ಇಬ್ಬರನ್ನು ಬಲಿ ಪಡೆದ ನರಭಕ್ಷಕ ಕಾಡಾನೆಯನ್ನು ಸೆರೆಹಿಡಿದ ಅಭಿಮನ್ಯು

ಅರಣ್ಯ ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದ ಆಪರೇಷನ್ ಎಲಿಫೆಂಟ್ ಯಶಸ್ವಿಯಾಗಿದೆ. ಇಬ್ಬರನ್ನು ಬಲಿ ತೆಗೆದುಕೊಂಡಿದೆ ಎನ್ನಲಾದ ಆನೆಯನ್ನು ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ಸಮೀಪದ ಮಂಡೆಕರ ಕಾಡಿನಲ್ಲಿ ಸೆರೆಹಿಡಿಯಲಾಗಿದೆ.‌

ಗುರುವಾರ ಸಂಜೆ ಆನೆ ಪತ್ತೆಯಾಗುತ್ತಲೇ ತಜ್ಞ ವೈದ್ಯರು ಅರಿವಳಿಕೆ ಚುಚ್ಚುಮದ್ದು ಬಿಟ್ಟು ಆನೆಯನ್ನು ಸೆರೆಹಿಡಿಯುವ ಕೆಲಸ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಇಬ್ಬರನ್ನು ಬಲಿ ತೆಗೆದುಕೊಂಡ ಘಟನೆ ಬಳಿಕ ಅರಣ್ಯ ಸಿಬಂದಿ ಎಲಿಫೆಂಟ್ ಆಪರೇಷನ್‌ ಕಾರ್ಯಾಚರಣೆ ಆರಂಭಿಸಿದ್ದರು.‌

ಸುಬ್ರಹ್ಮಣ್ಯ, ಪುತ್ತೂರು, ಪಂಜ ವಿಭಾಗದ 100ಕ್ಕೂ ಮಿಕ್ಕಿದ ಅರಣ್ಯ ಇಲಾಖೆಯ ಸಿಬಂದಿ ಮತ್ತು ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿದ್ದರು. ಡ್ರೋಣ್ ಬಳಸಿ ಆನೆಯ ಚಲನವಲನ ಪತ್ತೆ ಮಾಡುವ ಕಾರ್ಯ ನಡೆದಿತ್ತು. ಇದೀಗ ಆನೆ ಸೆರೆಸಿಕ್ಕಿರುವ ಕೊಂಬಾರು ಗ್ರಾಮದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಆನೆ ಗುಂಪಾಗಿದ್ದರೆ, ತಿರುಗಿ ಬೀಳಬಹುದೆಂಬ ಮುನ್ನೆಚ್ಚರಿಕೆಯಿಂದ ಜನರು ಸಂಚಾರ ನಡೆಸದಂತೆ ಸೂಚಿಸಲಾಗಿದೆ. ಅಭಿಮನ್ಯು ಸೇರಿ 5 ಸಾಕಾನೆಗಳು, ತಜ್ಞ ವೈದ್ಯರು, ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು. 

ಫೆ.20ರ ಸೋಮವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಹಾಲು ಸೊಸೈಟಿಗೆ ತೆರಳುತ್ತಿದ್ದ ರಂಜಿತಾ ರೈ (24) ಮೇಲೆ ದಾರಿಯಲ್ಲಿ ಆನೆ ದಾಳಿ ನಡೆಸಿತ್ತು. ಆಕೆಯ ಚೀರಾಟ ಕೇಳಿ ಪರಿಸರದ ನಿವಾಸಿ ರಮೇಶ್ ರೈ (52) ಸಹಾಯಕ್ಕೆ ಧಾವಿಸಿದ್ದರು. ಆದರೆ ಕಾಡಾನೆಯ ತಿವಿತಕ್ಕೆ ಸಿಲುಕಿ ಇಬ್ಬರೂ ಬಲಿಯಾಗಿದ್ದರು. ಈಗ ಸೆರೆ ಸಿಕ್ಕಿರುವ ಆನೆಯೇ ಅಂದು ದಾಳಿ ನಡೆಸಿತ್ತು ಎನ್ನುವ ಬಗ್ಗೆ ಖಾತರಿಯಿಲ್ಲ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಇನ್ನಷ್ಟು ಕಾಡಾನೆಗಳು ಅರಿತುಕೊಂಡಿರುವ ಮಾಹಿತಿಗಳಿವೆ. ಹೀಗಾಗಿ ಯಾವ ಆನೆ ಅಂದು ದಾಳಿ ನಡೆಸಿತ್ತು ಎನ್ನುವುದನ್ನು ನೋಡಿದವರಿಲ್ಲ. ಬಂಧನ ಆಗಿರುವ ಆನೆಯನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ.

 
 
 
 
 
 
 
 
 
 
 

Leave a Reply