ರಾಜ್ಯ ಲೂಟಿಗೈದು ಕಮಿಷನ್, ಭ್ರಷ್ಟಾಚಾರ ಮೇಳೈಸಿದ ಕಾಂಗ್ರೆಸ್ ಎಟಿಎಂ ಸರಕಾರ: ಕುಯಿಲಾಡಿ

ಗ್ಯಾರಂಟಿಗಳ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ಕೇವಲ ಮೂರು-ನಾಲ್ಕು ತಿಂಗಳಲ್ಲೇ ತನ್ನ ಮುಖವಾಡವನ್ನು ಕಳಚಿ, ಲೂಟಿ ಮತ್ತು ಕಮಿಷನ್ ದಂಧೆ ಮೂಲಕ ತನ್ನ ಭ್ರಷ್ಟಾಚಾರದ ಪರಂಪರೆಯನ್ನು ಮೇಳೈಸಿಕೊಂಡು ಕರ್ನಾಟಕವನ್ನು ಕಾಂಗ್ರೆಸ್ಸಿನ ಏಟಿಎಂ ಆಗಿಸಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯ ಬಳಿ ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ನಾಯಕರು ಬಚ್ಚಿಟ್ಟ ಹಣ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿದೆ. ಗುತ್ತಿಗೆದಾರರಾದ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ಮತ್ತು ಸಂತೋಷ್ ಮನೆಯಲ್ಲಿ 45 ಕೋಟಿ ಹಾಗೂ 8 ಕೋಟಿ ಮೌಲ್ಯದ ಚಿನ್ನ ದೊರೆತಿದೆ. ಚುನಾವಣಾ ಪೂರ್ವದಲ್ಲಿ ಪ್ರಧಾನಿ ಮೋದಿಯವರು ‘ಕರ್ನಾಟಕ ಕಾಂಗ್ರೆಸ್ಸಿಗೆ ಎಟಿಎಮ್’ ಎಂದಿರುವ ಮಾತನ್ನು ಕಾಂಗ್ರೆಸಿಗರು ಅಕ್ಷರಶಃ ಸಾಬೀತುಪಡಿಸಿದ್ದಾರೆ ಎಂದರು.
ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಭ್ರಷ್ಟಾಚಾರದ ವಾಸನೆ ಬರುತ್ತಿದೆ. ಮೈಸೂರು ದಸರಾದಲ್ಲಿ ಕಲಾವಿದರಿಗೆ ಅವಕಾಶ ನೀಡಲೂ ಸಹ ಕಮಿಷನ್ ದಂಧೆ ನಡೆದಿರುವುದು ನಾಚಿಕೆಗೇಡು. ಕರ್ನಾಟಕದಲ್ಲಿ ಮುಂದಿನ ನಾಲ್ಕೂವರೆ ವರ್ಷವೂ ಈ ಸರಕಾರ ಇದ್ದರೆ, ರಾಜ್ಯವನ್ನೇ ಮಾರಾಟ ಮಾಡುವ ಸ್ಥಿತಿಯನ್ನು ಕಾಂಗ್ರೆಸ್ ತರಬಹುದು ಎಂಬ ಆತಂಕ ಇಂದು ರಾಜ್ಯದ ಜನತೆಯಲ್ಲಿದೆ ಎಂದು ತಿಳಿಸಿದರು.
ರಾಜ್ಯದ ಜನತೆ ಕಾಂಗ್ರೆಸ್ಸಿನ ಉಚಿತಗಳ ಗ್ಯಾರಂಟಿಗಳಿಗೆ ಮಾರುಹೋಗಿ ಅವಕಾಶ ನೀಡಿದರೂ, ಇಂದು ಕಾಂಗ್ರೆಸ್ ಬೀದಿಗೆ ಬಂದಿದೆ. ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಪುಂಖಾನುಪುಂಖವಾಗಿ ಪ್ರತಿಭಟಿಸಿ ಮಾಡಿರುವ ಪೇಸಿಎಂ ಹಾಗೂ 40% ಅಭಿಯಾನಗಳು ಸುಳ್ಳು ಹಾಗೂ ಅಧಿಕಾರಕ್ಕಾಗಿ ಮಾಧ್ಯಮದ ಮುಂದೆ ಸೃಷ್ಟಿಸಿರುವ ಪ್ರಹಸನ ಎಂಬುದಾಗಿ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇಂದು ಸತ್ಯದ ಅನಾವರಣವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಕಮಿಷನ್ ದರ ನಿಗದಿ ಪಡಿಸಿ ಜಾಹೀರಾತು ನೀಡಿರುವುದು ಸ್ವತಃ ಕಾಂಗ್ರೆಸ್ಸಿನ ನೈಜ ಕಮಿಷನ್ ದಂದೆಯ ದರ ಎಂಬುದು ಇದೀಗ ಸಾಬೀತಾಗಿದೆ. ಐಟಿ ದಾಳಿಯ ಸಂದರ್ಭದಲ್ಲಿ ದೊರೆತ ಕೋಟ್ಯಾಂತರ ರೂಪಾಯಿಗಳ ಕಂತೆ ಕಂತೆ ನೋಟುಗಳು ಬಿಬಿಎಂಪಿ ಹಾಗೂ ಇತರ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡುವಾಗ ದೊರೆತ ಕಾಂಗ್ರೆಸ್ ನಿಗದಿಪಡಿಸಿದ ಕಮಿಷನ್ ಹಣ ಎಂಬುದು ಜಗಜ್ಜಾಹೀರಾಗಿದೆ. ಸಿಎಂ ಸಿದ್ಧರಾಮಯ್ಯನವರ ಸಮಾಜವಾದದ ಮುಖವಾಡ ಬಯಲಾಗಿದೆ ಎಂದರು.
ಪಂಚರಾಜ್ಯಗಳ ಚುನಾವಣೆಗೆ ವಿವಿಧ ಆಯಾಮಗಳಲ್ಲಿ ಕಾಂಗ್ರೆಸ್ ಸರಕಾರ ಸಂಗ್ರಹಿಸಿದ ಕಮಿಷನ್ ಹಣ ಮತ್ತು ಕರ್ನಾಟಕದ ಜನತೆಯ ತೆರಿಗೆ ಹಣ ಹೋಗುತ್ತಿದೆ. ಈ ವಿಚಾರವನ್ನು ಪ್ರಬುದ್ಧ ಜನತೆ ಒಂದಾಗಿ ಖಂಡಿಸಬೇಕು. ಇಂತಹ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಭಾರಿ ಗಂಡಾಂತರ ಕಾದಿದೆ. ಇಂದು ಉಚಿತ ವಿದ್ಯುತ್ ಬದಲಿಗೆ ಕತ್ತಲೆ ಭಾಗ್ಯ ಜಾರಿಯಲ್ಲಿದೆ. ಇಂತಹ ದೌರ್ಭಾಗ್ಯಗಳ ಸೋಂಕು ಇತರ ರಾಜ್ಯಗಳಿಗೂ ಹರಡಬಾರದು ಎಂದಾದರೆ ಕಾಂಗ್ರೆಸ್ ಯಾವುದೇ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಬಾರದು. ದೇಶಾದ್ಯಂತ ಮುಳುಗುತ್ತಿರುವ ಕಾಂಗ್ರೆಸ್ ಎಂಬ ಹಡಗಿಗೆ ಕರ್ನಾಟಕ ಸರಕಾರ ಇಂಧನ ತುಂಬಿಸುವ ಯತ್ನದಲ್ಲಿದೆ. ಮುಂದಿನ ಪೀಳಿಗೆ ಸಮೃದ್ಧ ಕರ್ನಾಟಕವನ್ನು ಕಾಣಬೇಕೆಂದರೆ ಆದಷ್ಟು ಬೇಗ ರಾಜ್ಯದ ಈ ಭ್ರಷ್ಟ ಕಾಂಗ್ರೆಸ್ ಸರಕಾರ ತೊಲಗಬೇಕು ಎಂದು ಕುಯಿಲಾಡಿ ಆಗ್ರಹಿಸಿದರು.
ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಚಿಕ್ಕಾಸು ಬಿಡುಗಡೆ ಮಾಡದ, ಸರಕಾರಿ ನೌಕರರ ವೇತನ ತಡೆ ಹಿಡಿದ, ಅಂಗನವಾಡಿ ಮಕ್ಕಳಿಗೂ ಆಹಾರ ಪೂರೈಸಲು ಅಸಮರ್ಥವಾಗಿರುವ ಭ್ರಷ್ಟ ಕಾಂಗ್ರೆಸ್ ಕಮಿಷನ್ ಸರಕಾರ ಕೋಟಿ ಕೋಟಿ ಹಣವನ್ನು ಲೂಟಿಗೈದು ಅದನ್ನು ಪಂಚರಾಜ್ಯಗಳ ಚುನಾವಣೆಗೆ ಬಳಸುವ ಹುನ್ನಾರ ನಡೆಸಿರುವುದು ಅತ್ಯಂತ ನಾಚಿಕೆಗೇಡು. ಉಚಿತ ಖಚಿತ ನಿಶ್ಚಿತಗಳ ಮೋಡಿ ಮಾಡಿ ಯಾವುದೇ ಗ್ಯಾರಂಟಿಗಳನ್ನೂ ಘೋಷಿಸಿದಂತೆ ಯಥಾವತ್ತಾಗಿ ನಿರ್ವಹಿಸದೆ, ಕತ್ತಲೆ ಭಾಗ್ಯ ನೀಡಿರುವ ಕಾಂಗ್ರೆಸ್ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ. ಎಲ್ಲ ವಿಚಾರಗಳಲ್ಲಿ ರಾಜ್ಯದ ಹಿತವನ್ನು ಬಲಿ ಕೊಡುತ್ತಿರುವ ಜೊತೆಗೆ ಜನತೆಗೆ ದ್ರೋಹ ಬಗೆದು ಸ್ವಯಂ ಸ್ವಾರ್ಥ ಸಾಧನೆಗಾಗಿ ಕರ್ನಾಟಕವನ್ನು ಎಟಿಎಮ್ ಆಗಿ ಬಳಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಜನತೆ ಒಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ರವಿ ಅಮೀನ್ ಬನ್ನಂಜೆ, ಪ್ರಕಾಶ್ ಶೆಟ್ಟಿ  ಪಾದೆಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಫಲಾನುಭವಿಗಳ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ, ದಿನೇಶ್ ಅಮೀನ್, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ಮಟ್ಟು, ಕಾಪು ಪುರಸಭೆ ಸದಸ್ಯ ಅರುಣ್‌ ಕುಮಾರ್ ಶೆಟ್ಟಿ, ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಪ್ರಮುಖರಾದ ಲೋಕಯ್ಯ ಪಣಿಯಾಡಿ, ದಿನಕರ ಪೂಜಾರಿ, ನೀರಜಾ ಶೆಟ್ಟಿ, ಲಕ್ಷ್ಮೀ ಹೆಬ್ಬಾಳ್, ರಾಧಿಕಾ, ನಿತಿನ್ ಪೈ, ಶಿವರಾಮ ಕಾಡಿಮಾರ್, ಚಂದ್ರಶೇಖರ್ ಪ್ರಭು ಮುಂತಾದವರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply