ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್” ಸದಾಶಿವ ರಾವ್ ~ ರಾಘವೇಂದ್ರ ಪ್ರಭು,ಕವಾ೯ಲು

ಸ್ವಾತಂತ್ರ್ಯ ಸಂಗ್ರಾಮ ವೆಂಬ ಮಹಾನ್ ಕಾಯ೯ದಲ್ಲಿ ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ.ಈ ಸ್ವಾತಂತ್ರ್ಯವು ಹಲವಾರು ಜನರ ತ್ಯಾಗದ ಪ್ರತೀಕವಾಗಿದೆ. ಅದರಲ್ಲಿಯೂ ನಮ್ಮ ಕರಾವಳಿಯು ಕೂಡ ಈ ಕಾಯ೯ಕ್ಕೆ ಪೂಣ೯ ಸಾಥ್ ನೀಡಿತ್ತು ಇಲ್ಲಿನ ಜನರು ಕೂಡ ಗಾಂಧೀಜಿಯವರ ಕರೆಗೆ ಓಗೊಟ್ಟು ಈ ಸಂಗ್ರಾಮದಲ್ಲಿ ಹೋರಾಟ ಮಾಡಿದ್ದರು ಅವರಲ್ಲಿ ಪ್ರಮುಖರು ದಕ್ಷಿಣ ಭಾರತದ ಗಾಂಧಿ ಎಂದು ಪ್ರಸಿದ್ಧಿ ಪಡೆದವ ರಿವರು.

ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕೆ ಚಾಲನೆ ಕೊಟ್ಟ ದೇಶಪ್ರೇಮಿ. ಅವರೇ ಕಾರ್ನಾಡ್ ಸದಾಶಿವ ರಾವ್ (1881 1937). ಮಂಗಳೂರಿನ ಕಾರ್ನಾಡ್ ಎಂಬಲ್ಲಿ 1881ರಲ್ಲಿ ಜನಿಸಿದ ಸದಾಶಿವರಾವ್ “ಕಾರ್ನಾಡ್” ಎಂದೇ ಚಿರಪರಿಚಿತರು. ರಾಮಚಂದ್ರ ರಾವ್ ಹಾಗೂ ರಾಧಾಭಾಯಿ ದಂಪತಿಯ ಏಕೈಕ ಪುತ್ರರಾದ ಇವರು ಮದ್ರಾಸಿನಲ್ಲಿ ಪದವಿ ಶಿಕ್ಷಣ ಪಡೆದು, ಮುಂಬೈಯಲ್ಲಿ ಕಾನೂನು ಪದವಿ ಗಳಿಸಿ, ಮಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು.

ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಕಾರ್ನಾಡರು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಕಾಲ ಕಳೆಯಬಹುದಾಗಿತ್ತು. ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದ ಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅವರು, ತಮ್ಮ ಜೀವನದ ಕೊನೆಯವರೆಗೂ ಹೋರಾಟಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟಂತಹ ಮಹಾನುಭಾವ.

ಕಾರ್ನಾಡರು ಕೇವಲ ಸ್ವಾತಂತ್ರ್ಯ ಹೋರಾಟಕಷ್ಟೇ ತಮ್ಮ ಬದುಕನ್ನು ಮೀಸಲಾಗಿಟ್ಟಿರಲಿಲ್ಲ. ಹಿಂದುಳಿದ ಜಾತಿಗಳ ಬಗ್ಗೆ, ಮೂಢನಂಬಿಕೆ ವಿರುದ್ಧ, ಸಾಮಾಜಿಕ ಕ್ಷೇತ್ರದಲ್ಲಿನ ಅನಿಷ್ಟ ಪದ್ಧತಿಗಳ ವಿರುದ್ಧ ಸತತವಾಗಿ ಹೋರಾಟ ನಡೆಸಿದ್ದರು. ಪತ್ನಿ ಶಾಂತಾಭಾಯಿ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದರು. ಆಕೆ ಕೂಡ ಮಹಿಳಾ ಸಭಾವನ್ನು ಹುಟ್ಟು ಹಾಕಿ ಬಾಲ ವಿಧವೆಯರಿಗೆ ನೆರವು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಪಣತೊಟ್ಟಿದ್ದರು.

ಆ ಕಾಲದಲ್ಲಿ ಹಿಂದುಳಿದ ಹರಿಜನರಿಗೆ ದೇವಾಲಯ ಪ್ರವೇಶ ನಿಷೇಧಿಸಿದ್ದನ್ನು ಖಂಡಿಸಿದ ಕಾರ್ನಾಡ್, ಅವರನ್ನು ದೇವಾಲಯದ ಒಳಕ್ಕೆ ಸೇರಿಸುವಂತೆ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಕಾಳಿ ದೇವಾಲಯಗಳಲ್ಲಿ ನೀಡು ತ್ತಿದ್ದ ಪ್ರಾಣಿ ಬಲಿಯನ್ನು ನಿಷೇಧಿಸುವಲ್ಲಿಯೂ ಸಫಲರಾಗಿದ್ದರು.

1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ರೌಲೆಟ್ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸತ್ಯಾಗ್ರಹ ನಡೆಸಿದವರು ಕಾರ್ನಾಡ್. ಆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಸ್ವಾತಂತ್ರ್ಯೋ ತ್ಸವದ ಪತಾಕೆ ಹಾರಲಾರಂಭಿಸಿತು. ಪ್ರತಿ ಗ್ರಾಮ, ಗ್ರಾಮಗಳಲ್ಲೂ ಸ್ವಾತಂತ್ರ್ಯದ ರಣಕಹಳೆ ಮೊಳಗ ತೊಡಗಿತ್ತು. ಇದರಿಂದಾಗಿ ಸದಾಶಿವರಾವ್ ಅವರ ಮನೆಯೆಂಬುದು ಕಾಂಗ್ರೆಸ್ ಕಾರ್ಯಚಟುವಟಿಕೆಯ ಕೇಂದ್ರ ಬಿಂದುವಾಯಿತು.

ಗಾಂಧೀ, ಕಸ್ತೂರ್ಬಾ, ಸಿ.ಆರ್.ದಾಸ್, ಜವಾಹರಲಾಲ್ ನೆಹರು ಸೇರಿದಂತೆ ಅಲಿ ಸಹೋದರರು ಕಾರ್ನಾಡ್ ಅವರ ಮನೆಗೆ ಭೇಟಿ ನೀಡತೊಡಗಿದ್ದರು. ಹೀಗೆ ಹುಮ್ಮಸ್ಸಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದರು. ಆದರೆ 1921ರಲ್ಲಿ ಅವರ ಏಕೈಕ ಪುತ್ರಿ ಕಿರಿಯ ವಯಸ್ಸಿನಲ್ಲೇ ಸಾವನ್ನಪ್ಪಿದ ದುರಂತ ನಡೆಯಿತು.

ಇದರಿಂದ ಜರ್ಝರಿತರಾದ ಅವರು ಅಹಮದಾಬಾದ್‌ಗೆ ತೆರಳಿ ಗಾಂಧೀ ಜತೆ ಕಾಲ ಕಳೆದಿದ್ದರು. ಅದಾಗಲೇ ಕರ್ನಾಟಕದಲ್ಲಿ ಪ್ರವಾಹದಿಂದ ಉಂಟಾದ ಅನಾಹುತವನ್ನು ಕೇಳಿದ ಅವರು ಮತ್ತೆ ದಕ್ಷಿಣ ಕನ್ನಡಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದರು.

ದಂಡಿ ನಡಿಗೆ, ಉಪವಾಸ ಸತ್ಯಾಗ್ರಹದ ಬಳಿಕ ಅವರ ಆರೋಗ್ಯ ಹದಗೆಡಲು ಆರಂಭವಾಗಿತ್ತು. ಆದರೂ 1936ರಲ್ಲಿ ಫೈಜಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದಾಗಲೇ ಅವರಿಗೆ ಜ್ವರ ವಿಪರೀತವಾಗಿ ಕಂಗೆಡಿಸಿತ್ತು. ಅಲ್ಲಿಂದ ಮುಂಬೈಗೆ ವಾಪಸ್ಸಾದ ಕಾರ್ನಾಡರು 1937 ಜನವರಿ 9ರಂದು ಸಾವನ್ನಪ್ಪಿದ್ದರು.

ತನ್ನ ಇಡೀ ಜೀವನವನ್ನೇ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟ ಕಾರ್ನಾಡರು, ತನ್ನೆಲ್ಲಾ ಸಂಪತ್ತನ್ನು ಬಡವರ, ದೀನ, ದಲಿತರ ಏಳಿಗೆಗಾಗಿ ವಿನಿಯೋಗಿಸಿದ್ದರು. ಅವರು ಸಾವನ್ನಪ್ಪಿದಾಗ ಶವಸಂಸ್ಕಾರಕ್ಕೂ ಹಣವಿರಲಿಲ್ಲವಾಗಿತ್ತು. ಆ ಕಾರಣಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ಕಾದಂಬರಿಕಾರ ದಿ.ಡಾ.ಶಿವರಾಮ ಕಾರಂತರು ಕಾರ್ನಾಡರನ್ನು “ಧರ್ಮರಾಜ” ಅಂತ ಕರೆದಿದ್ದರು.

ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಅಗತ್ಯವಿದೆ.ಸಕಾ೯ರ ಕೂಡ ಅವರ ನೆನಪು ಚಿರಸ್ಥಾಯಿ ಇರಲು ಯಾವುದಾದರೂ ಯೋಜನೆಗೆ ಅವರ ಹೆಸರು ಇಡಬೇಕು ಅಲ್ಲದೆ ಅವರ ಸಾಧನೆಯ ಅಧ್ಯಯನಕ್ಕೆ ವಿಶೇಷ ವ್ಯವಸ್ಥೆ ಮಾಡಬೇಕಾಗಿದೆ.

ನಮ್ಮ ಹತ್ತಿರದ ಊರಿನವರಾದ ಕಾನ೯ಡ್ ರವರ ಬಗ್ಗೆ ನಾವೆಲ್ಲರೂ ಅಭಿಮಾನ ಪಟ್ಟು ಅವರ ಸಾಧನೆಯ ಪ್ರಸಾರ ಮಾಡಬೇಕು. ಗಾಂಧೀಜಿಯವರಂತೆ ಬದುಕಿ ಎಲ್ಲರಿಗೂ ಮಾದರಿಯಾದ ಶ್ರೀಯುತರ ಬಗ್ಗೆ ಮತ್ತಷ್ಟು ಕಾಯ೯ಕ್ರಮಗಳು ಬರಲಿ. 75ನೇ ಈ ಸ್ವಾತಂತ್ರ್ಯದ ಈ ಶುಭಾವಸರದಲ್ಲಿ ಅವರ ನೆನಪು ಸದಾ ಕಾಡುತ್ತಿರಲಿ.

 
 
 
 
 
 
 
 
 
 
 

Leave a Reply