ಚುನಾವಣಾ ಕಾರ್ಯಗಳನ್ನು ಪಾರದರ್ಶಕತೆಯಿಂದ ನಿರ್ವಹಿಸಿ : ಪ್ರಾದೇಶಿಕ ಆಯುಕ್ತ ಪ್ರಕಾಶ್

ಉಡುಪಿ: ಚುನಾವಣಾ ಕಾರ್ಯಗಳನ್ನು ನಿರ್ವಹಿಸುವಾಗ ಪಾರದರ್ಶಕತೆಯನ್ನು ಕಾಪಾಡುವುದರಿಂದ ಅನಾವಶ್ಯಕ ದೂರುಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಪ್ರಾದೇಶಿಕ ಆಯುಕ್ತ ಪ್ರಕಾಶ್ ಹೇಳಿದರು. ಅವರು ಇಂದು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಚುನಾವಣಾ ಪೂರ್ವ ತಯಾರಿ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಕಾರ್ಯಗಳಲ್ಲಿ ನಿಯೋಜನೆಗೊಂಡಿರುವ ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿಯೂ ಚುನಾವಣಾ ಆಯೋಗ
ಆಗಿಂದಾಗ್ಗೆ ನೀಡುವ ನಿರ್ದೇಶನಗಳನ್ನು ಹಾಗೂ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿದಾಗ ಚುನಾವಣಾ ಕಾರ್ಯಗಳನ್ನು ಸರಳವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಪ್ರತಿಯೊಂದು ಮತದಾನ ಕೇಂದ್ರಗಳಲ್ಲಿಯೂ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ
ವ್ಯವಸ್ಥೆ, ವಿದ್ಯುತ್ ಸಂಪರ್ಕ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸುವುದರ ಜೊತೆಗೆ ತುರ್ತು ಸಂದರ್ಭದಲ್ಲಿ ಪ್ರಥಮ
ಚಿಕಿತ್ಸೆ ನೀಡಲು ಹೆಲ್ತ್ ಕಿಟ್ ಗಳನ್ನೂ ಸಹ ಹೊಂದಬೇಕು ಎಂದರು.

ಚುನಾವಣಾ ಕಾರ್ಯ ನಿರ್ವಹಿಸುತ್ತಿರುವವವರ ಬಗ್ಗೆ ದೂರುಗಳು ಬಂದಾಗ ಅವುಗಳ ಬಗ್ಗೆ ಸಾಕ್ಷö್ಯಧಾರಗಳನ್ನು ಪಡೆಯುವುದು ಅವಶ್ಯ,ಅನಾಮಧೇಯ ಪತ್ರಗಳಿಗೆ ಹೆಚ್ಚಿನ ಒತ್ತು ನೀಡುವುದು ಅವಶ್ಯವಿಲ್ಲ ಎಂದರು. ಈ ಬಾರಿ ಚುನಾವಣಾ ಆಯೋಗವು 80 ವರ್ಷ ದಾಟಿದವರಿಗೆ, ಆಂಗವಿಕಲರಿಗೆ, ಕೋವಿಡ್ ಸೋಂಕಿತರಿಗೆ ಮನೆಯಿಂದಲೇ ಮತದಾನ ಮಾಡಲು ವಿಶೇಷ ಮತದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಾರ್ಯಗಳನ್ನು ನಿರ್ವಹಿಸುವಾಗ ಎಲ್ಲಾ ಅಗತ್ಯ ಜಾಗೃತಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.

ಮೇ 10 ರಂದು ನಡೆಯುವ ಮತದಾನ ದಿನದಂದು ಪ್ರತಿಯೊಬ್ಬರೂ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬೆಕು
ಎಂದ ಅವರು ಜಿಲ್ಲೆಯಲ್ಲಿ ಜಿಲ್ಲೆಯ ಸ್ವೀಪ್ ತಂಡ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ , ಜಿಲ್ಲೆಯಲ್ಲಿ ಸುಗಮ ಚುನಾವಣೆಗೆ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ತರಬೇತಿ ನಿರತ ಐ.ಎ.ಎಸ್ ಅಧಿಕಾರಿ
ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಎ.ಎಸ್ಪಿ ಸಿದ್ದಲಿಂಗಪ್ಪ ಹಾಗೂ ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ
ವಿವಿಧ ನೋಡೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply