡಿತಾಮ್ || ೧೧ ||

ಕುಚಕಂಚುಕ ಸಂಚಾರಿ-ಹಾರನಿಷ್ಕಮನೋಹರಾಮ್ |
ಕಾಂಚೀ-ಕಿಂಕಿಣಿ-ಮಂಜೀರ-ಕಂಕಣಾದ್ಯೈರಲಂಕೃತಾಮ್ || ೧೨ ||

ಸುವರ್ಣಮಂಟಪೇ ರತ್ನಚಿತ್ರಸಿಂಹಾಸನೋತ್ತಮೇ |
ನಮಾಮಿ ಹರಿಣಾ ಸಾಕಮಿಂದಿರಾಂ ಕೃತಮಂದಿರಾಮ್ || ೧೩ ||

ಬ್ರಹ್ಮಾದ್ಯಾ ವಿಬುಧಶ್ರೇಷ್ಠಾಃ ಬ್ರಹ್ಮಾಣ್ಯಾದ್ಯಾಃ ಸುರಾಂಗನಾಃ |
ಯಾಂ ಪೂಜಯಂತೇ ಸೇವಂತೇ ಸಾ ಮಾಂ ಪಾತು ರಮಾ ಸದಾ || ೧೪ ||

ಸರ್ವಾಲಂಕಾರ ಭರಿತೌ ಸರ್ವಜ್ಞೌ ಸರ್ವಸದ್ಗುಣೌ |
ಶರ್ವಾದಿಸರ್ವಭಕ್ತೌಘ ಸರ್ವಸರ್ವಸ್ವದಾಯಕೌ || ೧೫ ||

ಸುಮುಖೌ ಸುಂದರತರೌ ಸುನಾಸೌ ಸುಖಚಿತ್ತನೂ |
ಸುರಾರಾಧಿತಪಾದಾಬ್ಜೌ ರಮಾನಾರಾಯಣೌ ಸ್ತುಮಃ || ೧೬ ||

ಚತುಷ್ಕಪರ್ದಾ ಯಾ ದೇವೀ ಚತುರಾಸ್ಯಾದಿಭಿಃ ಸ್ತುತಾ |
ಚತುರ್ವೇದೋದಿತಗುಣಾ ಚತುರ್ಮೂರ್ತೇರ್ಹರೇಃ ಪ್ರಿಯಾ || ೧೭ ||

ಘೃತಪ್ರತೀಕಾಂ ತಾಂ ನಿತ್ಯಂ ಘೃತಪೂರ್ಣಾನ್ನದಾಯಿನೀಮ್ |
ಯಥೇಷ್ಟವಿತ್ತದಾತ್ರೀಂ ಚ ನತೋಽಸ್ಮ್ಯಭಯದಾಂ ಶ್ರಿಯಮ್ || ೧೮ ||

ವಾದಿರಾಜೇನ ರಚಿತಂ ಶ್ರೀಶ್ರೀಶಗುಣದರ್ಪಣಮ್ |
ಇಮಂ ಸ್ತವಂ ಪಠನ್ ಮರ್ತ್ಯಃ ಶ್ರೀಮಾನ್ ಸ್ಯಾನ್ನಾತ್ರ ಸಂಶಯಃ || ೧೯ ||

|| ಇತಿ ಶ್ರೀವಾದಿರಾಜಯತಿಕೃತಂ ಶ್ರೀಶ್ರೀಶಗುಣದರ್ಪಣ ಸ್ತೋತ್ರಂ ಸಂಪೂರ್ಣಮ್ ||

ಬರಹ:ಪಿ.ಲಾತವ್ಯ ಆಚಾರ್ಯ ಉಡುಪಿ.

 
 
 
 
 
 
 
 
 
 
 

Leave a Reply