ತನ್ನ ಸ್ವಂತ ಊರಿನ ಬಗ್ಗೆ ಪ್ರೀತಿಯಿಂದ ಬರೆಯುವುದೇ ದೊಡ್ಡ ದೇಶಪ್ರೇಮ – ಸಾಹಿತಿ ಬಿ.ಎಂ.ರೋಹಿಣಿ

ಶಿರ್ವ:- ಇತಿಹಾಸವನ್ನು ತಿರುಚಿ ಬರೆಯುವ ಕೆಲಸಗಳು ನಿರಂತರವಾಗಿ ನಡೆಯುತ್ತವೆ. ಹಿಂದೆ ದಾರಿ ಹೋಕರಿಗೆ ಬಾಯಾರಿಕೆ ತಣಿಸಲು ಕುಡಿಯಲು ನೀರು ಕೊಡುತ್ತಿದ್ದ ಬಿಕುರು ನಾಯಕನ ಕಟ್ಟೆಯು ಬಿಕರ್ನಕಟ್ಟೆಯಾಗಿ  ಬ್ರಿಟಿಷರು ಅಪರಾಧಿಗಳನ್ನು ಗಲ್ಲಿಗೆ ಏರಿಸುವ ಮೊದಲು ನ್ಯಾಯ ತೀರ್ಮಾಣ ಮಾಡುತ್ತಿದ್ದ ಕಟ್ಟೆ ಎಂದು ಬಿಂಬಿಸಲಾಗಿದ್ದು, ಬ್ರಿಟಿಷರ ನ್ಯಾಯಕಟ್ಟೆ ಎಂದು ಫಲಕ ಹಾಕಲಾಗಿದೆ. ಇತಿಹಾಸಕಾರರು ಸುಳ್ಳುಗಳನ್ನು ಬರೆಯದೆ ಮೂಲವನ್ನು ಹುಡುಕಿ ಬರೆಯಬೇಕಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಕೃತಿ ಪ್ರಶಸ್ತಿ ಪುರಸ್ಕೃತ ಹಿರಿಯ  ಸಾಹಿತಿ ಬಿ.ಎಂ. ರೋಹಿಣಿ ಮಂಗಳೂರು ನುಡಿದರು.

ಅವರು ರವಿವಾರ ಬೆಳ್ಳೆ ಪಾಂಬೂರು ಸಮುದಾಯ ಭವನದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ಸಹಭಾಗಿತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಆರ್.ಡಿ. ಪಾಂಬೂರು ಬರೆದ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ರಾಜ್ಯ ಪ್ರಶಸ್ತಿ ಪುರಸ್ಕೃತ “ಇತಿಹಾಸದ ಬೆಳಕಿ ನಲ್ಲಿ ಬೊಳ್ಳದ ಊರು -ಬೆಳ್ಳೆಯ ಸಂಕ್ಷಿಪ್ತ ಚರಿತ್ರೆ” ದ್ವಿತೀಯ ವಿಸ್ತೃತ ಆವೃತ್ತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ತನ್ನ ಸ್ವಂತ ಊರಿನ ಬಗ್ಗೆ ಪ್ರೀತಿಯಿಂದ ಬರೆಯುವುದೇ ದೊಡ್ಡ ದೇಶ ಪ್ರೇಮವಾಗಿದೆ. ಲೇಖಕರು ಒಂದು ಊರಿನ ಬಗ್ಗೆ ಪೂರಕ ಫೋಟೊಗಳನ್ನು ಸಂಗ್ರಹಿಸಿ ಬರೆದುದು ದೊಡ್ಡ ಸಾಧನೆ ಯಾಗಿದ್ದು ಇತಿಹಾಸವನ್ನು ತಿರುಚುವ ಕಾರ್ಯ ಇಲ್ಲಿ ಆಗಿಲ್ಲ ಎಂಬುದು ಉಲ್ಲೇಖನೀಯ ಎಂದರು. 


ಕಾರ್ಯಕ್ರಮವನ್ನು ಐಕಳ ಪಾಂಪೈ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಜೆ.ಸಿ.ಮಿರಾಂಡಾ ಉದ್ಘಾಟಿಸಿ ಮಾತನಾಡುತ್ತಾ, ಪುಸ್ತಕಕ್ಕೆ ಮಿಗಿಲಾದ ಸ್ನೇಹಿತ ಇನ್ನೊಂದಿಲ್ಲ. ಕೃತಿಗಳು ಇತರರಿಗೆ ಪ್ರೇರಣೆ ನೀಡಲು  ಲೋಕಾರ್ಪಣಾ ಕಾರ್ಯಕ್ರಮ ಅಗತ್ಯ. ದೇಶದ ಸ್ವಾತಂತ್ರೋತ್ಸ್ವವದ ಅಮೃತ ಮಹೋತ್ಸವದ ಈ ಶುಭದಿನದಲ್ಲಿ ದೇಶದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು ಸೇವೆ ನೀಡಿದ ಈ ಗ್ರಾಮದ ಯೋಧರನ್ನು ಸನ್ಮಾನಿಸುತ್ತಿರುವುದು ಸ್ತುತ್ಯ ಕಾರ್ಯವಾಗಿದ್ದು, ರೈತರು ಸೈನಿಕರು ಪ್ರಾತ:ಸ್ಮರಣೀಯರು ಎಂದರು. 

ನಿವೃತ್ತ ಯೋಧರಿಗೆ ಸನ್ಮಾನ:– ದೇಶದ ಸ್ವಾತಂತ್ರೋತ್ಸ್ವವದ ಅಮೃತಮಹೋತ್ಸವದ ಸಂಭ್ರಮ ದಲ್ಲಿ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರದ ಬೆಳ್ಳೆ ಗ್ರಾಮದ ಸುಬೇದಾರ್ ಮೇಜರ್ ಕೃಷ್ಣ ಪೂಜಾರಿ, ಹವಾಲ್ದಾರ್ ರಾಜು ಹಸ್ಲರ್, ಬಿಎಸ್‌ಎಫ್, ಲ್ಯಾನ್ಸ್ ಹವಾಲ್ದಾರ್ ವಿಷ್ಣುಮೂರ್ತಿ ನಾಯಕ್‌ ರವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಸನ್ಮಾನಿಸಿದರು. 

ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಉಡುಪಿ ಎಂ.ಜಿ.ಎಂ ಕಾಲೇಜಿನ ಉಪನ್ಯಾಸಕ ಸುಚಿತ್ ಕೊಟ್ಯಾನ್ ಕೃತಿ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ ಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧಾಕರ ಪೂಜಾರಿ, ಮಂಗಳೂರು ಕರ್ನಾಟಕ ಬ್ಯಾಂಕ್ ಡಿಜಿಎಂ ಬೆಳ್ಳೆ ಗೋಪಾಲಕೃಷ್ಣ ಸಾಮಗ, ಉಡುಪಿ ಜಿಲ್ಲಾ ಕಸಾಪ ಪ್ರಧಾನಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಹಿರಿಯರಾದ ಬೆಳ್ಳೆ ಅಂಗಡಿ ಸದಾನಂದ ಶೆಣೈ,  ಸಿವಿಲ್ ಕಂಟ್ರಾಕ್ಟರ್ ಪ್ರದೀಪ್ ಕ್ವಾಡ್ರಸ್,  ಬೆಳ್ಳೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ/ಸದಸ್ಯ ಹರೀಶ್ ಶೆಟ್ಟಿ ಕಕ್ರಮನೆ, ಪಡುಬೆಳ್ಳೆ ಶ್ರೀನಾರಾಯಣಗುರು ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್. 

ಮೂಡುಬೆಳ್ಳೆ ಪ.ಪೂ.ಕಾಲೇಜಿನ ಪ್ರಾಚಾರ್ಯ ಎಡ್ವರ್ಡ್ ಲಾರ್ಸನ್ ಡಿಸೋಜ, ಗ್ರಾಮ ಪಂ.ಸದಸ್ಯ ಅಶೋಕ್, ಭಾಗವಹಿಸಿ ಶುಭ ಹಾರೈಸಿದರು. ಕಾಪು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್, ಸದಸ್ಯ ನೀಲಾನಂದ ನಾಯ್ಕ್, ಅಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

ಕೃತಿಯ ಲೇಖಕ ರಿಚಾರ್ಡ್ ದಾಂತಿ (ಆರ್.ಡಿ)ಪಾಂಬೂರು  ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿದರು.  ಶ್ರೀಕಾತ್ ನಾಯಕ್ ಸಹಕರಿಸಿದರು. ಆಕಾಶವಾಣಿ ಗಾಯಕ, ಕರ್ನಾಟಕ ಜಾನಪದ ಭೂಷಣ ಪ್ರಶಸ್ತಿ ವಿಜೇತ ಗಣೇಶ್ ಗಂಗೊಳ್ಳಿ ಇವರಿಂದ ದೇಶಭಕ್ತಿ, ಭಾವಗೀತೆ, ಜಾನಪದ ಗೀತಾಗಾಯನ ಕಾರ್ಯಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply