ಕುಂಜಾರುಗಿರಿ ಗಿರಿಬಳಗ (ರಿ) ಇದರ ಪಂಚತ್ರಿಂಶತ್ ಸಮಾರಂಭ

ಕುಂಜಾರುಗಿರಿ ಗಿರಿಬಳಗ (ರಿ) ಇದರ ಪಂಚತ್ರಿಂಶತ್ (35 ರ) ಸಮಾರಂಭವು ಆಚಾರ್ಯ ಮಧ್ವರ ಅವತಾರ ಭೂಮಿ ಪಾಜಕಕ್ಷೇತ್ರದಲ್ಲಿ ನಡೆಯಿತು. ಮಧ್ವಾಚಾರ್ಯರು ತಮ್ಮ ತಂತ್ರಸಾರದಲ್ಲಿ ಹೇಳಿದ ಪವಿತ್ರ 72 ಮಂತ್ರಗಳನ್ನು 72 ಕುಂಡಗಳಲ್ಲಿ ಸುಮಾರು130 ಋತ್ವಿಜರು ನಡೆಸಿ, ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು,ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಏಕಕಾಲದಲ್ಲಿ ಪೂರ್ಣಾಹುತಿಯು ನಡೆಯಿತು.

 ಸಾಯಂಕಾಲದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ನಿವೃತ ಯೋಧರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಅಭಿನಂದಿಸಿ, ಪ್ರತಿಯೊಂದು ಊರಿನಲ್ಲಿಯೂ ಸಂಘಟನೆಗಳನ್ನು ಮಾಡಿ ಅದರ ಮುಖೇನ ಸಮಾಜವನ್ನು ಅಭಿವೃದ್ಧಿ ಮಾಡಲು ಸಾಧ್ಯ.ಹಲವಾರು ಸಂಘಟನೆಗಳು ಸೇರಿ ಒಂದು ದೊಡ್ಡ ಸಂಘವಾದಾಗ ಸುಲಭವಾಗಿ ಅರ್ಹ ಫಲಾನುಭವಿಗಳಿಗೆ ಸಹಾಯ ಹಸ್ತ ನೀಡಲು ಸುಲಭವಾಗುತ್ತದೆ.ವಿಪ್ರ ಸಂಸ್ಕಾರವನ್ನು ರಕ್ಷಿಸಿ ಬೆಳೆಸುವುದರೊಂದಿಗೆ ಸನಾತನ ಧರ್ಮದ ಉಳಿವಿಗಾಗಿ ತೊಡಗಿಸಿಕೊಂಡ ಈ ಬಳಗವು ಸಾರ್ಥಕ 35 ಕಳೆದು ಉತ್ತಮ ಸಾಧನೆ ಮಾಡಿ ಮಾದರಿಯಾಗಿದೆ.ಈ ಬಳಗವು ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವುದರ ಮೂಲಕ ಮುಂದುವರಿಯಲಿ ಎಂದು ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. 

35 ವರ್ಷಗಳಿಂದ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ನಾಟಕ, ಯಕ್ಷಗಾನ ಮೊದಲಾದ ಕಲೆಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಗೋ ಸೇವೆ ಮಾಡಿಕೊಂಡು ಬರುತ್ತಿರುವ ಈ ಸಂಘಟನೆ ಸ್ತುತ್ಯರ್ಥವಾಗಿದೆ.ಯಾವುದೇ ಸಂಘಟನೆ ಆರಂಭಿಸುವುದು ಸುಲಭ, ಆದರೆ ಸಮಸ್ಯೆಗಳು ಎದುರಾದಾಗ ಅದನ್ನು ನಿಭಾಯಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದು ಕಷ್ಟ.ಆಚಾರ್ಯ ಮಧ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಾಡಿಗೆ ಸುಭಿಕ್ಷೆಯಾಗಿ,ಬ್ರಾಹ್ಮಣ್ಯ ಸಂಸ್ಕಾರವನ್ನು ಬೆಳೆಸುವುದರೊಂದಿಗೆ ಆಚಾರ್ಯರ ತತ್ವವನ್ನು ಅಳವಡಿಸಿ ಕೊಳ್ಳುತ್ತಾ ಗಿರಿಬಳಗವು ಮನ್ನಡೆಯಲಿ ಎಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

  ಪರಶುರಾಮ, ದುರ್ಗಾಮಾತೆ, ಜಗದ್ಗುರು ಮಧ್ವಾಚಾರ್ಯರ ತ್ರಿವೇಣಿ ಸಂಗಮದ ಉತ್ತಮ ಪರಿಸರದಲ್ಲಿ ಆರಂಭಗೊಂಡ ಈ ಸಂಸ್ಥೆಯು, ಮಧ್ವಾಚಾರ್ಯರ ವಾಣಿಯಂತೆ ಕಷ್ಟದಲ್ಲಿರುವ ವ್ಯಕ್ತಿಗೆ ಯಾವ ಸಂದರ್ಭದಲ್ಲಿ ಯಾವುದರ ಅಗತ್ಯ ಇದೆಯೋ ಅದನ್ನು ನೀಡುವುದರ ಮೂಲಕ ಸಮಾಜ ಸೇವೆ ಮಾಡುವುದು.ನಮ್ಮ ಮನೆಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೆ ಪ್ರತಿಯೊಂದು ಮನೆಯು ಸಂಸ್ಕಾರಯುತವಾದರೆ ಉತ್ತಮ ಸಮಾಜದೊಂದಿಗೆ ಒಳ್ಳೆಯ ರಾಷ್ಟ್ರವನ್ನು ಕಟ್ಟಬಹುದುದು.ಈ ನಿಟ್ಟಿನಲ್ಲಿ ಗಿರಿಬಳಗದ ಪ್ರಯತ್ನವು ಮುಂದುವರಿದು ಶ್ರೇಯಸ್ಸಾಗಲಿ ಎಂದು ಅನುಗ್ರಹಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕಾರ್ಕಳ ಸುಧಾಕರ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಭಟ್,ಕರ್ನಾಟಕ ಬ್ಯಾಂಕಿನ ಜನರಲ್ ಮೆನೇಜರ್ ರಾಜ ಬಿ.ಯಸ್ ಶುಭ ಹಾರೈಸಿದರು.ಬಳಗದ ಗೌರವಾಧ್ಯಕ್ಷರಾದ ಗೋವಿಂದ ಭಟ್ ಹಾಗೂ ಅಧ್ಯಕ್ಷರಾದ ನವೀನ ಕುಮಾರ್ ಉಪಸ್ಥಿತರಿದ್ದರು.

   ಸಭೆಯಲ್ಲಿ ಕುಂಜಾರುಗಿರಿ ಪರಿಸರದ ರಾಷ್ಟ್ರ ರಕ್ಷಣೆಯಲ್ಲಿ ವಿಶೇಷ ಸೇವೆ ಮಾಡಿದ ನಿವೃತ್ತ ಯೋಧರಾದ ಪರಶುರಾಮ ಭಟ್,ರಘುಪತಿ ಭಟ್,ಸುರೇಶ ಭಟ್,ವಾಸುದೇವ ಭಟ್,ಪ್ರಶಾಂತ ಆಚಾರ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಳಗದ ಹಿರಿಯರಾದ ವಸಂತ ಮಾಧವ ಸಾಮಗ,ಸುಬ್ರಹ್ಮಣ್ಯ ಸಾಮಗ,ಶ್ರೀನಿವಾಸ ಆಚಾರ್ಯ,ಕೃಷ್ಣರಾಜ ಉಪಾಧ್ಯಯ ಇವರಿಗೆ ಶ್ರೀಪಾದರು ಅಭಿನಂದನಾ ಪೂರ್ವಕ ಅನುಗ್ರಹ ಮಂತ್ರಾಕ್ಷತೆ ನೀಡಿದರು.ವಿಶೇಷ ಅಂಕಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,ಬೆಂಗಳೂರಿನ ಪದ್ಮಕಮಲ ಟ್ರಸ್ಟ್ ಇದರ ಸಹಯೋಗದೊಂದಿಗೆ ಅರ್ಹ 4 ಕುಟುಂಬಗಳಿಗೆ ಕ್ಷೇಮನಿಧಿಯ ವಿತರಣೆ, ವಿವಿಧ ವಿದ್ವಾಂಸರ ಲೇಖನಗಳನ್ನೊಳಗೊಂಡ “ಗಿರಿಚಂದ್ರಿಕಾ” ಸ್ಮರಣ ಸಂಚಿಕೆಯ ಬಿಡುಗಡೆ ನಡೆಯಿತು.

  ಶ್ರೀಶ ಸಾಮಗ ಹಾಗೂ ಸುಮನಸ ಭಟ್ ಇವರು ಕಾರ್ಯಕ್ರಮ ನಿರ್ವಹಿಸಿ, ಅಧ್ಯಕ್ಷರಾದ ನವೀನ್ ಕುಮಾರ ಸ್ವಾಗತಿಸಿ, ಬಳಗದ ಹಿರಿಯ ಸದಸ್ಯರಾದ ವಿದ್ವಾನ್ ರಾಘವೇಂದ್ರ ಭಟ್ ಧನ್ಯವಾದ ನೀಡಿದರು. 

   ನಂತರ ರಾಷ್ಟ್ರಭಕ್ತಿ ಪ್ರಧಾನವಾದ ಶಶಿರಾಜ್ ಕಾವೂರು ವಿರಚಿತ, ಎಲ್ಲೂರು ಗಣೇಶ್ ರಾವ್ ಇವರಿಂದ ನಿರ್ದೇಶಿಸಲ್ಪಟ್ಟ ಛತ್ರಪತಿ ಶಿವಾಜಿ ಎನ್ನುವ ಐತಿಹಾಸಿಕ ನಾಟಕವು ಬಳಗದ ಸದಸ್ಯರಿಂದ ಪ್ರದರ್ಶನ ಗೊಂಡಿತು.

 
 
 
 
 
 
 
 
 
 
 

Leave a Reply