ಈದ್ ಮಿಲಾದ್ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್!

ಬೆಂಗಳೂರು: ಕೊರೊನಾದ ಕರಿಛಾಯೆ ಈ ಬಾರಿಯ ಈದ್ ಮಿಲಾದ್ ಕೂ ಆವರಿಸಿದೆ. ಅ.30 ರ ಹಬ್ಬದ ವೇಳೆ ಸಾಮೂಹಿಕ ಮೆರವಣಿಗೆ ತೆರಳಲು ಮತ್ತು ತೆರೆದ ಸ್ಥಳಗಳಲ್ಲಿ ಒಟ್ಟು ಸೇರುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ.

ಕೋವಿಡ್ -19 ಸೊಂಕು ದಿನೇ ದಿನೇ ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಮಾಡಿದ್ದು, ಮಾರ್ಗಸೂಚಿ ಬಿಡುಗಡೆ ಗೊಳಿಸಿದೆ. ಈದ್ ಮಿಲಾದ್ ದಿನದಂದು ಮೊಹಲ್ಲಾಗಳಲ್ಲಿ ನಡೆಯುವ ಯಾವುದೇ ರೀತಿಯ ಹಗಲು ಮತ್ತು ರಾತ್ರಿಯ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆಗಳನ್ನು ನಿಷೇಧಿಸಲಾಗಿದೆ. ಕೊರೋನಾ ನಿಯಮಗಳಂತೆ ಮಸೀದಿ, ದರ್ಗಾಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧ್ವನಿವರ್ಧಕ, ಡಿಜೆ ಬಳಕೆಗೂ ನಿರ್ಬಂಧ ಹೇರಲಾಗಿದೆ.

10 ವರ್ಷದೊಳಗಿನ ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲಿಯೇ ಹಬ್ಬ ಆಚರಿಸಬೇಕು. ಮಸೀದಿ- ಪ್ರಾರ್ಥನಾ ಮಂದಿರದಲ್ಲಿ ಸ್ಯಾನಿಟೈಸರ್ ಹಾಗೂ ಸೋಪಿನಿಂದ ಕೈ ತೊಳೆಯಲು ಪ್ರವೇಶ ದ್ವಾರದಲ್ಲೇ ಸೂಕ್ತ ವ್ಯವಸ್ಥೆ ಮಾಡುವುದು ಮತ್ತು ಅಂತರಕಾಯ್ದುಕೊಳ್ಳುವುದು ಕಡ್ಡಾಯ.ಖಬರಸ್ಥಾನ ಒಳಗೊಂಡಂತೆ ಯಾವುದೇ ತೆರೆದ ಜಾಗದಲ್ಲೂ ಸಾಮೂಹಿಕ ಪ್ರಾರ್ಥನೆ, ಪ್ರವಚನ ಏರ್ಪಡಿಸುವಂತಿಲ್ಲ.

ರಾಜ್ಯದ ವಕ್ಫ್ ಮಂಡಳಿಯು ಜಿಲ್ಲಾ ವಕ್ಫ್ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಈದ್ಗಾ, ಮಸೀದಿ, ದರ್ಗಾ ಮತ್ತಿತರ ಸಂಸ್ಥೆಗಳಿಗೆ ಈ ಆದೇಶವನ್ನು ಜಾರಿ ಮಾಡುವವುದು ಕಡ್ಡಾಯ. ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿ, ಮುತವಲ್ಲಿ, ಆಡಳಿತಾಧಿಕಾರಿಗಳು ಈದ್ ಮಿಲಾದ್ ಆಚರಣೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

 
 
 
 
 
 
 
 
 
 
 

Leave a Reply