ಮಂಗಳೂರು: ಮಾಸ್ಕ್‌, ಗ್ಲೌಸ್‌‌‌ ಕೊರತೆ – ಜಿಲ್ಲಾಧಿಕಾರಿಗೆ ಸಿಎಂ ಬೊಮ್ಮಾಯಿ ತರಾಟೆ

ಮಂಗಳೂರು :”ಕೊರೊನಾ ಉತ್ತುಂಗಕ್ಕೆ ಹೋದ ಸಮಯ ಯಾವ ರೀತಿ ಕೆಲಸ ಮಾಡಿದ್ದೀರೋ ಹಾಗೆ ಕೆಲಸ ಮಾಡಿ. ನೀವು ಹಾಗೇ ಕೆಲಸ ಮಾಡಿದ್ದಲ್ಲಿ ಯಾವುದೇ ಲಾಕ್‌ಡೌನ್‌ ಆಗಲ್ಲ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿ ಗಳಿಗೆ ಖಡಕ್‌ ಸೂಚನೆ ನೀಡಿದರು. ಕೊರೊನಾ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಹೋಂ ಐಸೋಲೇಶನ್‌ ಸಂಬಂಧ ವೈಜ್ಞಾನಿಕ ಕಾರಣ ನೋಡಿ ಮಾಡಿ.
ವೈದ್ಯರ ಮೂಲಕ ಆದಷ್ಟು ಸೋಂಕಿತರ ಮನವೊಲಿಸುವ ಕೆಲಸ ಮಾಡಿ. ಗ್ರಾಮೀಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರೌಂಡ್‌ ಲೆವೆಲ್‌ ಪರಿಶೀಲನೆ ನಡೆಸಿ. ಹೋಂ ಐಸೋಲೇಶನ್‌ ಇದ್ದವರಿಗೆ ದಿನದಲ್ಲಿ ಎರಡು ಬಾರಿ ತಪಾಸಣೆ ನಡೆಸಿ. ಅವರ ಮನೆ, ಕೊಠಡಿ ಹಾಗೂ ಸುತ್ತಲಿನ ವ್ಯವಸ್ಥೆಯತ್ತ ಗಮನ ಹರಿಸಿ, ಇದರೊಂದಿಗೆ ಕೊರೊನಾ ಕೇರ್‌ ಸೆಂಟರ್‌‌‌‌‌ ಕೂಡಾ ಸುವ್ಯವಸ್ಥಿತವಾಗಿರಲಿ” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಯು.ಟಿ ಖಾದರ್‌, “ಪಾಸಿಟಿವ್‌ ಆದರೆ ಕೊರೊನಾ ಕೇರ್‌ ಸೆಂಟರ್‌‌ಗೆ ಸೇರಿ ಎಂದು ಹೇಳುತ್ತೀರಿ. ಆದರೆ, ಇದು ಪ್ರಾಕ್ಟಿಕಲ್‌‌ ಆಗಿ ಮಾಡಲು ಅಸಾಧ್ಯವಾದ ಕೆಲಸ. ಈಗ ಹೋಂ ಐಸೋಲೇಶನ್‌ ಕಾರಣಕ್ಕೆ ಜನರು ಕೊರೊನಾ ಟೆಸ್ಟ್‌ ಮಾಡಿಸುತ್ತಾರೆ. ಆದರೆ, ನೀವು ಪಾಸಿಟಿವ್‌ ಬಂದರೆ ಕೊರೊನಾ ಕೇರ್‌‌ ಸೆಂಟರ್‌ ಸೇರಿಸುತ್ತೇನೆ ಅಂದರೆ ಜನರು ಟೆಸ್ಟ್‌ಗೂ ಬರುವುದಿಲ್ಲ.
ನಾವು ಅವರನ್ನು ಕರೆದು ಟೆಸ್ಟ್‌ ಮಾಡಿಸಿ ಜೈಲಿಗೆ ಹಾಕಿದ ಹಾಗೆ ಆಗುತ್ತದೆ. ಅದಕ್ಕಾಗಿ ಅವರು ಭಯದಿಂದ ಟೆಸ್ಟ್‌‌ಗೆ ಬರುವುದಿಲ್ಲ. ಈ ರೀತಿಯಾದ ಆದೇಶ ಮಾಡುವ ಮುನ್ನ ಸಾಧ್ಯತೆಗಳ ಬಗ್ಗೆ ಚರ್ಚಿಸೋಣ” ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ,” ಎಲ್ಲವನ್ನೂ ನಾವು ನೆಗೆಟಿವ್‌ ಆಗಿ ಯೋಚಿಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಲಾಕ್‌ಡೌನ್‌ ಪರಿಸ್ಥಿತಿ ಬರಬಾರದು ಎಂದು ನಾವು ಈ ಕೆಲಸ ಮಾಡುತ್ತಿದ್ದೇವೆ.
ಪಾಸಿಟಿವ್‌ ಬಂದವರ ಜೊತೆ ಲಾಕ್‌ಡೌನ್‌ ಆದರೆ ಸಾಮಾನ್ಯರಿಗೂ ಕಷ್ಟ ಆಗುತ್ತದೆ. ಹಾಗಾಗಿ ಸೋಂಕು ತಗುಲಿದಾಗ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದು ಸೂಕ್ತ” ಎಂದರು. ಕೊರೊನಾ ಕೇರ್‌ ಸೆಂಟರ್‌ಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಆರೋಪಿಸಿದ ಪರಿಷತ್‌‌ ಸದಸ್ಯ ಭೋಜೇಗೌಡ, “ನೀವು ಮನೆಯ ಬದಲು ಕೊರೊನಾ ಕೇರ್‌ ಸೆಂಟರ್‌ ಸೇರಿಸುವುದಕ್ಕೆ ಹೇಳುತ್ತೀರಿ. ಆದರೆ, ಇಲ್ಲಿ 36 ಕೊರೊನಾ ಸೆಂಟರ್‌ಗೆ 120 ಮಂದಿ ಇದ್ದಾರೆ. ಹೀಗಿರುವಾಗ, ಜನ ಹೇಗೆ ಕೊರೊನಾ ಸೆಂಟರ್‌ಗೆ ಬರುತ್ತಾರೆ?. ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಸಿಎಂ, ಎಲ್ಲದಕ್ಕೂ ಪರಿಹಾರ ಕೊಡೋಣ. ನನ್ನ ಪ್ರಗತಿ ಪರಿಶೀಲನೆ ಸ್ಟೈಲ್‌ ಸ್ವಲ್ಪ ಬೇರೆ ರೀತಿ ಇದೆ. ನಾನು ಇಲ್ಲೇ ಅದಕ್ಕೆಲ್ಲಾ ಪರಿಹಾರ ಕಂಡುಕೊಂಡೆ ಹೋಗುತ್ತೇನೆ” ಎಂದು ತಿಳಿಸಿದರು. ಈ ಸಂದರ್ಭ ಜಿಲ್ಲೆಯ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್‌, ಗ್ಲೌಸ್‌‌‌ ಕೊರತೆ ಬಗ್ಗೆ ಖಾದರ್‌ ಮಾತನಾಡಿದ್ದು, ಈ ವೇಳೆ ಸಿಎಂ ಬೊಮ್ಮಾಯಿ ದ. ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, “ಮಾಸ್ಕ್‌, ಗ್ಲೌಸ್‌‌‌ ಇಲ್ಲದೇ ಏನು ಆಡಳಿತ ಮಾಡುತ್ತೀರಾ ಇಲ್ಲಿ?.
ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ನೀಡುವುದಕ್ಕೆ ನಿಮ್ಮಿಂದ ಆಗಲ್ವಾ?. ಅಷ್ಟು ಕಾಮನ್‌ಸೆನ್ಸ್‌ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ?. ಎಸ್‌ಡಿಆರ್‌‌‌‌‌ಎಫ್‌ ಫಂಡ್‌‌‌‌‌‌ ಅದು, ಇದು ಪಡೆದು ಇವತ್ತೇ ಖರೀದಿ ಮಾಡಿ. ಬೆಂಗಳೂರು ಬಿಟ್ಟು ಎಲ್ಲವನ್ನೂ ಇಲ್ಲೇ ಖರೀದಿಸಿ ಸಂಜೆ ನನಗೆ ರಿಪೋರ್ಟ್‌ ಮಾಡಿ” ಎಂದು ಹೇಳಿದರು.
 ”ಏನಯ್ಯ, ನೀನು ಏನು ಮಾಡುತ್ತೀದ್ದೀಯಾ ಇಲ್ಲಿ ಅಂತ ಹೇಳು. ನಿನ್ನತ್ರ ಏನು ಸಮಸ್ಯೆ ಇದೆ ಅಂತ ಡಿಸಿ ಗಮನಕ್ಕೆ ತರೋಕೆ ಗೊತ್ತಿಲ್ವಾ?.  ಹಿರಿಯ ಆರೋಗ್ಯ ಅಧಿಕಾರಿಯಾಗಿದ್ದರೂ ನೀನು ಏನು ನಿದ್ದೆ ಮಾಡುತ್ತಾ ಇದ್ದೀಯಾ?. ಮಾಸ್ಕ್‌‌, ಗ್ಲೌಸ್‌‌ ಎಷ್ಟು ಕೊರತೆ ಇದೆ ಅನ್ನೋದು ಲೆಕ್ಕ ಇಡೋಕೆ ಆಗೋದಿಲ್ವಾ ನಿನಗೆ. ನಿಮ್ಮ ಯಾವುದೇ ಸಮರ್ಥನೆ ನನಗೆ ಬೇಡ. ಸಂಜೆಯೊಳಗೆ ನನಗೆ ರಿಪೋರ್ಟ್‌‌ ಕೊಡಿ” ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ ಅವರನ್ನು ಸಿಎಂ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.
 
 
 
 
 
 
 
 
 
 
 

Leave a Reply