ಬದುಕಿನ ಪ್ರತೀ ಹಂತದ ಗುರುಗಳಿಗೊಂದು ಸಲಾಂ

ನಮ್ಮ ಬದುಕಿನ ವಿವಿಧ ಹಂತದಲ್ಲಿ ಬಹಳಷ್ಟು ಜನರಿಂದ ಬಹಳಷ್ಟು ವಿಷಯಗಳನ್ನು  ಕಲಿತಿರುತ್ತೇವೆ. ಅವರೆಲ್ಲರನ್ನೂ ನಾವೆಂದೂ  ‘ಗುರು’ ಎಂದು ಕರೆಯದೇ ಕೇವಲ ಔಪಚಾರಿಕ ಶಿಕ್ಷಣದಲ್ಲಿ(ಶಾಲೆ ಕಾಲೇಜು ಹಂತದಲ್ಲಿ) ನಮಗೆ ಕಲಿಸಿದ ಶಿಕ್ಷಕರನ್ನು ಮಾತ್ರ ಗುರು ಎಂದು ನಾವು ಕರೆಯುವ ರೂಢಿಯನ್ನು ಬೆಳೆಸಿಕೊಂಡಿದ್ದೇವೆ 

 “ಕಣ್ಣು ಕಂಡ ಮೊದಲ ದೈವ ಜನನಿ ಅಲ್ಲವೇ, ನನ್ನ ಒಡಲ ಮೊದಲ ನುಡಿಯು ಅಮ್ಮನಲ್ಲವೇ” ಎಂಬ  ಸಾಮಾಜಿಕ ಯಕ್ಷಗಾನ ಪ್ರಸಂಗದ ಒಂದು  ಪದ್ಯ ಎಷ್ಟೊಂದು ಅರ್ಥಗರ್ಭಿತವಾದುದು.  ನಾವೆಲ್ಲರೂ ನಮ್ಮ ಬದುಕಿನಲ್ಲಿ ಕಂಡ ಮೊದಲ ದೇವರೆಂದರೆ “ಅಮ್ಮ,” ಅದೇ ರೀತಿ ನಮ್ಮ  ಬಾಯಿಂದ ಬರುವ ಮೊದಲ ಶಬ್ದವೂ  “ಅಮ್ಮ”.  ತಾಯಿ ನಮ್ಮೆಲ್ಲರ ಬದುಕಿನ ಮೊದಲ  ಗುರು. ನವ ಮಾಸ ಹೊತ್ತು, ಹೆತ್ತು, ಮನೆಯ ಒಳಗಿನ ವಿಚಾರಗಳನ್ನು  ನಮಗೆ ತಿಳಿ ಹೇಳುವವಳು, ತಪ್ಪಿದಾಗ ತಿದ್ದುವವಳು ಅಮ್ಮ.
“ಮನೆಯೆ ಮೊದಲ ಪಾಠಶಾಲೆ:  ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು” ಎಂಬ ಕವಿ ವಾಣಿಯಂತೆ, ಮನೆಯೇ ನಮಗೆ ಮೊದಲ ಪಾಠಶಾಲೆ, ತಾಯಿ ನಮಗೆ ಮೊದಲ ಗುರು,  ಆದರೆ ನಾವೆಂದಿಗೂ “ಗುರು” ಎಂದು ತಿಳಿಯಲೇ ಇಲ್ಲ.  ಇನ್ನು ತಂದೆ , ಅಕ್ಕ , ಅಣ್ಣ, ಇತ್ಯಾದಿ ಸಂಬಂಧಿಕರಿಂದ   ನಾವು  ನಮ್ಮ ಪೂರ್ವಜರು ಪಾಲಿಸಿಕೊಂಡು ಬಂದ  ಆಚಾರ -ವಿಚಾರ,  ಸಂಪ್ರದಾಯಗಳನ್ನು ಕಟ್ಟು ಕಟ್ಟಳೆ ಗಳನ್ನು, ಶಿಸ್ತನ್ನು  ಕಲಿತಿರುತ್ತೇವೆ.  ಒಂದರ್ಥದಲ್ಲಿ ಅವರೂ ನಮ್ಮ ಪಾಲಿಗೆ ಗುರುಗಳೇ, ಆದರೆ ನಾವೆಂದಿಗೂ ಇವರೆಲ್ಲರನ್ನು ಗುರುಗಳೆಂದು ತಿಳಿಯಲೇ ಇಲ್ಲ.
ಔಪಚಾರಿಕ ಶಿಕ್ಷಣ ವ್ಯವಸ್ಥೆ ಅಂದರೆ ಪ್ರಾಥಮಿಕ, ಪ್ರೌಢ, ಕಾಲೇಜು ಹಂತಗಳಲ್ಲಿ ನಮಗೆ ವಿವಿಧ, ಭಾಷೆ, ವಿವಿಧ ವಿಷಯಗಳನ್ನು, ಜೀವನ ಮೌಲ್ಯಗಳನ್ನು, ಬಾಹ್ಯ ಪ್ರಪಂಚದಲ್ಲಿ ನಾವು ಹೇಗಿರಬೇಕು, ಸಮಾಜದಲ್ಲಿ ಹೇಗಿರಬೇಕು ಎಂಬ ವಿಚಾರಗಳನ್ನು ನಮಗೆ ತಿಳಿಸಿದ ಗುರುಗಳಿಗೆ ನಮೋ ಎನ್ನೋಣವೇ. ನಮ್ಮ ಮಿತ್ರರು ನಮ್ಮ  ಸಂದಿಗ್ದ ಪರಿಸ್ಥಿತಿಯಲ್ಲಿ ಸಹಾಯವನ್ನು ಮಾಡಿ ತಿಳಿ ಹೇಳಿ ದವರು ಅವರು ನಮ್ಮ ಪಾಲಿನ ಗುರುಗಳೇ. ನಾವು ಮಾಡುತ್ತಿರುವ ಉದ್ಯೋಗದ ಸ್ಥಳದಲ್ಲಿ  ನಮ್ಮ ಹಿರಿಯರಿಂದ, ಕಿರಿಯ ರಿಂದ  ನಾವು ಉದ್ಯೋಗಕ್ಕೆ ಸಂಬಂಧಿಸಿದ  ಹಲವು ವಿಚಾರಗಳನ್ನು ಕಲಿಯುತ್ತೇವೆ ಅವರೂ ನಮ್ಮ ಪಾಲಿನ ಗುರುಗಳೇ.
ಕೊನೆಯದಾಗಿ,  ನಮ್ಮ ಇತರ  ಚಟುವಟಿಕೆಗಳು ಅಂದರೆ ಸಂಗೀತ, ನಾಟ್ಯ, ಯಕ್ಷಗಾನ, ಚಿತ್ರ ಕಲೆ, ಕ್ರೀಡೆ ಇನ್ನಿತರ ಚಟುವಟಿಕೆ ಗಳಲ್ಲಿ ಹುರಿದುಂಬಿಸಿ,  ನಮಗೆ ಕಲಿಸಿದವರು ನಮ್ಮ ಗುರುಗಳೇ. ನಮ್ಮ ಉಸಿರಿರುವವರೆಗೆ ಬಹಳಷ್ಟು ವಿಚಾರಗಳನ್ನು ಬೇರೆಯವ ರಿಂದ ಕಲಿಯುತ್ತಿರುತ್ತೇವೆ, ಅವರೆಲ್ಲರಿಗೂ  ಸಲಾಂ ಹೇಳಬೇಕಾದುದು ನಮ್ಮ ಧರ್ಮ.

Leave a Reply