ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯ – ಪೋಲಿಸ್ ವೃತ್ತ ನಿರೀಕ್ಷಕ ಪ್ರಕಾಶ್

ಶಿರ್ವ:- ಕಳೆದ ನವೆಂಬರ್ ತಿಂಗಳಲ್ಲಿ  ಬಂಟಕಲ್ಲು ದೇವಸ್ಥಾನದ ಸಮೀಪ ವಾಸವಿದ್ದ ವೃದ್ದ ಒಂಟಿ ಮಹಿಳೆ ವಸಂತಿ ಎಂಬವರಲ್ಲಿ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ನುಗ್ಗಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆ ಗೈದ  ಪ್ರಕರಣವನ್ನು ಭೇಧಿಸಿ, ದರೋಡೆಕೋರನ್ನು ಬಂಧಿಸಿ ಚಿನ್ನದ ಸರವನ್ನು ವಶ ಪಡಿಸಿ,  ಮರಳಿ ಮಹಿಳೆಗೆ ಒಪ್ಪಿಸುವಲ್ಲಿ  ಕರ್ತವ್ಯ ನಿರ್ವಹಿಸಿ,  ಪ್ರಕರಣವನ್ನು ಭೇಧಿಸುವಲ್ಲಿ ಪ್ರಧಾನ ಪಾತ್ರವಹಿಸಿದ ಕಾಪು ಪೋಲಿಸ್ ವೃತ್ತ ನಿರೀಕ್ಷಕ ಪ್ರಕಾಶ್, ಅಪರಾಧ ಪತ್ತೆ ವಿಭಾಗದ ಸಿಬ್ಬಂಧಿಗಳಾದ ಪ್ರವೀಣ್‌ಕುಮಾರ್, ರಾಜೇಶ್ ಹಾಗೂ ಸಿಬ್ಬಂಧಿ ವರ್ಗದವರನ್ನು ನಾಗರಿಕ ಸೇವಾ ಸಮಿತಿ(ರಿ)ಬಂಟಕಲ್ಲು ಇದರ ವತಿಯಿಂದ  ಶುಕ್ರವಾರ ಕಾಪು ವೃತ್ತ ನಿರೀಕ್ಷ ಕರ ಕಾರ್ಯಾಲಯದಲ್ಲಿ ಶಾಲು ಹೊದಿಸಿ,ಹಾರ,ಸ್ಮರಣಿಕೆ ನೀಡಿ ಧನ್ಯತಾಭಾವದಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಪ್ರಕಾಶ್ ಮಾತನಾಡಿ ಇದೊಂದು ಹೊಸ ಅನುಭವವಾಗಿದ್ದು, ತಮ್ಮ ಸೇವಾ ವಧಿಯಲ್ಲಿ ಇಂತಹ ಹಲವಾರು  ಪ್ರಕರಣಗಳನ್ನು ಭೇಧಿಸಿ ಸಂತ್ರಸ್ಥರಿಗೆ ಮರಳಿ ಒಪ್ಪಿಸಿದ ಘಟನೆಗಳು ನಡೆದರೂ, ಅಪರಾಧ ಪತ್ತೆ ಮಾಡುವುದು ಅದು ಪೋಲಿಸರ ಕೆಲಸ ಎಂದು ಹೇಳಿದ್ದಾರೆಯೇ ವಿನ: ಪೋಲಿಸರಿಗೆ ಕೃತಜ್ಞತೆ ಸಲ್ಲಿಸಿದ ಘಟನೆ ನಡೆದಿಲ್ಲ.

ಊರಿನ ಓರ್ವ ಮಹಿಳೆಗೆ ಚಿನ್ನವನ್ನು ಮರಳಿ ತಂದುಕೊಟ್ಟ ಘಟನೆಯನ್ನು ಕೃತಜ್ಞತಾ ಪೂರ್ವಕ ಸ್ಮರಿಸಿ, ಸ್ಥಳೀಯ ನಾಗರಿಕ ಸಮಿತಿಯ ಪದಾಧಿಕಾರಿಗಳು ಪೋಲಿಸ್ ಕಛೇರಿಗೆ ಬಂದು ಕ್ರೈಮ್  ಸಿಬ್ಬಂಧಿಗಳೊಂದಿಗೆ ಗೌರವಿಸುತ್ತಿರುವುದು ಅವಿಸ್ಮರಣೀಯ. ಬಂಟಕಲ್ಲು ನಾಗರಿಕ ಸೇವಾಸಮಿತಿಯ ಕಾರ್ಯ ಅನುಕರಣೀಯ ಹಾಗೂ ಶ್ಲಾಘನೀಯ ಎಂದರು.

ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಊರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಾಗ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ಪೋಲಿಸರತ್ತ ಬೊಟ್ಟು ಮಾಡುವುದು ಸಾಮಾನ್ಯವಾಗಿದೆ. ಪೋಲಿಸ್ ಸಿಬ್ಬಂಧಿಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಅಪರಾಧ ಪತ್ತೆಕಾರ್ಯದಲ್ಲಿ ಹೋರಾಟ ನಡೆಸಿ ಸಂತ್ರಸ್ಥರಿಗೆ ನ್ಯಾಯ ಒದಗಿಸಿದಾಗ ಅದನ್ನು ಕೃತಜ್ಞತಾ ಪೂರ್ವಕ ಸ್ಮರಿಸುವುದು ಪ್ರತೀ ಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪೋಲಿಸ್ ಮತ್ತು ನಾಗರಿಕರ ಧನಾತ್ಮಕ ಸಂಬಂದಗಳೇ ಊರಿನಲ್ಲಿ ಶಾಂತಿ, ಸುವ್ಯವಸ್ಥೆಗೆ ನಾಂದಿಯಾಗುತ್ತವೆ ಎಂದರು.

 
ನಾಗರಿಕ ಸಮಿತಿಯ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ, ನಾಗರಿಕ ಸೇವಾ ಸಮಿತಿ ಬಂಟಕಲ್ಲು ಪರಿಸರ ದಲ್ಲಿ ಜನಸಾಮಾನ್ಯರ ಸೇವೆಗೆ, ಅವರ ಮೂಲಭೂತ ಕೊರತೆಗಳನ್ನು ನೀಗಿಸುವಲ್ಲಿ ಪ್ರಯತ್ನಿಸುತ್ತಿದೆ. ಆಕಸ್ಮಿಕ ಘಟನೆಗಳು ಜರುಗಿದಾಗ ಉಚಿತ  ತುರ್ತುಸೇವಾ ವಾಹನ ವ್ಯವಸ್ಥೆ ಮಾಡಲಾಗಿದೆ. ಬಂಟಕಲ್ಲಿನಲ್ಲಿ ಕಳ್ಳತನ ಪ್ರಕರಣ ಆದ ತಕ್ಷಣ ಆಯಾಕಟ್ಟಿನ ಸ್ಥಳಗಳಲ್ಲಿ ಶಿರ್ವ ಪೋಲಿಸ್ ಸಹಭಾಗಿತ್ವದಲ್ಲಿ ನಾಗರಿಕ ಸಮಿತಿ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾದೆ. 
ಪೋಲಿಸ್ ಜನಸಂಪರ್ಕ ಸಭೆ ಏರ್ಪಡಿಸಿ, ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಈ ಪ್ರಕರಣವನ್ನು ಭೇಧಿಸಿ ನಮ್ಮ ಊರಿನ ಮಹಿಳೆಗೆ ಮರಳಿ  ಚಿನ್ನದಸರ ಸಿಗುವಲ್ಲಿ ಮಾಡಿದ ಸಾಹಸಕ್ಕೆ ಪೋಲಿಸ್ ಇಲಾಖೆಗೆ ನಾಗರಿಕರ ಪರವಾಗಿ ಋಣ ಸಂದಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ ದೇವಾಡಿಗ, ಕೋಶಾಧಿಕಾರಿ ಜಗದೀಶ ಆಚಾರ್ಯ, ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ ರಾವ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply