ಪುತ್ತಿಗೆ ಮಠದ ಅಕ್ಕಿಮುಹೂರ್ತ ಸಂಪನ್ನ

ಉಡುಪಿಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯರಾದ ಪರಮಪೂಜ್ಯ ಶ್ರೀ ಶ್ರೀ   ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ನಡೆಸಲಿರುವ ಚತುರ್ಥ ಶ್ರೀ ಕೃಷ್ಣಪೂಜಾ ಪರ್ಯಾಯದ ದ್ವಿತೀಯ ಮುಹೂರ್ತವಾದ ‘ಅಕ್ಕಿಮುಹೂರ್ತ’ವು ಉಡುಪಿಯ ಪುತ್ತಿಗೆ ಮಠದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.


ಚಿತ್ರ : ಅನಂತ್ ಭಾಗವತ್

*ಶ್ರೀಪುತ್ತಿಗೆ ಮಠ ಅಕ್ಕಿ ಮುಹೂರ್ತ ಸಂಪನ್ನ*

ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಪರ್ಯಾಯ ಪೂರ್ವ ವಿಧಿಗಳಲ್ಲಿ ಎರಡನೆಯದಾದ ಅಕ್ಕಿ ಮುಹೂರ್ತ ಗುರುವಾರ ಬೆಳಿಗ್ಗೆ 8.45ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಸಂಭ್ರಮದಿಂದ ಸಂಪನ್ನಗೊಂಡಿತು.

ಪುತ್ತಿಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಡಗೂಡಿ ಮುಂದಿನ ಜ. 18ರಂದು ಸರ್ವಜ್ಞಪೀಠವೇರಿ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಚತುರ್ಥ ಪರ್ಯಾಯ ನಡೆಸಲಿದ್ದಾರೆ.
ಬೆಳಿಗ್ಗೆ ಶ್ರೀಮಠದ ಪುರೋಹಿತ ಹೆರ್ಗ ಶ್ರೀವೇದವ್ಯಾಸ ಭಟ್ ನೇತೃತ್ವದಲ್ಲಿ ಪುತ್ತಿಗೆ ಮಠದ ಉಭಯ ಯತಿಗಳ ಸಮುಪಸ್ಥಿತಿಯಲ್ಲಿ ಶ್ರೀಮಠದ ಉಪಾಸ್ಯದೇವರಾದ ವೀರವಿಠಲ ಸನ್ನಿಧಾನದಲ್ಲಿ ಸಮಷ್ಟಿ ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ಅನಂತೇಶ್ವರ ಚಂದ್ರೇಶ್ವರ ಶ್ರೀಕೃಷ್ಣ ಮುಖ್ಯಪ್ರಾಣ ದರ್ಶನಗೈದು ಪ್ರಾರ್ಥನೆ ಸಲ್ಲಿಸಲಾಯಿತು.
ಮರಳಿ ಶ್ರೀಮಠಕ್ಕೆ ಆಗಮಿಸಿ, ಚಿನ್ನದ ಪಲ್ಲಕಿಯಲ್ಲಿಟ್ಟು ಮಕರತೋರಣ, ವಾದ್ಯ- ವೇದಘೋಷ ಸಹಿತ ರಥಬೀದಿಯಲ್ಲಿ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು.

ಮಿಥುನ ಲಗ್ನ ಸುಮುಹೂರ್ತದಲ್ಲಿ ತಂಡುಲ (ಅಕ್ಕಿ) ಸಂಗ್ರಹ ವಿಧಿ ನಡೆಸಲಾಗಿದ್ದು, ವಿವಿಧ ಸಂಘಸಂಸ್ಥೆಗಳು ಹಾಗೂ ಮಹನೀಯರಿಂದ 108ಕ್ಕೂ ಅಧಿಕ ಅಕ್ಕಿಮುಡಿಗಳನ್ನು ಶ್ರೀಮಠಕ್ಕೆ ದೇಣಿಗೆಯಾಗಿ ಪಡೆಯಲಾಯಿತು.

ಬಳಿಕ ಶ್ರೀಮಠದ ವೆಬ್ ಸೈಟ್ ಬಿಡುಗಡೆ, ಓಂಪ್ರಕಾಶ ಭಟ್ ಸಂಗ್ರಹದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಗೀತಾ ಸಂದೇಶಗಳ ಸಂಗ್ರಹ `ಗೀತಾ ಅಕ್ಕಿಮುಡಿ’ ಕಿರು ಹೊತ್ತಗೆ ಅನಾವರಣ, ಉಭಯ ಶ್ರೀಪಾದರಿಂದ ಆಶೀರ್ವಚನ ನಡೆಯಿತು.

ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಮುರಲೀಧರಾಚಾರ್ಯ ಕಾರ್ಯದರ್ಶಿ ಪ್ರಸನ್ನಾಚಾರ್ಯ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕಟೀಲು ಕ್ಷೇತ್ರದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ ಮತ್ತು ವೆಂಕಟ್ರಮಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಮೂಡುಬಿದಿರೆ ಧನಲಕ್ಷ್ಮೀ ಶ್ರೀಪತಿ ಭಟ್, ಕಿನ್ನಿಗೋಳಿ ಯುಗಪುರುಷ ಭುವನಾಭಿರಾಮ ಉಡುಪ, ಆನೆಗುಡ್ಡೆ ಸೂರ್ಯನಾರಾಯಣ ಉಪಾಧ್ಯಾಯ, ಜಯಕರ ಶೆಟ್ಟಿ ಇಂದ್ರಾಳಿ, ಸಂತೋಷ ಶೆಟ್ಟಿ, ಮನೋಹರ ಶೆಟ್ಟಿ, ಅಜೆಯ ಶೆಟ್ಟಿ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply