ಕೆ.ವಿ. ರಾಘವೇಂದ್ರ ಐತಾಳರಿಗೆ “ಮಲಬಾರ್ ವಿಶ್ವರಂಗ ಪುರಸ್ಕಾರ~ 2024”

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ*
ಪುರಸ್ಕೃತರು: ಶ್ರೀ ಕೆ.ವಿ. ರಾಘವೇಂದ್ರ ಐತಾಳ್, ರಂಗ ನಿರ್ದೇಶಕರು ಮುಂಬಯಿ.
ಮಲೆನಾಡಿನ ಸುಂದರ ತಾಣ *ಶಿವಮೊಗ್ಗ ಸಮೀಪದ ರಿಪ್ಪನ್ ಪೇಟೆ* ಎಂಬ ಹಳ್ಳಿಯ ಜನರೊಡನೆ ಬೆರೆತು ಅವರ ಆರೋಗ್ಯ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅವರ ಪಾಲಿಗೆ ದೇವಸ್ವರೂಪಿಯಾಗಿದ್ದ ಡಾ. ವೆಂಕಟರಮಣ ಐತಾಳ್ ಮತ್ತು ಅವರ ಪತ್ನಿ ಮಮತೆಯ ಮಡಿಲು ಶ್ರೀಮತಿ ಸರೋಜಾ ದಂಪತಿಗಳ ಮುದ್ದಿನ ಮಗ ಕಲಾ ಮಾತೆಯ ಕುವರ ಕೊಡವೂರು ವಿ ರಾಘವೇಂದ್ರ ಐತಾಳ.
ಕುಟುಂಬದವರ ದೃಷ್ಟಿಯಲ್ಲಿ ಬಣ್ಣ ಹಚ್ಚುವ ಕಾಯಕ ಕೆಳವರ್ಗದ್ದು ಅನ್ನುವ ಮನೋಭಾವ ತುಂಬಿಕೊಂಡಿದ್ದ ಕಾಲ. ಹೆತ್ತವರ ಅಭ್ಯಂತರದ ನಡುವೆಯೂ ಶಾಲಾ ಮಟ್ಟದಲ್ಲಿ ನಾಟಕ ಕ್ಷೇತ್ರದಲ್ಲಿ ಮಿಂಚಿದ ಕೋಲ್ಮಿಂಚು ಇವರು. ಇವರ ರಂಗ ಪ್ರವೇಶವೂ ಒಂದು ಆಕಸ್ಮಿಕ.
ಬಾಲ್ಯದ ದಿನವೊಂದರಲ್ಲಿ *ಟಿಪ್ಪು ಸುಲ್ತಾನ* ಎಂಬ ಟೆಂಟ್ ನಾಟಕವನ್ನು ನೋಡುತ್ತಾ ತಾಯಿಯ ಮಡಿಲಲ್ಲಿ ಮಲಗಿದ್ದ ಆ ಹತ್ತು ವರ್ಷದ ಮುದ್ದು ಕಂದ.  *ಹಟಾತ್ತಾಗಿ ಬಂದ ರಂಗದ ಯಜಮಾನ ಹೆತ್ತವರ ಅನುಮತಿ ಕೋರಿ ಮಗುವನ್ನು ರಂಗಕ್ಕೆ ಎಳೆ ತಂದಾಗ ತಬ್ಬಿಬ್ಬಾದ ಮಗುವಿನ ಮುಖದಿಂದ ಉಕ್ಕಿ ಬಂದ ಅಳುವೆ ಆ ಪಾತ್ರಕ್ಕೆ ಜೀವ ನೀಡಿದ್ದು ನೋಡುಗರ ದೃಷ್ಟಿಯಲ್ಲಿ ಮಾತ್ರ ಮನಮುಟ್ಟುವ ಪಾತ್ರವಾಗಿ ಪರಿಣಮಿಸಿತ್ತು.* ಮರುದಿನ ಎಲ್ಲರೂ ಆ ಮಗುವನ್ನು ಹೊಗಳಿದ್ದೇ ಹೊಗಳಿದ್ದು. ಈ ಆಕಸ್ಮಿಕ ಘಟನೆಯೇ ಮುಂದೆ ಆ ಬಾಲಕನ ಮನಸ್ಸಲ್ಲಿ ಹೂತು ಕೂತು ನಾಟಕ ರಂಗದ ಉತ್ತುಂಗಕ್ಕೆ ಏರಿ ಸಾಧನೆಗೈವ ಹವಣಿಕೆಯ ಏಣಿಯಾಗಿ ಪರಿಣಮಿಸಿತ್ತು.
ಶ್ರೀಯುತ ಐತಾಳರ ಬಾಲ್ಯದ ವಿದ್ಯಾಭ್ಯಾಸ ಹುಟ್ಟೂರಲ್ಲಿ ಸಾಗಿ ಪದವಿ ಪೂರ್ವ ಮತ್ತು ಬಿಕಾಂ ಪದವಿ ಸಂಪಾದಿಸಲು ಅಣ್ಣನಿದ್ದ ಊರು ಮೈಸೂರಿಗೆ ತೆರಳಬೇಕಾಗಿ ಬಂತು. ಅಲ್ಲಿ ಜೀವನದ ದಾರಿ ದುರ್ಗಮವಾಗಿ ಕಂಡರೂ ಮೈಸೂರು ಇವರ ಆಸೆಯ ಹಕ್ಕಿಗೆ ರೆಕ್ಕೆ ಪುಕ್ಕ ಮೂಡಿಸಿ ಹಾರಲು ಅನುವು ಮಾಡಿ ಕೊಟ್ಟಿತು. ಇಲ್ಲಿ ಒಂದಷ್ಟು ನಾಟಕ ರಂಗದ ಸಾಹಿತ್ಯ ಲೋಕದ ದಿಗ್ಗಜರ ಘಟಾನುಘಟಿಗಳ ಪರಿಚಯವಾಯಿತು.
ಪರಿಚಯ ಆತ್ಮೀಯತೆ ಸಲಿಗೆ ಇವರ ಏಳಿಗೆಯ ಮೆಟ್ಟಲುಗಳಾಗಿ ಕನಸುಗಳನ್ನು ಸಾಕಾರಗೊಳಿಸಲು ನೆರವಾಯ್ತು. ಈ ಪಯಣದಲ್ಲಿ ಇವರಿಗೆ ಹೆಚ್ಚು ನೆರವಾದವರು *ಇವರ SAM ಸರ್ ಯಾನೆ ಎಸ್ ಅನಂತಮೂರ್ತಿ, ಎ ಎಚ್ ಮೋಹನ್,  ನಿಡ್ವಣಯ್ಯ* ಮುಂತಾದವರು. ಈ ಕಾಲೇಜ್ ದಿನಗಳಲ್ಲಿ  ನಾಟಕದಲ್ಲಿ ಪಾತ್ರ ನಿರ್ವಹಿಸುವುದರ ಜೊತೆಗೆ *ಕುಂಟಾ ಕುಂಟಾ ಕುರುವತ್ತಿ , ಉರುಳು, ತೆರೆಗಳು* ಹೀಗೆ ಹಲವು ನಾಟಕಗಳು ಇವರ ನಿರ್ದೇಶನದ ಮೂಲಕ ರಂಗ ಪ್ರವೇಶಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಮುಂದಿನ ದಿನಗಳಲ್ಲಿ *ಗಿರೀಶ್ ಕಾರ್ನಾಡ್* ಇವರ ಪ್ರೇರಕ ಶಕ್ತಿಯಾದರು. ಅದೇ ರೀತಿ *ಕಂಬಾರರ ಆಶೀರ್ವಾದದಿಂದ* ಚೌಳೇಶ ನಾಟಕದ ನಿರ್ದೇಶನ, ಹಾಲಳ್ಳಿ ಕೃಷ್ಣ ರವರ ನೆರವಿನಿಂದ  “ಎಲ್ಲಿಗೆ ”  ಶೀರ್ಷಿಕೆಯ ನಾಟಕ ಹೀಗೆ ಹಲವು ನಾಟಕಗಳು ಇವರ ನಿರ್ದೇಶನದ ಮೂಲಕ ಇವರ ಸೃಜನಾತ್ಮಕ ಯೋಚನೆ ಚಿಂತನೆಗಳಿಗೆ ಮುನ್ನುಡಿ ಬರೆದವು. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಸಮೆಂತೋ ಸಂಸ್ಥೆಯ (ಸಮೆಂತೋ ಎಂದರೆ ಸರಸ್ವತಿಪುರಂನ ತೆಂಗಿನ ತೋಟದ ಸಂಸ್ಥೆ ಎಂದರ್ಥ. ) ಪರಿಚಯವಾಗಿ ಅಲ್ಲಿ ಹಲವು ನಾಟಕಗಳು ಇವರ ಕೈಯಲ್ಲಿ ಜೀವ ತಳೆದವು.
ಪದವಿ ಮುಗಿಸಿ ತನ್ನೂರಿಗೆ ಹಿಂದಿರುಗಿದಾಗ ಕುಂದಾಪುರದಲ್ಲಿ ಶ್ರೇಷ್ಠ ಚಲನಚಿತ್ರ *ನಿರ್ದೇಶಕ ವಿಶುಕುಮಾರ್ ರವರ ಪರಿಚಯದಿಂದ* ಚಿತ್ರವೊಂದರಲ್ಲಿ ಅಪರೂಪದಲ್ಲಿ ಬಲು ಆಸೆಯ ಒಳ್ಳೆಯ ಪಾತ್ರದ ಒಂದು ಅವಕಾಶ ದೊರಕುವುದೂ ಮತ್ತು ತಂದೆಯ ಮಿತ್ರರೊಬ್ಬರ ನೆರವಿನಿಂದ ವಿಜಯ ಬ್ಯಾಂಕ್ ನಲ್ಲಿ ಜಾಬ್ ಆಫರ್ ದೊರಕುವುದೂ ಒಟ್ಟಾದಾಗ ಆ ಸಂಧಿಗ್ದ ಪರಿಸ್ಥಿತಿಯಲ್ಲಿ ನಿರ್ಧಿಷ್ಟ ನಿರ್ಧಾರ ತೆಗೆದುಕೊಳ್ಳುವುದು ಇವರಿಗೆ ಬಹಳ ಕ್ಲಿಷ್ಟವೆನಿಸಿತು.
ಕೊನೆಗೆ ಹಿರಿಯರ ಆಶಯದಂತೆ ವೃತ್ತಿ ಅವಕಾಶವನ್ನೇ ಗಟ್ಟಿ ಮಾಡಿಕೊಂಡಾಗ ವಿಜಯ ಬ್ಯಾಂಕಿನ ವಿಜಯದ ಹಾದಿ ಮುಂಬೈ ಕಡೆಗೆ ಮುಖ ಮಾಡಿ ನಿಂತಿತ್ತು. ಕೆಲವೇ ದಿನಗಳಲ್ಲಿ ಮುಂಬೈ ಒಂದು ಕಲಾಸಾಗರ ಸಕಲ ಕಲೆಗಳ ಆಗರ ಎನ್ನುವಂತದ್ದು ಅರಿವಿಗೆ ಬಂತು.ಅಲ್ಲಿ ಬರು ಬರುತ್ತಾ ಭಾಷೆಯ ತೊಡಕಿನ ನಡುವೆಯೂ ಹೊಸ ಪರಿಸರದಲ್ಲಿ ಊರ ಕಲಾವಿದರನ್ನು ಒಟ್ಟು ಹಾಕಿ *ನಾಟ್ಯ ಕರ್ನಾಟಕ* ಎಂಬ ಕಲಾ ಸಂಸ್ಥೆಯನ್ನು ಪ್ರಾರಂಭಿಸಿ ಹಲವು ನಾಟಕಗಳನ್ನು ನಿರ್ದೇಶಿಸಿದ ಕ್ರಿಯೆಯ ನೆನಪು ಇವರನ್ನು ಇಂದಿಗೂ ಸದಾ ಹಸನಾಗಿ ಇಟ್ಟಿದೆ.
 ಈ ನಡುವೆ ಐತಾಳರು *ಗೋರೆಗಾಂವ್, ಕರ್ನಾಟಕ ಸಂಘ, ವೀರಕೇಸರಿ ಕಲಾವೃಂದ, ಮುಂಬೈ ಕರ್ನಾಟಕ ಸಂಘ* ಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ನಟನೆ ಮತ್ತು ನಿರ್ದೇಶನದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದರು.
ಜೀವನದಲ್ಲಿ ನಾಟಕರಂಗದಲ್ಲಿ ನಿರ್ದೇಶನದಲ್ಲಿ ಸಮಯ ಪಾಲನೆ, ರಂಗ ಶಿಸ್ತು ,ಬದ್ಧತೆ ಇವರ ಧ್ಯೇಯ ವಾಕ್ಯವಾಗಿತ್ತು. ಮುಂದೆ ಪ್ರಾಯ ಸರಿದಂತೆ ವ್ಯತಿರಿಕ್ತತೆಗೆ ದೇಹ ಮನಸ್ಸು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಿರ್ದೇಶನದಿಂದ ಹಿಂದೆ ಸರಿದು ಅಭಿನಯಕ್ಕೆ ಮಾತ್ರ ಹೆಚ್ಚಿನ ಒತ್ತು ಪ್ರಾಧಾನ್ಯತೆ ನೀಡತೊಡಗಿದರು.
 *ಕಲಿಯುವಿಕೆಗೆ ಕೊನೆ ಎಂಬುದಿಲ್ಲ, ಪ್ರಾಯದ ನಿರ್ಬಂಧ ವಿಲ್ಲ* ಎಂಬಂತೆ ಮುಂಬೈ ಕಲಾ ಜಗತ್ತಿನ ಕಣ್ಮಣಿಗಳಾದ  ಹೆಮ್ಮೆಯ *ಭರತ್ ಕುಮಾರ್ ಪೊಲಿಪು ಮೋಹನ್ ಮಾರ್ನಾಡು ವಿಜಯ್ ಕುಮಾರ್ ಶೆಟ್ಟಿ  ಅಹಲ್ಯಾ ಬಲ್ಲಾಳ್* ಇನ್ನೂ ಮುಂತಾದ ಅತಿರಥ ಮಹಾರಥರಂತಹ ನುರಿತ ಕಲಾವಿದರ ಗೆಳೆತನದ ಯಾದಿಯಲ್ಲಿ ನಿರ್ದೇಶನದ ನಾಟಕಗಳಲ್ಲಿ ಓರ್ವ ವಿದ್ಯಾರ್ಥಿಯಂತೆ ನಟನಾಗಿ ತನಗಿತ್ತ ಪಾತ್ರದ ಆಳವನ್ನು ಅರಿತು ಅದಕ್ಕೆ ಜೀವ ತುಂಬಿ ಪಾತ್ರವನ್ನೂ ನಾಟಕವನ್ನೂ ಗೆಲ್ಲಿಸುತ್ತಿದ್ದ ವ್ಯಕ್ತಿ ಶ್ರೀಯುತ ಐತಾಳರು.
ತನ್ನ 60 ವರ್ಷದ ಕಲಾ ಜೀವನದಲ್ಲಿ ಸಮಾಜಕ್ಕೆ ಇವರಿತ್ತ ಕೊಡುಗೆ ಅಪಾರ. ಸುಮಾರು *126 ಹೆಸರಾಂತ ನಾಟಕಗಳಲ್ಲಿ ಅಭಿನಯಿಸಿ 38 ಉತ್ತಮ ನಾಟಕಗಳನ್ನು ನಿರ್ದೇಶಿಸಿ* ಜನಮನ್ನಣೆ ಪ್ರಶಸ್ತಿಗಳನ್ನು ಬಾಚಿಕೊಂಡವರು ಶ್ರೀ ರಾಘವೇಂದ್ರ ಐತಾಳರು.
ನಾಟಕವೊಂದೇ ಅಲ್ಲದೆ ಗುಡ್ಡದ ಭೂತ,ಸ್ವಾಮಿ ಸ್ವಾಮಿ, ಹರ ಹರ ಮಹದೇವ, ತಮಿಳಿನ ಮುರುಗನ್  ಹಿಂದಿಯ ಕ್ರೈಂ ಪೆಟ್ರೋಲ್ ನಂತಹ ಕಿರುತೆರೆಯ ಚಿತ್ರಗಳಲ್ಲೂ ಚಲನಚಿತ್ರಗಳಲ್ಲೂ, ರೇಡಿಯೋ ನಾಟಕಗಳಲ್ಲೂ ತನ್ನ ಪ್ರತಿಭೆಯನ್ನು ಪ್ರಚುರ ಪಡಿಸಿದವರು ಇವರು. ಸಮಯ ಸಿಕ್ಕಾಗ ಕಂಠದಾನ ಪ್ರಕ್ರಿಯೆಯಲ್ಲೂ ತೊಡಗಿಕೊಂಡವರು. ಹಾಗಾಗಿ ಈ ಎಲ್ಲಾ ಕಲಾ ಪ್ರೌಢಿಮೆಗಳಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಇವರ ಮನೆಯ ಬಾಗಿಲು ತಟ್ಟಿದ್ದಂತೂ ನಿಜ.
ಇನ್ನು ಐತಾಳರ ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ 37 ವರ್ಷಗಳ ಕಾಲ ವಿಜಯ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸಿ ಸಹಾಯಕ ಪ್ರಬಂಧಕರಾಗಿ ನಿವೃತ್ತಿ ಕಂಡವರು ಇವರು. ಇವರ *ಅರ್ಧಾಂಗಿ ಶ್ರೀಮತಿ ಲಕ್ಷ್ಮಿ ಐತಾಳ್* ಕೂಡಾ ಬ್ಯಾಂಕ್ ಉದ್ಯೋಗಿ ಯಾಗಿದ್ದು ಕೊಂಡು ಪತಿಯ ಪ್ರತಿಭೆಗೆ ಪ್ರತಿಷ್ಠೆಗೆ ಪ್ರೋತ್ಸಾಹ ನೀಡುತ್ತಾ ಬಂದವರು ಅವರು. ವಿದ್ಯೆ ಮತ್ತು ವೃತ್ತಿಯಲ್ಲಿ ಪೂರ್ಣತೆ  ಯತ್ತ ಸಾಗುತ್ತಿರುವ ಅನಿರುದ್ಧ ಮತ್ತು ಅಭಿಜಿತ್ ಈ ದಂಪತಿಗಳ  ಹೆಮ್ಮೆಯ ಪುತ್ರರತ್ನಗಳು.
ರಂಗ ನಿರ್ದೇಶಕನಾಗಿ ರಂಗಕರ್ಮಿಯಾಗಿ ಸುಧೀರ್ಘ ಕಾಲದಿಂದ ಕಲಾ ಸೇವೆಯನ್ನು ಮಾಡುತ್ತಾ ಬಂದಿರುವ ಮುಂಬಯಿ ಕನ್ನಡಿಗ ಶ್ರೀ ಕೆ.ವಿ. ರಾಘವೇಂದ್ರ ಐತಾಳರಿಗೆ  *ಸಂಸ್ಕೃತಿ ವಿಶ್ವ ಪ್ರತಿಷ್ಠಾನ ರಿಜಿಸ್ಟರ್ಡ್ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಜಂಟಿಯಾಗಿ ದಿನಾಂಕ ಮಾರ್ಚ್ 26 ರಂದು ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ 2024 ನ್ನು ಕೊಟ್ಟು ಗೌರವಿಸಲಿದೆ.*
. …~ರಾಜೇಶ್ ಭಟ್ ಪಣಿಯಾಡಿ, ಸಂಚಾಲಕರು, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿ
 
 
 
 
 
 
 
 
 
 
 

Leave a Reply