ಸ್ವಾತಂತ್ರ್ಯ ಹೋರಾಟಗಾರ ಮಲ್ಪೆ ಶಂಕರನಾರಾಯಣ ಸಾಮಗರು~ ಅನುಪಮಾ ಕೋಟ

75ನೇ ವರ್ಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ನಮ್ಮ ಅಜ್ಜ ದಿ. ಶಂಕರನಾರಾಯಣ ಸಾಮಗರನ್ನು ನೆನಪಿಸಿಕೊಳ್ಳುವ ಮತ್ತು ಅವರೊಂದಿಗೆ ಕಳೆದ ಸವಿನೆನಪಿನ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಣ್ಣಪ್ರಯತ್ನ. ದೊಡ್ಡ ಸಾಮಗ, ಹರಿದಾಸ ಸಾಮಗರೆಂದೆ, ಖ್ಯಾತಿ ಹೊಂದಿದ, ಮಲ್ಪೆ ಶಂಕರನಾರಾಯಣ ಸಾಮಗರು ಸ್ವಾತಂತ್ರ್ಯ ಹೋರಾಟಗಾರರಾಗಿ ಜೈಲಿನಲ್ಲಿ ಕಳೆದ ಕಷ್ಟದ ದಿನಗಳನ್ನು ನಮಗೆಲ್ಲ ಎಳೆಯಾಗಿ ವಿವರಿಸುತ್ತಿದ್ದರು, ನಾವು ಚಿಕ್ಕವರಿದ್ದಾಗ  ಹರಿಕಥೆ, ಪರಿಸರಕ್ಕೆ ಸಂಬಂಧಿಸಿದ, ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ವಿಚಾರಗಳನ್ನು ವಿವರವಾಗಿ ತಿಳಿಸುತ್ತಿದ್ದರು.  
 
ಪೀರ್ ಸಾಹೇಬರ ನಾಟಕ ಕಂಪನಿ ಸೇರಿದ ನಮ್ಮ ಅಜ್ಜ ಊರೂರು ತಿರುಗಿ, ಬಳ್ಳಾರಿಗೆ ಬಂದರು.  ಸ್ವಾತಂತ್ರ್ಯ ಸಂಗ್ರಾಮ ಜೋರಾಗಿ ನಡೆಯುತ್ತಿದ್ದ ಆಗಿನ ಕಾಲದಲ್ಲಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹೆಸರನ್ನು ನೊಂದಾಯಿಸಿ ಕೊಂಡು, ಡಾ|| ನಾ.ಸು. ಹರ್ಡೀಕರರ ಗರಡಿಯಲ್ಲಿ ತರಬೇತಿ ಪಡೆದರು. ಇದು ಅವರ ರಾಮ ರಾಜ್ಯ, ರಾಷ್ಟ್ರಪ್ರೇಮಗಳಿಗೆ ಅಡಿಗಲ್ಲಾಯಿತು. ಹಲವು ಕಡೆ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರು ಬ್ರಿಟಿಷರ ಕಂಗೆಣ್ಣಿಗೆ ಗುರಿಯಾದರು.  ಇವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಕಠಿಣ ಶಿಕ್ಷೆ ಅನುಭವಿಸಿದರು. ಏಟಿನಿಂದ ಕಾಲು ಮುರಿದುಕೊಂಡು ಸುಮಾರು ಎರಡು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿ ಬಿಡುಗಡೆಯಾದರು
ಗಾಂಧಿ ವಿಚಾರಧಾರೆಗಳನ್ನು ಅಳವಡಿಸಿಕೊಂಡ   ಸಾಮಗರು ಯಕ್ಷಗಾನ ಸಾಹಿತ್ಯ ಹರಿಕಥೆಗಳಲ್ಲಿ ಹೆಚ್ಚು ನಿರತರಾದರು . ಜೈಲಿನಲ್ಲಿದ್ದ ಇನ್ನೋರ್ವ ಹಿರಿಯ ಹೋರಾಟಗಾರ ಎಸ್. ಎಸ್.  ಕಿಲ್ಲೆಯೊಂದಿಗೆ ಯಕ್ಷಗಾನ ತರಬೇತಿ ಪಡೆದರು. ನಂತರ ಊರೂರು ತೆರಳಿ ಸ್ವಾತಂತ್ರ್ಯಹೋರಾಟದ ಪ್ರಾಮುಖ್ಯತೆಯನ್ನು ಹರಿ ಕಥೆಗಳ ಮೂಲಕ ಪ್ರಚಾರ ಮಾಡಿದರು. ಸೈಕಲಿನಲ್ಲಿ ತಿರುಗುತ್ತಿದ್ದ ನಮ್ಮ ಅಜ್ಜ ಮಕ್ಕಳಿಗೆ ದಾರಿಯಲ್ಲಿ ತಿಂಡಿ ತಿನಿಸು ಗಳನ್ನು ಕೊಡುತ್ತಿದ್ದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಘನ ಭಾರತ ಸರಕಾರವು ಕೊಡವೂರು ಲಕ್ಷ್ಮೀನಗರದಲ್ಲಿ ದಾನ ರೂಪದಲ್ಲಿ ಕೊಟ್ಟಿರುವ ಬರಡು ಭೂಮಿಯನ್ನು ಜೀರ್ಣೋದ್ದಾರ ಮಾಡಿದ್ದಾರೆ. ಮಾವು, ಗೇರು, ತೆಂಗು, ಹಲಸು, ಸಾಗುವಾನಿ ತೋಟಗಳನ್ನು ಸ್ವತಹ ಮಾಡಿ ಮುಂದಿನ  ಜನಾಂಗಕ್ಕಾಗಿ ನೀಡಿದ್ದಾರೆ. ಹಸಿರೇ ಕಡಿಮೆ ಯಾಗುತ್ತಿರುವ ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರನ ಪುಣ್ಯ ಭೂಮಿಯಲ್ಲಿ ನೆಲೆಸಿರುವುದು ನಮ್ಮೆಲ್ಲರ ಸೌಭಾಗ್ಯ.
 
ಈ ಸಂದರ್ಭದಲ್ಲಿ ಅವರು ಅಹಿಂಸೆ ತತ್ವಗಳನ್ನು ಅಳವಡಿಸಿ  ಕೊಂಡ,  ನಾನು ಕಣ್ಣಾರೆ ಕಂಡ ಒಂದು ಪ್ರಸಂಗ ವನ್ನು ತಿಳಿಸುತ್ತೇನೆ. ಅವರು  ಸುಮಾರು 75ನೇ ವರ್ಷದಲ್ಲಿರುವಾಗ, ಅವರ ತೋಟಕ್ಕೆ ಹದಿಹರೆಯದ ಗಂಡು ಮಕ್ಕಳು ಗೇರು ಬೀಜಗಳನ್ನು ಕದಿಯಲು ಬರುತ್ತಿದ್ದರು.  ಬುದ್ಧಿವಾದ ಹೇಳಿ ಬಿಡುತ್ತಿದ್ದರು.  ಆದರೂ ಚಾಳಿ ಬಿಡದ ಮಕ್ಕಳು ಒಂದು ದಿನ ಅವರು ಧರಿಸಿದ ಗಾಂಧಿ ಟೋಪಿಯನ್ನು ಗೇಲಿ ಮಾಡಿದರು. ಇದನ್ನು ಸಹಿಸದ ಅವರು ಪೋಲಿಸ್ ಸ್ಟೇಷನ್ ನಲ್ಲಿ ಮಕ್ಕಳ ಬಗ್ಗೆ ದೂರು ನೀಡಿದರು. 
ಕೂಡಲೇ ಪೋಲಿಸ್ ನವರು ಗಂಡುಮಕ್ಕಳನ್ನು ಸ್ಟೇಷನ್ಗೆ ಕರೆದುಕೊಂಡು ಬಂದು, ಅಜ್ಜನನ್ನು ಕರೆದು,  ಅವರೆ ದುರಿಗೆ ತಪ್ಪಿತಸ್ಥರಿಗೆ ಹೊಡೆಯಲು ಹೋದರು.  ಇದನ್ನು ನೋಡಿದ ಅಜ್ಜನಿಗೆ ಜೈಲಿನಲ್ಲಿ ಬ್ರಿಟಿಷರಿಂದ ಅನುಭವಿಸಿದ  ಶಿಕ್ಷೆ ನೆನಪಾಗಿ,  ಕಣ್ಣೀರು ಹಾಕಿ,  ಮಕ್ಕಳನ್ನು ಶಿಕ್ಷೆ ಕೊಡದಂತೆ ಬಿಡುಗಡೆಗೊಳಿಸಲು ಪೊಲೀಸರನ್ನು ಕೇಳಿಕೊಂಡರು. ಆಗ ಸ್ವತಃ ಪೊಲೀಸರು,  ನಮ್ಮ ಅಜ್ಜನ ಬಗ್ಗೆ, ದೇಶದ ಬಗ್ಗೆ, ಅಹಿಂಸೆಯ ಬಗ್ಗೆ ಮಕ್ಕಳಿಗೆ ಬುದ್ಧಿ ಮಾತು ಹೇಳಿ ಅಜ್ಜನ ಹತ್ತಿರ ಕ್ಷಮೆ ಕೇಳುವಂತೆ ಮಾಡಿ ಬಿಡುಗಡೆಗೆ ಗೊಳಿಸಿದರು.
 
ಪ್ರತಿಯೊಂದರಲ್ಲಿ, ಎಲ್ಲರಲ್ಲಿ  ಅಹಿಂಸೆ ತತ್ವ ಅಳವಡಿಸಿ, ಸ್ವದೇಶದ ತಯಾರಿಕೆಗೆ ಬಳಕೆಗೆ,  ಸ್ವಂತ ಉದ್ಯೋಗಕ್ಕೆ ಪ್ರೋತ್ಸಾಹಿಸುತ್ತಿದ್ದರು. ಇಂದು ಆಗಸ್ಟ್ 15, 2022 ಸೋಮವಾರ, ಸನಾತನ ಪಂಚಾಂಗದ ಪ್ರಕಾರ ಅಜ್ಜ ಶಂಕರನಾರಾಯಣ ಸಾಮಗರ ಪುಣ್ಯತಿಥಿ. ಸದಾ ಸ್ಮರಣೆ ಯಲ್ಲಿರುವ ನಮ್ಮ ಅಜ್ಜನನ್ನು, ಸ್ವಾತಂತ್ರ್ಯ ಅಮೃತೋತ್ಸವದ ಈ ಶುಭ ಸಂದರ್ಭದಲ್ಲಿ ವಿಶೇಷವಾಗಿ ನಾವೆಲ್ಲರೂ ನೆನಪಿಸಿಕೊಳ್ಳುತ್ತಿದ್ದೇವೆ.
 
~ಅನುಪಮಾ  ಕೋಟ, ಲಕ್ಷ್ಮೀನಗರ, ಕೊಡವೂರು
 
 
 
 
 
 
 
 
 
 
 

Leave a Reply