ಮುಳುಗುವೀರ ಈಶ್ವರ ಮಲ್ಪೆಯವರಿಗೆ ಉಡುಪಿಯ ಕನ್ನಡ, ತುಳು ವೇದಿಕೆಯಿಂದ ಸನ್ಮಾನ

ಕನ್ನಡ ಮತ್ತು ತುಳು ಸಾಹಿತ್ಯ ವೇದಿಕೆ, ಉಡುಪಿ ಜಿಲ್ಲೆ ಇದರ ಎರಡನೆಯ ವಾರ್ಷಿಕೋತ್ಸವದ ಪ್ರಯುಕ್ತ ಖ್ಯಾತ ಮುಳುಗುವೀರ ಹಾಗೂ ಸಮಾಜ ಸೇವಕ ಶ್ರೀಯುತ ಈಶ್ವರ ಮಲ್ಪೆ ಇವರನ್ನು ಸನ್ಮಾನಿಸಲಾಯಿತು. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವೇದಿಕೆಯ ಸದಸ್ಯರೆಲ್ಲರೂ ಪ್ರತಿವರ್ಷ ಹಣವನ್ನು ಒಟ್ಟುಗೂಡಿಸಿ, ಅರ್ಹರಿಗೆ ನೀಡಿ, ಆ ಮೂಲಕ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ಬಾರಿ ವೇದಿಕೆಯು ಸ್ಪಂದನ ವಿಶೇಷ ಮಕ್ಕಳ ಶಾಲೆ, ಉಪ್ಪೂರು ಮತ್ತು ಹೊಸಬೆಳಕು ವೃದ್ಧಾಶ್ರಮ ಮಣಿಪಾಲ ಈ ಎರಡು ಸಂಸ್ಥೆಗಳಿಗೆ ತಲಾ 26,000 ರೂಪಾಯಿಯನ್ನು ನೀಡಿ ಮೊದಲ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿತ್ತು

ಈ ಬಾರಿ ವೇದಿಕೆಯ ಪರವಾಗಿ ಸದಸ್ಯರು ಈಶ್ವರ ಮಲ್ಪೆಯವರ ಮನೆಗೆ ತೆರಳಿ ಅವರಿಗೆ ಅಪದ್ಬಂಧು ಎಂದು ಬಿರುದು ನೀಡಿ ಫಲಪುಷ್ಪ, ಪ್ರಶಸ್ತಿಪತ್ರ ಮತ್ತು 55,000 ರೂಪಾಯಿ ಸಹಾಯಧನವನ್ನಿತ್ತು ಸನ್ಮಾನಿಸಿದರು. ಈಶ್ವರ ಮಲ್ಪೆಯವರು ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಸಮುದ್ರ, ನದಿ, ಕೆರೆ, ಬಾವಿ, ಸರೋವರ, ಜಲಪಾತಗಳಲ್ಲಿ ನೀರುಪಾಲಾದವರ ಸುಮಾರು 350 ಕ್ಕೂ ಹೆಚ್ಚು ಹೆಣಗಳನ್ನು ನೀರಿನಾಳದಿಂದ ಹೊರತೆಗೆದಿದ್ದಾರೆ. ಅಲ್ಲದೆ ನೀರಿಗೆ ಬಿದ್ದ 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ತಮ್ಮ ಮೂವರೂ ಮಕ್ಕಳು ಅಂಗವಿಕಲರಾಗಿದ್ದು, ಅದರಲ್ಲೂ ಒಂದು ಮಗು ಮರಣವನ್ನಪ್ಪಿದರೂ ಜನರ ಸೇವೆಯಲ್ಲೇ ಸಂತೋಷ ಕಾಣುತ್ತಿದ್ದಾರೆ. ಹಗಲು ಇರುಳೆನ್ನದೆ ತಮ್ಮ ಜೀವದ ಹಂಗು ತೊರೆದು ಹೋರಾಡುವ ಇಂತಹ ನೈಜ ಜಲಯೋಧರಿಗೆ ಗೌರವ ಸಲ್ಲಬೇಕೆಂದು ವೇದಿಕೆಯ ಪ್ರಧಾನ ನಿರ್ವಾಹಕರಾದ ಶ್ರೀಮತಿ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ ತಿಳಿಸಿದರು. ವೇದಿಕೆಯ ನಿರ್ವಾಹಕರು ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಇದು ಸಾಧ್ಯವಾಯಿತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ಶ್ರೀಮತಿ ಸುಮನಾ ಹೇರ್ಳೆ, ಶ್ರೀಮತಿ ನಿಮಿತಾ ಶೆಟ್ಟಿ, ಶ್ರೀಮತಿ ವಾಸಂತಿ ಅಂಬಲಪಾಡಿ, ಶ್ರೀ ನಾಗರಾಜ ಖಾರ್ವಿ, ಶ್ರೀ ಪ್ರಭಾಕರ ಶೆಟ್ಟಿ, ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply