ನೃತ್ಯಕ್ಷೇತ್ರದ ಭರವಸೆಯ ಬೆಳಕು ಪ್ರಣವಿ ಬೇರಿಕೆ

24ರಂದು ಭರತನೃತ್ಯ ರಂಗಪ್ರವೇಶ- ನೃತ್ಯಕಲಾ ಗುರುಕುಲ ಆಯೋಜನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್  ಆ್ಯಂಡ್ ಟೆಲಿ ಕಮ್ಯೂನಿಕೇಷನ್ ಇಂಜಿನಿಯ ರಿ೦ಗ್ ದ್ವಿತೀಯ ಸೆಮಿಸ್ಟರ್ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಪ್ರಣವಿ ಬೇರಿಕೆ ಕಲಾ ರಂಗದಲ್ಲಿ ಹೊಸ ಭರವಸೆ ಗಳನ್ನು ಮೂಡಿಸಲು ಸನ್ನದ್ಧರಾಗಿದ್ದಾರೆ.

ಹೌದು…. 
ಸುಳ್ಯ ಮೂಲದ, ಸದ್ಯ ಬೆಂಗಳೂರಿನ ನಿವಾಸಿಗಳಾದ  ಜಯಲಕ್ಷ್ಮೀ  ಮತ್ತು ಲಕ್ಷ್ಮೀಶ್ ದಂಪತಿ ಪುತ್ರಿ ಪ್ರಣವಿ ಬೇರಿಕೆ ಉದ್ಯಾನನಗರಿಯ ನೃತ್ಯಕಲಾ ಗುರುಕುಲದ ಗುರು ದೀಕ್ಷಾ ಶಾಸ್ತ್ರಿ ಅವರ ಶಿಷ್ಯೆ. ಜೂ.24ರ ಸಂಜೆ 6ಕ್ಕೆ ಜಯನಗರ ೮ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ರಂಗಪ್ರವೇಶ ಆಯೋಜನೆಗೊಂಡಿದ್ದು, ಕಲಾಸಕ್ತರ ಸಂಗಮಕ್ಕೆ ಸಾಕ್ಷಿಯಾಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೃಷ್ಟಿ ಆರ್ಟ್ ಸೆಂಟರ್ ನಿರ್ದೇಶಕಿ ವಿದುಷಿ ಅನುರಾಧಾ ವಿಕ್ರಾಂತ್, ನಾದಂ ನೃತ್ಯ ಕೇಂದ್ರದ ನಿರ್ದೇಶಕಿ ನಂದಿನಿ ಮೆಹ್ತಾ ಆಗಮಿಸಿ ಯುವ ಕಲಾವಿದೆಗೆ ಪ್ರೋತ್ಸಾಹ ತುಂಬಲಿದ್ದಾರೆ.

ಹಿಮ್ಮೇಳದಲ್ಲಿ ವಿದ್ವನ್ಮಣಿಗಳು: ಪ್ರಣವಿ ರಂಗಪ್ರವೇಶ ಪ್ರಸ್ತುತಿಗೆ ವಿದುಷಿ ಕಾಂಚನ ಶ್ರೀರಂಜನಿ (ಗಾಯನ), ಗುರು ದೀಕ್ಷಾ ಶಾಸ್ತಿç (ನಟುವಾಂಗ), ವಿದ್ವಾಂಸರಾದ ಹರ್ಷ ಸಾಮಗ (ಮೃದಂಗ), ಎನ್. ಆರ್. ಶ್ರೀಕೃಷ್ಣ ಭಟ್ (ಕೊಳಲು) ಮತ್ತು ಎ. ಶಂಕರ್ ರಾಮನ್ (ವೀಣೆ) ಪಕ್ಕವಾದ್ಯ ಸಹಕಾರವಿದೆ.

ಪಾಲಕರ ಉತ್ಸಾಹಕ್ಕೆ ಸ್ಪಂದನೆ: ಪ್ರಣವಿ ನೃತ್ಯ ಕಲಿಕೆಗೆ ಅಡಿ ಇಟ್ಟಿದ್ದು 6ನೇ ವಯಸ್ಸಿನಿಂದ. ಇಂಜಿನಿಯರ್ ವೃತ್ತಿಯಲ್ಲಿರುವ ಜಯಲಕ್ಷ್ಮೀ  ಮತ್ತು ಲಕ್ಷ್ಮೀಶ್  ದಂಪತಿಗೆ ಮಗಳು ಕಲಾವಿದೆ ಆಗಬೇಕು ಎಂಬ ಉತ್ಕಟ ಅಪೇಕ್ಷೆಗೆ ಪ್ರಣವಿಯ ಉತ್ಸಾಹವೂ ಮಿಳಿತಗೊಂಡಿದ್ದು ಸುಕೃತವೇ ಸರಿ. ಬಹುಬೇಗ ನೃತ್ಯಕಲೆಗೆ ತನ್ನನ್ನು ಸಮರ್ಪಿಸಿಕೊಂಡಿದ್ದು ಈಕೆಯ ವಿಶೇಷತೆ. ಭರತನೃತ್ಯದ ಮೇರು ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಪರಂಪರೆಯಲ್ಲಿ ಬಂದ ಶಿಷ್ಯೆ, ವಿಶ್ವಖ್ಯಾತಿಯ ಕಲಾವಿದೆ ಸುಂದರಿ ಸಂತಾನ೦ ಕಲಾ ಕ್ಷೇತ್ರಕ್ಕೆ ಚಿರಪರಿಚಿತರು.
ಇವರ ಮಾರ್ಗದರ್ಶನದಲ್ಲಿ ಸಾಗಿಬಂದಿರುವ ಭರತ ನೃತ್ಯಶಾಲೆಯ ಹೆಸರಾಂತ ನರ್ತಕಿಯರಾದ ಹರಿಣಿ ಸಂತಾನ೦, ದೀಕ್ಷಾ ಶಾಸ್ತ್ರಿ, ನಯನಾ ಸೋಮಯಾಜಿ, ನಮಿತಾ ರಾವ್, ಶ್ವೇತಾ ರಾಜಶೇಖರ್ ಅವರಿಂದ ನೃತ್ಯದ ಪಟ್ಟುಗಳನ್ನು ಕಲಿತುಕೊಂಡ ಪ್ರಣವಿ ಹಿಂತಿರುಗಿ ನೋಡಲೇ ಇಲ್ಲ. ಸದ್ಯ 2 ವರ್ಷದಿಂದ ದೀಕ್ಷಾ ಶಾಸ್ತ್ರಿ ಅವರಲ್ಲಿ ಕಲಿಕೆ ಮುಂದುವರಿಸಿರುವ ಪ್ರಣವಿ ಈಗ  ಮಾರ್ಗ ಕರಣಗಳ ಅಭ್ಯಾಸದತ್ತ ಆಸಕ್ತಿ ತೋರಿದ್ದಾಳೆ.
ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಈಕೆಗೆ ವಿದ್ಯಾರ್ಥಿ ವೇತನ ನೀಡಿ ಕಲೆಗೆ ಉತ್ತೇಜನ ನೀಡಿದೆ. ವಿದುಷಿ ಕಾಂಚನಾ ಶ್ರೀರಂಜನಿ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡುತ್ತಿರುವ ಪ್ರಣವಿ ಈಗ ವಿದ್ವತ್ ಹಂತದ ಪಾಠಕ್ರಮದ ತಾಲೀಮಿನಲ್ಲಿ ನಿರತವಾಗಿರುವುದು ಗಮನೀಯ ಸಂಗತಿ.
ಕಲಾ ಪ್ರಸ್ತುತಿಯಲ್ಲಿ …..   ಭರತ ನೃತ್ಯಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದ ಪ್ರಣವಿ, ಬೆಂಗಳೂರಿನ ದಕ್ಷಿಣ ಅಯೋಧ್ಯಾ ಕೋದಂಡರಾಮ ದೇವಾಲಯದಲ್ಲಿ ಆಯೋಜಿಸಿದ್ದ ದಸರಾ ಉತ್ಸವದಲ್ಲಿ ಕಲಾಪ್ರದರ್ಶನ ಮಾಡಿದ್ದು ಹೊಸತನಕ್ಕೆ ನಾಂದಿಯಾಯಿತು. 2022ರಲ್ಲಿ ಬೆಂಗಳೂರು ಗಾಯನ ಸಮಾಜ ಏರ್ಪಡಿಸಿದ್ದ ಸಂಗೀತ ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದದ್ದು ಸ್ಫೂರ್ತಿ ನೀಡಿದೆ. ತಾಂತ್ರಿಕ ಶಿಕ್ಷಣದೊಂದಿಗೆ ಸಂಗೀತ ಮತ್ತು ಭರತ ನೃತ್ಯವನ್ನು ಸಮನ್ವಯ ಗೊಳಿಸಿಕೊಂಡಿರುವ ಪ್ರಣವಿ ಒಬ್ಬ ಉದಯೋನ್ಮುಖ ಕಲಾವಿದೆಯಾಗಿ ತನ್ನ ಪ್ರತಿಭಾ ವಿಕಸನಕ್ಕೆ ಅಣಿಗೊಂಡಿರುವುದು ಉತ್ತಮ ಯತ್ನ ಎನಿಸಿದೆ.

ಪರಿಸರವೇ ಕಲಿಸಿದ ಸಂಸ್ಕಾರ:
 ಸುಳ್ಯ ಮೂಲದ ಜಯಲಕ್ಷ್ಮೀ  ಮತ್ತು ಲಕ್ಷ್ಮೀಶ್ ಬೇರಿಕೆ ದಂಪತಿಗೆ ವೃತ್ತಿ ಬದುಕಿನ ನಡುವೆ ಸಂಗೀತ ಕೇಳುವ, ಕಛೇರಿಗಳಿಗೆ ಹೋಗಿ ಗಾಯನ ಆಸ್ವಾದಿಸುವ ಹವ್ಯಾಸ ರೂಢಿಗತವಾಯಿತು. ಇದಕ್ಕೆ ಸಜ್ಜನ ಮಿತ್ರವೃಂದ ಪ್ರೇರಣೆ ನೀಡಿತು. ಉತ್ತಮ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಸಂಸ್ಕಾರವ೦ತರಾಗುತ್ತಾರೆ ಎಂಬುದಕ್ಕೆ ಪ್ರಣವಿಯೇ ನಿದರ್ಶನ.
ಬೇರಿಕೆ ಕುಟುಂಬದಲ್ಲಿ ಯಾವ ಕಲಾವಿದರು ಇಲ್ಲದಿದ್ದರೂ ಪಾಲಕರ ಸಂಗೀತಾಸಕ್ತಿಯೇ ಪ್ರಣವಿ ಕಲಾರಾಧನೆಗೆ ಮುನ್ನುಡಿ ಬರೆಯಿತು. ಮಕ್ಕಳಿಗೆ ಕೇವಲ ಶಾಲಾ ಶಿಕ್ಷಣ ನೀಡಿದರೆ ಸಾಲದು. ಕಲೆ ಮತ್ತು ಸಂಸ್ಕಾರವನ್ನೂ ನಮ್ಮ ನಿತ್ಯದ ಆಸಕ್ತಿ ಚಟುವಟಿಕೆ ಗಳಿಂದ ಕಲಿಸಬೇಕು ಎಂಬುದು ನಮ್ಮ ಆಶಯ. ಅದಕ್ಕೆ ಪ್ರಣವಿ ಪ್ರತೀಕವಾಗಿದ್ದಾಳೆ. ಈಕೆ ಕಲಾರಂಗದ ಪ್ರತಿಮೆಯೂ ಆಗಿ ಮೇರು ಪಂಕ್ತಿಯಲ್ಲಿ ಮಿಂಚಬೇಕು ಎಂಬುದು ಗುರು ದೀಕ್ಷಾ ಶಾಸ್ತ್ರಿ ಅವರ ಆಶಯವೂ ಆಗಿದೆ.
ಗುರುಕೃಪೆ, ಕುಟುಂಬದ ಒಲುಮೆ, ಮಿತ್ರವರ್ಗದ ಮಹದಾಸೆಗಳು ಪ್ರಣವಿ ನರ್ತನ- ಗಾಯನಕ್ಕೆ ಪಲ್ಲವಿ- ಪಂಕ್ತಿಗಳಾಗಿವೆ. ಇವೆಲ್ಲದರ ಫಲವಾಗಿ ಆಕೆ ಪರಿಣತ ಕಲಾವಿದೆಯಾಗಿ ರೂಪುಗೊಂಡರೆ ಪಾಲಕರ ಶ್ರಮ-ತ್ಯಾಗ, ಗುರುಗಳ ಪಾಠಾಂತರ ಮತ್ತು ಶಿಷ್ಯವಾತ್ಸಲ್ಯಕ್ಕೆ ಮೌಲ್ಯ ದೊರಕಿದಂತೆ. ರಂಗ ಪ್ರವೇಶ  ಎಂಬುದು ಈಕೆಯ ಉನ್ನತೋನ್ನತ ಸಾಧನೆಗೆ ಮಹಾದ್ವಾರ ತೆರೆಯುವ ಮಹತ್ತರ ವೇದಿಕೆಯಾಗಲಿ ಎಂಬುದೇ ಸುಸಂಸ್ಕೃತ ಮನಸ್ಸುಗಳ ಹಾರೈಕೆ.
~ ಲೇಖನ: ರಘುರಾಮ
 
 
 
 
 
 
 
 
 
 
 

Leave a Reply