ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಹದಿನಾಲ್ಕನೇ ಬಜೆಟ್

ಕಾಂಗ್ರೆಸ್​ನ ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಸಂಗ್ರಹದ ಒತ್ತಡದ ನಡುವೆಯೇ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ ಹದಿನಾಲ್ಕನೇ ಬಜೆಟ್​ನಲ್ಲಿ ಯಾವ ರೀತಿಯ ಸರ್ಕಸ್ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಎಡಬಿಡದೆ ಹಣಕಾಸು ಇಲಾಖೆಯ ಸಭೆ ನಡೆಸಿರುವ ಸಿಎಂ ರಾಜ್ಯ ಸರ್ಕಾರದ ಹಣಕಾಸು ಪರಿಸ್ಥಿತಿ ನಿರ್ವಹಿಸುವ ಬಗೆ ನೋಡಲು ಅರ್ಥಶಾಸ್ತ್ರಜ್ಞರು ಸಹ ಕಾತರದಿಂದಿದ್ದಾರೆ.

ಚುನಾವಣೆಗೂ ಮುನ್ನ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್​ನ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಈಗ ಎಂಟು ತಿಂಗಳ ಮಟ್ಟಿಗೆ ಹೊಸ ಬಜೆಟ್ ರೂಪಿಸುತ್ತಿದ್ದಾರೆ. ಈಗಾಗಲೇ ಮಂಡಿಸಿರುವ ಬಜೆಟ್ ಜತೆಗೆ ಸಂಪನ್ಮೂಲಕ್ಕೆ ಬೇರೆ ಬೇರೆ ಮಾರ್ಗಗಳನ್ನು ತೆರೆದುಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿಯೇ ಪ್ರಯತ್ನಗಳಾಗಿವೆ ಎಂದು ಹೇಳಲಾಗುತ್ತಿದೆ.

ಯಾವ ಇಲಾಖೆಗೂ ಅನುದಾನ ಕಡಿತ ಮಾಡದೆ, ತೆರಿಗೆ ಹೆಚ್ಚಳ ಮಾಡಿಕೊಂಡೇ ಐದು ಗ್ಯಾರಂಟಿಗಳನ್ನು ಜಾರಿಗೆ ಕೊಡಬೇಕಾಗಿರುವ ದೊಡ್ಡ ಸವಾಲು ಸಿದ್ದರಾಮಯ್ಯ ಮುಂದಿದೆ. ಇದೆಲ್ಲದರ ನಡುವೆಯೂ ಅಹಿಂದ ಛಾಪು ಮಾತ್ರ ಸಿದ್ದರಾಮಯ್ಯ ಬಿಟ್ಟುಕೊಡುತ್ತಿಲ್ಲ. ಆ ವರ್ಗಗಳಿಗೆ ಬಜೆಟ್​ನಲ್ಲಿ ಆದ್ಯತೆ ಸಿಗಲಿದೆ ಎಂದೇ ಸರ್ಕಾರದ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಶ್ವೇತಪತ್ರದಂತಿರಲಿದೆ ಬಜೆಟ್: ರಾಜ್ಯದ ಹಣಕಾಸು ಪರಿಸ್ಥಿತಿ ಭಯಾನಕವಾಗಿದೆ ಎಂಬ ಮಾತು ಸರ್ಕಾರದ ವಲಯದಲ್ಲಿ ಕೇಳಿ ಬರುತ್ತಿದೆ. ಹಿಂದಿನ ಸರ್ಕಾರ ಹಣವನ್ನೇ ಮೀಸಲಿಡದೆ ಕೋಟ್ಯಂತರ ರೂ. ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ಹೊರಡಿಸಿದೆ ಎಂಬ ದೂರುಗಳಿವೆ. ಆದ್ದರಿಂದ ರಾಜ್ಯದ ನೈಜ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಬಜೆಟ್ ಮಂಡಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ಖಚಿತಪಡಿಸಿವೆ. ಹಣಕಾಸು ಸ್ಥಿತಿಯನ್ನು ವಿವರಿಸುವ ಶ್ವೇತಪತ್ರ ಅಲ್ಲದಿದ್ದರೂ, ಅದರ ಮಾದರಿಯಲ್ಲಿಯೇ ಬಜೆಟ್ ಇರಲಿದೆ. ರಾಜ್ಯದ ಆದಾಯ ಎಷ್ಟು, ಕೇಂದ್ರಕ್ಕೆ ಎಷ್ಟು ಹೋಗುತ್ತಿದೆ, ಅಲ್ಲಿಂದ ವಾಪಸ್ ಬರುವುದರಲ್ಲಿ ಎಷ್ಟು ಕೊರತೆ ಆಗುತ್ತಿದೆ ಎಂಬುದನ್ನು ವಿವರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಎಷ್ಟಿರಲಿದೆ ಬಜೆಟ್ ಗಾತ್ರ?: ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ದಿನವೇ ಬಜೆಟ್ ಗಾತ್ರ ಹಿಗ್ಗಿಸಿಕೊಳ್ಳುವ ಮಾತನ್ನು ಹೇಳಿದ್ದರು. ಬಸವರಾಜ ಬೊಮ್ಮಾಯಿ 3.09 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಆ ಗಾತ್ರ 3.35 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗಲಿದೆ. ಅಂದರೆ 24 ಸಾವಿರ ಕೋಟಿ ರೂ.ಗಳ ಹೆಚ್ಚಿನ ಸಂಪನ್ಮೂಲ ಸಂಗ್ರಹ ಮಾಡುವ ಜವಾಬ್ದಾರಿ ಇದೆ. ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ 32,544 ಕೋಟಿ ರೂ.ಗಳ ಹೆಚ್ಚಿನ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಬೊಮ್ಮಾಯಿ ಹಾಕಿಕೊಂಡಿದ್ದರು. ಇದೀಗ ಆ ಮೊತ್ತ 56 ಸಾವಿರ ಕೋಟಿ ರೂ.ಗಳಾಗಲಿದೆ.

ರದ್ದು ಸಾಧ್ಯತೆ: ಹಿಂದಿನ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ ಕೆಲ ಯೋಜನೆಗಳನ್ನು ರದ್ದು ಮಾಡುವ ಸಾಧ್ಯತೆಗಳಿವೆ. ಒವರ್​ಲ್ಯಾಪ್ ಆಗುವಂತಹ ಕೆಲವು ಯೋಜನೆಗಳನ್ನು ರದ್ದು ಮಾಡುವ ನಿರೀಕ್ಷೆ ಇದೆ.

ತೆರಿಗೆ ಹೆಚ್ಚಳ: ಸರ್ಕಾರಕ್ಕೆ ಆದಾಯ ತರುವ ನಿರೀಕ್ಷೆ ಇರುವ ವೃತ್ತಿ ತೆರಿಗೆ ಮತ್ತು ಮನರಂಜನಾ ತೆರಿಗೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿಯೂ ಚರ್ಚೆ ನಡೆದಿದೆ.

  • 3.35 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆ ಗಾತ್ರ
  • ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಗೂ ಒತ್ತು
  • ಯಾವ ಇಲಾಖೆಗೂ ಅಭಿವೃದ್ಧಿ ವೆಚ್ಚ ಕಡಿತ ಇಲ್ಲ
  • ಇಲಾಖೆಗೆ ಒಂದು ಅಥವಾ ಎರಡು ಹೊಸ ಘೋಷಣೆ

ಬಜೆಟ್​ನಲ್ಲಿ 77,750 ಕೋಟಿ ರೂ. ಸಾಲ ಮಾಡುವ ಪ್ರಸ್ತಾಪವನ್ನು ಬೊಮ್ಮಾಯಿ ಮಾಡಿದ್ದರು. ಆಗ ರಾಜ್ಯದ ಸಾಲ 5.64 ಲಕ್ಷ ಕೋಟಿ ರೂ.ಗಳಾಗಲಿದೆ ಎಂದು ಹೇಳಿದ್ದರು. ಇದೀಗ ಸಿದ್ದರಾಮಯ್ಯ ಬಜೆಟ್ ಗಾತ್ರ ಹಿಗ್ಗಿಸಿಕೊಳ್ಳುವ ಮೂಲಕ ಸಾಲದ ಪ್ರಮಾಣ ಸಹ 7 ರಿಂದ 8 ಸಾವಿರ ಕೋಟಿ ರೂ. ಹೆಚ್ಚು ಮಾಡುತ್ತಿದ್ದು, ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯಲ್ಲಿಯೇ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊಸ ಘೋಷಣೆಗಳು?

  • ಕೃಷಿ ಭಾಗ್ಯ ಯೋಜನೆ ಮರು ಜಾರಿ
  • ಕೃಷಿ ಭಾಗ್ಯಕ್ಕೆ 200 ಕೋಟಿ ರೂ. ಮೀಸಲು
  • ಕೃಷಿ ಬೆಳೆ ವಿಮೆ ಜಾರಿಗೆ ಹಣ
  • ಸಣ್ಣ ಪ್ರಮಾಣದಲ್ಲಿ ಖಾಲಿ ಹುದ್ದೆಗಳ ಭರ್ತಿ
  • ಪಶು ಭಾಗ್ಯ ಯೋಜನೆಯೂ ಮತ್ತೆ ಆರಂಭ
  • ಎಪಿಎಂಸಿಗಳ ಸುಧಾರಣೆ
  • ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ
  • ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ 1 ಕೋಟಿ ರೂ. ಮೀಸಲು
  • ಹಿಂದುಳಿದ ವರ್ಗಗಳ ಉದ್ಯಮಿಗಳಿಗೆ 20 ಕೋಟಿ ರೂ. ತನಕ ಶೇ.6ರ ಬಡ್ಡಿದರದಲ್ಲಿ ಸಾಲ
  • ಎಸ್​ಸಿಪಿ-ಟಿಎಸ್​ಪಿ ಅನುದಾನ 34 ಸಾವಿರ ಕೋಟಿ ರೂ.ಗಳಿಗೆ ಏರಿಕೆ
  • ಪತ್ರಕರ್ತರ ಪಿಂಚಣಿ -ಠಿ;12 ಸಾವಿರಕ್ಕೆ, ಕುಟುಂಬ ಪಿಂಚಣಿ -ಠಿ;3 ರಿಂದ -ಠಿ;6 ಸಾವಿರಕ್ಕೆ ಏರಿಕೆ
  • ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗೆ ಹೊಸ ಯೋಜನೆ ಘೋಷಣೆ
  • ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ
  • ಅಹಿಂದ, ಶೋಷಿತ ವರ್ಗಗಳಿಗೆ ವಿಶೇಷ ಕಾರ್ಯಕ್ರಮಗಳ ನಿರೀಕ್ಷೆ
  • ನೀರಾವರಿ ಯೋಜನೆಗಳಿಗೆ ಒತ್ತು
  • ಎನ್​ಪಿಎಸ್ ರದ್ಧತಿ ಬಗ್ಗೆ ಭರವಸೆ ಸಾಧ್ಯತೆ

ಸಂಪನ್ಮೂಲ ಸಂಗ್ರಹ

ಗ್ಯಾರಂಟಿಗಳ ಅನುಷ್ಠಾನಕ್ಕೆ ಎಂಟು ತಿಂಗಳ ಅವಧಿಗೆ ಅಂದಾಜು 50 ಸಾವಿರ ಕೋಟಿ ರೂ.ಗಳಷ್ಟು ಮೊತ್ತ ಹೆಚ್ಚುವರಿಯಾಗಿ ಬೇಕಾಗಿದೆ. ತೆರಿಗೆ ಹೆಚ್ಚಳ, ಸೋರಿಕೆ ತಡೆ, ಬಳಸದ ಅನುದಾನ ಬಳಕೆ, ಸಾಲ ಮಾಡುವುದರ ಮೂಲಕ ತುಂಬಿಕೊಳ್ಳಲಾಗುತ್ತದೆ. ಅದೆಲ್ಲವನ್ನೂ ಬಜೆಟ್​ನಲ್ಲಿ ವಿವರಿಸಲಾಗುತ್ತದೆ. ಸಾರ್ವಜನಿಕರ ಮೇಲೆ ಹೊರೆ ಹಾಕದೆ ತೆರಿಗೆ ವ್ಯಾಪ್ತಿ ವಿಸ್ತರಣೆ ಹಾಗೂ ಸೋರಿಕೆ ತಡೆಯತ್ತ ಗಮನ ಹರಿಸಲಿದ್ದಾರೆ.

ಕಡಿತ ಇಲ್ಲ

ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಸಂಗ್ರಹ ಮಾಡುತ್ತಿದ್ದು, ಯಾವುದೇ ಇಲಾಖೆಯ ಹೊಸ ಪ್ರಸ್ತಾವನೆಗೆ ಸಿದ್ದರಾಮಯ್ಯ ಒಪ್ಪಿಲ್ಲ. ಈ ವರ್ಷ ಹೆಚ್ಚಿನ ಅನುದಾನ ಕೇಳದಂತೆ ಸಚಿವರು, ಶಾಸಕರಿಗೆ ಸೂಚನೆ ನೀಡಿದ್ದರು. ಆದರೂ ಯಾವುದೇ ಇಲಾಖೆಗೆ ಅಭಿವೃದ್ಧಿ ವೆಚ್ಚ ಕಡಿತ ಮಾಡುತ್ತಿಲ್ಲ. ಕೃಷಿ, ಹಿಂದುಳಿದ ವರ್ಗ, ಆರೋಗ್ಯ, ಶಿಕ್ಷಣದಂತಹ ಪ್ರಮುಖ ಇಲಾಖೆಗಳಲ್ಲಿ ಒಂದು ಅಥವಾ ಎರಡು ಹೊಸ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಗ್ಯಾರಂಟಿ ಮತ್ತು ಅಭಿವೃದ್ಧಿಯನ್ನು ಪರಸ್ಪರ ಪೂರಕವಾಗಿ ತೆಗೆದುಕೊಂಡು ಹೋಗುವ ನಿರೀಕ್ಷೆಯೂ ಇದೆ.

 
 
 
 
 
 
 
 
 
 
 

Leave a Reply