ಬಂಗಾರ ಮತ್ತು ಬೆಳ್ಳಿಯ ಆಭರಣಗಳ ಕಳವು ಪ್ರಕರಣದ ಅಂತರ್‌ ಜಿಲ್ಲಾ ಮನೆಗಳ್ಳನ ಬಂಧನ

ದಿನಾಂಕ 08/10/2023 ರಂದು 19:30 ಗಂಟೆಯಿಂದ 22:15 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದುದಾರರಾದ ಅಮ್ಮುಂಜೆ ವಿಠಲ್ದಾಸ್ ನಾಯಕ್, ಉಡುಪಿ ಇವರ ಮನೆಯ ಮುಂಬಾಗಿಲಿನ ಮತ್ತು ಮಾಸ್ಟರ್ ಬೆಡ್ ರೂಮಿನ ಬಾಗಿಲುಗಳ ಬೀಗ ಮುರಿದು, ಮನೆಯ ಬೆಡ್ ರೂಮ್ ಗಳ ಅಲ್ಮೇರಾಗಳ ಬೀಗಳನ್ನು ತೆರೆದು ಅದರಲ್ಲಿದ್ದ ಅಂದಾಜು 1,882 ಗ್ರಾಂ ತೂಕದ ಸುಮಾರು ರೂ. 66,36,300/- ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಒಟ್ಟು 7,450 ಗ್ರಾಂ ತೂಕದ ರೂ. 6,70,500/- ಮೌಲ್ಯದ ಬೆಳ್ಳಿಯ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 73,06,800/- ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 147/2023 ಕಲಂ. 457. 380 ಐಪಿಸಿರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿರುತ್ತದೆ.  

ಈ ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಮಂಜಪ್ಪ ಡಿ.ಆರ್‌, ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಪುನೀತ್‌ ಕುಮಾರ್‌ ಬಿ.ಇ. ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಹಾಗೂ ಸಿಬ್ಬಂದಿಯವರಾದ ಸತೀಶ್‌, ರಿಯಾಜ್, ವಿಶ್ವನಾಥ, ಕಿರಣ್, ಆನಂದ, ಹೇಮಂತ್‌, ಶಿವಕುಮಾರ್‌, ಓಬಳೇಶ ಮತ್ತು ಜಸ್ವ ಯೋಹಾನಾರವರು ದಿನಾಂಕ 31/10/2023ರಂದು ಪ್ರಕರಣದ ಆರೋಪಿಯಾದ ಮಂಜುನಾಥ @ ಕಲ್ಕೆರೆ ಮಂಜ, ಪ್ರಾಯ: 43 ವರ್ಷ, ಬೆಂಗಳೂರು ಎಂಬಾತನನ್ನು ಬಲಾಯಿಪಾದೆ ಜಂಕ್ಷನ್ ಬಳಿ ಈಕೊ ವಾಹನ ಸಮೇತ ವಶಕ್ಕೆ ಪಡೆದು ದಸ್ತಗಿರಿ ಮಾಡಿರುವುದಾಗಿದೆ. ಆರೋಪಿತನು ಕಳವು ಮಾಡಿದ್ದ ಒಟ್ಟು ರೂ. 31,55,930/- ಮೌಲ್ಯದ 530.909 ಗ್ರಾಂ ಚಿನ್ನಾಭರಣಗಳನ್ನು ಮತ್ತು ರೂ. 15,12,000/- ಮೌಲ್ಯದ 16.800 ಕೆ.ಜಿ ತೂಕದ ಬೆಳ್ಳಿಯ ಆಭರಣಗಳನ್ನು ಮತ್ತು ಕಳವು ಮಾಡಲು ನಕಲಿ ನಂಬ್ರ ಪ್ಲೇಟ್ ಅಳವಡಿಸಿ ಉಪಯೋಗಿಸಿದ ಸುಮಾರು ರೂ. 2,50,000/- ಮೌಲ್ಯದ ಈಕೊ ವಾಹನ, ನಕಲಿ ನಂಬ್ರ ಪ್ಲೇಟ್ ಗಳು ಮತ್ತು ಕಬ್ಬಿಣದ ರಾಡ್ ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ. ಸದ್ರಿ ಆರೋಪಿಯು ಬ್ರಹ್ಮಾವರ, ತರಿಕೇರೆ, ಅರಸಿಕೇರೆ ಮತ್ತು ಬಾಣಾವರ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡಾ ಭಾಗಿಯಾಗಿರುತ್ತಾನೆ. ಅಲ್ಲದೇ ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೇರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್‌ ಠಾಣೆಗಳಲ್ಲಿ 60ಕ್ಕೂ ಹೆಚ್ಚೂ ಪ್ರಕರಣಗಳು ದಾಖಲಾಗಿರುತ್ತವೆ.

 
 
 
 
 
 
 
 
 
 
 

Leave a Reply