ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ -ಕಾಂಗ್ರೆಸ್ ಅಧಿಕೃತ ಘೋಷಣೆ!

ಇದೇ ತಿಂಗಳ 22ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಿಂದ ಕಾಂಗ್ರೆಸ್ ಪಕ್ಷ ದೂರ ಉಳಿಯುವ ನಿರ್ಧಾರ ಮಾಡಿದೆ. ಈ ನಿರ್ಧಾರವನ್ನು ಕಾಂಗ್ರೆಸ್‍ನ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕಾಂಗ್ರೆಸ್, ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮಲ್ಲಿಕಾರ್ಜುನ ಖರ್ಗೆ , ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರಿಗೆ ಆಹ್ವಾನ ಬಂದಿತ್ತು. ಆದರೆ ಗೌರವ ಪೂರ್ವಕವಾಗಿ ಕಾಂಗ್ರೆಸ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ ಎಂದು ತಿಳಿಸಿದೆ

ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರಾಮನನ್ನು ಪೂಜಿಸುತ್ತಾರೆ. ಧರ್ಮವು ವೈಯಕ್ತಿಕ ವಿಷಯವಾಗಿದ್ದು, ಆರ್‍ಎಸ್‍ಎಸ್ ಮತ್ತು ಬಿಜೆಪಿ ಅಯೋಧ್ಯೆಯಲ್ಲಿ ಮಂದಿರವನ್ನು ರಾಜಕೀಯಕ್ಕಾಗಿ ಹಿಂದಿನಿಂದಲೂ ಬಳಕೆ ಮಾಡುತ್ತಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ನಾಯಕರಿಂದ ಅಪೂರ್ಣ ದೇವಾಲಯದ ಉದ್ಘಾಟನೆ ಚುನಾವಣಾ ಲಾಭಕ್ಕಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್ ಹೆಳಿಕೊಂಡಿದೆ.

2019ರ ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ಬದ್ಧವಾಗಿದ್ದೇವೆ ಮತ್ತು ಭಗವಾನ್ ರಾಮನನ್ನು ಗೌರವಿಸುವ ಲಕ್ಷಾಂತರ ಜನರ ಭಾವನೆಗಳನ್ನು ಗೌರವಿಸುತ್ತೇವೆ. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ಸ್ಪಷ್ಟವಾಗಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕ್ರಮಕ್ಕೆ ಆಹ್ವಾನವನ್ನು ಗೌರವಯುತವಾಗಿ ನಿರಾಕರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಿರುವ ಕಾಂಗ್ರೆಸ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ವಿಶ್ವ ಹಿಂದೂ ಪರಿಷತ್, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾಂಗ್ರೆಸ್ ಪಕ್ಷವು ಬಯಸದಿದ್ದರೆ ಅದು ಅವರ ಆಯ್ಕೆಯಾಗಿದೆ. ನಾವು ಆಹ್ವಾನವನ್ನು ಕಳುಹಿಸಿದ್ದೇವೆ, ಅವರು ಬರಲು ಬಯಸದಿದ್ದರೆ ಪರವಾಗಿಲ್ಲ ಎಂದು ತಿಳಿಸಿದೆ.

ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ಚೌದರಿ ಅವರ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನೇನು ಹತ್ತು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಲಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ತಮ್ಮ ಸಾಧನೆಯನ್ನು ಮತದಾರರ ಮುಂದಿಟ್ಟು ಚುನಾವಣೆಯನ್ನು ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಲೋಕಸಭಾ ಚುನಾವಣೆಯ ಕಾಲದಲ್ಲಿಯೇ ಅವಸರದಿಂದ ಅಪೂರ್ಣ ಸ್ಥಿತಿಯಲ್ಲಿರುವ ರಾಮಮಂದಿರವನ್ನು ಉದ್ಘಾಟಿಸಿ ಈ ಮೂಲಕ ಹಿಂದುತ್ವದ ಅಲೆಯನ್ನು ಬಡಿದೆಬ್ಬಿಸಿ ಅದರ ಮರೆಯಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ.

ಕಳೆದ 30-35 ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ರಾಮನ ಹೆಸರಲ್ಲಿ ನಡೆಸಿಕೊಂಡು ಬಂದಿರುವ ರಾಜಕೀಯವನ್ನು ಗಂಭೀರವಾಗಿ ಗಮನಿಸುತ್ತಾ ಬಂದಿರುವ ದೇಶದ ಜನತೆ ಈ ಬಾರಿ ಇಂತಹ ಡೋಂಗಿ ಹಿಂದುತ್ವದ ಜಾಲಕ್ಕೆ ಖಂಡಿತ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ. ಈಗಾಗಲೇ ಜನ ಇಟ್ಟಿಗೆಯ ಹೆಸರಲ್ಲಿ ಸಂಗ್ರಹಿಸಿರುವ ದೇಣಿಗೆಯ ಲೆಕ್ಕವನ್ನು ಕೇಳತೊಡಗಿದ್ದಾರೆ ಎಂದು ಸಿಎಂ ಹೇಳಿದರು.

 
 
 
 
 
 
 
 
 
 
 

Leave a Reply