ವಡ್ಡರ್ಸೆ ರಘುರಾಮ‌ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ

ಕೋಟ: ಪತ್ರಿಕೆಗಳು ವಾಸ್ತವಾಂಶಗಳಿಗೆ ಒತ್ತು ನೀಡಬೇಕು ಹಾಗೂ ನೇರ ನಿಷ್ಠುರವಾಗಿ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಅವರು ಕೋಟ ಸಹಕಾರಿ ವ್ಯವಸಾಯಿಕ ಸಂಘದ ಬಿ.ಸಿ.ಹೊಳ್ಳ ಸಭಾಂಗಣದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಡಿ.17ರಂದು ನಡೆದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಪತ್ರಕರ್ತನಾದವನಿಗೆ ಎಲ್ಲ ವಿಚಾರ ಗಳನ್ನು ತಿಳಿದು ಕೊಳ್ಳುವ ಸದಭಿರುಚಿ ಇರಬೇಕು. ಆಗ ಮಾತ್ರ ಪರಿಪೂರ್ಣ ಕಾರ್ಯನಿವರ್ಹಣೆ ಸಾಧ್ಯ ಎಂದರು.

ಪತ್ರಕರ್ತ ಜೋಗಿ ಅಭಿನಂದನಾ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿಶ್ವೇಶ್ವರ ಭಟ್ ಅವರ ಕೊಡುಗೆ ಅಪಾರವಾದದ್ದು. ಈ ಕ್ಷೇತ್ರಕ್ಕೆ ಹೊಸತನ ಹಾಗೂ ನವ ಆಯಾಮ ನೀಡಿದ ಸಾಧನೆ ಇವರಿಗೆ ಸಲ್ಲಬೇಕು ಎಂದರು.

ವಡ್ಡರ್ಸೆ ಸಾಧನೆ ಗುರುತಿಸಬೇಕು: ಪತ್ರಕರ್ತ ವಿಶ್ವೇಶ್ವರ ಭಟ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರಕ್ಕೆ ವಡ್ಡರ್ಸೆ ರಘುರಾಮ ಶೆಟ್ಟರ ಕೊಡುಗೆ ಅದ್ಬುತವಾದದ್ದು. ಬ್ರಹ್ಮಾವರ ಪತ್ರಕರ್ತ ಸಂಘ ಅವರ ಹೆಸರಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ನಮ್ಮ ಸರಕಾರ ವಡ್ಡರ್ಸೆ ಹೆಸರಲ್ಲಿ ಟಿ.ಎಸ್.ಆರ್. ಮಾದರಿಯ ಪ್ರಶಸ್ತಿ ನೀಡಬೇಕು ಎಂದರು.
 ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಹಿರಿಯ ಪತ್ರಕರ್ತ ಹಾಗೂ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡ ಲಾಯಿತು.

 ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಯಶಪಾಲ್ ಸುವರ್ಣ, ಕೋಟ ಶ್ರೀನಿವಾಸ ಪೂಜಾರಿ,  ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಶೆಟ್ಟಿ ಅಲೆವೂರು, ರಜತ ಮಹೋತ್ಸವ. ಸಮಿತಿಯ ಅಧ್ಯಕ್ಷ ಮಹಮ್ಮದ್ ಶರೀಫ್, ಬೈಂದೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಂದುಕಾ ಎ.ಎಸ್, ಹೆಬ್ರಿಯ ಸುಕುಮಾರ್ ಮುನಿಯಾಲು, ಕುಂದಾಪುರದ ನಾಗರಾಜ್ ರಾಯಪ್ಪನಮಠ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಪತ್ರಕರ್ತರಾದ ಶೇಖರ್ ಅಜೆಕಾರು ಮತ್ತು ಶಶಿಧರ ಹೆಮ್ಮಣ್ಣ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಶೇಖರ ಅಜೆಕಾರು ಕುಟುಂಬದವರಿಗೆ ಆರ್ಥಿಕ ಧನಸಹಾಯ ನೀಡಲಾಯಿತು. ಶಿವಾನಂದ ತಗಡೂರು ಮತ್ತು ಜೋಗಿ ಅವರನ್ನು ಗೌರವಿಸಲಾಯಿತು. 

ತಾಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರು. ಸಮಾರಂಭದ ಸಂಚಾಲಕ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಹರೀಶ ಕಿರಣ್ ಕುಮಾರ್ ತುಂಗ ವಂದಿಸಿದರು. ಸುರೇಶ್ ಕಾರ್ಕಡ ಮತ್ತು ತನುಷ ಅವರಿಂದ ಗಾನ ವೈಭವ ಜರಗಿತು.
 
 
 
 
 
 
 
 
 
 
 

Leave a Reply