ಪಿ.ಎಂ. ಸ್ವನಿಧಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ಮಗದೊಮ್ಮೆ ದೇಶದಲ್ಲೇ ಮೊದಲ ಸ್ಥಾನಕ್ಕೇರಲಿ: ಮಾಜಿ ಸಚಿವ ರಾಮದಾಸ್

ಪ್ರಧಾನ ಮಂತ್ರಿಗಳ ‘ಪಿಎಂ ಸ್ವನಿಧಿ ಸೆ, ಪಿಎಂ ಸಮೃದ್ಧಿ ತಕ್’ ಎಂಬ 8 ಯೋಜನೆಗಳನ್ನು ದೇಶದಾದ್ಯಂತ ನಗರ ಪ್ರದೇಶದಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ರಾಜ್ಯದ 18 ಜಿಲ್ಲೆಗಳನ್ನು ‘ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ ಮತ್ತು ‘ವಿಶ್ವಕರ್ಮ ಯೋಜನೆ’ಯ ಅನುಷ್ಠಾನಕ್ಕೆ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ನಗರ ಪ್ರದೇಶದಲ್ಲಿರುವ ರಸ್ತೆಬದಿ ವ್ಯಾಪಾರಿಗಳು ಯಾವುದೇ ಗ್ಯಾರಂಟಿ ನೀಡದೆ ಪಡೆಯಬಹುದಾದ ಸಾಲ ಸೌಲಭ್ಯವನ್ನು ಜೂನ್ 1, 2000ದಂದು ಪ್ರಧಾನ ಮಂತ್ರಿಗಳು ಜಾರಿಗೆ ತಂದಿದ್ದು, ಸದ್ರಿ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಉಡುಪಿ ಜಿಲ್ಲೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಗದೊಮ್ಮೆ ಗರಿಷ್ಠ ಫಲಾನುಭವಿಗಳನ್ನು ನೊಂದಾಯಿಸುವ ಮೂಲಕ ಉಡುಪಿ ಜಿಲ್ಲೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆಯುವಂತಾಗಲಿ ಎಂದು ಮಾಜಿ ಸಚಿವ ಹಾಗೂ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ರಾಮದಾಸ್ ಹೇಳಿದರು.

ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಮಾಹಿತಿ ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ರಾಜ್ಯದ 311 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ ಆರ್ಥಿಕ ಸ್ಥಿತಿಯ ಅಧ್ಯಯನ ಮಾಡಲು ಅಭಿಯಾನ ಹಮ್ಮಿಕೊಳ್ಳಲು ಸುತ್ತೋಲೆ ಹೊರಡಿಸಿದೆ. ಪಿ.ಎಂ. ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಮನೆ ಮನೆಗೆ ತರಕಾರಿ ವಿತರಕರು, ಹಾಲು ವಿತರಕರು, ಪತ್ರಿಕೆ ವಿತರಕರು, ಇಸ್ತ್ರಿ ವ್ಯವಹಾರ, ಮನೆಗಳಲ್ಲಿ ಟೈಲರಿಂಗ್ ಕೆಲಸ ಮಾಡುವವರು, ಆಹಾರ ಪದಾರ್ಥಗಳ ಉತ್ಪಾದನೆ ಮಾಡುವವರು, ಫುಡ್ ಡೆಲಿವರಿ ಬಾಯ್ಸ್, ಕೇಟರಿಂಗ್ ವ್ಯವಸ್ಥೆಯಡಿ ಅಡುಗೆ ತಯಾರಕರು, ಬಡಿಸುವವರು, ಪಾತ್ರೆ ತೊಳೆಯುವವರು ಇತ್ಯಾದಿ ಸೇವಾ ನಿರತರನ್ನು ಈ ಯೋಜನೆಯಡಿ ತರುವ ವ್ಯವಸ್ಥೆ ಮಾಡಲಾಗಿದೆ. ಪಿ.ಎಂ. ಸ್ವನಿಧಿ ಯೋಜನೆಯಡಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಆಯಾಯ ನಗರಾಡಳಿತ ಸಂಸ್ಥೆಯಲ್ಲಿ ನೊಂದಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾಲ ಸೌಲಭ್ಯಕ್ಕೆ ಆಯ್ಕೆಯಾದವರಿಗೆ ‘ಲೆಟರ್ ಆಫ್ ರೆಕಮಂಡೇಷನ್’ ಎಂಬ ಪತ್ರವನ್ನು ಬ್ಯಾಂಕ್ ಗಳಿಗೆ ಕಳುಹಿಸಿಕೊಡಲಾಗುತ್ತದೆ. ಬ್ಯಾಂಕಿನವರು ಮೊದಲನೇ ಹಂತದಲ್ಲಿ ರೂ.10,000 ಎರಡನೇ ಹಂತದಲ್ಲಿ ರೂ.20,000 ಮೂರನೇ ಹಂತದಲ್ಲಿ ರೂ.50,000 ಹಾಗೂ ಇದನ್ನು ಮರು ಪಾವತಿಸಿದವರಿಗೆ ರೂ.10 ಲಕ್ಷ ವರೆಗಿನ ಮುದ್ರಾ ಪರಿವರ್ತಿತ ಸಾಲವನ್ನು ಪಡೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿ ಜಿಲ್ಲೆಯಲ್ಲಿ ಗರಿಷ್ಠ ನೊಂದಾವಣೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ ಮಾತನಾಡಿ ಸರಕಾರದ ವಿವಿಧ ಯೋಜನೆಗಳನ್ನು ಜನತೆಗೆ ತಲುಪಿದಾಗ ಮಾತ್ರ ಯೋಜನೆ ಸಾರ್ಥಕವಾಗುತ್ತದೆ. ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಮತ್ತು ವಿಶ್ವಕರ್ಮ ಯೋಜನೆಯನ್ನು ಪ್ರತಿ ವಾರ್ಡ್, ಬೂತ್ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳು ಗರಿಷ್ಠ ಪ್ರಮಾಣದಲ್ಲಿ ಫಲಾನುಭವಿಗಳ ನೊಂದಾವಣೆಗೆ ಕಂಕಣಬದ್ಧರಾಗಿ ಶ್ರಮಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ಸಮಗ್ರ ಮಾಹಿತಿಯನ್ನು ಪ್ರಚಾರ ಮಾಡುವ ಜೊತೆಗೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಕಾರ್ಯಕರ್ತರು ನಗರ ಪ್ರದೇಶದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಗರಿಷ್ಠ ಸಂಖ್ಯೆಯಲ್ಲಿ ನೊಂದಾಯಿಸುವ ಮೂಲಕ ಮಗದೊಮ್ಮೆ ಉಡುಪಿ ಜಿಲ್ಲೆ ದೇಶದಲ್ಲೇ ಮೊದಲನೆಯ ಸ್ಥಾನವನ್ನು ಪಡೆಯುವಂತೆ ಸಂಘಟಿತರಾಗಿ ತೊಡಗಿಸಿಕೊಳ್ಳಬೇಕು ಎಂದರು.

ಮಾಜಿ ಸಚಿವ ರಾಮದಾಸ್ ರವರನ್ನು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಪಿ.ಎಂ. ಸ್ವನಿಧಿ ಯೋಜನೆಯ ಜಿಲ್ಲಾ ಸಂಚಾಲಕರಾದ ಕಿಶೋರ್ ಕುಮಾರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಮಡಿವಾಳ, ನಳಿನಿ ಪ್ರದೀಪ್ ರಾವ್, ಗುರುಪ್ರಸಾದ್ ಶೆಟ್ಟಿ, ಸದಾನಂದ ಬಳ್ಕೂರ್, ಅನಿತಾ ಶ್ರೀಧರ್, ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಪ್ರತಾಪ್ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಿ.ಶೆಟ್ಟಿ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಪಣಿಯೂರು, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಕುಲಾಲ್, ಅರುಣ್ ಕುಮಾರ್ ಬಾಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಗುರ್ಮೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನೋದ್ ರಾಜ್, ಜಿಲ್ಲಾ ಎಸ್‌.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು, ಬಿಜೆಪಿ ಕಾಪು ಮಂಡಲಾಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಕೊಳ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಸುಂದರ್ ಕಲ್ಮಾಡಿ, ಹರೀಶ್ ಶೆಟ್ಟಿ, ಸಂತೋಷ್ ಜತ್ತನ್, ಗಿರಿಧರ್ ಆಚಾರ್ಯ, ಅಶೋಕ್ ನಾಯ್ಕ್, ಚಂದ್ರಶೇಖರ್ ಯು., ರಜನಿ ಹೆಬ್ಬಾರ್, ಕಲ್ಪನಾ ಸುಧಾಮ, ಭಾರತಿ ಪ್ರಶಾಂತ್, ಗೀತಾ ಡಿ. ಶೇಟ್, ಸವಿತಾ ಹರೀಶ್ ರಾಮ್, ಕಾಪು ಪುರಸಭಾ ಸದಸ್ಯರಾದ ಕಿರಣ್ ಆಳ್ವ, ಅನಿಲ್ ಕುಮಾರ್ ಹಾಗೂ ದಿನಕರ ಪೂಜಾರಿ, ರೋಷನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply