ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

  1. ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.

    ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಕಳೆದ ಸುಮಾರು ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಚೆಗೆ ಶಸ್ತ್ರಚಿಕಿತ್ಸೆಯೂ ನಡೆದು ಗುಣಮುಖರಾಗಿದ್ದರಾದರೂ, ಮತ್ತೆ ಸಮಸ್ಯೆ ಉಲ್ಬಣಗೊಂಡು ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದರು.

    ಮೃತರು ವೃದ್ಧೆ ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಈರ್ವರು ಪುತ್ರಿಯರು ವಿವಾಹಿತರಾಗಿದ್ದರೆ, ಒಬ್ಬಾಕೆ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ.

    ಸುಮಾರು 3 ದಶಕಗಳ ವೈದ್ಯಕೀಯ ಅನುಭವವುಳ್ಳ ಡಾ. ಆಚಾರ್ಯ, ಅನುಭವಿ ವೈದ್ಯ ಮಾತ್ರವಲ್ಲದೆ ದಕ್ಷ ಆಡಳಿತಗಾರ ಹಾಗೂ ಆಯುರ್ವೇದ ಶಿಕ್ಷಣ ತಜ್ಞರಾಗಿದ್ದರು.

    ಮೈಸೂರು ವಿ.ವಿ. ಅಧೀನಕ್ಕೊಳಪಟ್ಟಿದ್ದ ಉಡುಪಿ ಆಯುರ್ವೇದ ಕಾಲೇಜಿನಲ್ಲಿ (ಈಗಿನ ಎಸ್.ಡಿ.ಎಂ.) ಬಿಎಎಂಎಸ್ ಪದವಿ ಪಡೆದ ಅವರು, ಬಳಿಕ ಜಾಮ್ ನಗರ್ ಗುಜರಾತ್ ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ ಪಡೆದರು. ಪ್ರತಿಭಾನ್ವಿತ ವಿದ್ಯಾರ್ಥಿ ಯಾಗಿದ್ದ ಅವರು ಚಿನ್ನದ ಪದಕ ಪಡೆದಿದ್ದರು . ಗುಜರಾತ್ ವಿ.ವಿ. ಕಾಯಚಿಕಿತ್ಸೆ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದರು.

    1999ರಲ್ಲಿ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜಿಗೆ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಮೆಚ್ಚಿನ ಶಿಕ್ಷಕರಾಗಿದ್ದರು. ದೇಶ ವಿದೇಶಗಳಲ್ಲಿ ಆಯುರ್ವೇದ ಕುರಿತ ಉಪಸ್ಯಾಸಗಳು, ವಿಚಾರ ಮಂಡನೆ, ಸಮ್ಮೇಳನಗಳಲ್ಲಿ ಭಾಗವಹಿಸಿದ್ದ ಅವರಿಗೆ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಆಯುರ್ವೇದ ಸಂಸ್ಥೆ 2008ರಲ್ಲಿ ಕಾಯಚಿಕಿತ್ಸಾ ರತ್ನ ಪ್ರಶಸ್ತಿ ನೀಡಿತ್ತು.

  2. ದೇಶ ವಿದೇಶಗಳಿಂದ ಅನೇಕ ಮಂದಿ ಚಿಕಿತ್ಸೆಗಾಗಿ ಅವರಲ್ಲಿಗೆ ಆಗಮಿಸುತ್ತಿದ್ದರು. ಅಂಬಲಪಾಡಿಯ ಸ್ವಗೃಹದಲ್ಲೂ ಚಿಕಿತ್ಸೆ ನೀಡುತ್ತಿದ್ದರು.

    ಡಾ. ಜಿ. ಶ್ರೀನಿವಾಸ ಆಚಾರ್ಯ ನಿಧನಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ, ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಮಮತಾ ಕೆ. ವಿ.,  ಎಸ್.ಡಿ.ಎಂ. ಫಾರ್ಮಸಿ ಮಹಾಪ್ರಬಂಧಕ ಡಾ. ಮುರಳೀಧರ ಬಲ್ಲಾಳ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ

 
 
 
 
 
 
 
 
 
 
 

Leave a Reply