ಬಣ್ಣದ ಭಿತ್ತಿ~ ರಾರಾ.

ಅತ್ತ ಇತ್ತ ಜಿಗಿಯುತಿರುವ ಹುಲ್ಲೆಮರಿಯ ತುಡಿತದಂತೆ
ಸುತ್ತ ಮುತ್ತ ಮೆತ್ತಿಕೊಂಡ ಮನದ ಬಳ್ಳಿಯಾಸೆಯು/
ಕತ್ತಲಲ್ಲು ಕಣ್ಣು ತೆರೆದ ನೀಲನಭದ ಚುಕ್ಕಿಯಂತೆ
ಭಿತ್ತಿಯಲ್ಲಿ ಬಣ್ಣ ಬಳಿದ ದೂರದೂರ ಪ್ರೇಮಿಯು//1//

ಬಿಟ್ಟು ಬಿಡದೆ ಮೂಡುತಿರುವ ಕಡಲಿನಲೆಯ ಬುರುಗಿನಂತೆ
ಜುಟ್ಟು ಹಿಡಿದು ಕಾಡುತಿರುವ ಮಲ್ಲೆಹೂವ ಮಾಲೆಯು/
ಬೆಟ್ಟದಡಿಯ ನಿಲುಕಿನಲ್ಲೆ ತೊರೆಯ ಹಸಿರ ಸೆರಗಿನಂತೆ
ದಿಟ್ಟಿಯಿಟ್ಟು ಕರೆಯುತಿರುವ ರಾಗಬೆರೆತ ಓಲೆಯು//2//

ಆಲದೆಲೆಯ ಮೇಲೆ ಮಲಗಿ ಬಾಲ ಕಂಡ ಕನಸಿನಂತೆ
ಲೀಲೆಯಿಂದ ಹೊರಳುತಿರುವ ಲಲ್ಲೆವಾತ ರಾತ್ರಿಯು/
ತಾಲ ತಾಲ ಬೆಸೆಯುತಿರುವ ಗೆಜ್ಜೆದನಿಯ ಇಂಪಿನಂತೆ
ಕಾಲ ಮರೆತು ಹಾಡುತಿರುವ ಸಾಲುಮರದ ಹಕ್ಕಿಯು//3//

ಹಾರಿ ಹಾರಿ ದೂರಸಾರಿ, ಹೂವಿನೆದೆಯ ದುಂಬಿಯಂತೆ
ದಾರಿ ಮರೆತು ಹೋದರೇನು ! ಇಲ್ಲ ಮನಕೆ ಬೇಸರ/
ಮಾರನುಸಿರ ರತಿಯ ಸೇರಿ ಮತ್ತೆ ಬಂದ ಚೈತ್ರದಂತೆ
ನೀರಿನಲೆಯ ಮೋರೆಯಲ್ಲೆ ಲಜ್ಜೆ ತಂದ ನೇಸರ //4//

 
 
 
 
 
 
 
 
 
 
 

Leave a Reply