ಎಂ.ಬಿ.ಪಾಟೀಲರಿಗೊಂದು ಬಹಿರಂಗ ಪತ್ರ~ ವೀಣಾ ಬನ್ನಂಜೆ

ನೀವು ಒಂದು ಕಾಲಕ್ಕೆ ಲಿಂಗಾಯತ ಪ್ರತ್ಯೇಕತೆಗೆ ಸಿದ್ಧರಾಮಯ್ಯ ಅವರಿಗೆ ಕೊರಳು ಕೊಟ್ಟವರು. ಆಗ ಆದಷ್ಟು ವೀರಶೈವ ಲಿಂಗಾಯತ ಎಂದು ಒಡೆದಿರಿ. ನಿಮಗೆ ಹಾಗೆ ಮಾಡುವುದರಿಂದ ಏನು ಲಾಭ ಇತ್ತು ಎನ್ನುವುದು ಈ ಬಾರಿ ನೀವು ಸಿದ್ದರಾಮಯ್ಯರ ಹಿಂದೆ ಸುಳಿದಾಡುವ ಪರಿಯಿಂದಲೇ ಅರ್ಥ ಮಾಡಿಕೊಳ್ಳ ಬಹುದು.

ಊರಿಗೆಲ್ಲ ನೀರು ಕೊಟ್ಟಿರಿ. ಬರಗಾಲಕ್ಕೆ ಸಹಕರಿಸಿದಿರಿ. ಕೆರೆ ಯೋಜನೆ ಪುರಸ್ಕರಿಸಿದಿರಿ. ಒಳ್ಳೆಯ ಕೆಲಸ ನೀವು ಮಾಡಿದ ಪಾಪ ತೊಳೆಯಿತು. ಬಸವಣ್ಣ ಕಾಯಕವೇ ಕೈಲಾಸ ಎಂದದ್ದೇ ಹೊರತು ಮನೆ ಒಡೆಯುವ ಕೆಲಸ ಮಾಡಿ ಎಂದು ಹೇಳಲಿಲ್ಲ. ಇವನಾರವ ಇವನಾರವ ಎಂದವರನ್ನೂ ಇಂವ ನಿಮ್ಮವ ಎಂದೆನಿಸಿ ಎಂಬ ಅದ್ಭುತ ಪಾಠ ನಿಮ್ಮ ಕೈಯಲ್ಲಿ ತಲೆಕೆಳಗಾಯಿತು. ಬಸವಣ್ಣನನ್ನು, ಬಸವಧರ್ಮ ನಂಬಿದವರನ್ನೇ ಒಡೆದು ಚೂರು ಮಾಡಿದಿರಿ.

ಅದು ಖಂಡಿತಕ್ಕೂ ಬಸವಣ್ಣನ ತತ್ವ ಸಿದ್ಧಾಂತಕ್ಕೆ ನೀವು ಬಳಿದ ಮಸಿ. ಅದರ ಪಾಪ ನಿಮ್ಮ ಬೆನ್ನಿಗಿದೆ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ನೋಡುತ್ತಿರಿ. ಬಹಳ ದೊಡ್ಡ ತಪಸ್ವಿಗಳೆಲ್ಲ ನಿಮ್ಮ ಈ ರಾಜಕೀಯಕ್ಕೆ ಕಣ್ಣೀರು ಹಾಕಿದ್ದಾರೆ. ದೊಡ್ಡವರ ಕಣ್ಣೀರು ಶಾಪಕ್ಕಿಂತ ಕೆಟ್ಟದ್ದು. ಈಗ ಹಿಂದೂ ಧರ್ಮವನ್ನು ಒಡೆಯಲು ಜಾಗ ಹುಡುಕುತ್ತಿದ್ದೀರಿ. ಹೊಸ ಪಾಪದ ಬುತ್ತಿ ಕಟ್ಟಿಕೊಳ್ಳಲು ಹೊರಟಿದ್ದೀರಿ.

ಈಗ ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿ ತೋರಿಸಿ ಸಾಕು. ಆಡದೇ ಮಾಡುವವನು ರೂಢಿಯೊಳಗುತ್ತಮನು …..ವಚನ ಪರಂಪರೆಯ ನಿಮಗೆ ಇದರ ಅರ್ಥ ವಿವರಿಸಬೇಕಿಲ್ಲ.

ಕೆರೆ ನೀರಾವರಿ ಕಾಲಕಾಲಕ್ಕೆ ಉಳಿಯುತ್ತದೆ ನಿಮ್ಮನ್ನು ಎತ್ತರೆತ್ತರಕ್ಕೆ ಏರಿಸುತ್ತವೆ. ಒಡೆದಿದ್ದು, ಬಡಿದಿದ್ದು ನಿಮ್ಮ ಬೆನ್ನು ಹತ್ತುತ್ತವೆ ಕೆಳಗೆ ಒತ್ತುತ್ತವೆ ಕೆಡಹುತ್ತವೆ. ಇನ್ನೊಬ್ಬರನ್ನು ಒಡೆಯುವವ ತಾನು ಚೂರು ಚೂರಾಗಿ ಹೋಗುತ್ತಾನೆ.

ಈಗ ನಿಮಗೆ ಒದಗಿಸಿರುವ ಅಧಿಕಾರ ಕ್ಷೇತ್ರದಲ್ಲಿ ಕೆಲಸ ಮಾಡಿ. ಅದು ಬಿಟ್ಟು ತನ್ನ ಪಾಡಿಗೆ ತಾನು ನಂಬಿದ ಧರ್ಮ, ದೇವರು, ದೇಶ ಮತ್ತು ನದಿ – ಪರಿಸರ ರಕ್ಷಣೆಗೆ ಕಂಕಣ ತೊಟ್ಟ ಒಬ್ಬ ಹುಡುಗನಿಗೆ ಬೆದರಿಕೆ ಹಾಕುವ ಗೂಂಡಾಗಿರಿ ಮಾಡಬೇಡಿ. ಒಳ್ಳೆಯ ಕೆಲಸ ಮಾಡುವವರು ಶತ್ರುವೇ ಇದ್ದರೂ ದೇಶಕ್ಕೆ, ಜನತೆಗೆ, ಪರಿಸರಕ್ಕೆ ಒಳಿತಾಗುವಂತಿದ್ದರೆ ಸಹಿಸಬೇಕು. ಅದು ನಿಜವಾದ ರಾಜಕಾರಣಿಯ ಲಕ್ಷಣ.

ಒಬ್ಬ ಜೀವನವನ್ನು ಸೇವೆಗೆ ಮುಡಿಪಾಗಿಟ್ಟ ಹುಡುಗನ ಹೆಸರನ್ನೂ ಅಪಭ್ರಂಶಗೊಳಿಸುತ್ತೀರಿ. ಅದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ. ಸರಿಯಾಗಿ ಉಚ್ಚರಿಸುವುದು ಹೇಗೆ ಎಂದು ತಿಳಿದು ಉಚ್ಚರಿಸಿ, ಕನ್ನಡ ರಾಜ್ಯದ ಮಂತ್ರಿ ನೀವು, ತಪ್ಪು ಸಂದೇಶ ರವಾನೆ ಆದೀತು.

ಹಾಗೆಯೇ ಆ ಹುಡುಗ ತಾನು ಒಬ್ಬರಿಂದ ಪ್ರತಿಫಲ ಅಪೇಕ್ಷಿಸದೆ ಕುಟುಂಬದಂಥ ಒಂದು ಗುಂಪು ಬೆಳೆಸಿದ್ದಾರೆ. ಹಲವು ನದಿ ಸ್ವಚ್ಛ ಮಾಡಿದ್ದಾರೆ. ನೀವು ಕೆಡಿಸಿದ ಸರ್ಕಾರಿ ಶಾಲೆಗಳನ್ನು ಸುಂದರಗೊಳಿಸಿದ್ದಾರೆ. ಅಲ್ಲಿ ಇಲ್ಲಿ ಒಗೆದ ದೇವರ ಚಿತ್ರಗಳನ್ನು ಗೌರವಯುತವಾಗಿ ಜೋಡಿಸಿದ್ದಾರೆ. ನೀವು ಸರ್ಕಾರದಿಂದ ಪಡೆದ ಯಾವ ಸವಲತ್ತು, ಅಧಿಕಾರ, ಹಣ ಪಡೆದಿಲ್ಲ.

ಸಾಧ್ಯವಾದರೆ ಅಂತಹ ಕೆಲಸ ಮಾಡಿ ಅವರನ್ನು ಕೆಲಸದ ಮೂಲಕ ಗೆಲ್ಲಿ. ಅಲ್ಲದಿದ್ದರೆ ಒಳ್ಳೆಯ ಕೆಲಸ ಮಾಡಿದ್ದನ್ನು ಕಷ್ಟವಾದರೂ, ಮೌನವಾಗಿದ್ದು ಗೌರವಿಸುವ ಸಾಮಾನ್ಯ ಸಂಸ್ಕೃತಿ ಬೆಳೆಸಿ. ಅದೆಲ್ಲ ಬಿಟ್ಟು ದಬ್ಬಾಳಿಕೆ ದೌರ್ಜನ್ಯದ ಗೂಂಡಾಗಿರಿ ಮಾತು ಆಡಬೇಡಿ.

ನೀವು ಹತ್ತಿದಾಗ ಒಮ್ಮೆ ಮಂತ್ರಿ, ಇಳಿದಾಗ ನಿಮ್ಮ ಪಾಡೇನು ಯೋಚಿಸಿ. ಈ ಹುಡುಗ ಖಾಯಂ ಚಕ್ರವರ್ತಿ, ಅದು ದೈವದತ್ತ ನೀವು ಕಸಿಯಲಾರಿರಿ. ನಿಮ್ಮನ್ನು ಕೇಳಿ ಒಳ್ಳೆಯದನ್ನು ಮಾಡಿದ್ದಲ್ಲ. ನೀವು ಹೇಳಿದಿರಿ ಅಂತ ನಿಲ್ಲುವುದೂ ಇಲ್ಲ. ಈ ದ್ವೇಷ ಕಾರುವ ಅಸಹಾಯಕ ರಾಜಕಾರಣ ನಿಲ್ಲಿಸಿ. ಇಲ್ಲಿ ನಿಮ್ಮಷ್ಟೇ ನಮಗೂ ಬದುಕುವ ಹಕ್ಕಿದೆ
~ವೀಣಾ ಬನ್ನಂಜೆ
ಸುಮ್ಮನೆ.

 
 
 
 
 
 
 
 
 
 
 

Leave a Reply