ಬ್ಯಾಂಕ್​​ಲೋನ್​ ತಂದ ಸಂಕಷ್ಟ : ಯುವತಿ ಆತ್ಮಹತ್ಯೆ

ಮಂಗಳೂರು:  ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆ . ಆದರೆ ಇಲ್ಲೊಬ್ಬ ಯುವತಿ ಮನೆಯನ್ನು ಖರೀದಿಸಿ ಅದರ ಗೃಹಪ್ರವೇಶ ನಡೆದ ಕೇವಲ ಐದೇ ದಿನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯು ಉಳ್ಳಾಲದ ಕುಂಪಲ ಚಿತ್ರಾಂಜಲಿ ನಗರದಲ್ಲಿ ಸಂಭವಿಸಿದೆ.

ವಿದೇಶದಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಅಶ್ವಿನಿ ಬಂಗೇರ ಮೂಲತಃ ಫರಂಗಿಪೇಟೆಯ ನಿವಾಸಿ. ಕುಂಪಲದ ಚಿತ್ರಾಂಜಲಿ ನಗರದಲ್ಲಿ ಸಂಗೀತಾ ಎಂಬವರಿಂದ ಅಶ್ವಿನಿ ಈ ಮನೆಯನ್ನು ಖರೀದಿ ಮಾಡಿದ್ದರು. ಕೇವಲ ಐದು ದಿನಗಳ ಹಿಂದೆಯಷ್ಟೇ ಮನೆಯ ಗೃಹ ಪ್ರವೇಶ ಕಾರ್ಯ ನಡೆಸಿದ್ದ ಅಶ್ವಿನಿ ಮನೆಯ ಟೆರೆಸ್​ನಲ್ಲಿ ಸ್ನೇಹಿತರ ಜೊತೆಯಲ್ಲಿ ಫುಲ್​ ಪಾರ್ಟಿ ಕೂಡ ಮಾಡಿದ್ದಳು ಎನ್ನಲಾಗಿದೆ.

ಜೂನ್​ ಮೂರರಂದು ಮನೆಯ ಗೃಹಪ್ರವೇಶ ಕಾರ್ಯ ನಡೆದಿತ್ತು. ಈ ಮನೆಯನ್ನು ಅಶ್ವಿನಿ ಬ್ಯಾಂಕ್​ನಲ್ಲಿ ಸಾಲ ಮಾಡಿ ಖರೀದಿ ಮಾಡಿದ್ದಳು ಎನ್ನಲಾಗಿದೆ. ಈ ಮನೆಯಲ್ಲಿ ಅಶ್ವಿನಿ ತಾಯಿ ದೇವಕಿ ಹಾಗೂ ದೊಡ್ಡಮ್ಮನ ಮಕ್ಕಳು ವಾಸವಿದ್ದರು. ನಿನ್ನೆ ರಾತ್ರಿ ಮನೆಯ ಕೋಣೆಯಲ್ಲಿಯೇ ಅಶ್ವಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸರಿಗೆ 24 ಪುಟಗಳ ಡೆತ್​ನೋಟ್​ ಸಿಕ್ಕಿದೆ.

ಡೆತ್​ನೋಟ್​ನಲ್ಲಿ ಅಶ್ವಿನಿ ಬ್ಯಾಂಕ್​ ಸಿಬ್ಬಂದಿ ನೀಡುತ್ತಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ತಾನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದು ಬ್ಯಾಂಕ್​ನಲ್ಲಿ ಸಾಲ ಪಡೆದಿದ್ದೆ. ಆದರೆ ಸಾಲ ತೀರಿಸುವ ವಿಚಾರವಾಗಿ ಬ್ಯಾಂಕ್​ನಿಂದ ಕಿರುಕುಳವಾಗಿತ್ತು ಎಂದು ಡೆತ್​ನೋಟ್​​ನಲ್ಲಿ ಅಶ್ವಿನಿ ಬರೆದುಕೊಂಡಿದ್ದಾರೆ.

ಅಲ್ಲದೇ ಪ್ರಿಯಕರನ ಹೆಸರನ್ನೂ ಡೆತ್​ನೋಟ್​ನಲ್ಲಿ ಉಲ್ಲೇಖಿಸಿರುವ ಅಶ್ವಿನಿ ಐ ಲವ್​ ಯೂ ಎಂದು ಬರೆದಿದ್ದಾಳೆ. ಅಲ್ಲದೇ ನನ್ನ ಐ ಫೋನ್​ನ್ನು ನನ್ನ ಪ್ರಿಯಕರನಿಗೆ ನೀಡಿ ಎಂದೂ ಸಹ ಬರೆದಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply