ರಾಜಧಾನಿಯಲ್ಲಿ ವಿದ್ಯೇಶ ನಾದೋತ್ಸವ ಸಂಭ್ರಮ

ಬೆಂಗಳೂರು: ಉಡುಪಿ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ 70ನೇ ಜನ್ಮನಕ್ಷತ್ರ ಮಹೋತ್ಸವದ ಪ್ರಯುಕ್ತ ಜೂನ್ 25ಮತ್ತು 26ರಂದು ವಿದ್ಯೇಶ ನಾದೋತ್ಸವ-‘ ವಿಶೇಷ ಕಾಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಗಿರಿನಗರದ ೨ನೇ ಹಂತದಲ್ಲಿರುವ ಭಾಗವತ ಕೀರ್ತಿಧಾಮದಲ್ಲಿ ಎರಡು ದಿನಗಳ ಕಾರ್ಯಕ್ರಮ ವಿಜೃಂಭಣೆಯಿ೦ದ ಸಂಪನ್ನ ಗೊಳ್ಳಲಿದೆ ಎಂದು ಖ್ಯಾತ ವಿದುಷಿ ಶುಭಾ ಸಂತೋಷ್ ತಿಳಿಸಿದ್ದಾರೆ.
೨೫ರ ಸಂಜೆ ೫ಕ್ಕೆ ಹಿಂದುಸ್ತಾನಿ ಗಾಯಕ ಪಂಡಿತ್ ರಾಘವೇಂದ್ರ ಗುಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಗೀತ ಪ್ರಿಯರಿಗಾಗಿಯೇ ಭಂಡಾರಕೇರಿ ಮಠ ಆಯೋಜಿಸಿದ್ದ ಶ್ರೀ ವಿದ್ಯೇಶತೀರ್ಥ ವಿರಚಿತ ಕೃತಿಗಳ ಆನ್‌ಲೈನ್ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. 150ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 4 ಹಂತದ ವಯೋಮಾನದವರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಸಮೂಹ ಗಾಯನ: ಇದೇ ಸಂದರ್ಭ `ಗುರು ವಿಜಯಗೀತೆ’ ಸಾಮೂಹಿಕ ಗಾಯನವಿದೆ. 100ಕ್ಕೂ ಹೆಚ್ಚು ಮಾತೆಯರು ಏಕ ಕಂಠದಲ್ಲಿ ಹಾಡಲಿದ್ದಾರೆ. (ಶ್ರೀಮನ್ ಮಧ್ವಾಚಾರ್ಯರ ಜೀವನ ಚರಿತ್ರೆ ಮತ್ತು ಮಹೋನ್ನತ ಸಾಧನೆಗಳನ್ನು ಕುರಿತಾದ ಮಧ್ವವಿಜಯ ಕೃತಿಯನ್ನು ವಿದ್ಯೇಶ ತೀರ್ಥರು 40 ಚರಣಗಳಲ್ಲಿ ಕನ್ನಡಕ್ಕೆ ಅನುವಾದಿಸಿದ ಪದ್ಯ ಸಂಗ್ರಹವೇ `ಗುರು ವಿಜಯಗೀತೆ’)  ನಂತರ ವಿದ್ಯೇಶತೀರ್ಥರು ಆಶೀರ್ವಚನ ನೀಡಲಿದ್ದಾರೆ.
ಜೂನ್ ೨೬ರ ಸಂಜೆ ೫ಕ್ಕೆ ಗುರು ವಿಜಯಗೀತೆ ಕಿರು ಚಿತ್ರ ಲೋಕೇಶಾರ್ಪಣೆ ಆಯೋಜನೆಗೊಂಡಿದೆ. ವಿದುಷಿ ಶುಭಾ ಸಂತೋಷ್ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಸಂಯೋಜಿತವಾದ 1ಗಂಟೆ45ನಿಮಿಷದ ಕಿರುಚಿತ್ರ 6 ವಿಭಾಗ ಹೊಂದಿದೆ. ವಿವಿಧ ಮಠಾಧೀಶರು ಇದನ್ನು ಯು ಟ್ಯೂಬ್‌ಗೆ ಸಮರ್ಪಣೆ ಮಾಡುತ್ತಿರುವುದು ವಿಶೇಷ.
ಉಡುಪಿ ಜಿಲ್ಲೆ ಬಾರ್ಕೂರಿನಲ್ಲಿರುವ ಭಂಡಾರಕೇರಿ ಮೂಲ ಮಠದ ಪರಿಸರದಲ್ಲಿ 25ಕ್ಕೂ ಹೆಚ್ಚು ಕಲಾವಿದರ ತಂಡ ಶ್ರಮವಹಿಸಿ ಕಿರು ಚಿತ್ರ ಚಿತ್ರೀಕರಿಸಿದೆ. 4 ವರ್ಷದ ವಿಶೇಷ ಯೋಜನೆ ಸಮಗ್ರವಾಗಿ ಸಂಪಾದನೆಗೊ೦ಡು ಇದೀಗ ಲೋಕೇಶಾರ್ಪಣೆ ಗೊಳ್ಳುವ ಶುಭ ಮುಹೂರ್ತದಲ್ಲಿದೆ. ವಿದುಷಿ ಶುಭಾ ಸಂತೋಷ್ ಗಾಯನ, ಅಭಿರಾಮ ಭರತವಂಶಿ ಸಹ ಗಾಯನ, ಹಿರಿಯಭರತನಾಟ್ಯ ಕಲಾವಿದ ಪಾರ್ಶ್ವನಾಥ ಉಪಾಧ್ಯೆ ನೃತ್ಯ, ಖ್ಯಾತ ಕಲಾವಿದರಾದ ಜಗದೀಶ್ ಮತ್ತು ಕೆ.ಎಂ. ಶೇಷಗಿರಿ ಅವರ ವರ್ಣಚಿತ್ರ, ಕೃಷ್ಣಮೂರ್ತಿ ತುಂಗ ಅವರ ಯಕ್ಷಗಾನಗಳ ಸಂಗಮವಿದೆ.
ಸೋಸಲೆ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು, ಮಂತ್ರಾಲಯದ ಸುಬುಧೇಂದ್ರ ತೀರ್ಥರು, ಮಾಧವತೀರ್ಥ ಮಠದ ವಿದ್ಯಾಸಾಗರ ತೀರ್ಥರು, ಕಿರಿಯ ಶ್ರೀ ವಿದ್ಯಾವಲ್ಲಭ ತೀರ್ಥರು, ಶ್ರೀಪಾದರಾಜರ ಮಠದ ಸುಜಯನಿಧಿ ತೀರ್ಥರು ಈಶುಭ ಸಂದರ್ಭಕ್ಕೆ ಸಾಕ್ಷಿಯಾಗಿದ್ದಾರೆ.

ವಾಯುದೇವರ ಅವತಾರವಾದ ಆಚಾರ್ಯ ಮಧ್ವರ ಸಾಧನೆ ದರ್ಶನ ಮಾಡಿಸುವ ತೋರುವ ಗ್ರಂಥವೇ ಸುಮಧ್ವವಿಜಯ. ಮಹಾನ್ ಸಾಧಕರನ್ನು ಸ್ಮರಿಸುವ ಮೂಲಕ ನಮ್ಮ ಜೀವನ ಪಾವನಮಾಡಿಕೊಳ್ಳಬೇಕು ಎಂದು ಹಿರಿಯರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಪ್ಪಟ ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಮಧ್ವವಿಜಯವನ್ನು ಶ್ರೀ ವಿದ್ಯೇಶತೀರ್ಥರು ಲೋಕಕ್ಕೆ ಕಟ್ಟಿಕೊಟ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಭಕ್ತ ಕೋಟಿಗೂ ಇದರ ಪಠಣದಿಂದ ಪುಣ್ಯ ಲಭಿಸಲಿದೆ. ಕನ್ನಡ ಕೃತಿಯು ಕಿರುಚಿತ್ರ ರೂಪದಲ್ಲೂ ಲೋಕೇಶಾರ್ಪಣೆ ಗೊಳ್ಳುತ್ತಿರುವುದೂ ಶುಭ ಮತ್ತು ಸಂತೋಷದಾಯಕ ಸಂಗತಿ. ಇದು ಯುವ ಪೀಳಿಗೆಗೆ ಜೀವನೋತ್ಸಾಹ ತುಂಬುವ ಚಿಲುಮೆಯಾಗಲಿ. | ಶ್ರೀ ಈಶಪ್ರಿಯ ತೀರ್ಥರು, ಅದಮಾರು ಮಠ, ಉಡುಪಿ

 
 
 
 
 
 
 
 
 
 
 

Leave a Reply