ಯಕ್ಷರಂಗದ ಅಭಿನವ ಶನಿ ಜಲವಳ್ಳಿ ವೆಂಕಟೇಶ ರಾವ್

ಯಕ್ಷಗಾನ ರಂಗದ ಅಗ್ರಮಾನ್ಯ ಕಲಾವಿದರಾಗಿ ಕೀರ್ತಿ ಶಿಖರವನ್ನು ಏರಿದ ಶ್ರೀ ಜಲವಳ್ಳಿ ವೆಂಕಟೇಶ ರಾವ್ .ತೆಂಕು, ಬಡಗು ಉಭಯ ತಿಟ್ಟಿನ ಕಲಾಪರಿಣತಿ ಇದ್ದ ಅಪ್ರತಿಮ ಕೀರ್ತಿಶೇಷ ಕಲಾವಿದರು. ಜಲವಳ್ಳಿ ಎಂಬ.
ಅನ್ವರ್ಥನಾಮದಿಂದ ಪ್ರಖ್ಯಾತಿ ಹೊಂದಿ ಹುಟ್ಟೂರಿಗೆ ಕೀರ್ತಿ ತಂದವರು.

ಉತ್ತರಕನ್ನಡ ಜಿಲ್ಲೆಯ ಜಲವಳ್ಳಿಯಲ್ಲಿ ಬೊಮ್ಮ ಮಡಿವಾಳ ಹಾಗೂ ಶ್ರೀ ದೇವಿ ಮಡಿವಾಳರಿಗೆ 1933 ನವೆಂಬರ್ 01 ರಂದು ಜನಿಸಿದ ಅವರು ಪ್ರಾಥಮಿಕ ಹಂತದ ವಿದ್ಯಾಭ್ಯಾಸಕ್ಕೆ ಸೀಮಿತಗೊಂಡು ಯಕ್ಷಗಾನದತ್ತ ಆಕರ್ಷಿತರಾಗಿ ಆ ಪರಿಸರದ ಯಕ್ಷಗಾನ ಕಲಾವಿದರಾದ ಹೈಗುಂದ ಡಾಕ್ಟರ್ ಹಾಗೂ ಜಲವಳ್ಳಿ ತಿಮ್ಮಪ್ಪ ನಾಯಕರಲ್ಲಿ ಯಕ್ಷಗಾನದ ಹೆಜ್ಜೆ ಕಲಿತು ಸತ್ಯ ಹೆಗಡೆಯವರ ಮೂಲಕ ಗುಂಡುಬಾಳ ಮೇಳಕ್ಕೆ ತಿರುಗಾಟಕ್ಕೆ ಸೇರಿಕೊಂಡು ಯಕ್ಷಗಾನ ಲೋಕದ ವೃತ್ತಿಪರ ಕಲಾವಿದರಾಗಿ ಶುಭಾರಂಭಗೈದರು .

ಆ ನಂತರದಲ್ಲಿ ಕೊಳಗಿಬೀಸ್, ಇಡಗುಂಜಿ, ಮೇಳದಲ್ಲಿ ತಿರುಗಾಟ ಮಾಡಿ ರಂಗಾನುಭವ ಪಡೆದ ಜಲವಳ್ಳಿಯವರು ಮುಂದೆ 60ರ ದಶಕದಲ್ಲಿ ಸುರತ್ಕಲ್ ಮೇಳಕ್ಕೆ ಸೇರ್ಪಡೆಗೊಂಡರು

ಸುರತ್ಕಲ್ ಮೇಳದಲ್ಲಿ
ಶನೀಶ್ವರ ಮಹಾತ್ಮೆಯಲ್ಲಿ ಶೇಣಿಯವರ ವಿಕ್ರಮ, ಹಾಗೂ ತೆಕ್ಕಟ್ಟೆಯವರ ನಂದಿಶೆಟ್ಟಿಯ ಪಾತ್ರದ ಜೊತೆ ಇವರ ಶನಿ ಪಾತ್ರವು ಯಕ್ಷಗಾನ ರಂಗದಲ್ಲಿ ಅಭಿನವ ಶನಿ ಎಂದೇ ಪ್ರಸಿದ್ಧಿಯನ್ನು ಪಡೆಯಿತು.
ಶೇಣಿ , ತೆಕ್ಕಟ್ಟೆಯವರ ಒಡನಾಟದಲ್ಲಿ ಇವರು ಆಕರ್ಷಣೀಯವಾದ ವಾಚಿಕ ಶೈಲಿಯನ್ನು ಕಂಡುಕೊಂಡರು.

1972 -1973 ಸಾಲಿನಲ್ಲಿ ಬಡಗಿನ ಗಜಮೇಳವಾದ ಸಾಲಿಗ್ರಾಮ ಮೇಳಕ್ಕೆ ಸೇರ್ಪಡೆಗೊಂಡು,ದಿ. ಕಾಳಿಂಗ ನಾವಡರ ಭಾಗವತಿಕೆಯಲ್ಲಿ ಇವರ ಕಲಾ ನೈಪುಣ್ಯತೆಯು ಪರಿಪೂರ್ಣವಾಗಿ ಅಭಿವ್ಯಕ್ತಿಗೊಂಡು ಬಡಗುತಿಟ್ಟಿನ ಮೇರು ಕಲಾವಿದರಾಗಿ ಗುರುತಿಸಿಕೊಂಡದ್ದು ಇತಿಹಾಸ.

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಜಲವಳ್ಳಿಯವರ ಜೋಡಿಯು ರಂಗದಲ್ಲಿ ಜೊತೆ ಜೊತೆಯಾಗಿ ನಿರ್ವಹಿಸಿದ ಕೌರವ- ಭೀಮ ಭಸ್ಮಾಸುರ -ಈಶ್ವರ ಕಾರ್ತ್ಯವೀರ್ಯ- ರಾವಣ ಜೋಡಿ ವೇಷಗಳು ಗಲ್ಲಾ ಪೆಟ್ಟಿಗೆ ದೃಷ್ಟಿಯಲ್ಲಿ ಅಪ್ರತಿಮ ಯಶಸ್ಸನ್ನು ಕಂಡು ಕೀರ್ತಿ ಹಾಗೂ ಅಭಿಮಾನ ಗಳಿಸುವಂತಾಯಿತು.

ಯಕ್ಷಗಾನ ವೇಷಗಳಿಗೆ ಅಗತ್ಯವಿರುವ ಪ್ರಮಾಣ ಭದ್ದ ಶರೀರ ವಿಶಾಲ ಹಣೆ ,ಕಾಂತಿಯುಕ್ತ ವಿಶಾಲ ಕಣ್ಣು , ಶ್ರುತಿಭದ್ದ ತೂಕದ ಸ್ವರ ಜಲವಳ್ಳಿಯವರಿಗಿರುವ ಗುಣಾತ್ಮಕ ಅಂಶಗಳಾಗಿದ್ದು , ಜಲವಳ್ಳಿಯವರ ಮೂರು ಸುತ್ತು ಒಂದು ಗತ್ತಿನ ನರ್ತನವು ಅದ್ಭುತ ರಂಜನೆ ಒದಗಿಸಿ , ಅವರ ವೇಷಗಳು ಆಕರ್ಷಣೀಯವಾಗಿ ಮೂಡಿ ಬಂದು ಆಯಾಯ ಪಾತ್ರಕ್ಕೊಂದು ನ್ಯಾಯ ಒದಗಿ ಬರುತ್ತಾ ಇತ್ತು.

ಪೌರಾಣಿಕ ಪ್ರಸಂಗಗಳಲ್ಲಿ ಈಶ್ವರ ,ರಕ್ತಜಂಘಾ ,ಭೀಮ, ಕಂಸ, ಯಮ, ಶನಿ ,ಘಟೋತ್ಕಚ, ನರಕಾಸುರ ,ರಾವಣ ,ವಾಲಿ , ದುಷ್ಟ ಬುದ್ಧಿ, ಮುಂತಾದ ಪಾತ್ರಗಳು ಪರಿಪೂರ್ಣತೆಯ ಪ್ರಸಿದ್ದಿ ತಂದುಕೊಟ್ಟರೆ, ಸಾಮಾಜಿಕ ಪ್ರಸಂಗಗಳಾದ ನಾಗಶ್ರೀಯ ಸುದರ್ಶನ ಚೆಲುವೆ ಚಿತ್ರಾವತಿಯ ಕೀರ್ತಿವರ್ಮ ಪಾತ್ರಗಳು ಜನ ಮಾನಸದಲ್ಲಿ ಅಭಿಮಾನವನ್ನು ಹುಟ್ಟಿಸಿ ಕೀರ್ತಿ ಶಿಖರವನ್ನು ತಲುಪಿಸಿತು .

ತನ್ನ 60 ವರ್ಷಗಳ ಸುದೀರ್ಘ ಯಕ್ಷ ಚೈತ್ರ ಯಾತ್ರೆಯಲ್ಲಿ ಯಕ್ಷಗಾನ ರಂಗದ ಪ್ರಸಿದ್ಧ ಮೇಳಗಳಾದ ಗುಂಡುಬಾಳ, ಇಡಗುಂಜಿ, ಕೊಳಗಿ ಬೀಸ್, ಸುರತ್ಕಲ್, ಸಾಲಿಗ್ರಾಮ, ಪೆರ್ಡೂರು ಕಮಲಶಿಲೆ, ಗೋಳಿಗರಡಿ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಸಿದ್ಧಿ ಪ್ರಸಿದ್ಧಿಯನ್ನು ಪಡೆದು ತಾನೂ ಶ್ರೇಷ್ಠರ ಸಾಲಿಗೆ ಸೇರಿದ ಧೀಮಂತ ಕಲಾವಿದರು.
ಜಲವಳ್ಳಿ ವೆಂಕಟೇಶ ರಾವ್ ಯವರ ಯಕ್ಷಬದುಕಿನ ಶ್ರೇಷ್ಠ ನಿರ್ವಹಣೆಗೆ ಸಹಜವಾಗಿ ಒಲಿದು ಬಂದ ಪ್ರಶಸ್ತಿಗಳು ನೂರಾರು. ಆದರಲ್ಲಿ ಪ್ರಾಮುಖ್ಯವಾದವು ಜಾನಪದ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ.
ಇವರ ಮಕ್ಕಳಲ್ಲಿ ಓರ್ವರಾದ
ಶ್ರೀ ವಿದ್ಯಾಧರ ಜಲವಳ್ಳಿಯವರು ಯಕ್ಷಗಾನ ರಂಗದಲ್ಲಿ ವರ್ತಮಾನ ಕಾಲದ ಬೇಡಿಕೆಯುಳ್ಳ ಸಮರ್ಥ ಎರಡನೇ ವೇಷಧಾರಿಯಾಗಿ ಗುರುತಿಸಿಕೊಂಡು ತಮ್ಮ ತಂದೆಯ ಪರಂಪರೆಯ ಕೊಂಡಿಯಾಗಿ, ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀಯುತರು ತನ್ನ ತಂದೆಯವರ ಆಸೆಯಂತೆ ಕಲಾಧರ ಯಕ್ಷಗಾನ ತರಬೇತಿ ಶಾಲೆಯನ್ನು ಆರಂಭಿಸಿ ನೂರಾರು ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವುದರ ಜೊತೆಗೆ ಪ್ರತೀ ವರ್ಷ ತಮ್ಮ ತಂದೆಯವರ ಸಂಸ್ಕರಣೆಯಲ್ಲಿ ಸತತವಾಗಿ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದು , ಈ ಸಲದ ನಾಲ್ಕನೆ ವರ್ಷದ
ಪ್ರಶಸ್ತಿಯನ್ನು ತಾ 19/02/2023 ರವಿವಾರದಂದು ಜಲ ವಳ್ಳಿಯ ತಮ್ಮ ಸ್ವಗ್ರಹದಲ್ಲಿ ನಡೆಯುವ ಜಲವಳ್ಳಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ,
ಮಾಜಿ ಶಾಸಕರಾದ ಮಂಕಾಳ ವೈದ್ಯ, ಯಕ್ಷಗಾನರಂಗದ ಹಿರಿಯ ಭಾಗವತರಾದ ಸುರೇಂದ್ರ ಪಣಿಯೂರು, ಶಿವಾನಂದ ಹೆಗಡೆ ಕಡತೋಕ, ಹಾಗೂ ಸ್ಥಳೀಯ ಗಣ್ಯ ನಾಯಕರು ಉಪಸ್ಥಿತಿಯಲ್ಲಿ
ಯಕ್ಷಗಾನ ಲೋಕದ ‘ ಅಭಿಮನ್ಯು ‘ ಎಂದು ಖ್ಯಾತಿ ಹೊಂದಿರುವ ಯಕ್ಷಗಾನ ಲೋಕದ ಹಿರಿಯ ಕಲಾವಿದ ಶ್ರೀಯುತ ತೀರ್ಥಹಳ್ಳಿ ಗೋಪಾಲ ಆಚಾರ್ಯ ಇವರಿಗೆ ನೀಡುತ್ತಿರುವುದು ಸಂತೋಷದ ವಿಚಾರ.

ಲೇ: ಸುರೇಂದ್ರ ಪಣಿಯೂರ್

 
 
 
 
 
 
 
 
 
 
 

Leave a Reply