‘ನಾವು ಕಂಡೂ ಕಾಣದ ಗಾಂಧಿ’ ಪುಸ್ತಕ ಲೋಕಾರ್ಪಣೆ

ದೇಶ ವಿಭಜನೆಗೆ ಗಾಂಧೀಜಿ ಕಾರಣವೆಂಬುದು ಹಸಿಸುಳ್ಳು, ದೇಶ ವಿಭಜನೆಗೆ ಗಾಂಧೀಜಿಯವರೇ ಮುಖ್ಯ ಕಾರಣ ಎಂದು ಇಂದಿನ ಯುವಕರ ಮೆದುಳುಗಳಲ್ಲಿ ಬೇಡವಾದ  ವಿಷಯವನ್ನು  ತುಂಬಲಾಗುತ್ತಿದೆ. ಹಾಗಾಗಿ ಗಾಂಧೀಜಿಯವರ ಬಗ್ಗೆ ನೈಜ ಇತಿಹಾಸ ತಿಳಿಯುವ ಮತ್ತು ತಿಳಿಸುವ ಅಗತ್ಯವಿದೆ. ಆ ಕೆಲಸವನ್ನು ‘ನಾವು ಕಂಡೂ ಕಾಣದ ಗಾಂಧಿ’ ಕೃತಿಯಲ್ಲಿ ಮಾಡಲಾಗಿದೆ” ಎಂದು ಎ.ವಿ ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪಿ.ವಿ ಭಂಡಾರಿ ಹೇಳಿದರು.

ಉಡುಪಿಯಲ್ಲಿ ಆಯೋಜಿಸಲಾಗಿದ್ದ ಓ.ಆರ್ ಪ್ರಕಾಶ್ ಬರೆದಿರುವ “ನಾವು ಕಂಡೂ ಕಾಣದ ಗಾಂಧಿ” ಪುಸ್ತಕ ಲೋಕಾರ್ಪ ಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭಾರತದಲ್ಲಿ ಗಾಂಧೀಜಿಯವರನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕುರುಡರಾಗಿದ್ದಾರೆ. ವಿದೇಶಿಯರು ಗಾಂಧೀಜಿಯನ್ನು ಅನುಸರಿಸುತ್ತಿದ್ದಾರೆ‌. ಇಂದಿನ ಯುವ ಮನಸ್ಸುಗಳಲ್ಲಿ ಗಾಂಧೀಜಿ ಯವರ ಬಗ್ಗೆ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ.

ಗಾಂಧೀಜಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಇಂತಹ ಸಂದರ್ಭದಲ್ಲಿ ಗಾಂಧೀಜಿಯವರ ಬಗ್ಗೆ ನೈಜ ಇತಿಹಾಸ ತಿಳಿಸುವ ಪುಸ್ತಕ ಬಿಡುಗಡೆ ಆಗುತ್ತಿರುವುದು ಬಹಳ ಸಂತೋಷದ ವಿಚಾರ” ಎಂದು ಹೇಳಿದರು.

ಲೇಖಕ ಅರವಿಂದ ಚೊಕ್ಕಾಡಿ ಮಾತನಾಡಿ, “ಲೇಖಕ ಬೇರ್ಪಟ್ಟ ಮನಸ್ಸುಗಳನ್ನು ಲೇಖನಿಯ ಮೂಲಕ ಹೊಲಿಗೆ ಹಾಕುವ ಕೆಲಸ ಮಾಡಬೇಕು. ಭಾರತದಲ್ಲಿ ಗಾಂಧೀಜಿ ಯವರಿಗೆ ಬೆಂಬಲ ನೀಡಿದವರು ಬಲಪಂಥೀಯರಲ್ಲ, ಎಡಪಂಥೀಯರು ಸಹ ಅಲ್ಲ. ಬದಲಾಗಿ ಯಾವುದೇ ರೀತಿಯ ಸಿದ್ಧಾಂತ ಇಲ್ಲದ ಸಹಜ ಮನುಷ್ಯರು” ಎಂದು ಹೇಳಿದರು.

“ಸಮಾಜದಲ್ಲಿ ಪ್ರತಿಯೊಂದನ್ನು ಒಡೆಯಲಾಗುತ್ತಿದೆ. ಗಾಂಧೀಜಿ ಪರ ಎಂದು ಹೇಳುವ ಒಂದು ಗುಂಪಾದರೆ, ಇನ್ನೊಂದು ಗುಂಪು ಗಾಂಧೀಜಿಗೆ ವಿರೋಧಿಸುವಂತಹ ದ್ದಾಗಿರುತ್ತದೆ. ಗಾಂಧೀಜಿ ಯಾವ ರಾಮನನ್ನು ಜಪಿಸುತ್ತಿದ್ದರೋ ಆ ರಾಮ ನನ್ನೇ ಇವರು ಆರಾಧಿಸುತ್ತಿದ್ದಾರೆ. ಆದರೂ ಭಿನ್ನಾಭಿಪ್ರಾಯಗಳಿವೆ” ಎಂದು ಹೇಳಿದರು. ‌

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್‌ ಶಾಂತರಾಜ ಐತಾಳ್‌ ವಹಿಸಿದ್ದರು. ಹಿರಿಯ ಉಪನ್ಯಾಸಕ ಡಾ. ಅಶೋಕ ಕಾಮತ್‌ ಪುಸ್ತಕ ಪರಿಚಯ ಮಾಡಿದರು. ಪ್ರಕಾಶಕ ಕೋಡೂರು ಗಣೇಶ್, ಪುಸ್ತಕದ ಲೇಖಕ ಮಂಗಳೂರಿನ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಓ. ಆರ್. ಪ್ರಕಾಶ್, ಕಸಾಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಉಪಸ್ಥಿತರಿದ್ದರು. ಸ.ಮಾ.ಹಿ.ಪ್ರಾ.ಶಾಲೆ ಬೈಂದೂರಿನ ಸಹ ಶಿಕ್ಷಕರಾದ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply