ಖರೀದಿಗಾರರು ಮತ್ತು ಮಾರಾಟಗಾರರ ಸಮ್ಮೇಳನ

ಜಾಗತಿಕ ಮಾರುಕಟ್ಟೆಯಲ್ಲಿ ಸಸ್ಯ ಉತ್ಪನ್ನಗಳ ಮೌಲ್ಯ 85 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಔಷಧಿ ಸಸ್ಯಗಳ ಕೊಡುಗೆ 45 ಬಿಲಿಯನ್ ಡಾಲರ್. ಚೀನಾದ ನಂತರ ಅತೀ ಹೆಚ್ಚು ಮೂಲಿಕೆಗಳ ರಫ್ತು ಮಾಡುತ್ತಿರುವುದು ಭಾರತ. ನೈಸರ್ಗಿಕ ಸಂಪತ್ತು ಮತ್ತು ಅಪಾರ ಪಾರಂಪರಿಕ ಜ್ಞಾನ ಹೊಂದಿದ್ದರು ಸಹ ಈ ಕ್ಷೇತ್ರದಲ್ಲಿನ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಈ ಉಧ್ಯಮದ ಎಲ್ಲಾ ಪಾಲುದಾರರಾದ ಬೆಳೆಗರರು, ಮಾರಾಟಗಾರರು, ಸಂಗ್ರಹಿಸುವವರು ಮತ್ತು ಕೈಗಾರಿಕೆಗಳಿಗೆ ಸಂಪರ್ಕ ಕಲ್ಪಿಸುವ ವೇದಿಕೆಯನ್ನು ಒದಗಿಸುವುದು ಇಂದಿನ ಉದ್ದೇಶಗಳಲ್ಲಿ ಪ್ರಮುಖವಾದದ್ದು ಎಂದು ಶ್ರೀ ಸುದರ್ಶನ್ ಜೆ.ಎ., ಭಾ.ಅ.ಸೆ. ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ರಾಜ್ಯ, ಔಷಧಿ ಗಿಡಮೂಲಿಕ ಪ್ರಾಧಿಕಾರ ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ರಾಜ್ಯ ಔಷಧೀಯ ಗಿಡಮೂಲಿಕ ಪ್ರಾಧಿಕಾರ ಮತ್ತು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಪ್ರಾಯೋಜಿತ ಖರೀದಿಗಾರರು ಮತ್ತು ಮಾರಾಟಗಾರರ ಸಮ್ಮೇಳನವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿಯಲ್ಲಿ ದಿನಾಂಕ 07-05-2022 ರಂದು ಹಮ್ಮಿಕೊಳ್ಳಲಾಗಿತ್ತು.

ಶ್ರೀಮತಿ ಅನಿತಾ ಎಸ್. ಅರೇಕಲ್, ಭಾ.ಅ.ಸೆ. ಸದಸ್ಯ ಕಾರ್ಯದರ್ಶಿಗಳು, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅವರು ಈ ಸಂದರ್ಭದಲ್ಲಿ, ಅಶೋಕ, ಸಾರಿವ, ಅಶ್ವಗಂಧದAತಹ ಸಸ್ಯಗಳು ಅಳಿವಿನಂಚಿನಲ್ಲಿದ್ದು, ಅವುಗಳನ್ನು ಸಂರಕ್ಷಿಸುವ, ಬೆಳೆಸುವ ಹಾಗೂ ಸುಸ್ತಿರ ಬಳಕೆಯ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಕರೆಕೊಟ್ಟರು.

ಡಾ. ಮಮತಾ ಕೆ.ವಿ., ಪ್ರಾಂಶುಪಾಲರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದು ಆಯುರ್ವೇದಕ್ಕೆ ರಾಜಾಶ್ರಯ ಸಿಗುತ್ತಿದೆ. ಆದರೆ ಔಷಧೀಯ ಸಸ್ಯ ಸಂಕುಲಗಳು ನಾಶವಾಗುತ್ತಿರುವ ವಿಚಾರ ವಿಷಾದನೀಯ ಎಂದು ಹೇಳಿದರು.

ಈ ಸಭೆಯಲ್ಲಿ ಔಷಧಿ ಸಸ್ಯಗಳ ಮಾರಾಟಗಾರರು, ರೈತರು, ಕೈಗಾರಿಕ ಪ್ರತಿನಿಧಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು, ಆಯುಷ್ ಇಲಾಖಾಧಿಕಾರಿಗಳು, ಉಪಔಷಧಿ ನಿಯಂತ್ರಕರು ಮುಂತಾದ ನೂರಕ್ಕು ಅಧಿಕ ಜನರು ಭಾಗವಹಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಂಜುನಾಥ ಗೋಳಿ ಕರ್ಜೆ, ಡಾ. ಮುರಳೀಧರ್ ಬಲ್ಲಾಳ್, ಎಸ್.ಡಿ.ಎಮ್. ಆಯುರ್ವೇದ ಫಾರ್ಮಸಿ, ಶ್ರೀ ಚಂದ್ರಯ್ಯ ಆಚಾರ್, ಆಳ್ವಾಸ್ ಆಯುರ್ವೆದ ಫಾರ್ಮಸಿ, ಡಾ. ಸೌಮ್ಯಶ್ರೀ ಶರ್ಮ, ಗೋಕರ್ಣ ಮುಂತಾದವರು ಔಷಧೀಯ ಸಸ್ಯಗಳ ಬೆಳೆಸುವಿಕೆ, ನಿರ್ವಹಣೆ, ಮಾರುಕಟ್ಟೆ ಕಚ್ಚಾ ಔಷಧೀಯ ಸಸ್ಯಗಳ ಗುಣಮಟ್ಟ, ಬೇಡಿಕೆ ಮತ್ತು ಪೂರೈಕೆ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.

ರೈತರು, ಮಾರಾಟಗಾರರು ಹಾಗೂ ಆಯುಷ್ ಕಂಪೆನಿಗಳ ತಯಾರಕರು ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಉಪಾಯಗಳ ಬಗ್ಗೆ ಸಂವಾದವನ್ನು ನಡೆಸಿದರು. ಡಾ. ಪ್ರಭು, ಎಮ್.ಜೆ. ಕರ್ನಾಟಕ ಗಿಡಮೂಲಿಕ ಪ್ರಾಧಿಕಾರ ಹಾಗೂ ಡಾ. ಸುಮಾ ವಿ. ಮಲ್ಯ, ಸಹಪ್ರಾಧ್ಯಾಪಕರು, ದ್ರವ್ಯಗುಣ ವಿಭಾಗ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ವಿಚಾರ ಗೋಷ್ಟಿಯನ್ನು ಸಂಯೋಜಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ಸ್ನಾತಕೋತ್ತರ ಹಾಗೂ ಪಿಎಚ್.ಡಿ ಅಧ್ಯಯನ ಕೇಂದ್ರದ ಡೀನ್ ಡಾ. ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ., ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಾಂತ್ ಪಿ. ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply