ಪ್ರಸ್ತುತ ರಾಜ್ಯ ವಿತರಿಸುತ್ತಿರುವ 5 ಕೆ.ಜಿ. ಅಕ್ಕಿ ಕೇಂದ್ರ ಸರಕಾರದ ಕೊಡುಗೆ: ಕುಯಿಲಾಡಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಜ್ಯದ ಬಿಪಿಎಲ್ ಕುಟುಂಬಕ್ಕೆ ಪ್ರತೀ ತಿಂಗಳು 5 ಕೆ.ಜಿ. ಅಕ್ಕಿ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಮಾಸಿಕ 35 ಕೆ.ಜಿ. ಅಕ್ಕಿಯನ್ನು ಪಡಿತರ ಮೂಲಕ ಉಚಿತವಾಗಿ ವಿತರಿಸುತ್ತಿದೆ. ಆದರೆ ಕಾಂಗ್ರೆಸ್ ಸಹಿತ ಸಿ.ಎಂ. ಸಿದ್ದರಾಮಯ್ಯ ಎಲ್ಲಿಯೂ ಈ ವಿಚಾರವನ್ನು ಪ್ರಚುರಪಡಿಸದೆ ಸತ್ಯವನ್ನು ಮರೆಮಾಚುವ ಕೀಳು ಮನಸ್ಥಿತಿಯ ಮೂಲಕ ಬಡವರ ಅನ್ನದ ವಿಚಾರದಲ್ಲೂ ಹೊಲಸು ರಾಜಕೀಯವನ್ನು ಪ್ರದರ್ಶಿಸಿದೆ. ಕೇವಲ ಅಧಿಕಾರಕ್ಕೇರುವ ಸ್ವಯಂ ಸ್ವಾರ್ಥ ಸಾಧನೆಗಾಗಿ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಲಾಗದೆ ಜನತೆಗೆ ಮೋಸ ಎಸಗಿರುವ ಕಾಂಗ್ರೆಸ್ ಇದೀಗ ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ವಿಫಲ ಯತ್ನಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ಚುನಾವಣೆಗೂ ಮೊದಲೇ ಕೇಂದ್ರ ಸರಕಾರ ರಾಜ್ಯದಲ್ಲಿ ನೀಡುತ್ತಿರುವ 5 ಕೆ.ಜಿ. ಅಕ್ಕಿಯೊಂದಿಗೆ ಕಾಂಗ್ರೆಸ್ ಉಚಿತ ಗ್ಯಾರಂಟಿಯ 10 ಕೆ.ಜಿ. ಅಕ್ಕಿಯನ್ನು ಸೇರಿಸಿ ಜನತೆಗೆ ವಾಗ್ದಾನ ನೀಡಿದಂತೆ ಒಟ್ಟು 15 ಕೆ.ಜಿ. ಅಕ್ಕಿಯನ್ನು ಪಡಿತರ ಮೂಲಕ ವಿತರಿಸಬೇಕಾಗಿದೆ. ಈ ವಿಚಾರದಲ್ಲೂ ಕಾಂಗ್ರೆಸ್ ರಾಜ್ಯದ ಜನತೆಗೆ ಮಂಕು ಬೂದಿ ಎರಚುತ್ತಿರುವುದು ಸ್ಪಷ್ಟವಾಗಿದೆ.

ಈ ಹಿಂದಿನ ಅವಧಿಯಲ್ಲೂ ಸಿ.ಎಂ. ಸಿದ್ದರಾಮಯ್ಯ ಕೇಂದ್ರ ಸರಕಾರ ಅನ್ನ ಯೋಜನೆಯ ಮೂಲಕ ಉಚಿತವಾಗಿ ವಿತರಿಸಿದ ಅಕ್ಕಿಯನ್ನು ತನ್ನದೇ ಅನ್ನಭಾಗ್ಯ ಯೋಜನೆ ಎಂಬಂತೆ ಬಿಂಬಿಸಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡಿರುವ ವಿಚಾರ ಜಗಜ್ಜಾಹೀರಾಗಿದೆ. ಕೊರೋನಾ ಸಂದರ್ಭದಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ದೇಶದ 90 ಕೋಟಿಗೂ ಮಿಕ್ಕಿ ಬಡ ಜನತೆಗೆ ಅನ್ನ ಯೋಜನೆ ಮೂಲಕ ಉಚಿತ ಅಕ್ಕಿ ವಿತರಿಸಿ ಬಡವರ ಪರ ಕಾಳಜಿ ತೋರಿಸಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಂಬುದನ್ನು ಸಿದ್ದರಾಮಯ್ಯನವರು ನೆನಪಿಸಿಕೊಳ್ಳಬೇಕಾಗಿದೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ 200 ಯುನಿಟ್ ವಿದ್ಯುತ್ ‘ನಿನಗೂ ಫ್ರೀ ನನಗೂ ಫ್ರೀ’ ಎಂದು ಡಂಗುರ ಸಾರಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರವರು ಇದೀಗ ಉಲ್ಟಾ ಹೊಡೆದಿದ್ದಾರೆ. 200 ಯುನಿಟ್ ಬದಲಿಗೆ 1 ವರ್ಷದ ಸರಾಸರಿ ಬಳಕೆ ಎಂದು ಷರತ್ತು ಹಾಕಿರುವ ಕಾಂಗ್ರೆಸ್ ಸರಕಾರ ಭರ್ಜರಿಯಾಗಿ ವಿದ್ಯುತ್ ದರವನ್ನು ಏರಿಸಿ ರಾಜ್ಯದ ಜನತೆಗೆ ಶಾಕ್ ನೀಡುವ ಜೊತೆಗೆ ಪಂಗನಾಮ ಹಾಕಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಎಲ್ಲ ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್ ದರವನ್ನು ಪರಿಷ್ಕರಿಸಿ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೇ 12ರಂದು ಪ್ರತಿ ಯುನಿಟ್ ಗೆ 70 ಪೈಸೆಯಂತೆ ಏಪ್ರಿಲ್ ನಿಂದ ಪೂರ್ವಾನ್ವಯ ವಾಗುವಂತೆ ಜಾರಿಗೊಳಿಸಿದೆ. ಈ ಹಿಂದೆ ಮೊದಲ 50 ಯೂನಿಟ್ ಬಳಕೆಗೆ ಪ್ರತೀ ಯುನಿಟ್ ಗೆ ರೂ.4.15ರ ದರ ನಿಗದಿಯಾಗಿದ್ದು, ಪ್ರಸಕ್ತ 100 ಯುನಿಟ್ ಮೀರಿದರೆ ಬಳಸಿದ ಅಷ್ಟೂ ಯುನಿಟ್ ಗೆ, ಪ್ರತಿ ಯೂನಿಟ್ ಗೆ ರೂ.7 ರಂತೆ ದಿಡೀರಾಗಿ ದರವನ್ನು ಏರಿಸಿರುವುದು ಕಾಂಗ್ರೆಸ್ ಸರಕಾರಕ್ಕೆ ಬಡ ಜನತೆಯ ಮೇಲೆ ಯಾವುದೇ ಕಾಳಜಿ ಇಲ್ಲ ಎಬುದನ್ನು ಸಾಬೀತುಪಡಿಸಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರುಗೊಂಡು ಪ್ರಾರಂಭವಾಗದ ಕಾಮಗಾರಿಗಳ ಸಹಿತ ಅನೇಕ ನಿರ್ಣಯಗಳನ್ನು ತಡೆ ಹಿಡಿಯುವುದು ಪ್ರಸಕ್ತ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗುವುದಾದರೆ ಜನತೆಯ ಜ್ವಲಂತ ಸಮಸ್ಯೆಗೆ ಕಾರಣವಾಗಿರುವ ವಿದ್ಯುತ್ ದರ ಏರಿಕೆಯನ್ನು ತಡೆ ಹಿಡಿಯಲು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಯಾಕೆ ಸಾಧ್ಯವಿಲ್ಲ ಎಂಬುದನ್ನು ರಾಜ್ಯದ ಜನತೆ ಪ್ರಶ್ನಿಸುವಂತಾಗಿದೆ. ಕಾಂಗ್ರೆಸ್ಸಿನ ಮೋಸದ ತಂತ್ರದ ಜನ ವಿರೋಧಿ ನೀತಿಗಳಿಂದ ರಾಜ್ಯದ ಜನತೆ ರೋಸಿಹೋಗಿದ್ದು ಮುಂದಿನ ಚುನಾವಣೆಗಳಲ್ಲಿ ಮಾತು ತಪ್ಪಿದ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply