ಕರೋನಾ ವಿರುದ್ದಸಮರ ಸಾರಿರುವ ದಾದಿಯರೆಂಬ ಆಧುನಿಕ ದೇವತೆಗಳಿಗೆ ದೊಡ್ಡ ನಮನ..- ರಾಘವೇಂದ್ರ ಪ್ರಭು,ಕರ್ವಾಲು

ಆಸ್ಪತ್ರೆಗಳಲ್ಲಿ ವೈದ್ಯರು ಬಂದು ಮೇಲ್ವಿಚಾರಣೆ ಮಾಡಿ ಹೋಗಿ ಬಿಡುತ್ತಾರೆ, ಅವರ ರೌಂಡ್ಸ್ ಆದ ಬಳಿಕ ರೋಗಿಯ ಆಪ್ತರು ಜೊತೆಯಲ್ಲಿದ್ದರೂ, ನರ್ಸ್‌ಗಳು ಮತ್ತೆ ಮತ್ತೆ ಬಂದು ವಿಚಾರಿಸಿ, ನಗುಮುಖದಿಂದ ಮಾತನಾಡಿಸಿ ಉಪಚರಿಸಿ ಹೋಗುತ್ತಾರೆ. ಇವರು ರೋಗಿಗಳ ನೋವಿಗೆ ಸ್ಪಂದಿಸೋ ಶ್ವೇತವರ್ಣದಲ್ಲಿರುವ ಸೇವಾಥಿ೯ಗಳು, ತಮ್ಮ ಕಾಳಜಿಯ ಮೂಲಕ ರೋಗಿಯನ್ನು ಗುಣಮುಖರಾಗಿಸಿ ಮನೆಗೆ ಕಳುಹಿಸಲು ನೆರವಾಗುತ್ತಾರೆ.

ಸದ್ಯದ ಪರಿಸ್ಥಿತಿಯಲ್ಲಿ ದಾದಿಯರ ಸ್ಥಿತಿಗತಿ

ಕೊರೋನಾದಿಂದಾಗಿ ಶಿಫ್ಟ್‌ಗಳ ಅರ್ಥವನ್ನೇ ತಿಳಿಯದವರಂತೆ ಹಗಲು ರಾತ್ರಿ ದುಡಿಯುತ್ತಿರುವ ದಾದಿಯರಿಗೆ ಮಕ್ಕಳಿದ್ದಾರೆ, ಕುಟುಂಬವೂ ಇರುತ್ತೆ. ಆದರೆ ಕೊರೋನಾ ಬಂದ ಮೇಲೆ ಇವೆಲ್ಲವೂ ಅವರ ಎರಡನೇ ಆದ್ಯತೆ ಆಗಿಬಿಟ್ಟಿದೆ. ಅನಿವಾರ್ಯತೆಯ ಜೊತೆಯಲ್ಲಿ ವೃತ್ತಿ ಧರ್ಮ ಅವರನ್ನು ಮನೆಯಲ್ಲಿರಲು ಬಿಡುತ್ತಿಲ್ಲ. ತಮ್ಮ ಕೆಲಸ ಕೊರೋನಾ ಕಾಲದಲ್ಲಿ ಎಷ್ಟು ಅಪಾಯಕಾರಿ ಎಂದು ತಿಳಿದರೂ ನರ್ಸ್‌ಗಳು ಕೆಲಸಕ್ಕೆ ಬರಲು ಹಿಂಜರಿಯದೆ ಕೆಲಸ ಮಾಡುತ್ತಿದ್ದಾರೆ.

 ಅಂತಾರಾಷ್ಟ್ರೀಯ ದಾದಿಯರ ದಿನ ಹುಟ್ಟಿದ್ದು ಹೇಗೆ ?

ಪ್ರತಿವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನವಿದು. ದಾದಿಯರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಗುರುತಿಸಲು ವಿಶ್ವದಾದ್ಯಂತ ಈ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ದಾದಿಯರ ಸಮಿತಿ 1965ರಿಂದ ದಾದಿಯರ ದಿನವನ್ನು ಆಚರಿಸಿಕೊಂಡು ಬಂದಿದೆ. 1953ರಲ್ಲಿ ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ದೊರೊಥಿ ಸದರ್ಲ್ಯಾಂಡ್ ದಾದಿಯರ ದಿನವನ್ನು ಘೋಷಿಸಬೇಕೆಂದು ಪ್ರಸ್ತಾಪಿಸಿದ್ದರು. 

ಇಂದು ಕೊರೋನಾ ಕಾಣಿಸಿಕೊಂಡ ನಂತರ ಕನಿಷ್ಠ 3000 ದಾದಿಯರು ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಒಟ್ಟು ಪ್ರಕರಣಗಳಲ್ಲಿ 10%ಗಿಂತ ಹೆಚ್ಚಿನವರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ವರದಿಯಲ್ಲಿ ಹೇಳಿತ್ತು. ಕಳೆದ ವರ್ಷ ಮಾರ್ಚ್‌ನಿಂದ ವಿಶ್ವಾದ್ಯಾಂತ 60 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಿ ಮಡಿದ ದಾದಿಯರ ಸಂಖ್ಯೆ 3 ಸಾವಿರ.

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದಾಗಿ ಏಪ್ರಿಲ್‌ನಲ್ಲಿ ಇದುವರೆಗೆ ಕನಿಷ್ಠ 34 ವೈದ್ಯರು ಅಸುನೀಗಿದ್ದಾರೆ, ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. ಕಳೆದ ವರ್ಷ ದೇಶಾದ್ಯಂತ 730 ವೈದ್ಯರು ಮೃತಟ್ಟಿದ್ದರು.

ಹಗಲು, ರಾತ್ರಿ ಎಂಬ ಪರಿವೆಯಿಲ್ಲದೆ, ಪಿಪಿಇ ಕಿಟ್, ಮಾಸ್ಕ್ ಧರಿಸಿ ನಾಲ್ಕು ಗೋಡೆಯ ಮಧ್ಯೆ ಕೊರೋನಾ ರೋಗಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದಾದಿಯರು, ತಮ್ಮ ಮನೆಗೆ ಹೋಗದೇ ಅದೆಷ್ಟು ಸಮಯವಾಯ್ತೋ, ಗೊತ್ತಿಲ್ಲ 

ಹೋದರೂ ತಮ್ಮ ಮನೆಯವರ ಜೊತೆ ಕುಳಿತು ನೆಮ್ಮದಿಯಾಗಿ ಒಂದು ತುತ್ತು ಉಣ್ಣುವುದಕ್ಕಾದರೂ ಅವರಿಗೆ ಸಾಧ್ಯವೇ? ಪುಟ್ಟ ಮಕ್ಕಳನ್ನು ಎತ್ತಿ ಮುದ್ದಿಸಲು ಸಾಧ್ಯವೇ? ಖಂಡಿತಾ ಇಲ್ಲ. ಕೊರೋನಾ ಕುರಿತ ಹೆಚ್ಚಿನ ಜಾಗೃತಿ ಇರುವ ಇವರು ಸೋಂಕು ಹರಡುವ ಯಾವ ರಿಸ್ಕ್ ಕೂಡಾ ತೆಗೆದುಕೊಳ್ಳಲಾರರು.

 ದಾದಿಯರನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆಅ

ಅವರ ಕಷ್ಟಗಳ ಶೇ.1ರಷ್ಟು ಕಷ್ಟವೂ ನಮಗಿಲ್ಲ. ಮನೆಯೊಳಗಿದ್ದು, ಸೋಂಕಿತರಾಗದೆ, ಸುರಕ್ಷಿತರಾಗಿದ್ದು ಅವರ ಹೊರೆ ಕಡಿಮೆ ಮಾಡುವುದೇ ಈ ಕೊರೋನಾ ಕಾಲದಲ್ಲಿ ನಾವು ದಾದಿಯರಿಗೆ ನೀಡಬಹುದಾದ ಬಹುದೊಡ್ಡ ಕೊಡುಗೆ.ದಾದಿಯರ ಸೇವೆಗೆ ಬಲುದೊಡ್ಡ ಸಲಾಂ ಅವರೆಲ್ಲರೂ ಆರೋಗ್ಯವಾಗಿರಲಿ. ಎಂಬ ಶುಭ ಹಾರೈಕೆ ನಮ್ಮದು.

 
 
 
 
 
 
 
 
 
 
 

Leave a Reply