ಮುಸ್ಲಿಂ ಸಹೋದರರನ್ನು ಪ್ರೀತಿಸಿದ ಹಿಂದೂ ಸಹೋದರಿಯರು ಆತ್ಮಹತ್ಯೆ

ಮುಸ್ಲಿಂ ಸಮುದಾಯದ ಯುವಕರೊಂದಿಗಿನ ಪ್ರೇಮ ಸಂಬಂಧಕ್ಕೆ ಪೋಷಕರು ಒಪ್ಪಿಗೆ ನೀಡಿಲ್ಲವೆಂದು ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡು ರಾಜ್ಯದ ತಿರುಚ್ಚಿ ಜಿಲ್ಲೆಯ ವಳನಾಡು ಮೂಲದ ಗಾಯತ್ರಿ (23) ಮತ್ತು ವಿದ್ಯಾ (21) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು.

ತಿರುಪ್ಪೂರಿನ ಜವಳಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದರಿಯರು ಅದೇ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮುಸ್ಲಿಂ ಸಹೋದರನ್ನು ಪ್ರೀತಿಸುತ್ತಿದ್ದರು. ದೇವಾಲಯದ ಉತ್ಸವದಲ್ಲಿ ಭಾಗವಹಿಸಲು ಸಹೋದರಿಯರಿಬ್ಬರು ತಮ್ಮ ಊರಿಗೆ ಹಿಂದಿರುಗಿದಾಗ, ಸಹೋದರಿಯರು ಫೋನ್ ನಲ್ಲಿ ತಮ್ಮ ಪ್ರಿಯಕರರೊಂದಿಗೆ ತುಂಬಾ ಹೊತ್ತಿನವರೆಗೂ ಮಾತನಾಡುವುದನ್ನು ಕೇಳಿಸಿಕೊಂಡ ತಂದೆ ಪಿಚ್ಚೈ ಮತ್ತು ತಾಯಿ ಅಖಿಲಾಂಡೇಶ್ವರಿ ಅವರಿಗೆ ಅನುಮಾನ ಬಂದು ಹೆಣ್ಣುಮಕ್ಕಳನ್ನು ಈ ಬಗ್ಗೆ ವಿಚಾರಿಸಿದ್ದಾರೆ. 

ಆಗ ಗಾಯತ್ರಿ ಮತ್ತು ವಿದ್ಯಾ ಇಬ್ಬರೂ ತಮ್ಮ ಸಂಬಂಧಗಳನ್ನು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಪೋಷಕರು ಅಂತರ್ಧರ್ಮೀಯ ಸಂಬಂಧಗಳನ್ನು ಬಲವಾಗಿ ಆಕ್ಷೇಪಿಸಿದ್ದು, ವಾಗ್ವಾದ ನಡೆದ ನಂತರ, ಈ ಇಬ್ಬರು ಸಹೋದರಿಯರು ಮನೆಯಿಂದ ಏಕಾಏಕಿ ಹೊರಟು ಹೋಗಿದ್ದಾರೆ. 

ಸ್ಥಳೀಯ ಜಾನುವಾರು ಸಾಕಾಣಿಕೆದಾರರು ಮನೆಯ ಬಳಿಯ ಬಾವಿಯ ಬಳಿ ಎರಡು ಮೊಬೈಲ್ ಫೋನ್, ಚಪ್ಪಲಿ ಕಂಡಿದ್ದು, ಅನುಮಾನ ಬಂದು ಬಾವಿಯಲ್ಲಿ ನೋಡಿದಾಗ ಒಂದು ಶವ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸಹೋದರಿಯರ ಶವಗಳನ್ನು ಬಾವಿಯಿಂದ ಹೊರ ತೆಗೆದಿದ್ದಾರೆ .

 

ಪ್ರಾಥಮಿಕ ತನಿಖೆಯ ಪ್ರಕಾರ, ಸಹೋದರಿಯರು ತಮ್ಮ ಸಂಬಂಧಗಳಿಗೆ ಪೋಷಕರ ವಿರೋಧ ವ್ಯಕ್ತವಾದ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply