ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಬೈಕ್ ಸವಾರಿ – ಓರ್ವನ ಬಂಧನ!

ಬ್ರಹ್ಮಾವರ ರಾ.ಹೆ. 66 ರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ, ಮಾನವ ಜೀವಕ್ಕೆ ಅಪಾಯವಾಗುವಂತೆ ಮೋಟಾರ್ ಬೈಕ್ ಓಡಿಸಿ ದುಸ್ಸಾಹಸ ಮೆರೆದ ಬೈಕ್ ಸವಾರನೊಬ್ಬನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ ಘಟನೆ ಏ. ೧೦ ರಂದು ನಡೆದಿದೆ.

ಆರೋಪಿ ಸ್ಟಂಟ್ ಮಾಸ್ಟರ್ ತನುಷ್ ಬೈಕಾಡಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಇಬ್ಬರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ವೈರಲ್ ಆದ ವಿಡಿಯೋ ಒಂದನ್ನು ಆಧರಿಸಿ ಬ್ರಹ್ಮಾವರ ಪೊಲೀಸರು ಸ್ವಪ್ರೇರಿತರಾಗಿ ಈ ಅಪಾಯಕಾರಿ ಬೈಕ್ ಸವಾರರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಏ.10ರ ರಾತ್ರಿ ಸುಮಾರು 11.30ರ ವೇಳೆಗೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂವರು ಅಪರಿಚಿತ ಯುವಕರು ಅತಿವೇಗವಾಗಿ, ಹೆಲ್ಮೆಟ್ ಧರಿಸದೆ, ನಂಬರ್ ರಹಿತ ಬೈಕ್ ನಲ್ಲಿ ಸ್ಟ್ಯಾಂಡ್ ನೆಲಕ್ಕೆ ಗೀರಿ ಬೆಂಕಿ ಬರುವಂತೆ ಅಪಾಯಕಾರಿಯಾಗಿ, ವಯಕ್ತಿಕ ಸುರಕ್ಷತೆ ಮತ್ತು ಇತರರಿಗೂ ಹಾನಿಯಾಗುವಂತೆ ಅಡ್ಡಾದಿಡ್ಡಿ ಓಡಿಸುತ್ತಾ ಸಾಹಸ ಮೆರೆಯುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಬ್ರಹ್ಮಾವರ ಪೋಲೀಸರ ಗಮನಕ್ಕೆ ಬಂದಿತು. ಈ ಯುವಕರ ಅಪಾಯಕಾರಿ ಸಾಹಸದ ಭೀಕರತೆಯನ್ನು ಮನಗಂಡ ಬ್ರಹ್ಮಾವರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಧು ಬಿ. ಇ. ಪ್ರಕರಣ ದಾಖಲಿಸಿಕೊಂಡು ಯುವಕರ ಪತ್ತೆಗೆ ತೊಡಗಿದರು. ಮೂವರಲ್ಲಿ ಇದೀಗ ತನುಷ್ ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಇನ್ನಿಬ್ಬರನ್ನೂ ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply