“ಒಡಲಿಗಾಗಿ ಕಡಲಿಗಿಳಿದವರು”~ರಾರಾ. (ಡಾ. ರಾಘವೇಂದ್ರ ರಾವ್)

ಬಿಳು ಬಿಳು ಬಿಳುಪಿನ ನೊರೆ ತೆರೆ ನಡುವಲಿ
ಹಾಯುವ ನಾವೆಯ ನಾವಿಕರು/
ಬಿರು ಬಿರು ಬೀಸುವ ಗಾಳಿಯ ಎಡೆಯಲಿ
ಬದುಕಿನ ಸೇತುವೆ ಕಟ್ಟಿಹರು//1//

ಹನಿ ಹನಿ ಮಳೆಹನಿ ಸಾಸಿರ ತೊರೆಗಳ
ಮಿಲನಕೆ ಸಾಕ್ಷಿಯೆ ಕಡಲಂತೆ/
ಕಣ ಕಣ ಕಣದಲು ಭೂತದ ನೆಲೆಗಳ
ವಿರಹದ ಕಿಚ್ಚದು ಸುಡುವಂತೆ//2//

ಗಿರಿ ಗಿರಿ ತಿರುಗುವ ಮಂದರ ಗಿರಿಯಲು
ಒಡಲನೆ ಕಡೆಯುವ ಕಥೆಯಂತೆ/
ದಿವಿಜರ ದನುಜರ ಭುಜಬಲ ಸೇರಲು
ಅಮೃತ ಹೀರುವ ಕನಸಂತೆ//3//

ಬುಸು ಬುಸು ಸರ್ಪದ ಮೆತ್ತನೆ ಹಾಸಿಗೆ
ಸಾವಿರ ಹೆಡೆಗಳ ನೆರಳಂತೆ/
ಮುಗು ಮುಗು ಮುಗುಳಿನ ಚಂದಿರ ವದನೆಗೆ
ಚರಣಗಳಡಿಯಲೆ ನೆಲೆಯಂತೆ//4//

ಸುಡು ಸುಡು ನೇಸರ ತಂಪಿನ ಹಿಮಕರ
ಬಿಡದಲೆ ಸಾಗುವ ನೇಹಿಗರು/
ಅಗಣಿತ ತಾರೆಯ ಜೊತೆಯಲೆ ಸಂಗರ
ಜೀವದ ಬಳ್ಳಿಯ ಹೊಸೆದಿಹರು//5//

* ಕವಿತೆಯ ಹಿನ್ನೆಲೆ :-
ದೇವ-ದಾನವರು ಅಮರತ್ವದ ಅಮೃತಕ್ಕಾಗಿ ಸಾಗರಕ್ಕಿಳಿದರೆ , ನಾವಿಕರು ಹಸಿದೊಡಲ ಹೊರೆಯಲು ಸಾಗರಕ್ಕಿಳಿದರಷ್ಟೆ!!?

 
 
 
 
 
 
 
 
 
 
 

Leave a Reply